ಬೆಂಗಳೂರು: ಶಿಕ್ಷಕರ ವಿವಿಧ ಬೇಡಿಕೆ ಆಲಿಸಲು 6ನೇ ವೇತನ ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ಸೋಮವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ನಿಯೋಗದ ಜತೆ ಸಭೆ ನಡೆಸಿದರು.
ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ, ಕೇಂದ್ರದ ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ ನೆರೆಹೊರೆಯ ರಾಜ್ಯಗಳ ವೇತನ ಭತ್ಯೆಗಳನ್ನು ಸಮಗ್ರ ಅಂಕಿ ಅಂಶಗಳೊಂದಿಗೆ ರಾಜ್ಯದ ಶಿಕ್ಷಕ ವರ್ಗದ ಬೇಡಿಕೆಗಳನ್ನು ಆಯೋಗದ ಮುಂದೆ ಮಂಡಿಸಿದರು.
ರಾಜ್ಯದ ಶಿಕ್ಷಕರ ಸೇವಾ ಜೇಷ್ಠತೆ ಅನುಗುಣವಾಗಿ ಕೆಲಸದ ಹೊರೆ ಮತ್ತು ಜವಾಬ್ದಾರಿಯನ್ನು ಗಮನಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬ ಹಕ್ಕೊತ್ತಾಯದ ಜತೆಗೆ ಜಿಎಸ್‌ಟಿ ಮಾದರಿಯಲ್ಲಿ ಸಮಾನ ವೇತನ ಜಾರಿಗೊಳಿಸಲು ಒತ್ತಾಯಿಸಿದರು.
ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಕೇಂದ್ರ ಮಾದರಿ ವೇತನ ನೀಡಬೇಕು, ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ವೇತನ ಶ್ರೇಣಿಯನ್ನು ಕೇರಳದ ಮಾದರಿಯಲ್ಲಿ ರೂಪಿಸಬೇಕು. 450 ರೂ. ವಿಶೇಷ ವೇತನವನ್ನು ಮೂಲವೇತನದಲ್ಲಿ ಸೇರಿಸಬೇಕು, ಶೇ.40ರಷ್ಟು ಮಧ್ಯಂತರ ಪರಿಹಾರ ನೀಡಬೇಕು, ಎನ್‌ಪಿಎಸ್ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿ, ಪ್ರಾಥಮಿಕ ಶಾಲೆಗಳು 5 ದಿನ ಮಾತ್ರ ಕೆಲಸ ನಿರ್ವಹಿಸುವಂತೆ ಶಿಫಾರಸು ಮಾಡಬೇಕು. ಮುಖ್ಯ ಗುರುಗಳಿಗೆ 15, 20, 25 ವರ್ಷಗಳ ಕಾಲಮಿತಿ ಬಡ್ತಿಗಳನ್ನು ನೀಡಬೇಕು, ಶಾಲಾ ಅನುದಾನವನ್ನು ಹಿರಿಯ ಪ್ರಾಥಮಿಕ ಶಾಲೆಗೆ 1 ಲಕ್ಷ ಹಾಗೂ ಕಿರಿಯ ಪ್ರಾಥಮಿಕ ಶಾಲೆಗೆ 50 ಸಾವಿರ ರೂ.ನೀಡಲು ಶಿಫಾರಸು ಮಾಡಬೇಕೆಂದು ಮನವಿ ಮಾಡಿದರು.
ಶಾಲೆಗೊಬ್ಬ ದೈಹಿಕ ಶಿಕ್ಷಕರನ್ನು ನೇಮಿಸಬೇಕು, ಶಿಕ್ಷಕರನ್ನು ಶಿಕ್ಷಕರೇತರ ಕಾರ್ಯಗಳಿಂದ ಮುಕ್ತಗೊಳಿಸಬೇಕು, ಪ್ರತಿ ಶಾಲೆಗೂ “ಡಿ’ಗ್ರೂಪ್ ನೌಕರರನ್ನು ನೇಮಿಸಬೇಕು ಎಂಬುದು ಸೇರಿ 25 ಬೇಡಿಕೆಗಳನ್ನು ಆಯೋಗದ ಮುಂದೆ ಮಂಡಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎಂ. ನಾರಾಯಣ ಸ್ವಾಮಿ, ಉಪಾಧ್ಯಕ್ಷೆ ರಮಾದೇವಿ, ಕೋಶಾಧ್ಯಕ್ಷ ಎಸ್.ಡಿ. ಗಂಗಣ್ಣವರ ಸಭೆಯಲ್ಲಿದ್ದರು.