Advertisement

ಗರಿಷ್ಠ ಅನುದಾನ, ಕ್ಷೇತ್ರದ ಸಮಗ್ರ ಅಭಿವೃದ್ಧಿ : ಪ್ರಮೋದ್‌ ಮಧ್ವರಾಜ್‌

12:38 PM Apr 18, 2017 | |

ಮಲ್ಪೆ: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಯೋಜನೆಗಳಿಗೆ, ವಿವಿಧ ಕಾರ್ಯಕ್ರಮಗಳಿಗೆ ಗರಿಷ್ಠ ಅನುದಾನವನ್ನು ತರಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಶ್ರಮಿಸಲಾಗಿದ್ದು ಮುಂದೆಯೂ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ನಡೆಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಮೀನುಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಸೋಮವಾರ ಅಂಬಲಪಾಡಿ ಪ್ರಗತಿಸೌಧದಲ್ಲಿ ನಡೆದ ನಗರಸಭಾ ವ್ಯಾಪ್ತಿಯ ಅಂಬಲಪಾಡಿ ವಾರ್ಡ್‌ಮಟ್ಟದ ಜನಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಬಿಪಿಎಲ್‌: ಮಾನದಂಡ ಬದಲು ಬಿಪಿಎಲ್‌ ಕಾರ್ಡ್‌ನಲ್ಲಿ ಸರಕಾರದಿಂದ ಅನೇಕ ಸವಲತ್ತುಗಳು ಪಡೆಯ ಬಹುದಾಗಿದ್ದು ಈಗಾಗಲೇ 12,000 ಕುಟುಂಬಗಳಿಗೆ ಕಾರ್ಡ್‌ ನೀಡಲಾಗಿದೆ. ತಿಂಗಳಿಗೆ 450 ರೂ. ಕರೆಂಟ್‌ ಬಿಲ್‌ ಬಂದವರಿಗೆ ಮಾತ್ರ ಬಿಪಿಎಲ್‌ ಕಾರ್ಡ್‌ ನೀಡಲಾಗುತ್ತಿತ್ತು. ಇದೀಗ 850 ರೂ. ಕರೆಂಟ್‌ ಬಿಲ್‌ ಬರುವವರೂ ಬಿಪಿಎÇ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಮೋದ್‌ ತಿಳಿಸಿದರು.

ಸಹಾಯಧನ ವಿತರಣೆ
ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆ ಯಡಿ ತಲಾ 20,000 ರೂ.ಗಳಂತೆ 12 ಮಂದಿಗೆ ಚೆಕ್‌ ವಿತರಿಸಲಾಯಿತು. ಕ್ರೀಡಾ ಇಲಾಖೆಯ ವತಿಯಿಂದ 12 ವಸತಿ ಶಾಲೆಗಳಿಗೆ 2 ಲಕ್ಷ ರೂ. ಮೌಲ್ಯದ ಕ್ರೀಡಾ ಸಲಕರಣೆಗಳನ್ನು ಹಾಗೂ ಮೀನುಗಾರರಿಗೆ ಹೊಸ ಬೋಟ್‌ ನಿರ್ಮಿಸಲು ಸಾಧ್ಯತಾ ಪತ್ರವನ್ನು ವಿತರಿಸಲಾಯಿತು. ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್‌, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ನಗರಸಭಾ ಸದಸ್ಯರಾದ ವಸಂತಿ ಶೆಟ್ಟಿ ಬ್ರಹ್ಮಾವರ, ರಮೇಶ್‌ ಕಾಂಚನ್‌, ಜನಾರ್ದನ ಭಂಡಾರ್‌ಕರ್‌, ಗಣೇಶ್‌ ನೆರ್ಗಿ, ಹಸನ್‌ ಸಾಹೇಬ್‌, ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ, ಡಿವೈಎಸ್ಪಿ ಕುಮಾರಸ್ವಾಮಿ, ಕಂದಾಯ ಅಧಿಕಾರಿ ಸುಧಾಕರ ಶೆಟ್ಟಿ, ಚಂದ್ರ ಪೂಜಾರಿ, ಅಂಬಲಪಾಡಿ ಗ್ರಾಮ ಲೆಕ್ಕಾಧಿಕಾರಿ ಕುಪ್ಪಯ್ಯ ಹಾಗೂ ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ನಗರಸಭಾ ಆಯುಕ್ತ ಡಿ. ಮಂಜುನಾಥಯ್ಯ ಸ್ವಾಗತಿಸಿ ಪ್ರಸ್ತಾವನೆಗೈದರು. ಸುಧಾಕರ್‌ ನಿರೂಪಿಸಿ, ವಂದಿಸಿದರು.

ಶೀಂಬ್ರದಲ್ಲಿ  ಅಣೆಕಟ್ಟು
ಕುಡ್ಸೆಂಪ್‌ ಯೋಜನೆಯಡಿ ಕುಡಿಯುವ ನೀರಿನ ಯೋಜನೆಗೆ 320 ಕೋಟಿ ರೂ. ಮಂಜೂರಾಗಿದ್ದು ಆ ಕೆಲಸ ಕೂಡ ಮುಂದೆ ನಡೆಯಲಿದೆ. ಎಪ್ರಿಲ್‌, ಮೇಯಲ್ಲಿ ನೀರಿನ ಅಭಾವವನ್ನು ಪರಿಹರಿಸಲು ಪೆರಂಪಳ್ಳಿ ಶೀಂಬ್ರದಲ್ಲಿ ಅಣೆಕಟ್ಟು ಕಟ್ಟಲು 102 ಕೋಟಿ ರೂ. ಅನುದಾನ ನೀಡಲಾಗಿದೆ ಎಂದ ಅವರು ದಿನದ 24 ಗಂಟೆ ವಿದ್ಯುತ್‌ ಒದಗಿಸುವ ರಾಜ್ಯದ ಏಕೈಕ ವಿಧಾನಸಭಾ ಕ್ಷೇತ್ರ ಉಡುಪಿ ಎಂದರು.

Advertisement

ಹೊಸ ಮನೆ ನಿರ್ಮಾಣಕ್ಕೆ ನೆರವು
ಸರಕಾರದ ವತಿಯಿಂದ ನಗರಸಭೆಯ ಮೂಲಕ ಪರಿಶಿಷ್ಟ ಜಾತಿ/ಪಂಗಡದ ಮಂದಿಗೆ ಹೊಸಮನೆ ಕಟ್ಟಲು 3 ಲಕ್ಷ ರೂ. ಮತ್ತು ಇತರ ಹಿಂದುಳಿದ ಸಮಾಜದವರಿಗೆ 2 ಲಕ್ಷ ರೂ. ನೀಡುವ ಯೋಜನೆಯನ್ನು ರೂಪಿಸಲಾಗಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next