Advertisement

ಮಳೆಗೆ ನರಳುವ ಮಾರುಕಟ್ಟೆಗಳು!

11:56 AM Aug 06, 2018 | |

ಮನುಕುಲಕ್ಕೆ ಮಳೆ ವರ. ಆದರೆ ರಾಜಧಾನಿ ವಿಷಯದಲ್ಲಿ ಮಳೆ ಶಾಪವಾಗಿದೆ. ಮಳೆ ಬಂದರೆ ನಗರದ ಹಲವು ಬಡಾವಣೆಗಳು ನೀರಲ್ಲಿ ತೇಲುತ್ತವೆ. ಇದು ಸ್ವಯಂಕೃತ ಅಪರಾಧ. ಆದರೆ ಬೆಂಗಳೂರಿನ ಬಡಾವಣೆಗಳು ಮಾತ್ರವಲ್ಲ, ಇಲ್ಲಿನ ಹತ್ತಾರು ಮಾರುಕಟ್ಟೆಗಳು ಕೂಡ ಮಳೆಗಾಲದಲ್ಲಿ ಮರುಗುತ್ತಿವೆ. ಇದಕ್ಕೆ ಕಾರಣ, ಮೂಲ ಸೌರ್ಕರ್ಯಗಳ ಕೊರತೆ.

Advertisement

ಸಿಲಿಕಾನ್‌ ಸಿಟಿಯ ಮಾರುಕಟ್ಟೆಗಳು ಎಂದ ಕೂಡಲೇ ನೆನಪಾಗುವುದು ಸುಸಜ್ಜಿತ ಮಳಿಗೆಗಳು, ಉತ್ತಮ ರಸ್ತೆ ಹಾಗೂ ವ್ಯವಸ್ಥಿತ ನಿರ್ವಹಣೆ ಚಿತ್ರಣ. ಆದರೆ, ನಗರದ ಐತಿಹಾಸಿಕ ಕೆ.ಆರ್‌.ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆ, ಸುಪ್ರಸಿದ್ಧ ಮಲ್ಲೇಶ್ವರ ಮಾರುಕಟ್ಟೆ, ರಸಲ್‌ ಮಾರ್ಕೆಟ್‌, ಮಡಿವಾಳ ಮಾರುಕಟ್ಟೆ ಸೇರಿ ಹತ್ತಾರು ಮಾರುಕಟ್ಟೆಗಳ ಪರಿಸ್ಥಿತಿ ಅದಕ್ಕೆ ತದ್ವಿರುದ್ಧ.

ಬಿಬಿಎಂಪಿ ಕೇಂದ್ರ ಭಾಗದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯಗಳಲ್ಲಿ ಒಟ್ಟು 116 ಮಾರುಕಟ್ಟೆಗಳಿದ್ದು, ಈ ಪೈಕಿ ಕೆಲವು ನೂರಾರು ವರ್ಷಗಳ ಇತಿಹಾಸ ಹೊಂದಿವೆ. ಆದರೆ, ನಿರ್ವಹಣೆ ಕೊರತೆಯಿಂದ ಅಲ್ಲೆಲ್ಲಾ ಸುಗಮ ವ್ಯಾಪಾರ, ವಹಿವಾಟು ಸಾಧ್ಯವಾಗುತ್ತಿಲ್ಲ. ಸಾಮಾನ್ಯ ದಿನಗಳಲ್ಲಿ ಕಸ ಉತ್ಪಾದಿಸುವ ಕಾರ್ಖಾನೆಗಳಾಗುವ ಮಾರುಕಟ್ಟೆಗಳು, ಮಳೆಗಾಲದಲ್ಲಿ ಕೆರೆಗಳಂತಾಗುತ್ತವೆ.

