ಬೀದರ: ನಗರದಲ್ಲಿ ಬುಧವಾರ ಎಸ್‌ಎಫ್‌ಐ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರು, ಕ್ರಾಂತಿವೀರರೂ ಆದ ಭಗತಸಿಂಗ್, ರಾಜಗುರು ಮತ್ತು ಸುಖದೇವ್ ಅವರ 91ನೇ ಹುತಾತ್ಮ ದಿನ ಆಚರಿಸಲಾಯಿತು.
ಭಗತಸಿಂಗ್ ವೃತ್ತದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಅರುಣ ಕೊಡಗೆ ನೇತೃತ್ವದಲ್ಲಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಜಯ ಘೋಷಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಕಾಂತ ಸ್ವಾಮಿ ಮಾತನಾಡಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪ್ರತಿಯೊಬ್ಬ ಹೋರಾಟಗಾರರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಯುವ ಜನರು ದೇಶ ಭಕ್ತಿ, ಹುತಾತ್ಮರ ಆದರ್ಶ ಮೈಗೂಡಿಸಿಕೊಂಡು ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಅರುಣ ಕೊಡಗೆ ಮಾತನಾಡಿ, ರಾಜಕಾರಣಿಗಳು ಸ್ವಾರ್ಥ ರಾಜಕೀಯಕ್ಕಾಗಿ ಜಾತಿ- ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಯುವ ಜನತೆ ಅದ್ಯಾವುದಕ್ಕೂ ಒಳಗಾಗದೇ, ಎಲ್ಲರೂ ಭಾವೈಕ್ಯತೆಯಿಂದ ಬದುಕಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು. ದೇಶ ಭಕ್ತರ ಜಯಂತ್ಯುತ್ಸವಗಳನ್ನು ಸರ್ಕಾರದಿಂದಲೇ ಆಚರಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ಅಮರ ಗಾದಗಿ, ತಾಲೂಕು ಅಧ್ಯಕ್ಷ ಶಿವಕುಮಾರ ಖಾಶಂಪುರ, ಸಾಯಿ ಮೂಲಗೆ, ಉಮೇಶ ಲಾಡಗೇರಿ, ಸಾಯಿ ಗಾದಗಿ, ಆಕಾಶ ಕೊಡಗೆ, ನಿಹಾಲ ಸೋನಾರೆ, ಓಂಕಾರ ಇತರರಿದ್ದರು.