Advertisement

ಕಾಂಗ್ರೆಸ್‌ ಸದಸ್ಯರ ಒಳಜಗಳ: ಹದಗೆಟ್ಟ ಆಡಳಿತ

05:59 AM Feb 02, 2019 | |

ಚಿತ್ತಾಪುರ: ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪೊಲೀಸ್‌ ಪಾಟೀಲ, ಸಿಇಒ ಲಕ್ಷ್ಮಣ ಶೃಂಗೇರಿ ಬೇಜವಾಬ್ದಾರಿಯಿಂದ ಕಾಲ ಕಾಲಕ್ಕೆ ಸಾಮಾನ್ಯ ಸಭೆಗಳು ನಡೆಯುತ್ತಿಲ್ಲ ಎಂದು ಆರೋಪಿಸಿದ ಬಿಜೆಪಿ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಸಭಾಂಗಣದಿಂದ ಹೊರನಡೆದ ಪ್ರಸಂಗ ನಡೆಯಿತು.

Advertisement

ಸಭೆ ಬಹಿಷ್ಕರಿಸಿದ್ದ ಬಿಜೆಪಿ ಸದಸ್ಯರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಪಕ್ಷದ ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ ಸದಸ್ಯರ ಮೇಲೆ ಹಿಡಿತ, ನಿಯಂತ್ರಣ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಸ್ವಪಕ್ಷದ ಸದಸ್ಯರಲ್ಲಿಯೇ ಎರಡು ಗುಂಪುಗಳಾಗಿ ತಾಪಂ ಆಡಳಿತವೇ ಹದಗೆಟ್ಟಿದೆ. ಅವರು ಅಧ್ಯಕ್ಷರಾದಾಗಿನಿಂದ ಪಕ್ಷಪಾತ ಮಾಡುತ್ತಾ ಬಂದಿದ್ದಾರೆ. ಬಿಜೆಪಿ ಅಷ್ಟೇ ಅಲ್ಲ, ಸ್ವಪಕ್ಷದ ಸದಸ್ಯರನ್ನು ಕಡೆಗಣಿಸಿದ್ದಾರೆ. ಇವರ ತಾಳಕ್ಕೆ ತಕ್ಕಂತೆ ಸಿಇಒ ಕುಣಿಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

13ನೇ ಹಣಕಾಸು ಯೋಜನೆಯಡಿ ಬಂದ 75ಲಕ್ಷ ರೂ. ಅನುದಾನವನ್ನು ನಿಗದಿತ ಅವಧಿಯಲ್ಲಿ ಕ್ರಿಯಾಯೋಜನೆ ಮಾಡದೇ ಇರುವುದರಿಂದ ಹಣ ವಾಪಸ್‌ ಆಗಿದೆ ಎಂದು ಬಿಜೆಪಿ ವಿರೋಧ ಪಕ್ಷದ ನಾಯಕ ಮಲ್ಲಣ್ಣ ಸಣಮೋ, ಸದಸ್ಯ ರಾಮು ರಾಠೊಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಕ್ಷೇತ್ರಗಳ ಅಭಿವೃದ್ಧಿಗೆ ಬಂದ ಸರ್ಕಾರದ ಅನುದಾನವನ್ನು ಅಧ್ಯಕ್ಷರು ಕ್ಷೇತ್ರವಾರು ಹಂಚಿಕೆ ಮಾಡದೆ ಎಲ್ಲ ಅನುದಾನವನ್ನು ತಮ್ಮ ಸ್ವಕ್ಷೇತ್ರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಜರಿದ್ದವರು: ಬಿಜೆಪಿ ಸದಸ್ಯರಾದ ಮಲ್ಲಣ್ಣ ಸಣಮೋ ಮಾಲಗತ್ತಿ, ವಿಜಯಲಕ್ಷ್ಮೀ ಚವ್ಹಾಣ ಭಂಕೂರ, ರಾಮು ರಾಠೊಡ ಅರಣಕಲ್‌, ಸುಧೀರ ವಿಜಾಪೂರಕರ್‌, ಅಲ್ಲೂರ ಬಿ., ಶಕುಂತಲಾ ರಾಠೊಡ ಕರದಾಳ, ರವಿ ಪಡ್ಲಾ ಅಳ್ಳೋಳ್ಳಿ, ವಂದನಾ ಪೂಜಾರಿ ರಾಜಾಪುರ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಉಪಾಧ್ಯಕ್ಷ ಹರಿನಾಥ ಚವ್ಹಾಣ, ಸದಸ್ಯರಾದ ಭಾಗಪ್ಪ ಯಾದಗೀರ, ಬಸವರಾಜ ಹೊಸ್ಸಳ್ಳಿ, ರತ್ನಮ್ಮ ಗುತ್ತೇದಾರ ಕಾಳಗಿ, ಬಸವರಾಜ ಲೋಕನಳ್ಳಿ ಹಾಜರಿದ್ದರು.