ಈ ಸಮಸ್ಯೆಗೆ ಪಾಲಿಕೆ ಎಷ್ಟು ಕಾರಣವೋ ಒತ್ತುವರಿ ಮಾಡಿಕೊಂಡು ಬೇಕಾಬಿಟ್ಟಿ ಮಳಿಗೆ ಹಾಕಿಕೊಂಡಿರುವ ವ್ಯಾಪಾರಿಗಳೂ ಅಷ್ಟೇ ಕಾರಣ. ಒತ್ತುವರಿ ತೆರವಿಗೆ ಪಾಲಿಕೆ ಮುಂದಾದಾಗ ರಾಜಕೀಯ ಒತ್ತಡ, ಪ್ರತಿಭಟನೆ ಮೂಲಕ ವ್ಯಾಪಾರಿಗಳು ಅಡ್ಡಿಪಡಿಸುತ್ತಾರೆ. ಹೀಗಾಗಿ ಪಾಲಿಕೆ ಮಾರುಕಟ್ಟೆಗಳ ನಿರ್ವಹಣೆಗೆ ಆಸಕ್ತಿ ತೋರುತ್ತಿಲ್ಲ. ಮತ್ತೂಂದೆಡೆ ಬಾಡಿಗೆ ಸಂಗ್ರಹ ಕೂಡ ಸಮರ್ಪಕವಾಗಿಲ್ಲ.

ಬೀದಿ ಬದಿಗೆ ಬಂದಿದೆ ಮಲ್ಲೇಶ್ವರ ಮಾರುಕಟ್ಟೆ: ಹಣ್ಣು, ತರಕಾರಿ, ಹೂವುಗಳು ಮಾತ್ರವಲ್ಲ, ಗೃಹಬಳಕೆ ವಸ್ತು, ಫ್ಯಾಷನ್‌ ಸೇರಿದಂತೆ ಮಲ್ಲೇಶ್ವರ ಮಾರುಕಟ್ಟೆಯಲ್ಲಿ ಸಿಗದೇ ಇರುವ ವಸ್ತುಗಳೇ ಇಲ್ಲ. ಮಲ್ಲೇಶ್ವರ 8ನೇ ಕ್ರಾಸ್‌, ಪೂರ್ವ -ಪಶ್ಚಿಮ, ಸಂಪಂಗಿ ರಸ್ತೆಯಿಂದ ಮಾರ್ಗೊಸಾ ರಸ್ತೆಯ ಸುಮಾರು 2 ಕಿ.ಮೀ ಹಬ್ಬಿರುವ ಮಾರುಕಟ್ಟೆಗೆ 50 ವರ್ಷಗಳ ಇತಿಹಾಸವಿದೆ.

Advertisement

300ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು, 200ಕ್ಕೂ ಹೆಚ್ಚು ಮಳಿಗೆಗಳ ಮೂಲಕ ಇಲ್ಲಿ ವಹಿವಾಟು ನಡೆಯುತ್ತದೆ. ಆದರೆ, ಮಾರುಕಟ್ಟೆ ಅಭಿವೃದ್ಧಿಗೆ ಪಾಲಿಕೆ ಗಮನಹರಿಸದ ಕಾರಣ ವ್ಯಾಪಾರಿಗಳು ಫ‌ುಟ್‌ಪಾತ್‌ ಅತಿಕ್ರಿಮಿಸಿದ್ದಾರೆ. ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರಿನ ಹರಿವು ಹೆಚ್ಚುವುದರಿಂದ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತದೆ. ಕೆಲ ಸಂದರ್ಭಗಳಲ್ಲಿ ಒಳಚರಂಡಿ ನೀರು ಮಳೆ ನೀರಿನೊಂದಿಗೆ ಸೇರಿ ಹರಿದು ದುರ್ವಾಸನೆ ಬೀರುವುದರಿಂದ ಜನ ಓಡಾಡಂದ ಸ್ಥಿತಿ ನಿರ್ಮಾಣವಾಗುತ್ತದೆ ಎನ್ನುತ್ತಾರೆ ವ್ಯಾಪಾರಿ ನೂರ್‌ ಅಹಮದ್‌.

