ತಂದೆ ತೀರಿಕೊಂಡ ದಿನ, ನೆಂಟರ್ಯಾರೋ ಧಾರಿಣಿಯನ್ನು ತೋರಿಸಿ, “ಇದು ಅವನ ಸ್ವಂತ ಮಗಳಲ್ಲ, ದತ್ತು ತೆಗೆದುಕೊಂಡಿದ್ದು’ ಎಂದಿದ್ದನ್ನು ಆಕೆ ಕೇಳಿಸಿಕೊಂಡಿದ್ದಾಳೆ. ತಂದೆಯ ಸಾವಿನ ನೋವಿನ ಜೊತೆಗೆ, ಆ ಮಾತುಗಳು ಅವಳು ನೆಮ್ಮದಿಯನ್ನು ಹಾಳು ಮಾಡಿತ್ತು.
ಹದಿನಾಲ್ಕು ವರ್ಷದ ಧಾರಿಣಿಗೆ ಆಗಾಗ್ಗೆ ಹೊಟ್ಟೆನೋವು ಕಾಡುತ್ತಿತ್ತು. ವೈದ್ಯರ ಬಳಿ ಹೋದಾಗ, ರಕ್ತ ಪರೀಕ್ಷೆ ನಡೆಸಿದರೂ ಯಾವುದೇ ರೋಗ ಲಕ್ಷಣಗಳು ಪತ್ತೆಯಾಗಲಿಲ್ಲ. ಹಾಗಾಗಿ, ಯಾವ ಔಷಧೋಪಚಾರವೂ ಬೇಡವೆಂದರು. ಆದರೆ, ಧಾರಿಣಿ ಹೊಟ್ಟೆ ನೋವಿನ ಪಟ್ಟು ಬಿಡಲಿಲ್ಲ. ಶಾಲೆಗೆ ಹೋಗಲು ಹಠ ಮಾಡತೊಡಗಿದಾಗ, ನನ್ನ ಬಳಿಗೆ ಕೌನ್ಸೆಲಿಂಗ್‌ಗೆಂದು ಕಳಿಸಿದರು.
ಖುಷಿ ಖುಷಿಯಾಗಿಯೇ ಮಾತನಾಡಿದರೂ, ಹೇಳಿಕೊಳ್ಳಲು ಏನೂ ಇಲ್ಲವೆಂಬಂತೆ ಕೇಳಿದ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿ ಮಾತು ಮುಗಿಸುತ್ತಿದ್ದಳು. ಸಂಕೋಚ ಸ್ವಭಾವದ ಮಕ್ಕಳಿಗೆ ಸುಲಭವಾಗಿ ಮಾತನಾಡಲು ಆಗುವುದಿಲ್ಲ. ಆದ್ದರಿಂದ, ಹದಿಹರೆಯದವರನ್ನು ಕಾಡುವ ಸಮಸ್ಯೆಗಳ ಪಟ್ಟಿ ಕೊಟ್ಟು, ಗುರುತಿಸಲು ಹೇಳಿದೆ. ನಂತರ, ಆಕೆಯ ತಾಯಿಯನ್ನು ಪ್ರತ್ಯೇಕವಾಗಿ ಮಾತನಾಡಿಸಿದಾಗ ಕೆಲವು ವಿಷಯಗಳು ತಿಳಿದವು.
ಧಾರಿಣಿಯನ್ನು ದತ್ತು ತೆಗೆದುಕೊಂಡಿದ್ದರು. ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದ ತಂದೆ ತೀರಿಕೊಂಡು ಎರಡು ವರ್ಷಗಳಾಗಿವೆ. ತಂದೆ ತೀರಿಕೊಂಡ ದಿನ, ನೆಂಟರ್ಯಾರೋ ಧಾರಿಣಿಯನ್ನು ತೋರಿಸಿ, “ಇದು ಅವನ ಸ್ವಂತ ಮಗಳಲ್ಲ, ದತ್ತು ತೆಗೆದುಕೊಂಡಿದ್ದು’ ಎಂದಿದ್ದನ್ನು ಆಕೆ ಕೇಳಿಸಿಕೊಂಡಿದ್ದಾಳೆ. ತಂದೆಯ ಸಾವಿನ ನೋವಿನ ಜೊತೆಗೆ, ಆ ಮಾತುಗಳು ಅವಳು ನೆಮ್ಮದಿಯನ್ನು ಹಾಳು ಮಾಡಿತ್ತು. ಆ ದುಃಖವನ್ನು ಆಕೆ ಶಾಲೆಯಲ್ಲಿ ಸಹಪಾಠಿಯೊಂದಿಗೆ ಹಂಚಿಕೊಂಡಿದ್ದಾಳೆ. “ನಿನ್ನ ಹೆತ್ತವರನ್ನು (biological parents) ಹುಡುಕಲು ಸಹಾಯ ಮಾಡುತ್ತೇನೆ’ ಎಂದು ಸಹಪಾಠಿ ಹೇಳಿದಾಗ, ಇವಳಿಗೆ ಆಸೆಯಾಗಿದೆ. ಈ ವಿಚಾರ ಮಾತಾಡಲು ಸಹಪಾಠಿ ಮನೆಗೆ ಬಂದಾಗ, ತಾಯಿ ಅದಕ್ಕೆ ಸಹಕಾರ-ಸಹಮತಿ ನೀಡಿಲ್ಲ. ಆಗ ಧಾರಿಣಿ, “ನಿನ್ನ ಜೊತೆ ಇರಲು ಇಷ್ಟವಿಲ್ಲ. ತಂದೆ ಬದುಕಿದ್ದರೆ, ಸಹಪಾಠಿಯ ಸ್ನೇಹ ಒಪ್ಪಿಕೊಳ್ಳುತ್ತಿದ್ದರು’ ಎಂದೆಲ್ಲ ತಾಯಿಯೊಡನೆ ಜಗಳವಾಡಿದ್ದಾಳೆ. ಅವಳಿಗೆ ತಾನು ಅನಾಥೆ ಎನಿಸಿದೆ.
