Advertisement

ನಾಪತ್ತೆಯಾದ ಯುವಕನ ಶವ ಕೆರೆಯಲ್ಲಿ ಪತ್ತೆ

09:12 AM Dec 09, 2017 | Team Udayavani |

ಹೊನ್ನಾವರ (ಉತ್ತರ ಕನ್ನಡ): ಕೋಮು ಗಲಭೆಗೆ ತತ್ತರಿಸಿರುವ ಹೊನ್ನಾವರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಡಿ.6ಂದು ಗಲಭೆ ವೇಳೆ ನಾಪತ್ತೆಯಾಗಿದ್ದ ಪರೇಶ ಕಮಲಾಕರ ಮೇಸ್ತ (21) ಶವ ಶೆಟ್ಟಿಕೆರೆಯಲ್ಲಿ ಶುಕ್ರವಾರ ಪತ್ತೆಯಾಗಿದ್ದು,
ಆಕ್ರೋಶ ಭುಗಿಲೆದ್ದಿದೆ. ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಐವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Advertisement

ಶುಕ್ರವಾರ ಬೆಳಗ್ಗೆ ಕೆರೆಯಲ್ಲಿ ಹಳದಿ ಅಂಗಿ ತೊಟ್ಟ ಶವ ತೇಲುತ್ತಿರುವುದನ್ನು ಕಂಡು ಜನ ಪೊಲೀಸರಿಗೆ ತಿಳಿಸಿದ್ದಾರೆ. ಮೀನುಗಾರರು ದೋಣಿ ತಂದು ಶವ ಮೇಲೆತ್ತಿದರು. ಆಕ್ರೋಶಗೊಂಡ ಜನತೆ ರಸ್ತೆಗಳನ್ನು ಬಂದ್‌ ಮಾಡಿ ಪ್ರತಿಭಟಿಸಿದರು. ಪರಿಸ್ಥಿತಿ ವಿಕೋಪಕ್ಕೆ
ತಿರುಗುವ ಸುಳಿವು ಅರಿತು ಶುಕ್ರವಾರ ಸಹ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿದೆ. ಡೀಸಿ ಎಸ್‌.ಎಸ್‌. ನಕುಲ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೊಕ್ಕಾಂ ಹೂಡಿದ್ದಾರೆ.

ಮೀನುಗಾರ ಸಮಾಜದ ತರುಣರು ಶವ ಕಂಡೊಡನೆ ಭಾವೋದ್ರೇಕಕ್ಕೊಳಗಾಗಿ ಪ್ರತಿಭಟನೆ ಆರಂಭಿಸಿದಾಗ ಸ್ಥಳದಲ್ಲಿದ್ದ ಎಸ್ಪಿ ವಿನಾಯಕ ಪಾಟೀಲ, ತಹಶೀಲ್ದಾರ್‌ ವಿ.ಆರ್‌. ಗೌಡ, ಸಹಾಯಕ ಆಯುಕ್ತ ಮಂಜುನಾಥ ಸೇರಿದಂತೆ ಹಿರಿಯ ಅಧಿಕಾರಿಗಳು ಶಾಂತಗೊಳಿಸಿದರು. ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ ಮಣಿಪಾಲ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಪಾರ್ಥಿವ ಶರೀರದ ಮೆರವಣಿಗೆ:
ಒಂದೆಡೆ ಗಲಭೆ-ಸಂಘರ್ಷಕ್ಕೆ ಅಮಾನುಷವಾಗಿ ಬಲಿಯಾ¨ ‌ವನಿಗಾಗಿ ಆಕ್ರಂದನ, ಇನ್ನೊಂದೆಡೆ ಬಲಿ ತೆಗೆದು ಕೊಂಡವರ ವಿರುದ್ಧ ಮಡುಗಟ್ಟಿದ ಆಕ್ರೋಶದ ಮನಸ್ಥಿತಿಯಲ್ಲಿ ಪರೇಶ ಮೇಸ್ತನ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಸರ್ಕಾರಿ ಆಸ್ಪತ್ರೆ
ಶವಾಗಾರದಿಂದ ತೆರೆದ ವಾಹನದಲ್ಲಿ ನಡೆಸಿದ ಮೆರವಣಿಗೆ ಶರಾವತಿ ವೃತ್ತದ ಮೂಲಕ ಹಾಯ್ದು ಹೋಗುವಾಗ ಕೇಂದ್ರ ಸಚಿವ
ಅನಂತಕುಮಾರ್‌ ಹೆಗಡೆ ಆಗಮಿಸಿ, ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿ, ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು ಎಂದು
ಎಚ್ಚರಿಕೆ ನೀಡಿ ತೆರಳಿದರು.

