ಒಮ್ಮೆ ದೇವತೆಗಳು, ಮನುಷ್ಯರು ಮತ್ತು ರಾಕ್ಷಸರು-ಮೂವರೂ ಬ್ರಹ್ಮದೇವನಲ್ಲಿ ವಿದ್ಯೆ ಕಲಿಯಲು ಹೋದರು. ಕೆಲ ಕಾಲ ಗತಿಸಿದ ನಂತರ ಬ್ರಹ್ಮನಿಂದ ಉಪದೇಶ ಪಡೆಯಲು ಅವರು ಬಯಸಿದರು. ಮೊಟ್ಟಮೊದಲು ದೇವತೆಗಳು ಬ್ರಹ್ಮನ ಹತ್ತಿರ ಬಂದು “ಪ್ರಭೋ, ನಮಗೆ ಉಪದೇಶ ಮಾಡಿ’ ಎಂದು ಭಿನ್ನವಿಸಿಕೊಂಡರು. ಪ್ರಜಾಪತಿ ಕೇವಲ “ದ’ ಎಂಬ ಒಂದೇ ಅಕ್ಷರವನ್ನು ಉಚ್ಚರಿಸಿದ.
ಅದನ್ನು ಕೇಳಿದ ದೇವತೆಗಳು ನುಡಿದರು- “ಪ್ರಭೋ, ತಿಳಿಯಿತು. ನಮ್ಮ ಸ್ವರ್ಗ ಲೋಕದಲ್ಲಿ ಭೋಗ ಭಾಗ್ಯಗಳಿಗೆ ಕಡಿಮೆಯಿಲ್ಲ. ಅವುಗಳಲ್ಲಿ ಮಗ್ನರಾಗಿ ನಾವು ಕೊನೆಗೆ ಸ್ವರ್ಗದಿಂದ ಪತನ ಹೊಂದುವೆವು. ಆದ್ದರಿಂದ ತಾವು ನಮಗೆ “ದ’ ಅಂದರೆ ದಮನ ಅರ್ಥಾತ್ ಇಂದ್ರಿಯ ಸಂಯಮದ ಉಪದೇಶವನ್ನು ಮಾಡಿದ್ದೀರಿ’. ಆಗ ಪ್ರಜಾಪತಿ ಬ್ರಹ್ಮ “ಸರಿ, ನನ್ನ ಉಪದೇಶವನ್ನು ನೀವು ಅರ್ಥಮಾಡಿಕೊಂಡಿರಿ’ ಎಂದ. ಆಮೇಲೆ ಮನುಷ್ಯರು ಬಂದರು.
– ಅವರಿಗೂ “ದ’ ಉಪದೇಶವಾಯಿತು. ಅವರು- ” ತಾವು ನಮಗೆ ದಾನ ಮಾಡುವ ಉಪದೇಶವನ್ನು ಮಾಡಿದ್ದೀರಿ. ಏಕೆಂದರೆ ಮನುಷ್ಯರಲ್ಲಿ ಜನ್ಮವಿಡೀ ಸಂಗ್ರಹ ಮಾಡುವ ದುರಾಸೆ ಇರುತ್ತದೆ. ಆದ್ದರಿಂದ ದಾನದಲ್ಲೇ ನಮ್ಮ ಕಲ್ಯಾಣವಿದೆ.’ ಆಗ ಪ್ರಜಾಪತಿ, “ಸರಿ. ನನ್ನ ಉಪದೇಶದ ಅರ್ಥ ಅದೇ’ ಎಂದ. ನಂತರ ಸುರರು ಬಂದರು- ಅವರಿಗೂ, ಬ್ರಹ್ಮ ಅದೇ “ದ’ ಎಂಬ ಒಂದೇ ಅಕ್ಷರವನ್ನು ಉಚ್ಚರಿಸಿದ.
ಅಸುರರು- “ನಾವು ಸ್ವಭಾವತಃ ಹಿಂಸಾಚಾರಿಗಳು. ದಯೆಯಿಂದಲೇ ಈ ದುಷ್ಕೃತ್ಯಗಳನ್ನು ಬಿಟ್ಟು ಪಾಪದಿಂದ ಮುಕ್ತರಾಗಬಲ್ಲೆ ವಾದ್ದರಿಂದ ಬ್ರಹ್ಮ ದೇವ ನಮಗೆ ಈ ಉಪದೇಶವಿತ್ತಿದ್ದಾನೆ’ ಎಂದು ಯೋಚಿಸಿ ಹೊರಡಲು ಸಿದ್ಧರಾದರು. ಬ್ರಹ್ಮ , “ಅರ್ಥವಾಯಿತೇ ನಿಮಗೆ?’ ಎಂದು ಕೇಳಿದ.ಅಸುರರು “ಹೌದು’ ಎಂದರು. ಪ್ರಜಾಪತಿಯ ಅನುಶಾಸನದ ಪ್ರತಿಧ್ವನಿ ನಮಗೆ ಇಂದೂ ಮೇಘ ಗರ್ಜನೆಯಲ್ಲಿ “ದ, ದ, ದ’ ಎಂಬ ರೂಪದಲ್ಲಿ ಕೇಳಿಸುತ್ತಿದೆ.
“ಭೋಗ ಪ್ರಧಾನ ದೇವತೆಗಳೇ, ಇಂದ್ರಿಯ ದಮನ ಮಾಡಿರಿ’, “ಸಂಗ್ರಹ ಪ್ರಧಾನ ಮನುಷ್ಯರೇ ಭೋಗ ಸಾಮಗ್ರಿಯನ್ನು ದಾನ ಮಾಡಿರಿ’, “ಕ್ರೋಧ ಪ್ರಧಾನ ಅಸುರರೇ, ಪ್ರಾಣಿಮಾತ್ರದ ಮೇಲೆ ದಯೆ ತೋರಿರಿ’ ಎಂಬುದೇ ಮೇಘ ಗರ್ಜನೆಯ ಅರ್ಥವಾಗಿದೆ. ಆದ್ದರಿಂದ ನಾವು ದಮನ, ದಾನ, ದಯಾ ಮೂರನ್ನೂ ಆಚರಿಸಿ ಅವುಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳಬೇಕು.