Advertisement

ಕೋರ್ಟ್‌ ಆದೇಶದಿಂದ ರದ್ದಾದ ಸಭೆ

10:43 AM Jan 17, 2019 | |

ಮುಂಡರಗಿ: ಪುರಸಭೆ ಹದಿನೆಂಟು ಸದಸ್ಯರು ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ವಿರುದ್ಧ ಉಪಾಧ್ಯಕ್ಷ ಬಸವರಾಜ ನರೇಗಲ್‌ ನೇತೃತ್ವದಲ್ಲಿ ಅವಿಶ್ವಾಸ ಗೊತ್ತುವಳಿ ಸ್ವೀಕರಿಸಿ ಅಧಿಕಾರದಿಂದ ಕೆಳಗಿಳಿಸಲು ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು. ಆದರೆ ಹೇಮಾವತಿ ಅಬ್ಬಿಗೇರಿ ಹೈಕೋರ್ಟ್‌ ಧಾರವಾಡ ಪೀಠದಿಂದ ಸಭೆಗೆ ತಡೆಯಾಜ್ಞೆ ತಂದಿದ್ದರಿಂದ ಸಭೆ ರದ್ದಾಗಿ, ಅಧಿಕಾರದಲ್ಲಿ ಮುಂದುವರಿಯುವಂತಾಗಿದೆ.

Advertisement

ಬುಧವಾರ ಪುರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ವಿರುದ್ಧ ಅವಿಶ್ವಾಸ ಗೊತ್ತುವಳಿ ವಿಷಯ ಚರ್ಚಿಸಿ, ನಿರ್ಣಯ ಕೈಗೊಳ್ಳಲು ಉಪಾಧ್ಯಕ್ಷ ಬಸವರಾಜ ನರೇಗಲ್‌ ನೇತೃತ್ವದಲ್ಲಿ ಮುಖ್ಯಾಧಿಕಾರಿ ಸಿದ್ದಲಿಂಗಪ್ಪ ಇಬ್ರಂಡಿ ಸಭೆ ನಿಗದಿಗೊಳಿಸಿದ್ದರು. ಆದರೆ ಹೇಮಾವತಿ ಧಾರವಾಡ ಹೈಕೋರ್ಟ್‌ ಪೀಠದಿಂದ ಜ.14ರಂದು ವಿಶೇಷ ಸಾಮಾನ್ಯ ಸಭೆಗೆ ತಡೆಯಾಜ್ಞೆ ತಂದಿದ್ದಾರೆ.

ಇದರಿಂದ ಬುಧವಾರ ಬೆಳಗ್ಗೆ 11.30ಕ್ಕೆ ನಿಗದಿಯಾಗಿದ್ದ ಪುರಸಭೆ ವಿಶೇಷ ಸಾಮಾನ್ಯ ಸಭೆ ರದ್ದಾಗಿದೆ. ಹೀಗಾಗಿ ಪುರಸಭೆಯ ಅಧ್ಯಕ್ಷ ಸ್ಥಾನದಲ್ಲಿ ಹೇಮಾವತಿ ಅಬ್ಬಿಗೇರಿ ಮುಂದುವರಿಯುವಂತಾಗಿದ್ದು, ಅವಿಶ್ವಾಸ ಮಂಡನೆಗೆ ಮುಂದಾಗಿದ್ದ ಸದಸ್ಯರಿಗೆ ಮುಖಭಂಗವಾಗಿದೆ.

ಪುರಸಭೆ ಸಭೆಗೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ನ್ಯಾಯಾಲಯದ ತಡೆಯಾಜ್ಞೆ ತಂದಿದ್ದರಿಂದ ಜ.16ರಂದು ನಿಗದಿಯಾಗಿದ್ದ ಸಭೆ ರದ್ದುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದ ನಿರ್ದೇಶನದಂತೆ ಸಭೆ ನಡೆಸುವ ಬಗ್ಗೆ ತೀರ್ಮಾನ ಕೈಕೊಳ್ಳಲಾಗುವುದೆಂದು ಮುಖ್ಯಾಧಿಕಾರಿ ಸಿದ್ದಲಿಂಗಪ್ಪ ಇಬ್ರಂಡಿ ತಿಳಿಸಿದ್ದಾರೆ.

