Advertisement

ಮಿನಿ ವಿಧಾನಸೌಧದ ಕಾಮಗಾರಿ ಶೀಘ್ರ ಆರಂಭ

01:45 PM Oct 25, 2017 | Team Udayavani |

ದಾವಣಗೆರೆ: ಹಳೆಯ ತಹಶೀಲ್ದಾರ್‌ ಕಚೇರಿ ಜಾಗದಲ್ಲಿ ಒಟ್ಟಾರೆ 15 ಕೋಟಿ ವೆಚ್ಚದ ಮಿನಿ ವಿಧಾನ ಸೌಧದ ಕಾಮಗಾರಿ ಮುಂದಿನ ವಾರದಲ್ಲಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತಿಳಿಸಿದರು.

Advertisement

ಮಂಗಳವಾರ ಹಳೆಯ ತಹಶೀಲ್ದಾರ್‌ ಕಚೇರಿ ಜಾಗದಲ್ಲಿ ನಿರ್ಮಾಣವಾಗಲಿರುವ ಮಿನಿ ವಿಧಾನ ಸೌಧದ ನೀಲನಕ್ಷೆ, ಜಾಗದ ಪರಿಶೀಲನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶೇಷ ಉಪ ಕಾರಾಗೃಹ ಸ್ಥಳಾಂತರದಿಂದ ಒಟ್ಟಾರೆ 1 ಎಕರೆ 2 ಗುಂಟೆ ಜಾಗ ದೊರೆಯಲಿದೆ. ಮೊದಲಿಗೆ 29 ಗುಂಟೆ ಜಾಗದಲ್ಲಿ ಮಿನಿ ವಿಧಾನ ಸೌಧದ ಕಾಮಗಾರಿ ಮುಂದಿನ ವಾರದಲ್ಲಿ ಪ್ರಾರಂಭಿಸಲಾಗುವುದು ಎಂದರು. ಜಿ+3 ಮಾದರಿಯ ಮಿನಿ ವಿಧಾನ ಸೌಧದ ಕಾಮಗಾರಿಗೆ ಒಟ್ಟು 15 ಕೋಟಿ ಬೇಕಾಗುತ್ತದೆ. ಈಗಾಗಲೇ ಬಿಡುಗಡೆಗೊಂಡಿರುವ 5 ಕೋಟಿ ಅನುದಾನದಲ್ಲಿ ಸೆಲ್ಲಾರ್‌ ಜೊತೆಗೆ ಗ್ರೌಂಡ್‌ಫ್ಲೋರ್‌ ಕೆಲಸ ಪ್ರಾರಂಭ ಮಾಡಲಾಗುವುದು. ಕೆಲಸ ನಡೆಯುತ್ತಿರುವಂತೆ ಹಂತ ಹಂತವಾಗಿ ಬೇಕಾದ ಅನುದಾನ ತರಲಾಗುವುದು. ಮಿನಿ ವಿಧಾನ ಸೌಧದಲ್ಲಿ ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌, ಭೂದಾಖಲೆಗಳು, ಉಪ ನೋಂದಣಾಧಿಕಾರಿ ಕಚೇರಿ ಪ್ರಾರಂಭವಾಗಲಿವೆ ಎಂದು ತಿಳಿಸಿದರು.

ಸಬ್‌ ಜೈಲ್‌ ಸ್ಥಳಾಂತರ ಮಾಡಲಾಗುವುದು. ಕೊಂಡಜ್ಜಿ ಇಲ್ಲವೇ ಅಣ್ಣಾಪುರದ ಹತ್ತಿರ ಜಾಗ ಇದೆ. ಅಲ್ಲಿಗೆ ಸಬ್‌ ಜೈಲ್‌ ಸ್ಥಳಾಂತರ ಮಾಡುವುದರಿಂದ ಸಾಕಷ್ಟು ಜಾಗ ಸಿಕ್ಕುತ್ತದೆ. ಈ ಬಗ್ಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಚರ್ಚಿಸಲಾಗುವುದು. ಈಗ ಸಬ್‌ ಜೈಲ್‌ ಇರುವ ಜಾಗದಲ್ಲಿ ಕಾಂಪ್ಲೆಕ್ಸ್‌ ಕಟ್ಟಿಸಿ, ಬಾಡಿಗೆಗೆ ನೀಡುವುದರಿಂದ ಜನರು, ವ್ಯಾಪಾರಸ್ಥರಿಗೆ ಅನುಕೂಲವಾಗುತ್ತದೆ. ನಗರಪಾಲಿಕೆಗೆ ಆದಾಯವೂ ಬರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಿನಿ ವಿಧಾನ ಸೌಧದ ಸೆಲ್ಲಾರ್‌ನಲ್ಲಿ ಪಾರ್ಕಿಂಗ್‌ ಗೆ ವ್ಯವಸ್ಥೆ ಮಾಡಲಾಗುವುದು. ಕೆ.ಆರ್‌. ಮಾರ್ಕೆಟ್‌ ನಲ್ಲಿ 2 ಫ್ಲೋರ್‌ ತರಕಾರಿ ಮಾರಾಟಕ್ಕೆ, ಇನ್ನು 2 ಫ್ಲೋರ್‌ ಪಾರ್ಕಿಂಗ್‌ ವ್ಯವಸ್ಥೆ ಇರುವ ಕಟ್ಟಡ ಕಟ್ಟಲಾಗುವುದು. ಹಳೆಯ ದಾವಣಗೆರೆಯಲ್ಲಿ 3-4 ಕಡೆ ಬೆಂಗಳೂರು ಮಾದರಿಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ
ಮಾಡಲಾಗುವುದು. ಅದರಿಂದ ಪಾರ್ಕಿಂಗ್‌ ಸಮಸ್ಯೆ ದೂರವಾಗಲಿದೆ ಎಂದು ತಿಳಿಸಿದರು.

