Advertisement
ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ ಮೂವ್‌ಮೆಂಟ್) ಚಳವಳಿಯ ಮೆರವಣಿಗೆಯಲ್ಲಿ ಪಾಲ್ಗೊಂಡು ಪೊಲೀಸರ ಗುಂಡಿಗೆ ಎದೆಯೊಡ್ಡಿ ವೀರಮರಣ ಹೊಂದಿದ ನಾರಾಯಣ ಗೋವಿಂದಪ್ಪ ಡೋಣಿ ವೀರಬಾಲಕನ ಇತಿಹಾಸ ಮಕ್ಕಳಲ್ಲಿ ದೇಶಪ್ರೇಮ ಮೂಡಿಸುತ್ತದೆ. 13ನೇ ವರ್ಷದವನಿದ್ದಾಗ ಸ್ವತಂತ್ರ ಭಾರತದ ಕನಸು ಕಂಡಿದ್ದ ಬಾಲಕನ ಹೆಸರನ್ನು ಪಠ್ಯ ಪುಸ್ತಕದಲ್ಲೇ ತಪ್ಪಾಗಿ ಮುದ್ರಿಸಲಾಗಿದೆ. ಬಾಲಕನ ವೀರ, ಶೌರ್ಯವನ್ನು ಇಂದಿನ ಮಕ್ಕಳಿಗೆ ತಿಳಿಸುವ ಕಾರ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಎಡವಿದೆ. ನಾಲ್ಕು ವರ್ಷದ ಹಿಂದೆ ಪರಿಷ್ಕೃತ ಪಠ್ಯಪುಸ್ತಕದಲ್ಲಿಯೇ ಈ ಪ್ರಮಾದವಾಗಿದ್ದು, ಗಂಡು ಮೆಟ್ಟಿದ ನಾಡಿನ ವೀರ ಬಾಲಕನ ಹೆಸರನ್ನೇ ಪಠ್ಯದಲ್ಲಿ ತಪ್ಪಾಗಿ ಬರೆಯಲಾಗಿದೆ. ವಿಪರ್ಯಾಸ ಎಂದರೆ ಇಂದಿಗೂ ಮಕ್ಕಳು ಹುತಾತ್ಮ ವೀರ ಬಾಲಕನ ಹೆಸರನ್ನು ತಪ್ಪಾಗಿಯೇ ಕಲಿಯುತ್ತಿದ್ದಾರೆ.
Related Articles
Advertisement
ನೈಜತೆ ಕುರುಹುಗಳು: ಇಲ್ಲಿನ ಬ್ರಾಡ್ ವೇನಲ್ಲಿ ನಿರ್ಮಿಸಿರುವ ಪ್ರತಿಮೆಯಲ್ಲಿ ನಾರಾಯಣ ಗೋವಿಂದಪ್ಪ ಡೋಣಿ ಎಂದು ಹೆಸರಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರ ತಾಯಿ ಗಂಗಮ್ಮ ಎಸ್. ಬೊಮ್ಮಾಯಿ ಅವರು ಬಾಲಕನ ದೇಶ ಪ್ರೇಮ, ಧೈರ್ಯ ಮೆಚ್ಚಿ ಮೂರ್ತಿ ದಾನ ಮಾಡಿದ್ದರು. 2020ರಲ್ಲಿ ಮೂರ್ತಿ ಅನಾವರಣ ಮಾಡಿರುವ ಫಲಕದಲ್ಲಿ ನಾರಾಯಣ ಗೋವಿಂದಪ್ಪ ಡೋಣಿ ಎಂದು ಸರಿಯಾಗಿ ಕೆತ್ತಲಾಗಿದೆ. ನಾರಾಯಣ ಡೋಣಿ ಕಿರಿಯ ಸಹೋದರರ ಮಕ್ಕಳು ಇಂದಿಗೂ ಶಹರ ಠಾಣೆ ಹಿಂಭಾಗದಲ್ಲಿರುವ ಮರಾಠ ಗಲ್ಲಿಯ ಕೋಳಿ ಪ್ಲಾಟ್‌ನಲ್ಲಿ ವಾಸವಿದ್ದಾರೆ.
ಗೋವಿಂದಪ್ಪ ಡೋಣಿ ಅವರಿಗೆ ನಾರಾಯಣ ಮೊದಲನೇ ಮಗ, ಲಕ್ಷ್ಮಣ, ಪರಶುರಾಮ, ರಾಮ ಸಹೋದರರಿದ್ದರು. 9ನೇ ಪಠ್ಯಪುಸ್ತಕದಲ್ಲಿ ತಪ್ಪಾಗಿ ಮುದ್ರಿಸುವ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ ಎನ್ನುತ್ತಾರೆ ನಾರಾಯಣ ಡೋಣಿ ಅವರ ಸಹೋದರ ಪರಶುರಾಮ ಅವರ ಪುತ್ರ ಖಂಡೋಬ ಡೋಣಿ.
