Advertisement
ಹಾಗಲಕಾಯಿಯನ್ನು ಬೆಳೆಯಲು ಮಣ್ಣಿನ ಗುಣಮಟ್ಟವನ್ನು ತಿಳಿಯಬೇಕು. ಸಾಮಾನ್ಯವಾಗಿ ಎಲ್ಲಾ ಬಗೆಯ ಮಣ್ಣುಗಳಲ್ಲಿಯೂ ಇದನ್ನು ಬೆಳೆಯಬಹುದು. ಆದರೆ ಗೋಡುಮಣ್ಣು ಹಾಗೂ ನೀರು ಬಸಿದುಕೊಳ್ಳುವ ಮಣ್ಣು ಈ ಬೆಳೆಗೆ ಹೆಚ್ಚು ಸೂಕ್ತ. ಮುಂಗಾರಿನ ಬೆಳೆಯನ್ನು ಜೂನ್- ಜುಲೈ ತಿಂಗಳಲ್ಲಿ, ಬೇಸಿಗೆ ಬೆಳೆಯನ್ನು ಜನವರಿ- ಫೆಬ್ರವರಿಯಲ್ಲಿ ಒಣ ಪ್ರದೇಶದ ಭೂಮಿಗಳಲ್ಲಿ ಬೆಳೆಯಬಹುದು. ಕರಾವಳಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ನವೆಂಬರ್- ಡಿಸೆಂಬರ್ ತಿಂಗಳುಗಳಲ್ಲಿ ಅಂದರೆ, ಸದ್ಯದ ಅವಧಿಯಲ್ಲಿ ಬೆಳೆಯಬಹುದು. ಅಲ್ಲದೇ ಗುಡ್ಡಗಾಡು ಪ್ರದೇಶಗಳಲ್ಲಿ ಕೂಡ ಈ ಅವಧಿಯಲ್ಲಿಯೇ ಬೆಳೆಯುವ ಬೆಳೆಯಾಗಿದೆ.
ಪ್ರತಿ ಹೆಕ್ಟೇರಿಗೆ 8 ಕೆ.ಜಿ ಬೀಜ, ಕೊಟ್ಟಿಗೆ ಗೊಬ್ಬರ 25 ಟನ್, ರಾಸಾಯನಿಕ ಗೊಬ್ಬರಗಳಾದ ಸಾರಜನಕ-63 ಕೆ.ಜಿ, ರಂಜಕ-50 ಕೆ.ಜಿ ಹಾಗೂ ಪೊಟ್ಯಾಷ್-50 ಕೆ.ಜಿ. ಬೇಕಾಗುತ್ತದೆ. ಮೊದಲು ಭೂಮಿಯನ್ನು ಹದ ಮಾಡಿಕೊಂಡು, 3 ಫೀಟ್‌ಗೆ ಒಂದು ಸಾಲನ್ನು (ಹರಿಯನ್ನು) ತೆಗೆಯಬೇಕು. ಸಂಗ್ರಹಿಸಿದ ಕೊಟ್ಟಿಗೆ ಗೊಬ್ಬರವನ್ನು, ಅರ್ಧದಷ್ಟು ಸಾರಜನಕ, ಪೂರ್ತಿಯಷ್ಟು ರಂಜಕವನ್ನು ಆ ಸಾಲುಗಳಲ್ಲಿ ಬೆರೆಸಬೇಕು. ಬಿತ್ತುವುದಕ್ಕೂ ಮುಂಚೆ ಬೀಜಗಳನ್ನು 6 ತಾಸು ನೀರಿನಲ್ಲಿ ನೆನೆಸಬೇಕು. ನಂತರ 90 ಸೆಂ.ಮೀ ಅಂತರದಲ್ಲಿ ಮೂರ್‍ನಾಲ್ಕು ಬೀಜಗಳನ್ನು ಊರಬೇಕು. ಮೂರು ವಾರಗಳ ಬಳಿಕ ಅದರಲ್ಲಿ ಎರಡು ಸಸಿಗಳನ್ನು ಉಳಿಸಿ. ಕಿತ್ತಿದ ಸಸಿಗಳನ್ನು 3 ಫೀಟ್ ಅಂತರದ ಸಾಲುಗಳಲ್ಲಿ 90 ಸೆಂ.