ವಾಷಿಂಗ್ಟನ್: ಜಗತ್ತಿನ ಅತಿ ದೊಡ್ಡ ಬಹುಮಾನ ಮೊತ್ತದ “ಅಮೆರಿಕದ ಮೆಗಾ ಮಿಲಿಯನ್ ಜಾಕ್‌ಪಾಟ್ ಲಾಟರಿ’ಯ ಈ
ಬಾರಿಯ 11,700 ಕೋಟಿ ರೂ. ಮೊತ್ತದ ನಗದು ಬಹುಮಾನ ದಕ್ಷಿಣ ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬರಿಗೆ ಒಲಿದಿದೆ
ಎಂದು ಈ ಲಾಟರಿ ನಡೆಸುವ “ಮೆಗಾ ಮಿಲಿಯನ್ಸ್’ ಸಂಸ್ಥೆ ಹೇಳಿದೆ.
ಮಂಗಳವಾರ ರಾತ್ರಿ ನಡೆದ ಲಾಟರಿ ಡ್ರಾನಲ್ಲಿ 5, 28, 62, 65, 70 ಸಂಖ್ಯೆಗಳು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ತಮ್ಮ
ಲಾಟರಿ ಖರೀದಿಸಿದ ಗ್ರಾಹಕರೊಬ್ಬರ ಲಾಟರಿಯ “ಡ್ರಾ ಸಂಖ್ಯೆ’ಗೆ ಹೋಲುತ್ತದೆ ಎಂದು ಸಂಸ್ಥೆ ಹೇಳಿದೆ. ಆದರೆ, ವಿಜೇತರ ವಿವರಗಳನ್ನು ಸಂಸ್ಥೆ ಗೌಪ್ಯವಾಗಿರಿಸಿದೆ.
2015ರ ಅಕ್ಟೋಬರ್‌ನಿಂದ ಚಾಲ್ತಿಯಲ್ಲಿರುವ ಈ ಲಾಟರಿ, ವಾಷಿಂಗ್ಟನ್ ಸೇರಿದಂತೆ ಅಮೆರಿಕದ 44 ರಾಜ್ಯಗಳು ಹಾಗೂ ವರ್ಜಿನ್ ದ್ವೀಪಗಳಲ್ಲಿ ಪ್ರಚಲಿತದಲ್ಲಿದೆ. ಇವುಗಳಲ್ಲಿ, ಡೆಲಾವೆರ್, ಜಾರ್ಜಿಯಾ, ಕನ್ಸಾಸ್, ಮೇರಿ ಲ್ಯಾಂಡ್, ನಾರ್ತ್ ಡಕೋಟ, ಒಹಿಯೊ ಹಾಗೂ ಟೆಕ್ಸಾಸ್ ರಾಜ್ಯಗಳ ವಿಜೇತರನ್ನು ಮಾತ್ರ ಗೌಪ್ಯವಾಗಿಡಲಾಗುತ್ತದೆ. ಇದಕ್ಕೆ ಆಯಾ ರಾಜ್ಯಗಳಲ್ಲಿನ ಕಾನೂನುಗಳೇ ಕಾರಣವಾಗಿದ್ದು, ಬಹುಮಾನ ಪಡೆದವರೇ ಕೆಲ ದಿನಗಳ ನಂತರ ಈ ಬಗ್ಗೆ ಘೋಷಿಸಿ ಕೊಳ್ಳಬೇಕಿರುತ್ತದೆ. ಪ್ರತಿ ಬಾರಿ ಈ ಲಾಟರಿ ಕೊಳ್ಳುವ ಅಂದಾಜು 30.55 ಕೋಟಿ ಜನರಲ್ಲಿ ಒಬ್ಬ ಅದೃಷ್ಟವಂತ ಮಾತ್ರ ಈ ಮೆಗಾ ಬಹುಮಾನಕ್ಕೆ ಭಾಜನನಾಗುತ್ತಾನೆ.