ಕಲಬುರಗಿ: ಜೀವನದ ಮೌಲ್ಯಗಳು, ಆಧ್ಯಾತ್ಮ, ವೈಜ್ಞಾನಿಕ ಸಂಗತಿಗಳು, ಸಮಾಜ ಸುಧಾರಣೆ ಸೇರಿದಂತೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಶ್ರೀ ಕೃಷ್ಣನು ತನ್ನ ಶ್ಲೋಕಗಳ ಮೂಲಕ ನೀಡಿರುವ ಸಂದೇಶವು ಸಮಾಜಕ್ಕೆ ಅವಶ್ಯಕವಾಗಿದೆಯೆಂದು ಜಿಲಾನಾಬಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಲಕ್ಷ್ಮೀಕಾಂತ ಖಣದಾಳಕರ್ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮೋರೆ ಕಾಂಪ್ಲೆಕ್ಸ್ ಸಮೀಪದ ಮುತ್ತಾ ಟುಟೋರಿಯಲ್ಸ್ ನಲ್ಲಿ ಏರ್ಪಡಿಸಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಕೃಷ್ಣ ಬಹುಮುಖ ವ್ಯಕ್ತಿತ್ವದ ಮಹಾನ್ ಸಾಧಕ. ತತ್ವಜ್ಞಾನಿ, ದಾರ್ಶನಿಕ, ಸಮಾಜ ಸುಧಾರಕ, ವಿಜ್ಞಾನಿ, ತಂತ್ರಜ್ಞಾನಿ, ಚಿಂತಕ, ನಿರ್ವಾಹಕ,
ಸಂಗೀತಗಾರನಾಗಿದ್ದ ಎಂದು ಹೇಳಿದರು.
ಜೀವನದಲ್ಲಿ ಸುಖ ಮತ್ತು ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕು. ಮನದಲ್ಲಿ ಯಾವುದೇ ದ್ವೇಷ, ಅಸೂಯೆ ಇರಬಾರದು. ಆತ್ಮಗೌರವ ಹೊಂದಿರಬೇಕು. ದೇವರು ಪ್ರತಿಯೊಬ್ಬರ ಹೃದಯದಲ್ಲಿ ನೆಲೆಸಿರುತ್ತಾನೆ. ಪ್ರತಿಯೊಂದು ಜೀವಿಯಲ್ಲಿ ದೇವರನ್ನು ಕಾಣಬೇಕು. ಸೇವಾ ಭಾವನೆ ಎಲ್ಲರಲ್ಲಿ ಇರಬೇಕೆಂಬ ಮೇರು ಸಂದೇಶವನ್ನು ಶ್ರೀ ಕೃಷ್ಣ ನೀಡಿದ್ದಾನೆ ಎಂದರು.
ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಎಚ್.ಬಿ. ಪಾಟೀಲ ಮಾತನಾಡಿ, ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೆ ಕಾರ್ಯವನ್ನು ಮಾಡಬೇಕು. ಅದರ ಪ್ರತಿಫಲ ತನ್ನಷ್ಟಕ್ಕೆ ತಾನೇ ದೊರೆಯುತ್ತದೆ. ಮಾಡುವ ಕೆಲಸದಲ್ಲಿ ಪ್ರತಿಯೊಬ್ಬರು ಶ್ರದ್ಧೆ, ನೈಪುಣ್ಯತೆ ರೂಢಿಸಿಕೊಳ್ಳಬೇಕೆಂಬ ಶ್ರೀ ಕೃಷ್ಣನ ಸಂದೇಶ ಸಾರ್ವಕಾಲಿಕವಾಗಿದೆ ಎಂದು ಹೇಳಿದರು.
ಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಮುತ್ತಾ ಅಧ್ಯಕ್ಷತೆ ವಹಿಸಿದ್ದರು. ನಂತರ ಶ್ರೀ ಕೃಷ್ಣನ ಹಾಡುಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಸಂಸ್ಥೆಯ ಸಹ ಶಿಕ್ಷಕರಾದ ಅಭಿಷೇಕ ಸರಾಫ್, ಮಹೇಶ ದೇಸಾಯಿ, ವಿಶ್ವನಾಥ ನಂದರ್ಗಿ, ನಾಗಮ್ಮ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.