ಕೊಚ್ಚೆಯಲ್ಲೇ ವ್ಯಾಪಾರ; ಇದು ನಮ್‌ ಕಲಾಸಿಪಾಳ್ಯ: ಕೊಳೆತು ನಾರುವ ತ್ಯಾಜ್ಯರಾಶಿ, ಕೊಚ್ಚೆಯಲ್ಲೇ ವಾಹನ ಸಂಚಾರ. ಇದರ ನಡುವೆ ವ್ಯಾಪಾರ. ಇದು ಕಲಾಸಿಪಾಳ್ಯ ಮಾರುಕಟ್ಟೆ ಸ್ಥಿತಿ. ಇಲ್ಲಿಗೆ ಭೇಟಿ ನೀಡಿದವರು ಇಲ್ಲಿನ ಪರಿಸ್ಥಿತಿ ಕಂಡರೆ ಮತ್ತೆ ಅತ್ತ ಹೋಗುವ ಮನಸು ಮಾಡುವುದಿಲ್ಲ. ಕಲಾಸಿಪಾಳ್ಯದಲ್ಲಿ 400ಕ್ಕೂ ಹೆಚ್ಚು ತರಕಾರಿ ಮಂಡಿಗಳಿದ್ದು, ಮಾರುಕಟ್ಟೆ ನಿರ್ವಹಣೆ ಹೊಣೆ ಎಪಿಎಂಸಿ ಮೇಲಿದೆ. ಆದರೆ, ಮಾರುಕಟ್ಟೆಗೆ ಅಗತ್ಯ ಮೂಲ ಸೌಕರ್ಯ ಒದಗಿಸದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಪರದಾಡುತ್ತಾರೆ.

ಇಲ್ಲಿ ಪ್ರತಿನಿತ್ಯ 15 ಲಾರಿಗಳಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಎಪಿಎಂಸಿಯಿಂದ ಸ್ವತ್ಛತೆಗೆ 25 ಕಾರ್ಮಿಕರನ್ನು ನೇಮಿಸಿದ್ದು, ಕಸ ಹೊತ್ತೂಯ್ಯಲು 4 ಲಾರಿಗಳಿವೆ. ಆದರೂ ಸ್ವತ್ಛತೆ ಮರೀಚಿಕೆ. ಮಳೆ ಬಂದಾಗ ತ್ಯಾಜ್ಯ ನೀರು ಕಾಲುವೆಗೆ ಕಸ ಸೇರಿ ಸಂಪೂರ್ಣ ಕಾಲುವೆ ಬ್ಲಾಕ್‌ ಆಗುತ್ತದೆ. ಜತೆಗೆ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಕೂಡ ಇಲ್ಲ ಎನ್ನುತ್ತಾರೆ ಕಲಾಸಿಪಾಳ್ಯ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಗೋಪಿ.

ರಸಲ್‌ ಮಾರ್ಕೇಟಲ್ಲಿ ದುರ್ವಾಸನೆ ರಗಳೆ: ನಗರದ ಪುರಾತನ ಮಾರುಕಟ್ಟೆಗಳಲ್ಲಿ ರಸೆಲ್‌ ಮಾರುಕಟ್ಟೆ ಸಹ ಒಂದಾಗಿದ್ದು, ಇಂದಿಗೂ ಪುರಾತನ ಕಟ್ಟಡದಲ್ಲೇ ವಹಿವಾಟು ನಡೆಯುತ್ತಿದೆ. ತರಕಾರಿ, ಹಣ್ಣು, ಹೂವು, ಮಾಂಸ ಇತರೆ ಉತ್ಪನ್ನಗಳು ಇಲ್ಲಿ ರಿಯಾಯಿತಿ ದರದಲ್ಲಿ ದೊರೆಯುತ್ತವೆ. ರಸೆಲ್‌ ಮಾರುಕಟ್ಟೆಯಲ್ಲಿ 300ಕ್ಕೂ ಹೆಚ್ಚು ಮಳಿಗೆಗಳಿದ್ದು, ವಾಹನ ನಿಲುಗಡೆಗೆ ಚಿಕ್ಕ ಸ್ಥಳವಿದೆ.

ಜತೆಗೆ ಪಾಲಿಕೆಯಿಂದ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡದ ಕಾರಣ ದುರ್ವಾಸನೆ ಮಾರುಕಟ್ಟೆಯ ವ್ಯಾಪಿಸಿದೆ. ಪುರಾತನ ಕಟ್ಟಡದ ಚಾವಣಿ ಸೋರುತ್ತಿದ್ದು, ವ್ಯಾಪಾರಿಗಳು ಮಳಿಗೆಗಳಲ್ಲಿ ಶೇಖರಣೆ ಮಾಡಿರುವ ಉತ್ಪನ್ನಗಳು ಹಾಳಾಗುತ್ತಿವೆ. ಮಳೆಗಾದಲ್ಲಿ ಮಾರುಕಟ್ಟೆ ಪ್ರಮುಖ ಭಾಗಗಳಲ್ಲಿ ಶೇಖರಣೆಯಾಗುವ ಮಳೆನೀರು ಕಾಲುವೆಗಳಿಗೆ ಹರಿದು ಹೋಗಲು ಸೂಕ್ತ ವ್ಯವಸ್ಥೆ ಸಹ ಇಲ್ಲದ ಕಾರಣ, ಮಳೆ ನೀರಿನೊಂದಿಗೆ ತ್ಯಾಜ್ಯ ಸೇರಿ ಕೆಟ್ಟ ವಾಸನೆ ಹರಡುತ್ತದೆ.

