Advertisement

ಓಲಾ-ಉಬರ್‌ ಟ್ಯಾಕ್ಸಿಗಳಿಗೂ ನಿಗದಿಯಾಗಲಿದೆ ಕನಿಷ್ಠ ದರ?

12:12 PM Mar 04, 2017 | |

ಬೆಂಗಳೂರು: ಓಲಾ-ಉಬರ್‌ ಮತ್ತು ಚಾಲಕರ ನಡುವಿನ ಸಂಘರ್ಷ ಶಮನಕ್ಕೆ ಮುಂದಾಗಿರುವ ಸಾರಿಗೆ ಇಲಾಖೆ, ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳಿಗೆ ನಿರ್ದಿಷ್ಟವಾದ ಕನಿಷ್ಠ ದರ ನಿಗದಿಪಡಿಸಲು ಚಿಂತನೆ ನಡೆಸಿದೆ. 

Advertisement

ಈ ಸಂಬಂಧ ಹೆಚ್ಚುವರಿ ಸಾರಿಗೆ ಆಯುಕ್ತ ಕುಮಾರ್‌ ನೇತೃತ್ವದಲ್ಲಿ “ದರ ನಿಗದಿ ಸಮಿತಿ’ ರಚಿಸಿದ್ದು, ಒಂದೆರಡು ದಿನಗಳಲ್ಲಿ ಸಮಿತಿ ವರದಿ ಸಲ್ಲಿಸಲಿದೆ. ಅದನ್ನು ಆಧರಿಸಿ ಉಳಿದ ಟ್ಯಾಕ್ಸಿಗಳಂತೆಯೇ ಓಲಾ-ಉಬರ್‌ ಸೇರಿದಂತೆ ಆ್ಯಪ್‌ ಆಧಾರಿತ ಸೇವೆ ಕಲ್ಪಿಸುತ್ತಿರುವ ಟ್ಯಾಕ್ಸಿಗಳಿಗೂ ಪ್ರತಿ ಕಿ.ಮೀ.ಗೆ ಸೂಕ್ತವಾದ ಕನಿಷ್ಠ ದರ ನಿಗದಿಪಡಿಸುವ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆದಿದೆ. 

ಸೋಮವಾರ ಸಭೆ?: ಸಾಮಾನ್ಯ ಟ್ಯಾಕ್ಸಿಗಳಿಗೆ ಸರ್ಕಾರಿ ದರ ಕಿ.ಮೀ.ಗೆ ಕನಿಷ್ಠ (ಹವಾನಿಯಂತ್ರಿತ ರಹಿತ) 14.5 ರೂ. ಹಾಗೂ ಗರಿಷ್ಠ ದರ 19.5 ರೂ. ನಿಗದಿಪಡಿಸಲಾಗಿದೆ. ಆದರೆ, ಆ್ಯಪ್‌ ಆಧಾರಿತ ಟ್ಯಾಕ್ಸಿಗಳಲ್ಲಿ ನಿರ್ದಿಷ್ಟ ಕನಿಷ್ಠ ದರವೇ ಇಲ್ಲ. ಪೈಪೋಟಿಗೆ ಬಿದ್ದಿರುವ ಕಂಪೆನಿಗಳು 3-7 ರೂ.ಯಲ್ಲಿ ಸೇವೆ ನೀಡುತ್ತಿವೆ. ಇದರಲ್ಲಿ ಟ್ಯಾಕ್ಸಿ ಚಾಲಕರು ಕಂಪೆನಿಗಳಿಗೆ ಶೇ. 30ರಷ್ಟು ಕಮೀಷನ್‌ ಕೊಡಬೇಕು.

ಉಳಿಯುವುದು ಪುಡಿಗಾಸು. ಈ ಹಿನ್ನೆಲೆಯಲ್ಲಿ ಕನಿಷ್ಠ ದರ ನಿಗದಿಪಡಿಸುವ ಸಾಧ್ಯಾಸಾಧ್ಯತೆಗಳ ಕುರಿತು ಇಲಾಖೆ ಮಟ್ಟದಲ್ಲಿ ಚರ್ಚೆ ನಡೆದಿದೆ. ಸೋಮವಾರ ಈ ಸಂಬಂಧ ಓಲಾ-ಉಬರ್‌ ಕಂಪೆನಿಗಳು, ಚಾಲಕರ ಸಂಘದೊಂದಿಗೆ ಮತ್ತೂಂದು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಸಾರಿಗೆ ಇಲಾಖೆ ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ. 