ನ್ಯಾಯಾಲಯದ ಕಟ್ಟಡವನ್ನೂ ಸ್ಥಳಾಂತರಿಸಲಾಗುವುದು. ಹೈಕೋರ್ಟ್‌ ಮಾದರಿಯಲ್ಲಿ ನ್ಯಾಯಾಲಯದ ಕಟ್ಟಡ ನಿರ್ಮಾಣ ಮಾಡಲಾಗುವುದು. ನ್ಯಾಯಾಲಯ ಕಟ್ಟಡಕ್ಕೆ ಬಿಡುಗಡೆಯಾಗಿದ್ದ 10 ಕೋಟಿ ಹಣವನ್ನು ನಿವೇಶನಕ್ಕೆ ಬಳಸಿಕೊಳ್ಳಲಾಗಿದೆ. ಅಗತ್ಯ ಇರುವ ಅನುದಾನದ ಬಗ್ಗೆ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು. ಮೊದಲಿಗೆ ಮಿನಿ ವಿಧಾನ ಸೌಧದ ನೀಲನಕ್ಷೆ ಪರಿಶೀಲಿಸಿದ ಸಚಿವ ಮಲ್ಲಿಕಾರ್ಜುನ್‌, ವಾಹನ ಪಾರ್ಕಿಂಗ್‌, ಶೌಚಾಲಯ ಸ್ಥಳಾಂತರ ಇತರೆ ಕೆಲವಾರು ಮಾರ್ಪಾಡು ಮಾಡಿಕೊಂಡು ಅಂತಿಮ ವಿನ್ಯಾಸ ವನ್ನು ಕೂಡಲೇ ಸಿದ್ಧಪಡಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು. ಸೆಲ್ಲಾರ್‌ನಲ್ಲಿ ಮಳೆ ನೀರು ನಿಲ್ಲುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪೈಪ್‌ಲೈನ್‌ ಅಳವಡಿಸಿ, ಸೆಲ್ಲಾರ್‌ನಲ್ಲಿ ನಿಲ್ಲುವ ನೀರು ಹರಿದು ಹೋಗುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳು, ಗುತ್ತಿಗೆದಾರರಿಗೆ ಸೂಚಿಸಿದರು.

ಈಗಾಗಲೇ ಮಿನಿ ವಿಧಾನ ಸೌಧದ ಕಾಮಗಾರಿ ಸಾಕಷ್ಟು ವಿಳಂಬವಾಗಿದೆ. ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಿ ಎಂದಾಗ, ಮುಂದಿನ ವಾರದಲ್ಲಿ ಮಿನಿ ವಿಧಾನ ಸೌಧದ ಜೊತೆಗೆ 11 ಕೋಟಿ ವೆಚ್ಚದ ಐಟಿಐ ಕಟ್ಟಡ ಕಾಮಗಾರಿಯನ್ನೂ ಪ್ರಾರಂಭಿಸಲು ಸಿದ್ದರಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು. ದೂಡಾ ಅಧ್ಯಕ್ಷ ಜಿ.ಎಚ್‌. ರಾಮಚಂದ್ರಪ್ಪ, ಮಹಾನಗರ ಪಾಲಿಕೆ ಸ್ಥಾಯಿ
ಸಮಿತಿ ಅಧ್ಯಕ್ಷ ಎಸ್‌. ಬಸಪ್ಪ, ಸದಸ್ಯರಾದ ಎಚ್‌.ಬಿ. ಗೋಣೆಪ್ಪ, ಪಿ.ಎನ್‌. ಚಂದ್ರಶೇಖರ್‌, ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಉಪ ವಿಭಾಗಾಧಿಕಾರಿ ಸಿದ್ದೇಶ್‌, ತಹಶೀಲ್ದಾರ್‌ ಸಂತೋಷ್‌ಕುಮಾರ್‌ ಇತರರು ಇದ್ದರು.

Advertisement

ಧಕ್ಕೆ ಮಾಡದಿರಲು ಮನವಿ
ಹಳೆಯ ತಹಶೀಲ್ದಾರ್‌ ಕಚೇರಿ ಆವರಣದಲ್ಲಿರುವ ಶ್ರೀ ಭೀಮಾಂಜನೇಯ ದೇವಸ್ಥಾನಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಮಾಡದಂತೆ ಮಿನಿ ವಿಧಾನ ಸೌಧ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು, ಸ್ಥಳೀಯರು ಸಚಿವ ಎಸ್‌.ಎಸ್‌. ಮಲ್ಲಿಕಾರ್ಜನ್‌ಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅವರು, ಶ್ರೀ ಭೀಮಾಂಜನೇಯ ದೇವಸ್ಥಾನಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಮಾಡದಂತೆ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಗಮನ ನೀಡಲಾಗುವುದು. ಒಂದೊಮ್ಮೆ ಸಾಧ್ಯವಾಗದೇ ಹೋದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂಬ ಭರವಸೆ ನೀಡಿದರು. ವೇದಿಕೆಯ ಸತೀಶ್‌ ಪೂಜಾರಿ, ರಾಕೇಶ್‌ ಜಾಧವ್‌, ನವೀನ್‌, ಮಂಜುನಾಥ್‌, ರಘು, ವಿನಯ್‌, ಕಾರ್ತಿಕ್‌ ಹಿರೇಮs…, ಗಣೇಶ್‌, ಮಣಿ, ವೆಂಕಟೇಶ್‌, ಮನೋಹರ್‌, ಅಣ್ಣಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next