ಕೆ.ಆರ್‌.ಮಾರ್ಕೆಟ್‌ ಪ್ರತಿಷ್ಠೆಗೆ ನೀರೆರಚುವ ಮಳೆ: ನಗರದ ಪ್ರತಿಷ್ಠಿತ ಮಾರುಕಟ್ಟೆಗಳಲ್ಲಿ ಒಂದಾಗಿರುವ ಕೃಷ್ಣರಾಜ ಮಾರುಕಟ್ಟೆ, ಮೇಯರ್‌ ಪದ್ಮಾವತಿ ಅವರ ಅವಧಿಯಲ್ಲಿ ಅಭಿವೃದ್ಧಿಗೊಂಢಿದೆ. ಆದರೆ, ಗುತ್ತಗೆದಾರರು ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ. ಹೀಗಾಗಿ, ಕಾಂಕ್ರಿಟ್‌ ರಸ್ತೆಯಲ್ಲಿಯೇ ತ್ಯಾಜ್ಯ ಉಳಿಯುತ್ತಿದೆ. ಮಳೆ ಬಂದಾಗ ಗ್ರಾಹಕರು ರಸ್ತೆಯಲ್ಲಿ ಓಡಾಡಲು ಕೂಡ ಸಾಧ್ಯವಾಗದ ಸ್ಥಿತಿ ಇದೆ. ಇನ್ನು ಕೆ.ಆರ್‌.ಮಾರುಕಟ್ಟೆಯ ಬಹುಮಹಡಿ ಕಟ್ಟಡದ ನೆಲ ಮಹಡಿಯಲ್ಲಿ ಮಳೆಗಾಲದಲ್ಲಿ ನೀರು ತುಂಬುತ್ತಿದ್ದು, ವಾಹನಗಳನ್ನು ನಿಲುಗಡೆ ಮಾಡದಂತಹ ಪರಿಸ್ಥಿತಿಯಿದೆ.
 
ಕೋಟಿ ವೆಚ್ಚದಲ್ಲಿ ಕಟ್ಟಿದ ಮಳಿಗೆಗಳ ವಿತರಣೆ ಆಗಿಲ್ಲ: ಬಿಬಿಎಂಪಿ ವತಿಯಿಂದ ನೂರಾರು ಕೋಟಿ ರೂ. ವೆಚ್ಚದಲ್ಲಿ ನಗರದ ಹಲವಾರು ಭಾಗಗಳಲ್ಲಿ ಮಾರುಕಟ್ಟೆ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳನ್ನು ಅರ್ಹ ಫ‌ಲಾನುಭವಿಗಳಿಗೆ ಹಂಚಿಕೆ ಮಾಡದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಇಂದಿಗೂ ಬೀದಿಯಲ್ಲಿ ನಿಂತು ವ್ಯಾಪಾರ ಮಾಡುವಂತಹ ಪರಿಸ್ಥಿತಿಯಿದೆ. ಜಯನಗರ 4ನೇ ಬ್ಲಾಕ್‌, ಮಲ್ಲೇಶ್ವರ ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ ಸೇರಿ ಹಲವು ಮಾರುಕಟ್ಟೆಗಳಲ್ಲಿ ಮಳಿಗೆಗಳು ಹಂಚಿಕೆಯಾಗದಿರುವುದು ಸಮಸ್ಯೆಗೆ ಕಾರಣವಾಗಿದೆ.

