Advertisement

ಮನಸ್ಸನ್ನು ಕಲಕಿತು ಕೈ ಮೇಲಿನ ಆ ಹೆಸರು…

01:07 PM Sep 15, 2018 | Sharanya Alva |

ಒಂದು ಬೆಳಗಿನ ಜಾವ, ವಾಕಿಂಗ್‌ ಡ್ರೆಸ್‌ ಹಾಕಿಕೊಂಡು ಇನ್ನೇನು ಮನೆಯಿಂದ ಹೊರಡಬೇಕು, ಆಗ ನಮ್ಮ ಆಸ್ಪತ್ರೆಯಿಂದ ಕರೆ ಬಂದಿತು. ಒಬ್ಬ ವಿಷ ಸೇವಿಸಿದವ ಬಂದಿದ್ದಾನೆಂದೂ, ಸೀರಿಯಸ್‌ ಇದ್ದಾನೆಂದೂ, ಬದುಕುವ ಲಕ್ಷಣಗಳು ಕಡಿಮೆ ಇವೆಯೆಂದೂ ಒಂದೇ ಉಸಿರಿನಲ್ಲಿ ನಮ್ಮ ಸಹಾಯಕಿ ಹೇಳಿದಳು. ಅಂದಿನ ವಾಕಿಂಗ್‌ಗೆ ಅನಿವಾರ್ಯವಾಗಿ ವಿದಾಯ ಹೇಳಿ, ಬಟ್ಟೆ ಬದಲಾಯಿಸದೇ ಆಸ್ಪತ್ರೆಯೆಡೆಗೆ ದೌಡಾಯಿಸಿದೆ.
ಅನೇಕ ಬಾರಿ ಹೀಗಾಗುತ್ತದೆ. ಬೆಳಿಗ್ಗೆಯಿಂದ ಏನೇನೋ ಯೋಜನೆಗಳನ್ನು ಹಾಕಿಕೊಂಡು ಈ ದಿನ ಇಂತಿಂಥದ್ದನ್ನು ಮಾಡೋಣ ಎಂದುಕೊಂಡಿರುತ್ತೇವೆ. ಆದರೆ ಹೀಗೆಯೇ ಏನೋ ಒಂದು ತುರ್ತು ಬಂದು ನಮ್ಮ ಎಲ್ಲ ಯೋಜನೆ-ಯೋಚನೆಗಳು ತಲೆಕೆಳಗಾಗುತ್ತವೆ. ನಮ್ಮ ಮನೆ ಮಂದಿಯೂ ಇಂಥ ದಿಢೀರ್‌ ಬದಲಾವಣೆಗೆ ಹೊಂದಿಕೊಂಡುಬಿಟ್ಟಿರುತ್ತಾರೆ.

