Advertisement

ಆಡಳಿತ ವರ್ಗಕ್ಕೆ ಮಾಧ್ಯಮಗಳೇ ಮಾರ್ಗದರ್ಶಿ

11:09 AM Jul 09, 2019 | Suhan S |

ಶಿವಮೊಗ್ಗ: ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿ ಸಮಾಜದ ಆಗು-ಹೋಗುಗಳನ್ನು ತಿಳಿದುಕೊಳ್ಳುವುದೇ ಮಾಧ್ಯಮದ ಮೂಲಕ. ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿ ಅಥವಾ ಒಂದು ಲೇಖನ ಕೇವಲ ಪತ್ರಕರ್ತನ ಅಭಿಪ್ರಾಯವಾಗಿರುವುದಿಲ್ಲ. ಅದು ಸಮಾಜದ ಅಭಿಪ್ರಾಯವಾಗಿರುತ್ತದೆ. ಇದರಿಂದಾಗಿ ಅಧಿಕಾರಿ ವರ್ಗ ಸಮಾಜಕ್ಕೆ ಯಾವ ರೀತಿ ಕೆಲಸ ಮಾಡಬೇಕೆಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಹೇಳಿದರು.

Advertisement

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಅಪರಾಧ ಸುದ್ದಿಗಳ ವರದಿಗಾರಿಕೆ ಹಾಗೂ ಕಾನೂನು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಕರ್ತನ ಜವಾಬ್ದಾರಿ ಅತ್ಯಂತ ಮಹತ್ವದ್ದು ಆದ್ದರಿಂದ ಒಂದು ವರದಿಯನ್ನು ಪ್ರಕಟಿಸುವಾಗ ಅದನ್ನು ಎಲ್ಲಾ ದೃಷ್ಟಿಯಿಂದಲೂ ನೋಡುವ ಮೂಲಕ ಆಳವಾಗಿ ಅಧ್ಯಯನ ಮಾಡಿ, ಪ್ರಕಟಿಸಬೇಕು ಎಂದು ಕಿವಿ ಮಾತು ಹೇಳಿದ ಅವರು, ಮಾಧ್ಯಮ ಸಮೂಹ ಇಂದು ಅಕಾರಿ ವರ್ಗಕ್ಕೆ ಮತ್ತು ಆಡಳಿತದಲ್ಲಿರುವವರಿಗೆ ಮಾರ್ಗದರ್ಶಿಯಾಗಿದೆ ಎಂದರು.

ವ್ಯಕ್ತಿಯೊಬ್ಬ ತನ್ನ ಅನುಭವವನ್ನು ಕಥನವಾಗಿ ಬರೆಯುವುದು ಅತ್ಯಂತ ಕಷ್ಟದ ಕೆಲಸ. ತಮ್ಮ ಜೀವನಾನುಭವಗಳನ್ನು ಓದುಗನಿಗೆ ಇಷ್ಟವಾಗುವ ರೀತಿಯಲ್ಲಿ ಬರೆಯುವುದು ಇನ್ನೂ ಸವಾಲಿನ ಕೆಲಸ. ಎಲ್ಲರೂ ಸಹ ತಮ್ಮ ಅನುಭವವನ್ನು ಕಥನ ರೂಪದಲ್ಲಿ ಪ್ರಕಟಿಸಲು ಸಾಧ್ಯವಾಗುವುದಿಲ್ಲ ಎಂದರು.

ಪತ್ರಕರ್ತರು ನೈಜ ಹಾಗೂ ವಸ್ತುನಿಷ್ಠ ವರದಿ ಪ್ರಕಟಿಸಬೇಕು. ಏಕೆಂದರೆ ಇಂದು ಪ್ರಕಟಿಸುವ ವರದಿ ಮುಂದಿನ ದಿನಗಳಲ್ಲಿ ಚರಿತ್ರೆಯಾಗಿರುತ್ತದೆ. ಇಂದು ನೀವು ವಸ್ತುನಿಷ್ಠ ವರದಿ ಪ್ರಕಟಿಸದಿದ್ದರೆ ಅದು ಚರಿತ್ರೆಗೆ ಮಾಡುವಂತಹ ದೊಡ್ಡ ದ್ರೋಹವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಶ್ರಾಂತ ಪೊಲೀಸ್‌ ಮಹಾ ನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್‌ ಮಾತನಾಡಿ, ನಿಷ್ಠೆಯಿಂದ ಕಾರ್ಯನಿರ್ವಹಿಸಿದವರನ್ನು ಸಮಾಜ ಸದಾ ನೆನಪಿಸಿಕೊಳ್ಳುತ್ತದೆ ಎಂದ ಅವರು, ಪತ್ರಕರ್ತರಲ್ಲಿ ಬಹಳಷ್ಟು ಮಂದಿ ಪ್ರಾಮಾಣಿಕರಿದ್ದಾರೆ. ಬೆರಳೆಣಿಕೆಯಷ್ಟು ಅಪ್ರಾಮಾಣಿಕರಿದ್ದಾರೆ. ಅಪ್ರಾಮಾಣಿಕರು ಮಾಡುವಂತಹ ತಪ್ಪಿನಿಂದಾಗಿ ಸಮಾಜ ಇಡೀ ಮಾಧ್ಯಮ ಸಮೂಹವನ್ನೇ ಕೆಟ್ಟ ದೃಷ್ಟಿಯಲ್ಲಿ ನೋಡುವಂತಾಗುತ್ತದೆ ಎಂದರು.

Advertisement

ಪತ್ರಕರ್ತರು ಎಂದೂ ಸಹ ತಮ್ಮನ್ನು ತಾವು ಮಾರಿಕೊಳ್ಳಬಾರದು ಎಂದು ಮಾರ್ಮಿಕವಾಗಿ ನುಡಿದ ಅವರು, ನಿಟ್ನೇತಿಯಿಂದ ಮತ್ತು ನಿಷ್ಠುರತೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಸಮಾಜದಲ್ಲಿ ನಿಮಗೆ ಗೌರವ ಸಿಗಲು ಸಾಧ್ಯವಾಗುತ್ತದೆ. ಪತ್ರಕರ್ತ ಸಮೂಹ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಮಾಧ್ಯಮವಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪ್ರಾದೇಶಿಕ ಉರ್ದು ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಮುದಸ್ಸೀರ್‌ ಅಹಮ್ಮದ್‌ ಹಾಗೂ ಪತ್ರಿಕಾ ವಿತರಕ ಮಾಲತೇಶ್‌ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ರಕ್ಷಣಾಧಿಕಾರಿ ಡಾ. ಎಂ.ಅಶ್ವಿ‌ನಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎನ್‌. ರವಿಕುಮಾರ್‌ ಮಾತನಾಡಿದರು. ಪತ್ರಿಕಾ ದಿನಾಚರಣೆ ಮತ್ತು ಪುಸ್ತಕ ಪರಿಚಯ ಕುರಿತು ಡಾ. ರಾಜೇಂದ್ರ ಚೆನ್ನಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್‌, ಸಂಘದ ಪ್ರಧಾನ ಕಾರ್ಯದರ್ಶಿ ವೈದ್ಯ, ನಗರ ಕಾರ್ಯದರ್ಶಿ ವಿ.ಟಿ. ಅರುಣ್‌, ನಾಗೇಶ್‌ ನಾಯ್ಕ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next