ಸದ್ಯ ಪೈಪೋಟಿಯ ಭರದಲ್ಲಿ ಕಂಪೆನಿಗಳು ಯೋಗ್ಯವಲ್ಲದ ಕನಿಷ್ಠ ದರದಲ್ಲಿ ಸೇವೆ ಕಲ್ಪಿಸುತ್ತಿವೆ. ಇದರಲ್ಲಿ ಚಾಲಕರು ನಷ್ಟ ಅನುಭವಿಸುತ್ತಿದ್ದಾರೆ. ಸರಾಸರಿ 5 ರೂ. ಕನಿಷ್ಠ ದರದಲ್ಲೇ ಸೇವೆ ನೀಡಿದರೂ ಚಾಲಕರು, ಕಂಪೆನಿಗಳಿಗೆ ಕಮೀಷನ್‌ ಪಾವತಿಸಿ ಉಳಿದ ಹಣದಲ್ಲಿ ಜೀವನ ನಿರ್ವಹಣೆ ಅಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ದರ ನಿಗದಿಗೆ ಚಿಂತನೆ ನಡೆದಿದೆ. ದರ ನಿಗದಿ ಸಮಿತಿ ವರದಿ ಸಲ್ಲಿಸಿದ ನಂತರ ದರ ನಿಗದಿಪಡಿಸಲಾಗುವುದು.

Advertisement

ಇದಕ್ಕೆ ಕಾಯ್ದೆಯಲ್ಲೂ ಅವಕಾಶ ಇದೆ ಎಂದು ಸಾರಿಗೆ ಆಯುಕ್ತ ಎಂ.ಕೆ. ಅಯ್ಯಪ್ಪ ತಿಳಿಸಿದರು. ವಾಹನದ ವೆಚ್ಚ, ಡೀಸೆಲ್‌, ಗ್ರಾಹಕ ಸೂಚ್ಯಂಕ, ಚಾಲಕರ ಭತ್ಯೆ, ವಿಮೆ ಸೇರಿದಂತೆ ಎಲ್ಲವನ್ನೂ ಲೆಕ್ಕಹಾಕಿ ದರ ನಿಗದಿಪಡಿಸಲಾಗಿದೆ. ಈ ಕುರಿತು ಲೆಕ್ಕಾಚಾರ ಹಾಕಲಾಗುತ್ತಿದೆ. ಆದರೆ, ಇದುವರೆಗೆ ಕನಿಷ್ಠ ದರ ಅಂತಿಮಗೊಂಡಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ. 

ಚಾಲಕರಿಗೆ ಲಾಭ ಹೇಗೆ?: ಓಲಾ-ಉಬರ್‌ ಟ್ಯಾಕ್ಸಿ ಚಾಲಕರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಸರ್ಕಾರಿ ದರ ನಿಗದಿಪಡಿಸಬೇಕು ಎನ್ನುವುದು ಪ್ರಮುಖ ಬೇಡಿಕೆ. ಕನಿಷ್ಠ ದರ ನಿಗದಿಯಾದರೆ, ಅದಕ್ಕಿಂತ ಕಡಿಮೆ ದರದಲ್ಲಿ ಸೇವೆ ನೀಡಲು ಬರುವುದಿಲ್ಲ. ಅದು ವೈಜ್ಞಾನಿಕ ದರ ಆಗುವುದರಿಂದ ಚಾಲಕರು ಮತ್ತು ಗ್ರಾಹಕರ ದೃಷ್ಟಿಯಿಂದ ಲಾಭದಾಯಕ ಆಗಿರುತ್ತದೆ. 