Advertisement

ಅನೇಕ ಬಾರಿ ನಮ್ಮ ಹತ್ತಿರದವರ ಶುಭ ಕಾರ್ಯಗಳನ್ನೂ ತಪ್ಪಿಸಿ ಅವರ ಕೆಂಗಣ್ಣಿಗೆ ತುತ್ತಾಗಿದ್ದೂ ಇದೆ. ಆದರೆ ಅದು ಅನಿವಾರ್ಯ ಕೂಡ. ಯಾಕೆಂದರೆ ನಮ್ಮ ಸ್ವಂತ ಸುಖ ಸಂತೋಷಕ್ಕಿಂತಲೂ ಒಂದು ಜೀವ ಮುಖ್ಯವಾಗುತ್ತದೆ. ನಾನು ಹುಬ್ಬಳ್ಳಿಯ ಕೆ.ಎಂ.ಸಿ.ಯಲ್ಲಿ ಮೊದಲ ವರ್ಷ
ವೈದ್ಯಕೀಯ ಕಲಿಯುವಾಗ ನಮ್ಮ ಕಾಲೇಜ್‌ನಲ್ಲಿ ಒಂದು ಸೆಮಿನಾರ್‌ ನಡೆಯಿತು. ಅದು ವೈದ್ಯರು, ವಕೀಲರು, ಪೊಲೀಸ್‌ ಅಧಿಕಾರಿಗಳು ಪಾಲ್ಗೊಂಡಿದ್ದ ಚರ್ಚಾಸಭೆ. ಅಲ್ಲಿ ಮಾತಾಡಿದ ಬಹುತೇಕ ವೈದ್ಯರು, ತಾವು ರಾತ್ರಿ ಹಗಲೆನ್ನದೇ ಕೆಲಸ ಮಾಡಬೇಕಾಗುತ್ತದೆಂದೂ, ವೈಯಕ್ತಿಕ ಜೀವನವೇ ಇಲ್ಲವೆಂದೂ ಪ್ರತಿಪಾದಿಸಿದ್ದರು. ಆಗ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ ಒಂದು ಮಾತು ನನ್ನ ಮನದಲ್ಲಿ ಅಚ್ಚಳಿಯದೆ ಉಳಿಯಿತು. ಅವರು ತಮ್ಮ ಭಾಷಣದಲ್ಲಿ, “ನಿಮಗೆ ವೈದ್ಯರಾಗಲು ಸಮಾಜ, ರೋಗಿಗಳು ಅಥವಾ ಮತ್ಯಾರಾದರೂ ವಿನಂತಿ ಮಾಡಿಕೊಂಡಿದ್ದರೇ? ನಿಮಗೇ ಬೇಕಾಗಿ, ನಿಮ್ಮ ಸ್ವಂತ ನಿರ್ಧಾರದಿಂದ ಈ ವೃತ್ತಿಯನ್ನು ಆರಿಸಿಕೊಂಡಿದ್ದೀರಿ, ಹೀಗಾಗಿ ಗೊಣಗುವುದನ್ನು ಬಿಟ್ಟು ಸಂತೋಷದಿಂದ ಈ ವೃತ್ತಿಯ ಸಾಧಕ ಬಾಧಕಗಳನ್ನು ಸ್ವೀಕರಿಸಬೇಕು’ ಅಂದರು. ಅಂದೇ ನಾನು ನಿರ್ಧರಿಸಿಬಿಟ್ಟೆ, “ರೋಗಿ ಯಾವಾಗ ಬಂದರೂ ಸಮಾಧಾನದಿಂದ ನೋಡಬೇಕು. ನನ್ನ ಪ್ರತಿದಿನದ ಎಲ್ಲ ಸಮಯವೂ ಅವರದೆ, ಅವರಾಗಿ ಬಿಟ್ಟುಕೊಟ್ಟ ವೇಳೆಯಷ್ಟೇ ನನ್ನದು.’ ಎಂದು…

