Advertisement

ಕುಂದಾಪುರದ ಕಡಲತಡಿಯಲ್ಲಿ ವಲಸೆ ಹಕ್ಕಿಗಳ ಕಲರವ

06:30 AM Mar 26, 2018 | |

ಕುಂದಾಪುರ: ಕುಂದಾಪುರ ಈಗ ಪ್ರವಾಸಿಗರ ಸ್ವರ್ಗವಾಗಲು ಹೊರಟಂತಿದೆ. ಪಂಚನದಿಗಳ ನಾಡು ಎಂದೇ ಬಣ್ಣಿಸಲ್ಪಟ್ಟು ಐದು ನದಿಗಳು ಕೂಡುವ ಸಂಗಮ ತಾಣ ಹಿಂದಿನಿಂದಲೂ ಪ್ರಸಿದ್ಧ. ಪರ್ಯಾಯ ದ್ವೀಪದಂತಿರುವ ಒಂದೆಡೆ ಗಂಗೊಳ್ಳಿ ಹೊಳೆ, ಇನ್ನೊಂದೆಡೆ ಹಾಲಾಡಿ ಹೊಳೆ, ಮತ್ತೂಂದೆಡೆ ಕೋಣಿ ಹಿನ್ನೀರು, ಮಗದೊಂದೆಡೆ ಸಮುದ್ರ ಹೀಗೆ 4 ಭಾಗವೂ ನೀರು ಆವರಿಸಿದ ಪ್ರದೇಶ ಕುಂದಾಪುರ ಪ್ರವಾಸೋದ್ಯಮದ ಮಟ್ಟಿಗೆ ತೀರಾ ನಿರ್ಲಕ್ಷಿತ ತಾಣ. ಇಲ್ಲಿಗೆ ಸಮೀಪದ ಪಂಚಗಂಗಾವಳಿಯಲ್ಲಿ ಈಗ ಪ್ರತಿನಿತ್ಯ ಸಾವಿರಾರು ಹಕ್ಕಿಗಳ ಚಿಲಿಪಿಲಿ ಕಲರವ. 

Advertisement

ಕುಬಾj, ಸೌಪರ್ಣಿಕಾ, ಚಕ್ರಾ, ವಾರಾಹಿ, ಕೇತಾ ನದಿಗಳು  ಕುಂದಾಪುರ ಸಮೀಪ ಜತೆಯಾಗಿ ಸಂಗಮಗೊಂಡು  ಜುಳುಜುಳು ನಿನಾದದ ಸದ್ದು ಮಾಡುತ್ತಿದ್ದರೆ ಇಲ್ಲಿನ ಪಂಚಗಂಗಾವಳಿಯಲ್ಲಿ ಸಮುದ್ರ ತೀರಕ್ಕೆ ಸಾವಿರಾರು ಹಕ್ಕಿಗಳು ಎಲ್ಲೆಲ್ಲಿಂದಲೋ ವಲಸೆ ಬಂದು ಜನರ ಆಕರ್ಷಣೆಗೆ ಕಾರಣವಾಗಿದೆ. 


ವಲಸೆ ಹಕ್ಕಿಗಳು
ಪ್ರತಿವರ್ಷ ನವಂಬರ್‌ನಿಂದ ಎಪ್ರಿಲ್‌ ವರೆಗೆ ಸಮುದ್ರತೀರಕ್ಕೆ ಗುಂಪುಗುಂಪಾಗಿ ವಲಸೆ ಬರುವ ಹಕ್ಕಿಗಳನ್ನು ನೋಡಲೆಂದೇ ಜನ ಬೇರೆ ಬೇರೆ ಕಡೆಯಿಂದ ಆಗಮಿಸುತ್ತಾರೆ. ಬಣ್ಣ ಬಣ್ಣದ, ವೈವಿಧ್ಯಮಯ   ನಮೂನೆಯ, ವಿವಿಧ ಆಕಾರದ, ಸೌಂದರ್ಯರಾಶಿಯನ್ನೇ ಹೊತ್ತು ತಂದಂತಿರುವ ಹಕ್ಕಿಗಳ ಜತೆಯಾಟ, ಹಾರಾಟ, ಕೂಗಾಟ, ಚೀರಾಟ, ಜೋಡಾಟ, ಚಿಲಿಪಿಲಿ ಸದ್ದು ಕೇಳುವುದು ಅನನ್ಯ ಅನುಭವ ನೀಡುತ್ತಿದೆ. ಪ್ರೇಮಿಗಳು ಪರಸ್ಪರ ಚಿಕ್‌ಚೀಂವ್‌ ಸರಸ ಸಂಭಾಷಣೆಯಲ್ಲಿ  ತೊಡಗಿದಂತೆ, ತಾಯಿ ಮಮತೆಯಿಂದ ಇಕ್ಕಳದಂತಹ ದೊಡ್ಡ ಕೊಕ್ಕಿನಿಂದ ಪುಟ್ಟ ಮಕ್ಕಳ ಬಾಯಿಗೆ ಆಹಾರ ನೀಡಿದಂತೆ, ಯಜಮಾನನೊಬ್ಬ ಮನೆಯ ಜಾಗದ ಸುತ್ತ ಕಣ್ಣು ಹಾಯಿಸಿ ಸರ್ವೇಕ್ಷಣೆ ನಡೆಸಿದಂತೆ ದೊಡ್ಡ ಕಣ್ಣಿನಿಂದ ಸುತ್ತೆಲ್ಲ ಕತ್ತು ತಿರುಗಿಸಿ ನೋಡುವ ಪಕ್ಷಿಗಳ ನಿತ್ಯ ಚಟುವಟಿಕೆಯ ದೃಶ್ಯವೈಭವವಿದೆ. ಮುಂಜಾನೆ 6ರಿಂದ 8ಗಂಟೆಯ ವೇಳೆಗೆ ಸಮುದ್ರ ತೀರದಲ್ಲಿ ಕುಳಿತರೆ ಹಕ್ಕಿಗಳ ಲೋಕದಲ್ಲಿ ಪುಟ್ಟದೊಂದು ಸಂಚಾರ ಮಾಡಿಬರಬಹುದು. 