ಹಿಂದೆಯೂ ತಪ್ಪಾಗಿತ್ತು ಈ ಪಠ್ಯಪುಸ್ತಕಕ್ಕೂ ಮುಂಚೆ 9ನೇ ತರಗತಿಯ ಇಂಗ್ಲಿಷ್ ಭಾಷಾ ಪಠ್ಯದಲ್ಲಿಯೂ ನಾರಾಯಣ ಮಹದೇವ ಡೋಣಿ ಎಂದು ತಪ್ಪಾಗಿ ಮುದ್ರಿಸಲಾಗಿತ್ತು. ಇಲ್ಲಿ ಆಗಿದ್ದ ತಪ್ಪು ನಾಲ್ಕನೇ ಪುಸ್ತಕದಲ್ಲಿಯೂ ಪುನರಾವರ್ತನೆಯಾಗಿದೆ. ಅಲ್ಲಿನ ಪಾಠವನ್ನು ಯಥಾವತ್ತಾಗಿ ನಾಲ್ಕನೇ ತರಗತಿ ಕನ್ನಡ ಪುಸ್ತಕಕ್ಕೆ ಭಾಷಾಂತರ ಮಾಡಿರುವುದು ಈ ಪ್ರಮಾದಕ್ಕೆ ಕಾರಣ ಎನ್ನಲಾಗಿದೆ. ತಪ್ಪಾಗಿರುವ ಕುರಿತು ನಾರಾಯಣ ಡೋಣಿ ಕುಟುಂಬಸ್ಥರು ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂದು ತಪ್ಪನ್ನು ತಿದ್ದಿಕೊಂಡಿದ್ದರೆ ಈಗ ತಪ್ಪು ಮರುಕಳಿಸುತ್ತಿರಲಿಲ್ಲ. ಗದಗ ರಸ್ತೆಯ ಲಾಮಿಂಗ್ಟನ್ ಶಾಲೆ ಬಳಿ ಸ್ಮಾರಕದಲ್ಲಿಯೂ ಕೂಡ ನಾರಾಯಣ ಮಹದೇವ ದೋನಿ ಎಂದೇ ಕೆತ್ತಿಸಲಾಗಿದೆ.
ಮಗಳು ಒಂಭತ್ತನೇ ಕ್ಲಾಸ್ ಓದುತ್ತಿದ್ದಾಗ ಅಜ್ಜನ ಹೆಸರು ತಪ್ಪಾಗಿ ಬರೆದಿದ್ದಾರೆ ಎಂದು ಹೇಳಿದಾಗ ನಮ್ಮ ಗಮನಕ್ಕೆ ಬಂತು. ಆಗ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಆಗಿರುವ ತಪ್ಪಿನ ಬಗ್ಗೆ ಲಿಖಿತವಾಗಿ ತಿಳಿಸಿದರೂ ಪ್ರಯೋಜನವಾಗಲಿಲ್ಲ. ಇದೀಗ ನಾಲ್ಕನೇ ತರಗತಿ ಪಠ್ಯದಲ್ಲೂ ತಪ್ಪಾಗಿ ಬರೆದಿದ್ದಾರೆ. ಬರೆಯುವುದಕ್ಕೂ ಮುಂಚಿತವಾದರೂ ನಮ್ಮನ್ನು ಸಂಪರ್ಕಿಸಿದ್ದರೆ ನಾವಾದರೂ ಹೇಳುತ್ತಿದ್ದೆವು. ಇಂದಿನ ಮಕ್ಕಳು ತಪ್ಪಾಗಿ ಓದಬಾರದು ಎಂಬುದು ನಮ್ಮ ಭಾವನೆ. ಹಿಂದಿನ ಕಹಿ ಘಟನೆಯ ಪರಿಣಾಮ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಭೇಟಿಯಾಗಿಲ್ಲ. ಸ್ವತಂತ್ರ ದಿನದಂದು ಅವರನ್ನು ನೆನೆಯುವ ಕೆಲಸ, ಧ್ವಜಾರೋಹಣ ಮಾಡುವುದಕ್ಕೆ ಸೀಮಿತವಾಗಿ ಬಿಟ್ಟಿದ್ದೇವೆ. –ಖಂಡೋಬ ಡೋಣಿ, ನಾರಾಯಣ ಡೋಣಿ ಅವರ ಸಹೋದರನ ಪುತ್ರ
ಹೇಮರಡ್ಡಿ ಸೈದಾಪುರ