ಮೀ. ಅಂತರದಲ್ಲಿ ಮಡಿಗಳನ್ನು ತಯಾರಿಸಿ ಬಿತ್ತನೆ ಮಾಡಬಹುದು. ಬೀಜಗಳನ್ನು ಪ್ರಮಾಣೀಕರಿಸಿದ ಕೇಂದ್ರಗಳಿಂದ ತಂದರೆ ಸೂಕ್ತ. ಬಿತ್ತಿದ ನಾಲ್ಕು ವಾರಗಳ ಬಳಿಕ ರೆಡಿಯಾದ ಅರ್ಧದಷ್ಟು ಸಾರಜನಕ ಗೊಬ್ಬರವನ್ನು ಮೇಲು ಗೊಬ್ಬರವಾಗಿ ಕೊಡಬೇಕು ಮತ್ತು ಅದರ ಬಳ್ಳಿಯನ್ನು ಹಬ್ಬಲು ಚಪ್ಪರ ತರಹದ ವ್ಯವಸ್ಥೆಯನ್ನು ಮಾಡಬೇಕು.
Related Articles
ಮೂರ್‍ನಾಲ್ಕು ದಿನಗಳಿಗೊಮ್ಮೆ ಕಾಯಿ ಕೀಳಬೇಕು, ಹಾಗಲಕಾಯಿಗಳು ಎಳೆಯದ್ದಾಗಿದ್ದಾಗ ಕೊಯ್ಯಬೇಕು, ಹೀಗೆ ಮಾಡುವ ಬೇಸಾಯದಿಂದ ಪ್ರತಿ ಹೆಕ್ಟೇರಿಗೆ 10- 12 ಟನ್ ಇಳುವರಿ ಬರುತ್ತದೆ. ಮಾರುಕಟ್ಟೆಗೆ ಉತ್ಪನ್ನಗಳನ್ನು ಸಾಗಿಸಬೇಕಾದರೆ ಸೂಕ್ತ ಕ್ರಮಗಳನ್ನು ಅನುಸರಿಸಬೇಕು, ಪದಾರ್ಥಗಳನ್ನು ಕೊಳೆಯಲು ಬಿಡಬಾರದು.
Advertisement
ಹಾಗಲಕಾಯಿ ತಳಿಗಳುಹಿರ್ಕಾನಿ: ಈ ತಳಿಯು ಮಧ್ಯಮ ಗಾತ್ರದ ಕಾಯಿಗಳನ್ನು ಬಿಡುವುದರ ಜತೆಗೆ ಅಧಿಕ ಇಳುವರಿಯನ್ನು ನೀಡುತ್ತದೆ. ಇವು ಗಾತ್ರದಲ್ಲಿ ಕೊಂಚ ದಪ್ಪವಾಗಿದ್ದ, ಒಂದು ಕಾಯಿ 150-200 ಗ್ರಾಂ ತೂಗುತ್ತದೆ. ಪ್ರಿಯ: ತಿಳಿ ಹಸಿರು ಬಣ್ಣದ ಕಾಯಿಯಾಗಿದ್ದು, ಮಧ್ಯಮ ಗಾತ್ರದ್ದಾಗಿರುತ್ತದೆ. ಪ್ರತಿ ಹೆಕ್ಟೇರ್‌ಗೆ ಅಂದಾಜು 15 ಟನ್ ಇಳುವರಿಯನ್ನು ನೀಡುತ್ತದೆ.
ಅರ್ಕಾ ಹರಿತ್: ಇದರ ತಿರುಳು ದಪ್ಪವಾಗಿದ್ದು, 12,500 ಕೆ.ಜಿ ಸಿಳುವರಿ ಕೊಡುತ್ತದೆ. ಇದು 120-130 ದಿನಗಳ ಬೆಳೆಯಾಗಿದೆ. – ಶ್ರೀನಾಥ ಮರಕುಂಬಿ, ಗಂಗಾವತಿ