ಈ ಕುರಿತು ಪುರಸಭೆ ಅಧ್ಯಕ್ಷೆ ಹೇಮಾವತಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶೇಷ ಸಾಮಾನ್ಯ ಸಭೆಗೆ ತಡೆಯಾಜ್ಞೆ ತರಲಾಗಿದೆ. ಸದಸ್ಯರ ಮಧ್ಯ ಉಂಟಾಗಿರುವ ಗೊಂದಲ, ಸಂವಹನ ಕೊರತೆ ಹೋಗಲಾಡಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಪುರಸಭೆ ಮುಖ್ಯಾಧಿಕಾರಿ ಕಾರ್ಯಾಲಯಕ್ಕೆ ತಡವಾಗಿ ಬಂದಿದ್ದರಿಂದ ನ್ಯಾಯಾಲಯದ ತಡೆಯಾಜ್ಞೆಯನ್ನು ವ್ಯವಸ್ಥಾಪಕ ಎಂ.ಎಚ್. ಸೀಮತಿಮನಿಯವರಿಗೆ ಕೊಡಲಾಗಿದೆ ಎಂದು ಹೇಳಿದರು.

ರಾಜೀನಾಮೆಗೆ ಆಗ್ರಹ: ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಹದಿನೆಂಟು ಸದಸ್ಯರ ಅವಿಶ್ವಾಸದಿಂದಾಗಿ, ಅಧಿಕಾರ ಉಳಿಸಿಕೊಳ್ಳಲು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ತಡೆಯಾಜ್ಞೆ ತಂದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭು ಅಬ್ಬಿಗೇರಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅವರು, ಸದಸ್ಯರ ಅವಿಶ್ವಾಸದಿಂದ ನೈತಿಕ ಹೊಣೆ ಹೊತ್ತು ಪುರಸಭೆ ಅಧ್ಯಕ್ಷರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕಳೆದ ಏಳು ತಿಂಗಳಿಂದ ಅಧ್ಯಕ್ಷರು ಪುರಸಭೆ ಸಾಮಾನ್ಯ ಸಭೆ ಕರೆದಿಲ್ಲ ಎಂದು ಆರೋಪಿಸಿದರು.

ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪತಿ ಶ್ರೀನಿವಾಸ ಅಬ್ಬಿಗೇರಿ ಗುತ್ತಿಗೆ ಕಾಮಗಾರಿ ಕೆಲಸಗಳಿಗೆ ಸಹಕರಿಸುತ್ತಿದ್ದಾರೆ.ಬೇರೆ ಗುತ್ತಿಗೆದಾರರ ಹೆಸರಲ್ಲಿ ತಾವೇ ಕಾಮಗಾರಿ ಕೆಲಸ ಮಾಡುತ್ತಿದ್ದಾರೆ ಎಂದು ಸದಸ್ಯ ರಾಘು ಕುರಿ ಆಪಾದಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಬಸವರಾಜ ನರೇಗಲ್‌, ವೀರೇಶ ಸಜ್ಜನ, ಸೋಮನಗೌಡ ಗೌಡ್ರ, ಶಂಕರಗೌಡ ಪಾಟೀಲ, ಕೊಟ್ರಮ್ಮ ಇಟಗಿ, ಶಾಂತವ್ವ ಬಳ್ಳಾರಿ, ರೇಖಾ ದೇಸಾಯಿ, ಶಾರದಾ ದೇಸಾಯಿ,ಪ್ರೇಮಾ ಗಣದಿನ್ನಿ, ದಾನೇಶ್ವರಿ ಭಜಂತ್ರಿ, ರೆಹಾನಾ ಬೇಗಂ ಕೆಲೂರು, ಚಂದ್ರಶೇಖರ ಬಡಿಗೇರ, ಮುದಿಯಪ್ಪ ಕುಂಬಾರ, ಪರಶುರಾಮ ಕರಡಿಕೊಳ್ಳ, ಭಾರತಿ ಹಕ್ಕಿ, ಸುರೇಶ ಮಾಳೆಕೊಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next