ಗುರುಮಠಕಲ್ ಶಾಸಕ ಬಾಬುರಾವ ಚಿಂಚನಸೂರ ಪರ ಮತ ನೀಡಿ ಅವರ ಕೈ ಬಲಪಡಿಸುವಂತೆ ಹೇಳುವ ಮೂಲಕ ರಾಜಕೀಯ ಮಾಡಿದ್ದಾರೆ. ಅವರ ಭಾಷಣ ಮಾಡಿದ ಕುರಿತು ವಿಡಿಯೋ ರಿಕಾರ್ಡಿಂಗ್ ಮತ್ತು ಚಿನ್ನಾಕಾರ ಗ್ರಾಪಂ ಅಧ್ಯಕ್ಷ ಸುರೇಶ ರಾಠೊಡ ಅವರು ಕಲಬುರಗಿಯಲ್ಲಿ ಗುರುಮಠಕಲ್ ಶಾಸಕ ಬಾಬುರಾವ ಚಿಂಚನಸೂರ ಅವರಿಗೆ ಹೂ ಮಾಲೆ ಹಾಕಿ ಸನ್ಮಾನಿಸುವ ಸಂದರ್ಭದಲ್ಲಿ ಜೊತೆಗಿದ್ದಿರುವ ಚಿತ್ರಗಳನ್ನು ಸಭೆಯಲ್ಲಿ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ತಾಪಂ ಅಧ್ಯಕ್ಷ ಭಾಷು ರಾಠೊಡ ತಾಪಂ ಇಒ ಅವರ ಪರ ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯ ಚಂದಪ್ಪ ತಾಪಂ ಅಧ್ಯಕ್ಷರ ವಿರುದ್ಧ ಹರಿದಾಯ್ದರು. ಈ ನಡುವೆ ಇಬ್ಬರ ನಡುವೆ ಏಕ ವಚನದಲ್ಲಿ ವಾಗ್ಧಾದ ನಡೆಯಿತು. ತಾಪಂ ಅಧ್ಯಕ್ಷರು ಮತ್ತು ಕಾಂಗ್ರೆಸ್ ಸದಸ್ಯರು ಯಾವುದೇ ಸ್ಪಷ್ಟನೆ ನೀಡಬಾರದು ತಾಪಂ ಇಒ ಬಲವಂತ ಅವರೇ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಇಒ ಅವರು ಸಮರ್ಪಕ ಉತ್ತರ ನೀಡದೆ ತಮ್ಮನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದರು. ಅವರೊಂದಿಗೆ ಕಾಂಗ್ರೆಸ್‌ನ ಕೆಲ ಸದಸ್ಯರು ಸಭೆ ಬಹಿಷ್ಕರಿಸಿದರು. ತಾಪಂ ಅಧ್ಯಕ್ಷ ಭಾಷು ರಾಠೊಡ ಸಭೆಯಿಂದ ಹೊರ ಬಂದು ಸದಸ್ಯರನ್ನು ಮನವೊಲಿಸಲು ಯತ್ನಿಸಿದ್ದರು. ಆದರೆ ಸದಸ್ಯರು ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮಂಜುನಾಥ ಅವರಿಗೆ ದೂರು ಸಲ್ಲಿಸಿದರು.
Advertisement