***
ಆಸ್ಪತ್ರೆ ತಲುಪಿದರೆ ಅಲ್ಲಿ ಜನ ಜಾತ್ರೆ. ನೂರಾರು ಜನ ಸೇರಿ ನನ್ನ ಬರುವಿಕೆಗೆ ಕಾಯುತ್ತಿದ್ದರು. ಅಷ್ಟೊತ್ತಿಗೆ ನಮ್ಮ ಸಿಬ್ಬಂದಿ ವರ್ಗ ರೋಗಿಯನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಸಾಗಿಸಿ ಅವನ ಹೊಟ್ಟೆಯಿಂದ ವಿಷ ತೆಗೆಯಲು ನಳಿಕೆಯನ್ನು ಹಾಕತೊಡಗಿದ್ದರು. ಅವನು ಇಪ್ಪತ್ತು ಇಪ್ಪತ್ತೆರಡರ ಕಟ್ಟುಮಸ್ತಾದ ಯುವಕ. ಅವನ ತಂದೆ ತಾಯಿ ದೀನರಾಗಿ ಕೈಮುಗಿದು ನಿಂತಿದ್ದಾರೆ. ಅವರ ಬಾಯಿಂದ ಮಾತು ಹೊರಡುತ್ತಿಲ್ಲ. ನಾನು ಪರೀಕ್ಷೆ ಮಾಡಿದರೆ ಅವನು ಪ್ರಜ್ಞಾಹೀನನಾಗಿದ್ದ, ಆತನ ಮೈಯೆಲ್ಲಾ ತಣ್ಣಗಾಗಿ, ನಾಡಿ ಕ್ಷೀಣವಾಗಿ, ರಕ್ತದೊತ್ತಡ ಸಿಗದ ಸ್ಥಿತಿ ತಲುಪಿದ್ದ. ಕಣ್ಣು ಪಾಪೆಯನ್ನು ಪರೀಕ್ಷಿದರೆ ಅದು ಸೂಜಿ ಮೊನೆಯಷ್ಟಾಗಿತ್ತು. ಉಸಿರು ನಿಲ್ಲುವ ಸ್ಥಿತಿ ತಲುಪಿದ್ದ. ಅಂದರೆ, ಆತ ಸೇವಿಸಿದ ವಿಷದ ಪ್ರಮಾಣ ಹೆಚ್ಚಾಗಿತ್ತಲ್ಲದೆ, ಅವನನ್ನು ಆಸ್ಪತ್ರೆಗೆ ತರುವುದನ್ನೂ ತಡಮಾಡಿದ್ದಾರೆ ಎನಿಸಿತು. ಎಂದಿನಂತೆ ನಮ್ಮ ಆಸ್ಪತ್ರೆಯ ಸಿಬ್ಬಂದಿಯೊಡಗೂಡಿ ಅವನನ್ನು ಹೇಗಾದರೂ ಉಳಿಸಲೇ ಬೇಕೆಂದು ದೃಢ ನಿರ್ಧಾರದೊಂದಿಗೆ ಕಾರ್ಯಪ್ರವೃತ್ತನಾದೆ. ಮೊದಲು ಅವನನ್ನು ಕೃತಕ ಉಸಿರಾಟ ಯಂತ್ರಕ್ಕೆ ಜೋಡಿಸಿ ಅವನ ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಹೆಚ್ಚಿಸಲು ಶುರುವಿಟ್ಟುಕೊಂಡೆವು. ಮೂಗಿನ ಮುಖಾಂತರ ನಳಿಕೆ ತೂರಿಸಿ ಅವನ ಹೊಟ್ಟೆಯಲ್ಲಿ ಇನ್ನೂ ಉಳಿದಿರಬಹುದಾದ ವಿಷವನ್ನು ತೊಳೆದು ತೆಗೆದು, ಬಟ್ಟೆ ಬದಲಾಯಿಸಿ, ತೀವ್ರ ನಿಗಾ ಘಟಕದಲ್ಲಿ ಇಟ್ಟು, ವಿಷ ವಿರೋಧಿ ಇಂಜೆಕ್ಷನ್‌ ಪ್ರಾರಂಭಿಸಿದೆವು.

