Advertisement

ತೋಟಗಾರಿಕೆ ಬೆಳೆಯತ್ತ ರೈತರ ಚಿತ್ತ

09:13 PM Feb 11, 2020 | Lakshmi GovindaRaj |

ಚನ್ನರಾಯಪಟ್ಟಣ: ಪ್ರಸಕ್ತ ವರ್ಷ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಕೆರೆ ಕಟ್ಟೆಗೆ ನೀರು ಭರ್ತಿಯಾಗಿದ್ದರಿಂದ ಕೊಳವೆ ಬಾವಿಯಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಳವಾಗಿದೆ. ನೀರಿನ ಮೂಲದ ಖಾತ್ರಿ ಇರುವ ರೈತರು ಹಲವು ವರ್ಷಗಳ ನಂತರ ಪುನಃ ತೋಟಗಾರಿಕೆ ಬೆಳೆಗಳತ್ತ ಗಮನಹರಿಸಿದ್ದು, ಕೇಂದ್ರ ಸರ್ಕಾರದ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ.

Advertisement

ಕೃಷಿ ಜೊತೆ ಉಪಕೃಷಿಗೂ ಆಸಕ್ತಿ: ತೋಟಗಾರಿಕೆ ಬೆಳಗಳಾದ ತೆಂಗು, ಬಾಳೆ ಸಪೋಟ, ದಾಳಿಂಬೆ, ಮಾವಿನ ತೋಟಕ್ಕೆ ಹೆಚ್ಚು ಆಸಕ್ತಿ ವಹಿಸುವ ರೈತರು ಬೇಸಿಗೆ ಸಮೀಪಿಸುತ್ತಿರುವುದರಿಂದ ಕಲ್ಲಂಗಡಿ ಹಣ್ಣು ಬೆಳೆಯುತ್ತಿದ್ದಾರೆ. ಇದಲ್ಲದೇ ಸಾಂಬಾರ್‌ ಸೌತೆ, ಕುಂಬಳಕಾಯಿ ಬೆಳೆಯಲು ಹೆಚ್ಚು ಆಸಕ್ತಿ ವಹಿಸಿದ್ದು, ಇವುಗಳ ಜೊತೆಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ತರುವ ಹೂವು ಕೃಷಿಗೆ ರೈತರು ಆದ್ಯತೆ ನೀಡುತ್ತಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಉಪಕೃಷಿ ಕಸುಬುಗಳಾದ ಹೈನುಗಾರಿಕೆ, ಕೊಳಿ, ಕುರಿ, ಮೇಕೆ ಹಾಗೂ ಹಂದಿ ಸಾಕಣೆಗೆ ರೈತರು ಮುಂದಾಗಿದ್ದು ಆರ್ಥಿಕವಾಗಿ ಸ್ಥಿತಿವಂತರಾಗುತ್ತಿದ್ದಾರೆ.

ದಾಳಿಂಬೆಯಿಂದ ನಷ್ಟ: ತೋಟಗಾರಿಕೆ ಬೆಳೆಗಳಲ್ಲಿ ಹೂವು ಹೊರತು ಪಡಿಸಿ ಉಳಿದ ಬೆಳೆಗಳಿಗೆ ಕಡಿಮೆ ಖರ್ಚು ಕೂಲಿ ಅವಲಂಬನೆ ಇರುವುದಿಲ್ಲ. ನಿಗದಿತ ಅದಾಯ ರೈತರಿಗೆ ದೊರೆಯಲಿವೆ. ತಾಲೂಕಿನ 6 ಹೋಬಳಿಯಲ್ಲಿ ಹೆಚ್ಚು ತೆಂಗು ಬೆಳೆಯಲು ಮುಂದಾಗುತ್ತಿರುವ ರೈತರು ವಾಣಿಜ್ಯ ಲಾಭದ ತಂದು ಕೊಡುವ ದಾಳಿಂಬೆಗೂ ಮುತುವರ್ಜಿ ನೀಡುತ್ತಿದ್ದು, ಅದರಿಂದ ಆಗುವ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.

ಕೇಂದ್ರ ಸರ್ಕಾರದಿಂದ ಕೋಟ್ಯಂತರ ರೂ. ಸಹಾಯಧನ: ಕೇಂದ್ರ ಸರ್ಕಾರ ಕಿಸಾನ್‌ದಾರರಿಗೆ ಹಲವು ಯೋಜನೆ ನೀಡಿದ್ದು, ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆ ಅಡಿಯಲ್ಲಿ ತಾಲೂಕಿಗೆ ಕೋಟ್ಯಂತರ ರೂ. ಸಹಾಯ ಧನ ಬಿಡುಗಡೆ ಮಾಡಿ ನೇರವಾಗಿ ರೈತರ ಖಾತೆಗೆ ಸಹಾಯ ಧನ ಜಮಾ ಮಾಡುತ್ತಿದೆ. ಇದರೊಂದಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಕಳೆದ ಸಾಲಿನಲ್ಲಿ 4.80 ಕೋಟಿ ರೂ.ಬಿಡುಗಡೆಯಾಗಿದ್ದರೆ ಪ್ರಸಕ್ತ ವರ್ಷ 3.46 ಕೋಟಿ ರೂ.ಬಿಡುಗಡೆಯಾಗಲಿದೆ. ಇದರಿಂದ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ರೈತರಿಗೆ ಅನುಕೂಲವಾಗುತ್ತಿದೆ.

