Advertisement

ಚರ್ಚೆಗೆ ಸೀಮಿತವಾದ ಸಭೆ ವ್ಯರ್ಥ

09:55 AM Sep 16, 2017 | Team Udayavani |

ಕಲಬುರಗಿ: ಇಲ್ಲಿವರೆಗೆ ಎಂಟು ಸಾಮಾನ್ಯ ಸಭೆಗಳಾಗಿದ್ದು, ಹಿಂದಿನ ಸಭೆಯಲ್ಲಿ ಚರ್ಚೆಯಾದ ವಿಷಯಗಳು ಹಾಗೂ ದೂರುಗಳ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾದರೆ ಈ ಸಭೆಗಳು ಕೇವಲ ಚರ್ಚೆಗೆ ಸೀಮಿತವಾಗಿವೆಯೇ? ಹೀಗಾದಲ್ಲಿ ಅಧಿಕಾರಿ ವರ್ಗದಲ್ಲಿ ಇವರು ನಮಗೇನು ಮಾಡ್ತಾರೆ ಎನ್ನುವ ಧೋರಣೆ ಬೆಳೆಯುತ್ತಿದೆ. ಇಂತ ಸಭೆಗಳನ್ನು ನಡೆಸುವುದೇ ವ್ಯರ್ಥ ಎಂದು ಆಡಳಿತ ಹಾಗೂ ವಿರೋಧ ಪಕ್ಷದ ಜಿಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಶುಕ್ರವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅಧ್ಯಕ್ಷತೆಯಲ್ಲಿ ನಡೆದ 8ನೇ ಸಾಮಾನ್ಯ ಸಭೆಯಲ್ಲಿ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಪಂನಲ್ಲಿ 1ರಿಂದ 2 ಕೋಟಿ ರೂ. ಅವ್ಯವಹಾರ ಆಗಿದೆ.  ದಕ್ಕೆ ಸಂಬಂಧಿಸಿದಂತೆ ಪಿಡಿಒ ಹಾಗೂ ಕಾರ್ಯದರ್ಶಿ ಅಮಾನತು ಬಿಟ್ಟರೆ ಮತ್ಯಾವುದೇ ಕ್ರಮವಾಗಿಲ್ಲ ಎಂದು ಸದಸ್ಯ ಶಿವಶರಣಪ್ಪ ರಾಜೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಯಡ್ರಾಮಿ ಕ್ಷೇತ್ರದ ಸದಸ್ಯ ದಂಡಪ್ಪ ಸಾಹು ಕುಳಗೇರಿ ಮಾತನಾಡಿ, ಮಳ್ಳಿ ಗ್ರಾಪಂ ಪಿಡಿಒ ಅವರನ್ನು ವರದಿ ಬರುವ ಮುಂಚೆಯೇ ಅಮಾನತ್ತುಮಾಡಲಾಗಿದೆ. ಒಳ್ಳೆಯ ಕೆಲಸ ಮಾಡುತ್ತಿದ್ದವರ ಮೇಲೆ ವಿನಾಕಾರಣ ಕ್ರಮ ಕೈಗೊಳ್ಳಲಾಗಿದೆ. ತಪ್ಪು ಎಸಗಿರುವುದರಲ್ಲಿ ನೋಡಲ್‌ ಅಧಿಕಾರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗಿಯಾಗಿರುತ್ತಾರೆ. ಅವರ ವಿರುದ್ಧವು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಔರಾದ ಕ್ಷೇತ್ರದ ಸದಸ್ಯೆ ವಿಜಯಲಕ್ಷ್ಮೀ ಹಾಗರಗಿ, ಕೈಗಾರಿಕೆ ಇಲಾಖೆಗೆ ಸಂಬಂಧಪಟ್ಟಂತೆ ಎರಡನೇ ಸಾಮಾನ್ಯ ಸಭೆಯಲ್ಲಿಯೇ ಮಾಹಿತಿ ಕೇಳಲಾಗಿದೆ. ಆದರೆ ಇಲ್ಲಿವರೆಗೂ ನೀಡಿಲ್ಲ ಎಂದರು. ಸದಸ್ಯೆ ಗೌರಮ್ಮ ಜೈಭೀಮ ಶಿಕ್ಷಣ ಇಲಾಖೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಮಾಹಿತಿ ಕೇಳಲಾಗಿತ್ತು. ಇಲ್ಲಿವರೆಗೂ ಉತ್ತರವೇ ಬಂದಿಲ್ಲ ಎಂದರು. ಇದಕ್ಕೆ ಶರಣಗೌಡ ಪಾಟೀಲ ಬೆಂಬಲಿಸಿ, ಮಾಹಿತಿ ನೀಡದ ಅಧಿಕಾರಿಗಳಿಗೆ ಪಂಚಾಯತ್‌ರಾಜ್‌ ಕಾಯ್ದೆ ಅನ್ವಯ ದಂಡ ಹಾಕಬೇಕು ಎಂದು ಹೇಳಿದರು. 