ಐವರ ವಿರುದ್ಧ ಕೊಲೆ ಪ್ರಕರಣ: ಪರೇಶ್‌ ಸಾವಿನ ಕುರಿತಂತೆ ಆತನ ತಂದೆ ನೀಡಿದ ದೂರಿನನ್ವಯ ಐವರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಜಾದ್‌ ಅಣ್ಣಿಗೇರಿ, ಅಸೀಫ್‌ ರಫಿಕ್‌, ಇಮಿ¤ಯಾಜ್‌, ಮಹಮ್ಮದ್‌ ಫೈಸಲ್‌ ಅಣ್ಣಿಗೇರಿ ಹಾಗೂ ಜಿಮ್‌ ಸಲೀಂ ವಿರುದ್ಧ ಕೊಲೆ ಪ್ರಕರಣ ದಾಖಸಿಸಲಾಗಿದೆ. ಆರೋಪಿಗಳನ್ನು ಡಿ.21ರವರೆಗೆ ನ್ಯಾಯಾಂಗ
ಬಂಧನಕ್ಕೆ ಒಪ್ಪಿಸಲಾಗಿದೆ.

Advertisement

ಹಳ್ಳಿಗಳಿಗೂ ವ್ಯಾಪಿಸಿದ ಗಲಭೆ
ಹೊನ್ನಾವರ ಪಟ್ಟಣದಲ್ಲಿ ನಡೆದ ಗಲಭೆ ಮತ್ತು ಸಾವಿನ ಪ್ರಕರಣದ ಹೊಗೆ ಗ್ರಾಮಾಂತರ ಪ್ರದೇಶಗಳಿಗೂ ವ್ಯಾಪಿಸಿದ್ದು, ಶುಕ್ರವಾರ ಕಾಸರಕೋಡ್‌, ಸಂತೇಗುಳಿ, ಕವಲಕ್ಕಿಗಳಲ್ಲಿ ಗಲಾಟೆ ನಡೆದಿದೆ. ಕಾಸರಕೋಡ ಹಿರೇಮಠದ ಅಯ್ಯಪ್ಪ ಸನ್ನಿಧಾನದ ಬ್ಯಾನರ್‌ ಹಾಗೂ ಫೋಟೋ ಕಿತ್ತೆಸೆಯಲಾಗಿದೆ. ಅಲ್ಲಿದ್ದ 10 ಸಾವಿರ ರೂ.ಗಳನ್ನು ದೋಚಲಾಗಿದೆ ಎಂದು ಆರೋಪಿಸಿ ಜನ್ನಾ ಡಿಂಗಾ ತಾಂಡೇಲ್‌ರು ದೂರು ಠಾಣೆಗೆ ನೀಡಿದ್ದಾರೆ. ಸಂತೆಗುಳಿಯಲ್ಲಿ ಬೈಕ್‌ ಜಖಂಗೊಳಿಸಲಾಗಿದೆ. ಕವಲಕ್ಕಿಯಲ್ಲೂ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಇತ್ತ ಹೊನ್ನಾವರ ಪಟ್ಟಣದಲ್ಲಿ ಬಂದ್‌ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next