ನೇರ ರೈತರ ಖಾತೆಗೆ ಜಮಾ: ತಾಲೂಕಿನಲ್ಲಿ ಸುಮಾರು 20 ಹೆಕ್ಟೇರ್‌ ಪ್ರದೇಶದಲ್ಲಿ ಬಾಳೆ ಬೆಳೆಗೆ 3.90 ಲಕ್ಷ ರೂ. ತರಕಾರಿಗೆ 45 ಮಂದಿ ಫ‌ಲಾನುಭವಿಗಳಿಗೆ 3.60 ಲಕ್ಷ ರೂ. ಹೂವು ಬೆಳೆಯಲು3 ಹೆಕ್ಟೇರ್‌ ಪ್ರದೇಶಕ್ಕೆ 30 ಸಾವಿರ ರೂ., ಟೊಮೆಟೋ, ಬದನೇಕಾಯಿ, ಹೀರೇ ಕಾಯಿ, ಕ್ಯಾಪ್ಸಿಕಂ (ದೊಣಮೆಣಸಿನಕಾಯಿ) ಹೀಗೆ ವಿವಿಧ ಬೆಳೆಗಳಿಗೆ ಹೊದಿಕೆ ಮಾಡಲು 12 ಮಂದಿ ರೈತರಿಗೆ 1.24 ಲಕ್ಷ ರೂ., ಮೂರು ಮಂದಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದು , 2.25 ಲಕ್ಷ ರೂ. ನೀಡಲಾಗುತ್ತಿದೆ.

Advertisement

ಜೇನು ಕೃಷಿಗೂ ನೆರವು: ತಾಲೂಕಿನಲ್ಲಿ 100 ಪೆಟ್ಟಿಗೆ ಜೇನು ಕೃಷಿ ಮಾಡುತ್ತಿದ್ದು , ಅವರಿಗೆ 1.20 ಲಕ್ಷ ರೂ. ಮೂರು ಮಂದಿ ಸಾಮಾನ್ಯ ವರ್ಗದವರು ಟ್ರ್ಯಾಕ್ಟರ್‌ ಕೊಳ್ಳಲು 2.25 ಲಕ್ಷ ರೂ. ಎಸ್ಸಿ ಜನಾಂಗಕ್ಕೆ 2 ಲಕ್ಷ ರೂ. ಸಹಾಯ ಧನ ನೀಡಲಾಗುತ್ತಿದೆ. ಪ್ರಸಕ್ತ ವರ್ಷದಂತೆ ಕಳೆದ ವರ್ಷವೂ ತಾಲೂಕಿಗೆ ಕೋಟ್ಯಂತರ ರೂ. ಸಹಾಯ ಧನವನ್ನು ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ವತಿಯಿಂದ ಕೇಂದ್ರದ ಬಿಜೆಪಿ ಸರ್ಕಾರ ಹಣ ಬಿಡುಗಡೆ ಮಾಡಿ ಫ‌ಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿದೆ.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಈಗಾಗಲೇ ಕಸಬಾ ಹೋಬಳಿಯಿಂದ 555, ಹಿರೀಸಾವೆ 277, ದಂಡಿಗನಹಳ್ಳಿ 280, ಬಾಗೂರು 569, ಶ್ರವಣಬೆಳಗೊಳ 134, ನುಗ್ಗೇಹಳ್ಳಿ 252 ಮಂದಿ ಅರ್ಜಿ ನೀಡಿದ್ದು ಒಟ್ಟಾರೆಯಾಗಿ ತಾಲೂಕಿನಿಂದ 2,067 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಈಗಾಗಲೆ ತೋಟಗಾರಿಕೆ ಇಲಾಖೆ 1,414 ಫ‌ಲಾನುಭವಿಗಳಿಗೆ ಕೆಲಸ ಮಾಡಿಸಲು ಆದೇಶ ಪತ್ರ ನೀಡಿದ್ದು ಹಲವು ಮಂದಿ ಈಗಾಗಲೇ ಕೆಲಸ ಪ್ರಾರಂಭಿಸಿದ್ದಾರೆ.

