ಬೆಂಗಳೂರು: ಖಾಸಗಿ ಶಾಲೆಗಳು ಪೋಷಕರಿಂದ ಅತ್ಯಧಿಕ ಡೋನೆಶನ್ ವಸೂಲಿ ಮಾಡುತ್ತಿವೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಕಾರ್ಯಕರ್ತರು ಶನಿವಾರ ಬೆಳಗ್ಗೆ ನಗರದ ಲಿ ಮೆರಿಡಿಯನ್ ಹೋಟೆಲ್ ಬಳಿ ಇರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಮನೆ ಎದುರು ಪ್ರತಿಭಟನೆ ನಡೆಸಿದರು.
ಅಲ್ಲದೇ, ಸಚಿವರೇ ನೇರವಾಗಿ ಬಂದು ತಮ್ಮ ಮನವಿ ಸ್ವೀಕರಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು. ಆದರೆ, ಸಚಿವರು ಮನೆಯಲ್ಲಿ ಇಲ್ಲ ಎಂದು ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಕಾರ್ಯಕರ್ತರು ಏಕಾಏಕಿ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಮನೆಯ ಆವರಣದೊಳಗೆ ನುಗ್ಗಿದ್ದಾರೆ.
ಬಳಿಕ ಸಚಿವರ ಮನೆಯ ಕಿಟಕಿಗಳ ಮೇಲೆ ಕಲ್ಲು ತೂರಾಟ ನಡೆಸಿದರು. ನಂತರ ಆವರಣದಲ್ಲಿದ್ದ ಹೂವಿನ ಕುಂಡಗಳನ್ನು ಧ್ವಂಸಗೊಳಿಸಿದರು. ಇದೇ ವೇಳೆ ತಡೆಯಲು ಬಂದ ಭದ್ರತಾ ಸಿಬ್ಬಂದಿ ಮೇಲೆ ಮತ್ತೂಮ್ಮೆ ಹಲ್ಲೆ ನಡೆಸಿದ್ದಾರೆ. ಆಗ ಮತ್ತಷ್ಟು ಕೋಪಗೊಂಡ ಕಾರ್ಯಕರ್ತರು ಹೂವಿನ ಕುಂಡಗಳನ್ನು ಕಿಟಕಿ ಮತ್ತು ಮನೆಯ ಬಾಗಿಲುಗಳ ಮೇಲೆ ಎಸೆದಿದ್ದಾರೆ.
ನಂತರ ಭದ್ರತಾ ಸಿಬ್ಬಂದಿ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅಧಿಕಾರಿಗಳು 21 ಮಂದಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಕೆ.ಆರ್.ಪುರ, ಮಹದೇವಪುರ ಭಾಗದ ಕಾರ್ಯಕರ್ತರಾದ ಸಯ್ಯದ್, ವಿಕ್ರಂ, ಆಕಾಶ್, ಮಹೇಶ್ ಸೇರಿ 21 ಮಂದಿಯನ್ನು ಬಂಧಿಸಲಾಗಿದೆ.
ಶಾಸಗಿ ಶಾಲೆಗಳು ಪಾಲಕರಿಂದ ಡೊನೇಶನ್ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿ ಮನೆಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಏಕಾಏಕಿ ಭದ್ರತೆ ಸಿಬ್ಬಂದಿ ಕಾನೂನು ಮೀರಿ ನಡೆದುಕೊಂಡಿದ್ದಾರೆ. ಈ ಸಂಬಂಧ ಸಿಬ್ಬಂದಿ ಮೇಲೆ ಹಲ್ಲೆ, ಬೆದರಿಕೆ, ಸರ್ಕಾರಿ ಆಸ್ತಿಗೆ ಹಾನಿ, ದೊಂಬಿ ಪ್ರಕರಣಗಳಡಿ ಬಂಧಿಸಲಾಗಿದೆ ಎಂದು ಹೈಗ್ರೌಂಡ್ಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಸಂಘಟನೆಯ ಕಾರ್ಯಕರ್ತರು ಮುತ್ತಿಗೆ ಅಥವಾ ಪ್ರತಿಭಟನೆ ನಡೆಸಲು ಯಾವುದೇ ಅನುಮತಿ ಪಡೆದಿರಲಿಲ್ಲ. ಅನಧಿಕೃತವಾಗಿ ಮುತ್ತಿಗೆ ಮಾಡಿದಲ್ಲದೇ, ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.