ಪೊಲೀಸರಿಗೆ ತಿಳಿಸುವುದು, ಅವರ ಬಂಧುಗಳಿಗೆ ಆತನ ಸ್ಥಿತಿಯ ಬಗೆಗೆ ವಿವರಿಸುವುದು ಇತ್ಯಾದಿಗಳೆಲ್ಲ ಮುಗಿದ ಮೇಲೆ ಸ್ವಲ್ಪ ನಿರಾಳವಾಗಿ ಕುಳಿತು ಅವನ ತಂದೆ ತಾಯನ್ನು ಕರೆದು ಅವನು ವಿಷ ಸೇವಿಸಿದ ಕಾರಣ ಕೇಳಿದೆ. ನಾವು ಕೊಡುವ ಔಷಧೋಪಚಾರಕ್ಕೂ ಅವನು ವಿಷ ಸೇವಿಸಲು ಕಾರಣವಾದ ಸಂದರ್ಭಕ್ಕೂ ಯಾವುದೇ ರೀತಿಯ ಸಂಬಂಧವಿರದಿದ್ದರೂ ಅದು ಆಮೇಲೆ ಕೌನ್ಸೆಲ್ಲಿಂಗ್‌ಗೆ ಉಪಯೋಗವಾಗುತ್ತದೆ. ನಡೆದದ್ದಿಷ್ಟು: ಅವನು ತಮ್ಮ ಜಾತಿಯದಲ್ಲದ ಹುಡುಗಿಯನ್ನು ಪ್ರೀತಿಸಿದ್ದ, ಅವಳೂ ಇವನನ್ನು ಪ್ರೀತಿಸುತ್ತಿದ್ದಳು. ಆದರೆ ಹುಡುಗಿಯ ಅಣ್ಣಂದಿರು ಇದನ್ನು ವಿರೋಧಿಸಿದ್ದರಿಂದ ಈಗ ಹುಡುಗಿ ಹಿಂಜರಿದಿದ್ದಾಳೆ. ಅಷ್ಟಕ್ಕೇ ಇವನು ಸಾಯುವ ನಿರ್ಧಾರ ತೆಗೆದುಕೊಂಡು ಸುಲಭವಾಗಿ ದೊರಕುವ ಕೀಟ ನಾಶಕದ ಇಡೀ ಬಾಟಲಿಯನ್ನು ಆಪೋಶನಗೈದು ತೋಟದಲ್ಲಿ ಮಲಗಿಬಿಟ್ಟಿದ್ದಾನೆ. ಬದಿಯಲ್ಲಿನ ಜನ ಇವನನ್ನು ನೋಡಿ ಆಸ್ಪತ್ರೆಗೆ ಕರೆತಂದಿದ್ದಾರೆ.

ಕೆಲವೊಮ್ಮೆ ಎಂಥ ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆಗೆ ಶರಣಾಗುತ್ತಾರೆ, ಈ ಯುವಜನಾಂಗ ಎನಿಸುತ್ತದೆ. ಹಾಗೆ ನೋಡಿದರೆ ಕಾರಣ ಕ್ಷುಲ್ಲಕವೋ, ದೊಡ್ಡದೋ ಆತ್ಮಹತ್ಯೆ ಎಂದಿಗೂ ಪರಿಹಾರವಲ್ಲ. ಇಡೀ ದಿನ ಅವನೊಂದಿಗೆ ನಾನು, ಸಿಬ್ಬಂದಿ ನಿಂತು ಮುತುವರ್ಜಿಯಿಂದ ಉಪಚಾರ ಮಾಡಿದಾಗ ಆತನ ಸ್ಥಿತಿ ತುಸು ಹಿಡಿತಕ್ಕೆ ಬಂದಿತಾದರೂ ಪ್ರಜ್ಞೆ ಮರುಕಳಿಸಲಿಲ್ಲ. ಕೃತಕ ಉಸಿರಾಟ ಯಂತ್ರ ಅವನ ಪುಪ್ಪುಸದೊಳಗೆ ಗಾಳಿ ತುಂಬುವುದನ್ನೂ, ರಕ್ತನಾಳಗಳಲ್ಲಿ ಹರಿದ ದ್ರಾವಣಗಳು ಅವನಿಗೆ ಶಕ್ತಿ ತುಂಬುವುದನ್ನೂ ಮುಂದುವರಿಸಿದ್ದವು. ಜೊತೆಗೆ ಅನೇಕ ರಕ್ತ ಪರೀಕ್ಷೆ, ನಾಡಿ ಬಡಿತ, ರಕ್ತದೊತ್ತಡ, ಕಣ್ಣು ಪಾಪೆ ಪರೀಕ್ಷೆ ಗನುಸಾರ ವಿಷ ನಿರೋಧಕ ಔಷಧೋಪಚಾರಗಳು ಸಾಗಿದ್ದವು. ಇಂಥ ಪ್ರತಿಯೊಬ್ಬ ರೋಗಿಯೂ ನಮಗೊಂದು ಚಾಲೆಂಜ್‌ ಇದ್ದಂತೆ. ರೋಗಿಯ ಬಗೆಗಿನ ಸ್ವಲ್ಪವೇ ಅಲಕ್ಷ್ಯ ಆತನ ಪ್ರಾಣಕ್ಕೆ ಸಂಚಕಾರ ತರಬಹುದೆನ್ನುವ ಚಿಂತೆಯ ಜೊತೆಗೆ, ಐದು ನಿಮಿಷಕ್ಕೊಮ್ಮೆ ರೋಗಿಯ ಸಂಬಂಧಿಕರ ಆತಂಕದ ಪ್ರಶ್ನೆಗಳು, ಅವರು ನಮ್ಮೆಡೆ ಬೀರುವ ಸಂಶಯಾತ್ಮಕ ದೃಷ್ಟಿ, ಎಲ್ಲೆಡೆಯಿಂದ ಹರಿದು ಬರುವ ಲೀಡರ್‌ಗಳು ನೀಡುವ ವಿಚಿತ್ರ, ಉಚಿತ ಸಲಹೆಗಳು ನಮ್ಮ ಮಾನಸಿಕ ತಲ್ಲಣಕ್ಕೆ ಕಾರಣವಾಗುತ್ತವೆ. 