ಮೀಸೆಯ ಮೀನು ಗುಟಿರು (ವಿಸ್ಕರ್ಡ್‌ ಟೆರ್ನ್) ಎಂಬ ಜಾತಿಯ ಹಕ್ಕಿಗಳು ಪಾರಿವಾಳ ಗಾತ್ರದಲ್ಲಿದ್ದು  ಅದರಂತೆಯೇ ಬೂದು ಮೈಬಣ್ಣ ಹಾಗೂ ಬಿಳಿಯ ಎದೆ ಹೊಂದಿವೆ. ಕಂದು ತಲೆಯ ಕಡಲ ಹಕ್ಕಿ (ಬ್ರೌನ್‌ ಹೆಡೆಡ್‌ ಗಲ್‌) ಹಕ್ಕಿಗಳು ಕಾಗೆಗಿಂತ ದೊಡ್ಡ ಗಾತ್ರದ್ದಾಗಿದ್ದು ಬೂದು ಮೇಲ್ಮೆಯಲ್ಲಿವೆ. ತಳಭಾಗ ಬಿಳಿಯಾಗಿರುತ್ತದೆ. ಇದರ ಇನ್ನೊಂದು ಪ್ರಭೇದ ಕಪ್ಪು ತಲೆಯ ಕಡಲಹಕ್ಕಿ (ಬ್ಲಾಕ್‌ ಹೆಡೆಡ್‌ ಗಲ್‌) ಗಾತ್ರದಲ್ಲಿ ಸಣ್ಣದಾಗಿದ್ದು ರೆಕ್ಕೆಯಂಚು ಬಿಳಿ, ತುದಿಯಲ್ಲಿ ಕನ್ನಡಿಯಂತಹ ರಚನೆಯಿರುತ್ತದೆ. ಕಾಮನ್‌ ಟಿರ್ನ್ ಎಂಬ ಕರಿ ಕೊಕ್ಕಿನ ರೀವ ಕಡುಕಪ್ಪು ತಲೆ, ಹೆಂಗತ್ತು, ಪೇಲವ ಬೂದು ಕೆಳಮೈ ಹೊಂದಿರುತ್ತದೆ. ಗಾತ್ರದಲ್ಲಿ ಕಾಗೆಯಷ್ಟಿದೆ. 

ಮುಂಜಾನೆ ಮಾತ್ರ
ಸಮುದ್ರದ ಇನ್ನೊಂದು ಮಗ್ಗುಲಲ್ಲಿ ನೇಸರನು ತನ್ನ ಕಿರಣಗಳನ್ನು ಪ್ರಖರವಾಗಿಸಲು ಕೆಂಪು ಬಣ್ಣದಿಂದ ಮೇಲೆ ಮೇಲೆ ಬರುತ್ತಿರುವಾಗ ಪಕ್ಷಿಗಳ ಚಟುವಟಿಕೆಗಳು ಪ್ರಾರಂಭವಾಗುತ್ತದೆ. ಸೂರ್ಯನ  ಬಿಸಿಲಿನ ಪ್ರಖರತೆ ಹೆಚ್ಚಿ ದಂತೆಲ್ಲಾ ಸೂರ್ಯ ನೆತ್ತಿಗೇರಿದಂತೆ ಹಕ್ಕಿಗಳ ಚಟುವಟಿಕೆ ಕೂಡಾ ಕಡಿಮೆಯಾಗುತ್ತದೆ. ಆ ಬಳಿಕ ಅಲ್ಲೊಂದು ಇಲ್ಲೊಂದು ಹಕ್ಕಿಗಳು ಮಾತ್ರ ಕಾಣಸಿಗುತ್ತವೆ.