ಲೆಕ್ಕಾಚಾರದ ಪ್ರಕಾರ ಒಂದೂವರೆ ಲಕ್ಷ ರೂ. ಹೂಡಿಕೆ ಮಾಡಿ ಖರೀದಿಸಿದ ಆಟೋದಲ್ಲಿ 13.5 ಕನಿಷ್ಠ ದರ ನಿಗದಪಡಿಸಲಾಗಿದೆ. ಆದರೆ, 8ರಿಂದ 10 ಲಕ್ಷ ರೂ. ಕೊಟ್ಟು ತಂದ ಕಾರಿನಲ್ಲಿ 3ರಿಂದ 7 ರೂ. ದರದಲ್ಲಿ ಸೇವೆ ನೀಡಲಾಗುತ್ತಿದೆ. ಇದರಲ್ಲಿ ಶೇ. 30ರಷ್ಟು ಕಮೀಷನ್‌ ಕೊಡಬೇಕು. ಅದಕ್ಕೆ ಪ್ರತಿಯಾಗಿ ಕಂಪೆನಿಯಿಂದ 2ರಿಂದ 4ರೂ. ಪ್ರೋತ್ಸಾಹಧನ ಸಿಗುತ್ತದೆ (ಈಗ ಅದೂ ಇಲ್ಲ).

ಆಗ ಹೆಚ್ಚೆಂದರೆ ಚಾಲಕರಿಗೆ ಕಿ.ಮೀ.ಗೆ 6ರಿಂದ 7 ರೂ. ಈ ಮಧ್ಯೆ ಯಾರಾದರೂ ಗ್ರಾಹಕರು ದೂರು ನೀಡಿದರೆ, ದಂಡ ಹಾಕುತ್ತಾರೆ. ಇಷ್ಟು ಕಡಿಮೆ ಹಣದಲ್ಲಿ ಬೆಂಗಳೂರಿನಂತಹ ಸಂಚಾರದಟ್ಟಣೆಯಲ್ಲಿ ಕಾರು ಓಡಿಸುವುದು ಹೇಗೆ ಎಂದು ಓಲಾ-ಉಬರ್‌ ಟ್ಯಾಕ್ಸಿ ಮಾಲಿಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ತನ್ವೀರ್‌ ಪಾಷ ಪ್ರಶ್ನಿಸುತ್ತಾರೆ. 

ರಸ್ತೆಗಿಳಿದ ಟ್ಯಾಕ್ಸಿಗಳು
ಸರ್ಕಾರಿ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿದ್ದ ಓಲಾ-ಉಬರ್‌ ಟ್ಯಾಕ್ಸಿ ಚಾಲಕರ ಪ್ರತಿಭಟನೆ ಮುಂದುವರಿದಿದೆ. ಮತ್ತೂಂದೆಡೆ ಶುಕ್ರವಾರ ಕೆಲ ಚಾಲಕರು ಪ್ರತಿಭಟನೆ ಕೈಬಿಟ್ಟು ಸೇವೆ ಪುನರಾರಂಭಿಸಿದ್ದಾರೆ. 

ಎಂದಿನಂತೆ ಓಲಾ-ಉಬರ್‌ ಟ್ಯಾಕ್ಸಿಗಳು ಶುಕ್ರವಾರ ರಸ್ತೆಗಿಳಿದವು. ಆ್ಯಪ್‌ನಲ್ಲಿ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ  ಟ್ಯಾಕ್ಸಿ ಸೇವೆಗೆ ಟೈಪ್‌ ಮಾಡಿದ ತಕ್ಷಣ ನಾಲ್ಕೈದು ಟ್ಯಾಕ್ಸಿಗಳು ಲಭ್ಯ ಇರುವುದು ಕಂಡುಬಂತು. ಕಳೆದ ಒಂದು ವಾರದಿಂದ ಒಂದು ಟ್ಯಾಕ್ಸಿ ಲಭ್ಯ ಇರುತ್ತಿತ್ತು. ಅದಕ್ಕೂ 10ರಿಂದ 15 ನಿಮಿಷ ಕಾಯಬೇಕಿತ್ತು.

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next