Advertisement

ತಾಪಂನ ಒಟ್ಟು 29 ಸ್ಥಾನಗಳ ಪೈಕಿ 18 ಕಾಂಗ್ರೆಸ್‌ ಮತ್ತು 11 ಬಿಜೆಪಿ ಸ್ಥಾನಗಳ ಪೈಕಿ ಸಾಮಾನ್ಯ ಸಭೆಗೆ ಬಿಜೆಪಿಯ 7 ಮತ್ತು ಕಾಂಗ್ರೆಸ್‌ ಪಕ್ಷದ 6 ಸದಸ್ಯರು ಸಭೆಗೆ ಆಗಮಿಸಿದ್ದರು. ಹೀಗಾಗಿ ಕೋರಂ ಅಭಾವದಿಂದ ಸಾಮಾನ್ಯ ಸಭೆ ರದ್ದು ಮಾಡಿ ಮುಂದೂಡಲಾಯಿತು. ಸಾಮಾನ್ಯ ಸಭೆ ಕೋರಂ ಅಭಾವದಿಂದ ರದ್ದು ಮಾಡುತ್ತಿರುವುದು ಇದು ಮೂರನೇ ಬಾರಿ. ಕಾಂಗ್ರೆಸ್‌ ಪಕ್ಷಕೆ ಸ್ವಷ್ಟ ಬಹುಮತವಿದ್ದರೂ ಸಹ ಆಂತರಿಕ ಬೇಗುದಿ ಕಚ್ಚಾಟದಿಂದ ಸಾಮಾನ್ಯ ಸಭೆಗಳು ನಡೆಯುತ್ತಿಲ್ಲ. ಇದರಿಂದ ತಾಲೂಕು ಅಭಿವೃದ್ಧಿ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಕಿಡಿಕಾರಿದರು.

ಪಂಚಾಯತ ರಾಜ್ಯ ಅಧಿನಿಯಮದಂತೆ ರಾಜ್ಯದ ಎಲ್ಲ ಕಡೆ ಸ್ಥಾಯಿ ಸಮಿತಿಗಳು ರಚನೆಯಾಗಿವೆ. ಆದರೆ ಚಿತ್ತಾಪುರ ತಾಪಂನಲ್ಲಿ ಮಾತ್ರ ಇಲ್ಲಿವರೆಗೆ ಸ್ಥಾಯಿ ಸಮಿತಿಗಳು ರಚನೆಯಾಗಿಲ್ಲ. ಹೀಗಾಗಿ ಇಲ್ಲಿ ಅಧಿನಿಯಮ ಉಲ್ಲಂಘನೆಯಾಗಿದೆ ಎಂದು ಸದಸ್ಯರು ಹೇಳಿದರು.

ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ ಬದಲಾವಣೆಗೆ ಬಿರುಸಿನ ಚಟುವಟಿಕೆಗಳು ನಡೆದಿವೆ. ಒಪ್ಪಂದದ ಪ್ರಕಾರ ಅವರ ಅಧಿಕಾರ ಅವಧಿ ಮುಕ್ತಾಯವಾಗಿ ಎರಡು ತಿಂಗಳಾಗಿದೆ. ಈ ಕುರಿತು ಕಾಂಗ್ರೆಸ್‌ ಸದಸ್ಯರು ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಭೇಟಿ ಆಗಿದ್ದಾರೆ. ಕಾಂಗ್ರೆಸ್‌ ಸದಸ್ಯರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ ನಿವಾಸಕ್ಕೆ ಭೇಟಿ ನೀಡಿ ಅಲ್ಲಿ ಈ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next