ಕುಣಿಗಲ್: 14ನೇ ಹಣಕಾಸು ಯೋಜನೆ ಅನುದಾನದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದರೂ, ಮೇಲಧಿ ಕಾರಿಗಳು ಕ್ರಮಕ್ಕೆ ಮುಂದಾಗದಿರುವುದನ್ನು ಖಂಡಿಸಿ ಶುಕ್ರವಾರ ತಾಲೂಕಿನ ಹುಲಿಯೂರುದುರ್ಗ ಗ್ರಾಪಂ 12 ಸದಸ್ಯರು ಸಾಮೂಹಿಕ ರಾಜೀನಾಮೆ ಸಲ್ಲಿಸಿದರು.
ಗ್ರಾಪಂ ಅಧ್ಯಕ್ಷೆ ಮುರಾವತ್ ಜಹಾ ಹಾಗೂ ಪಿಡಿಒ ವಿನಾಯಕ್ ನಡೆಸಿರುವ ಅವ್ಯವಹಾರ ಹಾಗೂ ಅಸಮರ್ಪಕ ಆಡಳಿತಕ್ಕೆ ಬೇಸತ್ತು ಉಪಾಧ್ಯಕ್ಷೆ ಲಲಿತಮ್ಮ ಸೇರಿದಂತೆ ಸದಸ್ಯರಾದ ಪಂಕಜಮ್ಮ, ಭಾಗ್ಯಮ್ಮ, ರವಿ, ತನುಜಾಕ್ಷಿ, ಚಂದ್ರ ಶೇಖರ್, ಮನು, ಧನಂಜಯ್ಯ, ಸುರೇಶ್, ಅನುಸೂಯಮ್ಮ, ಎ.ಟಿ. ಸುರೇಶ್ ಹಾಗೂ ಕುಂಟಯ್ಯ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಕಳೆದ 4 ವರ್ಷದಿಂದ 14ನೇ ಹಣಕಾಸು ಯೋಜನೆಯ 65 ಲಕ್ಷಕ್ಕೂ ಅಧಿಕ ಅನುದಾನದ ಹಣ ಸಭೆಯ ಗಮನಕ್ಕೆ ತರದೆ ಮನಸೋಇಚ್ಛೆ ಖರ್ಚು ಮಾಡಿದ್ದಾರೆ. ಅಲ್ಲದೇ ಗ್ರಾಮ ಸಭೆ ಹಾಗೂ ಸಾಮನ್ಯ ಸಭೆ ನಡೆಸದೆ ಸರ್ವಾಧಿಕಾರ ಧೋರಣೆಯಲ್ಲಿ ಅಡಳಿತ ನಡೆಸುತ್ತಿದ್ದಾರೆ. ಇದರಿಂದ ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗದೆ ಜನರು ಸಮಸ್ಯೆಗಳಿಂದ ನರಳುವಂತಾಗಿದೆ ಎಂದು ಸದಸ್ಯರು ಆರೋಪಿಸಿದ್ದಾರೆ.
ಈ ಸಂಬಂಧ ಹಲವು ಬಾರಿ ಎಸಿ, ಇಒಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇದರ ಜತೆಗೆ ಗ್ರಾಪಂ ಮುಂದೆ ಧರಣಿ ಸತ್ಯಾಗ್ರಹ ನಡೆಸಿ ಹೋರಾಟ ಮಾಡಲಾಯಿತು. ಅಂದು ಸ್ಥಳಕ್ಕೆ ಬಂದ ಇಒ ಶಿವರಾಜಯ್ಯ ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ತನಿಖೆಗೆ ಬರುವ ಮೇಲಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಸದಸ್ಯರು ಆರೋಪಿಸಿದರು.
ಈ ನಿಟ್ಟಿನಲ್ಲಿ ಗ್ರಾಪಂನಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒತ್ತಾಯಿಸಿ ಹಾಗೂ ಮೇಲಧಿಕಾರಿಗಳ ವರ್ತನೆಗೆ ಬೇಸತ್ತು ರಾಜೀನಾಮೆ ನೀಡಲು ಪಕ್ಷಬೇಧ ಮರೆತು 12 ಮಂದಿ ರಾಜೀ ನಾಮೆ ಸಲ್ಲಿಸಿದ್ದೇವೆ. ಶನಿವಾರ ಎಸಿಗೆ ಸದಸ್ಯರು ರಾಜೀನಾಮೆ ಸಲ್ಲಿಸಲ್ಲಿ ದ್ದಾರೆಂದು ಉಪಾಧ್ಯಕ್ಷೆ ಲಲಿತಮ್ಮ ತಿಳಿಸಿದ್ದಾರೆ.