ತಂತ್ರಜ್ಞರ ಕೊರತೆ: ಹಣ್ಣಿನ ಗಿಡಗಳ ಬೆಳೆಸಲು ಸೂಕ್ತ ಹವಾಗುಣ ಹಾಗೂ ಫ‌ಲವತ್ತಾದ ಭೂಮಿ ಇದೆ. ಆದರೆ ಇವುಗಳನ್ನು ನರ್ಸರಿ ಮಾಡಲು ತಂತ್ರಜ್ಞರ ಕೊರತೆ ಇದೆ ತಾಲೂಕಿನಲ್ಲಿ ಸುಮಾರು 14 ಮಂದಿ ಹುದ್ದೆ ಒಂದೆರಡು ದಶಕದಿಂದ ಖಾಲಿಯಿದೆ. ಇವು ಭರ್ತಿಯಾಗದ ಹೊರತು ಹಣ್ಣಿನ ಗಿಡಗಳು ನರ್ಸರಿ ಅಸಾಧ್ಯ, ತೆಂಗು ನರ್ಸರಿ ವರ್ಷದಲ್ಲಿ ಏಳು ತಿಂಗಳು ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ಇಲಾಖೆ ತೆಗೆದುಕೊಂಡು ತೆಂಗು ಸಸಿ ನರ್ಸರಿ ಮಾಡಿಸುತ್ತಿದೆ.

ಜಿಲ್ಲೆಗೆ ತಾಲೂಕು ಮೊದಲು: ರೈತರನ್ನು ಪ್ರೋತ್ಸಾಹಿಸಲು ಹಾಗೂ ತೆಂಗು, ಬಾಳೆ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆ ಮಾಡಿಸಲು ಎನ್‌ಆರ್‌ಇಜಿಯಲ್ಲಿಯೂ ಯೋಜನೆ ರೂಪಿಸಲಾಗಿದ್ದು , ಜಿಲ್ಲೆಯಲ್ಲಿ ತಾಲೂಕು ಪ್ರಥಮ ಸ್ಥಾನದಲ್ಲಿದೆ, ಚನ್ನರಾಯಪಟ್ಟಣ 47,327 ಮಾನವ ನಿರ್ಮಾಣ ದಿವಸವಾದರೆ, ಅರಕಲಗೂರು 40,997, ಸಕಲೇಶಪುರ 32,123, ಅರಸೀಕೆರೆ 31,767, ಹೊಳೆನರಸೀಪುರ 24,380, ಹಾಸನ 22,400, ಬೇಲೂರು 19,634, ಆಲೂರು 14,546 ಮಾನವ ನಿರ್ಮಾಣ ದಿವಸದಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಮಾಡಿಸಲಾಗಿದೆ.

ಹಣ್ಣಿನ ಗಿಡಗಳನ್ನು ಕಸಿ ಮಾಡಡಲು ತರಬೇತಿ ಹೊಂದಿದ ಹೊರ ಗುತ್ತಿಗೆ ಕಾರ್ಮಿಕರು ಸಿಗುತ್ತಿಲ್ಲ. ಶ್ರವಣಬೆಳಗೊಳ ಹಾಗೂ ಹಿರೀಸಾವೆಯಲ್ಲಿ ಸಹಾಯಕ ತೋಟಗಾರಿಕಾ ಅಧಿಕಾರಿ ಹುದ್ದೆ ಖಾಲಿ ಇದೆ. ಇಷ್ಟು ಸಮಸ್ಯೆ ಇದ್ದರೂ ರೈತರಿಗೆ ಸರ್ಕಾರದ ಯೋಜನೆಗಳನ್ನು ಸಕಾಲಕ್ಕೆ ತಲುಪಿಸಲಾಗುತ್ತಿದೆ.
-ಕೆ.ಬಿ.ಸತೀಶ್‌, ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ

ತಾಲೂಕಿನಲ್ಲಿ ಸಾವಿರಾರು ಮಂದಿ ಸಪೋಟ ಹಾಗೂ ಮಾವು ಸೇರಿದಂತೆ ವಿವಿಧ ಹಣ್ಣಿನ ಬೆಳೆ ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆ. ಆದರೆ ತೋಟಗಾರಿಕೆ ಇಲಾಖೆಯಲ್ಲಿ ಹಣ್ಣಿನ ಸಸಿಗಳನ್ನು ಬೆಳೆಸಿ ನೀಡುತ್ತಿಲ್ಲ. ಹಾಗಾಗಿ ಚಿಕ್ಕಮಗಳೂರು ಹಾಗೂ ಮಂಡ್ಯ ಜಿಲ್ಲೆಯಿಂದ ಹಣ್ಣಿನ ಸಸಿಗಳನ್ನು ತರುವುದು ಅನಿವಾರ್ಯವಾಗಿದೆ.
-ನಿಂಗೇಗೌಡ, ಬಾಗೂರು ರೈತ

* ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next