Advertisement

ಮೊದಲೇ ಗಂಭೀರ ಸ್ಥಿತಿಯಲ್ಲಿರುವ ರೋಗಿಗೆ ಏನಾದರೂ ಹೆಚ್ಚು ಕಮ್ಮಿಯಾದರೆ ಒಂದು ಜೀವ ಹೋಗುತ್ತದಲ್ಲ ಎಂಬ ಆತಂಕದೊಂದಿಗೆ, ಹಾಗಾದಾಗ ನಮ್ಮ ಗತಿಯೇನು ಎನ್ನುವ ಚಿಂತೆ ಕೂಡ ಕಾಡುತ್ತದೆ. ಯಾಕೆಂದರೆ, ಇತ್ತೀಚಿನ ದಿನಗಳಲ್ಲಿ ರೋಗಿ ಮರಣಿಸಿದರೆ ಹಿಂದು ಮುಂದು ವಿಚಾರಿಸದೆ, ಹಲ್ಲೆ ಮಾಡುವುದು ಒಂದು ಫ್ಯಾಶನ್‌ ಆಗಿದೆ. ಅಂಥದರಲ್ಲಿ ಎಲ್ಲಿಂದಲೋ ಯಾರೋ ಫೋನ್‌ ಮಾಡಿ “ನಿಮಗೆ ನೀಗುತ್ತದೆಯೇ?’ ಎಂದು ಪ್ರಶ್ನಿಸಿ ನಮ್ಮ ನೈತಿಕತೆಯನ್ನೇ ನಡುಗಿಸಿಬಿಡುತ್ತಾರೆ. ಮೂವತ್ನಾಲ್ಕು ವರ್ಷದ ವೈದ್ಯಕೀಯ ದಲ್ಲಿ ಇಂಥವನ್ನು ನಾನು ಹಲವು ಬಾರಿ ಎದುರಿಸಿರುವೆ ನಾದ್ದರಿಂದ ಧೃತಿಗೆಡದೆ ರೋಗಿಯನ್ನು ಗುಣಮುಖ ಮಾಡುವ ಪ್ರಾಮಾಣಿಕ ಪ್ರಯತ್ನದೆಡೆಗೆ ಮಾತ್ರ ಗಮನ ಹರಿಸುವುದನ್ನು
ಅಭ್ಯಾಸ ಮಾಡಿಕೊಂಡಿದ್ದೇನೆ.
 