ಉತ್ತರ ನೀಡುವಂತೆ ಸೂಚನೆ: ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸುವರ್ಣ ಮಲಾಜಿ, ಜೇವರ್ಗಿ ಇಒ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತಿರಿ ಎನ್ನುವುದನ್ನು ಸಭೆಗೆ ಸ್ಪಷ್ಟಪಡಿಸಿ ಎಂದು ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ ಅವರನ್ನು ಕೇಳಿದರು.

Advertisement

ಜೇವರ್ಗಿ ತಾಪಂ ಸಿಇಒ ವಿರುದ್ಧ ಈಗಾಗಲೇ ಅನೇಕ ಕರ್ತವ್ಯಲೋಪದ ದೂರುಗಳು ಕೇಳಿ ಬಂದಿವೆ. ಹೀಗಾಗಿ ಶಿಸ್ತುಕ್ರಮಕ್ಕೆ ಮುಂದಾಗಿದ್ದೇವೆ. ಉಳಿದಂತೆ ವರದಿ ತರಿಸಿಕೊಂಡು 15 ದಿನದೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸದಸ್ಯ ಶಿವರಾಜ ರದ್ದೇವಾಡಗಿ ಮಾತನಾಡಿ, ಅವ್ಯವಹಾರಕ್ಕೆ  ಬಂಧಪಟ್ಟಂತೆ ತನಿಖಾ ವರದಿಯನ್ನು ಅಧಿಕಾರಿಗಳು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ನೀಡುತ್ತಾರೆ. ಆದ್ದರಿಂದ ಕೆಲವು ತನಿಖೆಗಳನ್ನು ಖುದ್ದಾಗಿ ಸಿಇಒ ಅವರೇ ಅವಲೋಕಿಸಬೇಕು ಎಂದರು.

ಸದಸ್ಯ ಶರಣಗೌಡ ಪಾಟೀಲ, ಪ್ರತಿ ಸಾಮಾನ್ಯ ಸಭೆಯಲ್ಲಿ ಶಿಕ್ಷಣ, ಕೃಷಿ, ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಮಾತ್ರ ಚರ್ಚೆಯಾಗುತ್ತದೆ. ಉಳಿದ ಇಲಾಖೆಗಳ ಚರ್ಚೆಯೇ ಆಗುವುದಿಲ್ಲ. ಆ ಇಲಾಖೆಗಳ ಅಧಿಕಾರಿಗಳ ಪರಿಚಯವೇ ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೋದಾಗ ಅಧಿಕಾರಿಗಳು ತಮ್ಮನ್ನು ಒಳಗೆ ಬಿಡಲಿಲ್ಲ. ಇದು ನಾಚಿಗೇಡಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೋಕಾಶಿ ಮಾತನಾಡಿ, ಸೆ.8 ಹಾಗೂ 13ರಂದು ಧಾರಾಕಾರ ಮಳೆ ಬಂದಿದೆ. ಬೆಳೆ ಹಾನಿ ಕುರಿತು ವರದಿ ರೂಪಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವುದು. ಮಳೆ ಹಾನಿಗೆ ಸಂಬಂಧಿಸಿದಂತೆ 22 ರೈತರು ಬೆಳೆವಿಮೆ ಕೋರಿ ಕಂಪನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದರು.

ಜಿಪಂ ಇನ್ಮುಂದೆ ಇ ಆಡಳಿತ: ಕಲಬುರಗಿ ಜಿಪಂನಲ್ಲೂ ಇ ಆಡಳಿತ ಸೇವೆ ಕಾರ್ಯರೂಪಕ್ಕೆ ತರಲು ಮುಂದಾಗಲಾಗಿದೆ. ಇ ಆಡಳಿತ ಕಾರ್ಯರೂಪಕ್ಕೆ ಬಂದಲ್ಲಿ ಯಾವುದೇ ದೂರು ಯಾವ ಹಂತದಲ್ಲಿದೆ ಎನ್ನುವುದನ್ನು ನೋಡಬಹುದು ಎಂದು ಜಿಪಂ ಸಿಇಒ ತಿಳಿಸಿದರು. ಇದಕ್ಕೆ ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಇ ಆಡಳಿತ ಇಷ್ಟೊತ್ತಿಗೆ ಕಾರ್ಯರೂಪಕ್ಕೆ ಬರಬೇಕಿತ್ತು. ಈಗಲಾದರೂ ಶೀಘ್ರವೇ ಆಡಳಿತದಲ್ಲಿ ಇ ಸೇವೆ ತನ್ನಿ ಎಂದು ಹೇಳಿದರು. ಜಿಪಂ ಯೋಜನಾಧಿಕಾರಿ ಇದ್ದರು. ಸಭೆ ಆರಂಭಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ದಿ| ಧರ್ಮಸಿಂಗ್‌ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next