ಸೌಲಭ್ಯ ಇಲ್ಲ, ಮಾಹಿತಿಯಿಲ್ಲ
ಸುವ್ಯವಸ್ಥಿತ ರೀತಿಯಲ್ಲಿ ಇದನ್ನೊಂದು ಪ್ರವಾಸಿ ತಾಣವಾಗಿ ಮಾಡಿದರೆ ಇಲ್ಲಿ ಪ್ರವಾಸೋದ್ಯಮಕ್ಕೇನೂ ಬರವಿಲ್ಲ. ಇಲ್ಲಿ ಹಕ್ಕಿಗಳ ವೀಕ್ಷಣೆಗೆ , ಛಾಯಾಗ್ರಹಣ ಮಾಡಲು ಬರುವ ಆಸಕ್ತರಿಗೆ, ಪ್ರವಾಸಿಗರಿಗೆ  ಸರಿಯಾದ ಮಾಹಿತಿ ನೀಡುವವರೇ ಇಲ್ಲ ಎನ್ನುತ್ತಾರೆ ಕಳೆದ 20 ವರ್ಷಗಳಿಂದ ಹಕ್ಕಿಗಳನ್ನು ಗುರುತಿಸಿ ಅಧ್ಯಯನ ಮಾಡಿ ಛಾಯಾಚಿತ್ರ ತೆಗೆಯುವ ಸಂತೋಷ್‌ ಕುಂದೇಶ್ವರ ಅವರು. ಆದ್ದರಿಂದ ಪ್ರವಾಸೋದ್ಯಮ ಇಲಾಖೆ ಈ ಕಡೆ ಗಮನ ಹರಿಸಬೇಕಿದೆ. ಪ್ರವಾಸಿಗರಿಗೆ ಬೋಟಿಂಗ್‌ ವ್ಯವಸ್ಥೆ, ಅದಕ್ಕೆ ಬೇಕಾದ ಲೈಫ್‌ ಜಾಕೆಟ್‌, ಹಕ್ಕಿಗಳ ವೀಕ್ಷಣೆಗೆ ವ್ಯವಸ್ಥೆ, ಹಕ್ಕಿಗಳ ಕುರಿತು ಮಾಹಿತಿ ನೀಡಲು ವ್ಯವಸ್ಥೆ ಆಗಬೇಕಿದೆ.  ಪ್ರವಾಸೋದ್ಯಮ ಇಲಾಖೆ ಸರಿಯಾದ ವ್ಯವಸ್ಥೆ ಮಾಡಿದರೆ ಇದೊಂದು ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ.

Advertisement

ಯಾವೆಲ್ಲ ಹಕ್ಕಿಗಳು
ದೇಶ ವಿದೇಶಗಳ ಹಕ್ಕಿಗಳು ಇಲ್ಲಿಗೆ ವಲಸೆ ಬಂದು ತಾತ್ಕಾಲಿಕ ಪಕ್ಷಿಧಾಮದ ವಾತಾವರಣವನ್ನು ಉಂಟು ಮಾಡುತ್ತವೆ.ದೊಡ್ಡ ಜುಟ್ಟಿನ ರೀವ (ಲಾರ್ಜ್‌ ಕ್ರಸ್ಟೆಡ್‌ ಟೆರ್ನ್). ಇವು ಬೂದು ಮೈಬಣ್ಣ ಹೊಂದಿದ್ದು ಕಪ್ಪು ತಲೆ, ಹಳದಿ ಕೊಕ್ಕಿನಲ್ಲಿ ಆಕರ್ಷಕವಾಗಿ ಕಾಣುತ್ತವೆ. ತಲೆಯ ಮೇಲಿನ ತುರಾಯಿ ಇವುಗಳ ಅಂದ ಹೆಚ್ಚಿಸಿವೆ. ಇದರ ಇನ್ನೊಂದು ಪ್ರಭೇದದಂತಿದೆ ಕಿರು ಜುಟ್ಟಿನ ರೀವ (ಲೆಸ್ಸರ್‌ ಕ್ರಸ್ಟೆಡ್‌ ಟೆರ್ನ್). ಇವು ಕಿತ್ತಳೆ ಹಳದಿ ಬಣ್ಣ ಹೊಂದಿದ್ದು ಸಣಕಲಾದ ಕೊಕ್ಕು, ಕಪ್ಪು ನೆತ್ತಿ ಮತ್ತು ಸಣ್ಣ ಜುಟ್ಟಿನಿಂದ ಕಂಗೊಳಿಸುತ್ತದೆ. ಇವು ಭಾರತದ ಕರಾವಳಿ ಸಮುದ್ರ ತೀರದಲ್ಲಿ  ಹಾಗು ಕೆಲವೊಂದು ದೇಶದ ಸಮುದ್ರತೀರದಲ್ಲಿ ಮಾತ್ರ ಕಾಣಸಿಗುವ ಅಪರೂಪದ ಹಕ್ಕಿಸಂಕುಲ. ತನ್ನ ಸಂತಾನದ ಉಳಿವಿಗಾಗಿ ಸಾವಿರಾರು ಕಿ. ಮೀ. ದೂರ ವಲಸೆ ಬರುವ ಹಕ್ಕಿಗಳೂ ಇವೆ.

ಚಿತ್ರಗಳು: ಸಂತೋಷ್‌ ಕುಂದೇಶ್ವರ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next