ಮುಂದಿನ ಮೂರು ದಿನಗಳು ನಮಗೆ ಆತಂಕದ ಕ್ಷಣ ಗಳು. ನಮ್ಮ ಉಪಚಾರಕ್ಕೆ ಸ್ಪಂದಿಸುತ್ತಿದ್ದನಾದರೂ ಎಚ್ಚರವಾಗಿರಲಿಲ್ಲ. ನಮ್ಮ ಅವಿರತ ಪ್ರಯತ್ನ ಸಾಗಿಯೇ ಇತ್ತು. ಮೂರನೇ ದಿನಕ್ಕೆ ಕಣ್ಣು ಬಿಟ್ಟ. ಒಂದು ಯುದ್ಧ ಗೆದ್ದವರ ಭಾವ ನೆಲೆಸಿತ್ತು ನಮ್ಮ ಮುಖದ ಮೇಲೆ. ಹೋಗುವ ದಿನ ಅವನನ್ನು ನನ್ನ ಛೇಂಬರಿನಲ್ಲಿ ಕುಳ್ಳಿರಿಸಿ, ತಿಳಿಹೇಳಿದೆ. ಸಾವು ಯಾವ ಸಮಸ್ಯೆಗೂ ಪರಿಹಾರವೇ ಅಲ್ಲ. ಸಾಧ್ಯವಿದ್ದರೆ ಆ ಹುಡುಗಿಯನ್ನು ಮದುವೆಯಾಗು. ಸಾಧ್ಯವಿರದಿದ್ದರೆ ಅವಳ ಪ್ರೀತಿಯನ್ನು ನಿನ್ನ ಜೀವನದ ಮಧುರ ಕ್ಷಣಗಳ ಅಕೌಂಟಿಗೆ ಹಾಕಿ, ಮತ್ತೂಂದು ಮದುವೆಯಾಗಿ ಸುಖದಿಂದಿರು, ಅವಳಿಗೂ ಅದನ್ನೇ ತಿಳಿಹೇಳು, ಎಂದೆ. ಅವನು ಸಣ್ಣಗೆ ನಕ್ಕು ನನ್ನೆಡೆಗೆ ತನ್ನ ಎಡ ಮುಂದೋಳನ್ನು ಚಾಚಿದ, ಅದರ ಮೇಲೆ ಸ್ಪಷ್ಟವಾಗಿ ಹಚ್ಚೆ ಹಾಕಲಾದ ಅವನ ಪ್ರೇಮಿಯ ಹೆಸರು! ಅವನು ಹೆಚ್ಚು ಮಾತಾಡಲಿಲ್ಲ. ಏನನ್ನೋ ದೃಢ ನಿರ್ಧಾರ ಮಾಡಿದಂತೆ ಎದ್ದವನೇ ನನ್ನ ಕಾಲು ಮುಟ್ಟಿ ನಮಸ್ಕಾರ ಮಾಡಿ ಹೊರಟ.