ವಾಸ್ತವದಲ್ಲಿ ಮನೋಕ್ಲೇಷೆ ಏಕಾಏಕಿ ಉಂಟಾಗುವುದಿಲ್ಲ. ಕಹಿ ಘಟನೆಗಳನ್ನು ತಡೆದುಕೊಳ್ಳುವ ಶಕ್ತಿ ಮನೋಮಯ ಕೋಶಕ್ಕೆ ಇರುತ್ತದೆ. ಬೀಜ ಮೊಳೆತು ಹೆಮ್ಮರವಾಗುವಂತೆ, ಕಾಲಾನುಕ್ರಮದಲ್ಲಿ ಸಂಘರ್ಷಗಳು ಘಟಿಸಿದಾಗ ನಿಧಾನವಾಗಿ ಅದು ಮನೋದೈಹಿಕ ಬೇನೆಯಾಗುತ್ತದೆ. ಧಾರಿಣಿಯ ಹೊಟ್ಟೆನೋವಿನ ಮರ್ಮ ಆಗ ತಿಳಿಯಿತು. ಮಗಳ ವಯೋಸಹಜ ರಂಪಾಟವನ್ನು ತಾಯಿ ಸಹಜವಾಗಿ ಸ್ವೀಕರಿಸಿದ್ದರಿಂದ ಕೌನ್ಸೆಲಿಂಗ್‌ಗೆ ಅನುಕೂಲವಾಯಿತು.
ದತ್ತು ತೆಗೆದುಕೊಳ್ಳುವ ಕಾನೂನು ಪ್ರಕ್ರಿಯೆ ಮಕ್ಕಳಿರದ ದಂಪತಿಗಳಿಗೆ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವ ಅವಕಾಶ ಕಲ್ಪಿಸಿದೆ. ದತ್ತು ತೆಗೆದುಕೊಳ್ಳಲು ಹೋದಾಗ ಧಾರಿಣಿಯ ಒಂದು ಮುಗುಳ್ನಗೆ ತಂದೆ-ತಾಯಿಗೆ ಸುಖ ನೀಡಿತ್ತು. ಅವರ ಮಡಿಲಲ್ಲಿ ಧಾರಿಣಿಗೂ ರಕ್ಷೆ ಮತ್ತು ರಕ್ಷಣೆ ದೊರಕಿತ್ತು. ಪತಿಯನ್ನು ಕಳೆದುಕೊಂಡ ದುಃಖದ ನಡುವೆಯೂ ತಾಯಿ ತೋರುತ್ತಿರುವ ಜವಾಬ್ದಾರಿ ಮತ್ತು ಸಂಯಮದ ಕುರಿತು ವಿವರಿಸಿದ ನಂತರ, ಸ್ವಂತ ತಂದೆತಾಯಿಯ ಹುಡುಕಾಟದ ಹುಡುಗಾಟಿಕೆ ವ್ಯರ್ಥವೆಂದು ಅವಳಿಗೆ ಅರ್ಥವಾಯ್ತು. ಶಾಲೆಯಲ್ಲಿ ಸಹಪಾಠಿ ಮತ್ತೆ ಆ ವಿಚಾರ ಮಾತಾನಾಡಿದರೆ ಹೇಗೆ ಉತ್ತರಿಸಬೇಕೆಂದು ಹೇಳಿಕೊಟ್ಟೆ. ಈಗ ಸಲೀಸಾಗಿ ಶಾಲೆಗೆ ಹೋಗುತ್ತಿದ್ದಾಳೆ. ವಿಶ್ವವೇ ಒಂದು ಕುಟುಂಬ ಎಂದು ಮನವರಿಕೆ ಮಾಡಿಸಿದ್ದು ಅವಳಿಗೆ ಬಹಳ ಹಿಡಿಸಿತು.
ನೋವುಗಳೆಲ್ಲಾ ಮನೋಕ್ಲೇಷೆಯಾದರೆ ಬದುಕುವುದೆಂತು?
ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