ಅನೇಕ ತಿಂಗಳುಗಳು ಉರುಳಿದವು. ನಾನು ನನ್ನ ನಿತ್ಯದ ಕರ್ತವ್ಯದಲ್ಲಿ ಅವನನ್ನು ಮರೆತೇಬಿಟ್ಟೆ. ಹೀಗೆಯೇ ಆಗುತ್ತದೆ. ಗಂಭೀರ ಸ್ಥಿತಿಯಲ್ಲಿ ಇರುವ ಅನೇಕ ರೋಗಿಗಳು ಬಹಳ ಸಮಯದವರೆಗೆ ನಮ್ಮ ಮನಸ್ಸನ್ನು ಆಕ್ರಮಿಸಿದರೂ ಹಲವು ದಿನಗಳ ನಂತರ ಮನಸ್ಸಿನಿಂದ ಮರೆಯಾಗುತ್ತಾರೆ. ಅದೊಂದು ದಿನ ಸಾಯಂಕಾಲ ಏಳು ಗಂಟೆಯ ಸಮಯ.
ವಾಕಿಂಗ್‌ ಮುಗಿಸಿ ಮನೆಯೆಡೆಗೆ ಬರುತ್ತಿದ್ಧ. ನಮ್ಮ ಮನೆಯ ಹತ್ತಿರದ ಸರ್ಕಲ್‌ನಲ್ಲಿ ಜನ ಜಂಗುಳಿ. ಎಲ್ಲರೂ ಏನನ್ನೋ ಸುತ್ತುವರಿದು ಕಾಲೆತ್ತರಿಸಿ ಒಬ್ಬರ ಮೇಲೊಬ್ಬರು ಬಿದ್ದು ಇಣುಕುತ್ತಿದ್ದರು. ಸಮೀಪ ನಿಂತವನೊಬ್ಬನನ್ನು ಏನಾಗಿದೆ ಯೆಂದು ಕೇಳಿದೆ. “ಯುವಕನೊಬ್ಬನನ್ನು ಯಾರೋ ಕೊಚ್ಚಿ ಹಾಕಿದ್ದಾರೆ’ ಎಂದು ಹೇಳಿದ. ಸಂಕಟವಾಯಿತು. ಹಾಡಹಗಲೇ ಮುಖ್ಯ ಸರ್ಕಲ್‌ನಲ್ಲಿ ಕೊಚ್ಚಿ ಕೊಂದಿದ್ದಾರೆಂದರೆ ಎಷ್ಟು ಸಿಟ್ಟಿನಿಂದ ಮಾಡಿರಬಹುದು, ಅಲ್ಲದೆ ಕಾನೂನಿನ ಹೆದರಿಕೆಯೂ ಇಲ್ಲದಾಯ್ತಲ್ಲ ..!! ಕುತೂಹಲಕ್ಕೆಂದು ಸಮೀಪ ಹೋಗಿ ನೋಡಿದೆ. ಕಟ್ಟು ಮಸ್ತಾದ ಯುವಕ. ಮುಖ ಆ ಕಡೆ ತಿರುಗಿದೆ. ಎಡಗೈಯನ್ನು ಕತ್ತರಿಸಿ ಇತ್ತ ಬಿಸಾಡಿದ್ದಾರೆ. ತುಂಡಾಗಿ ಬಿದ್ದ ಆ ಕೈಯೆಡೆಗೆ ದಿಟ್ಟಿಸಿದೆ…

ಪ್ರೇಮಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡ ಅದೇ ಕೈ…ನನಗೆ ಅಲ್ಲಿ ನಿಲ್ಲಲಾಗಲಿಲ್ಲ. ಎಷ್ಟೊಂದು ಕಷ್ಟಪಟ್ಟು, ಮೂರ್ನಾಲ್ಕು ದಿನ ನಿದ್ದೆಗೆಟ್ಟು, ಆತಂಕವನ್ನೆದುರಿಸಿ ಅವನನ್ನು ಉಳಿಸಿದ್ದೆವು. ಅಂಥ ಒಂದು ಜೀವವನ್ನು ಕ್ಷಣಾರ್ಧದಲ್ಲಿ ಮುಗಿಸಿಬಿಟ್ಟರಲ್ಲ ಎಂದು ಕಸಿವಿಸಿಯಾಯಿತು. ಆಮೇಲೆ ವಿಚಾರಿಸಿದರೆ ಅವನು ಹಠಕ್ಕೆ ಬಿದ್ದು ಅದೇ ಹುಡುಗಿಯನ್ನೇ ಮದುವೆಯಾದನೆಂದೂ ಅವಳ ಅಣ್ಣಂದಿರು ಇದರಿಂದ ಕ್ರುದ್ಧರಾಗಿ ಇವನನ್ನು ಕೊಲ್ಲಲು ಹೊಂಚು ಹಾಕಿದ್ದರೆಂದೂ, ಸರ್ಕಲ್‌ ನಲ್ಲಿ ಒಬ್ಬನೇ ಬರುತ್ತಿದ್ದುದನ್ನು ನೋಡಿ ಬೇಟೆಯಾಡಿದರೆಂದೂ ಗೊತ್ತಾಯಿತು.
ಜೀವ ಉಳಿಸಿದ ನಮ್ಮ ಒಂದು ಪ್ರಯತ್ನ ಹೀಗೆ ವ್ಯರ್ಥವಾಯಿತು…

*ಡಾ. ಶಿವಾನಂದ ಕುಬಸದ

Advertisement

Udayavani is now on Telegram. Click here to join our channel and stay updated with the latest news.

Next