ಅಲ್ಪ ಮಳೆಗೂ ಕೃಷ್ಣರಾಜ ಮಾರುಕಟ್ಟೆ ನೆಲಮಹಡಿಯ ನಿಲುಗಡೆ ತಾಣ ಕೆರೆಯಂತಾಗಿ, ವಾಹನಗಳು ಮಳೆ ನೀರಲ್ಲಿ ತೇಲುತ್ತವೆ. ಮಳೆ ನಿಂತ ಬಳಿಕ ಆ ನೀರನ್ನು ಕಾಲುವೆಗೆ ಪಂಪ್‌ ಮಾಡಬೇಕು. ಪರ್ಯಾಯ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೇ ಗ್ರಾಹಕರು ಇಲ್ಲಿಲ್ಲೇ ವಾಹನ ನಿಲ್ಲಿಸುತ್ತಾರೆ.
-ರಮೇಶಪ್ಪ, ಕೃಷ್ಣರಾಜ ಮಾರುಕಟ್ಟೆ ವ್ಯಾಪಾರಿ

ಬೀದಿ ವ್ಯಾಪಾರಿಗಳಿಗೆ ವ್ಯಸ್ಥಿತ ಮಾರುಕಟ್ಟೆ ಸೌಲಭ್ಯ ಒದಗಿಸಿ ಎಂಧು ತಿಂಗಳಿಗೆ ಒಮ್ಮೆಯಾದರೂ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತೇವೆ. ನಗರದ 191 ವಾರ್ಡ್‌ನಲ್ಲಿ 26,700 ಬಿದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದರೂ ಅವರಿಗೆ ಇನ್ನೂ ಗುರುತಿನ ಚೀಟಿ ನೀಡಿಲ್ಲ.
-ಸಿ.ಗಂಗಾಧರ್‌, ಉಪಾಧ್ಯಕ್ಷ, ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ

ಮಲ್ಲೇಶ್ವರ 9ನೇ ಕ್ರಾಸ್‌ನಲ್ಲಿ ನೂತನ ಮಾರುಕಟ್ಟೆ ಸಂಕೀರ್ಣ ನಿರ್ಮಿಸಿ ಆರು ತಿಂಗಳಾಗಿದೆ. ಅಲ್ಲಿ 50ಕ್ಕೂ ಹೆಚ್ಚು ಮಳಿಗೆಗಳಿದ್ದು, 100ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಚುನಾವಣೆ ನೆಪವೊಡ್ಡಿ ಪಾಲಿಕೆಯವರು ಮಳಿಗೆ ವಿರತಣೆ ಮುಂದಕ್ಕೂಡುತ್ತಾ ಬಂದಿದ್ದಾರೆ.
-ಆರ್‌.ಜಗನ್ನಾಥ, ಮಲ್ಲೇಶ್ವರ ವ್ಯಾಪಾರಿ

ಮಳೆ ಬಂದರೆ ಕಲಾಸಿಪಾಳ್ಯ ಮಾರುಕಟ್ಟೆ ಕೆಸರು ಗದ್ದೆಯಾಗುತ್ತದೆ. ಸಾಮಾನ್ಯವಾಗಿ ನಾವು ಬೆಳೆಯುವ ಎಲ್ಲ ತರಕಾರಿಗಳನ್ನು ಇಲ್ಲಿಗೇ ತರುತ್ತೇವೆ. ಆದರೆ, ಮಳೆಗಾಲದಲ್ಲಿ ಇತ್ತ ತಿರುಗಿ ಕೂಡ ನೋಡುವುದಿಲ್ಲ. ಪಾರ್ಕಿಂಗ್‌ ಸಮಸ್ಯೆ ಜತೆಗೆ ದುರ್ವಾಸನೆ ಸಹಿಸಲು ಅಸಾಧ್ಯ.
-ನಂಜುಂಡಪ್ಪ, ಹೊಸಕೋಟೆ ರೈತ 

ಪಾಲಿಕೆ ವ್ಯಾಪ್ತಿಯ ಮಾರುಕಟ್ಟೆಗಳ ಅಭಿವೃದ್ಧಿಗೆ ಈಗಾಗಲೇ ಹಲವು ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಈಗಾಗಲೆ ಕೆ.ಆರ್‌.ಮಾರುಕಟ್ಟೆ ಅಭಿವೃದ್ಧಿಪಡಿಸಿದ್ದು, ಉತ್ತಮ ವ್ಯವಸ್ಥೆಗಳಿವೆ. ಅದೇ ರೀತಿ ಮುಂದಿನ ದಿನಗಳಲ್ಲಿ ಉಳಿದ ಮಾರುಕಟ್ಟೆಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಮಳೆಗಾಲದಲ್ಲಿ ಮಾರುಕಟ್ಟೆಯೊಳಗೆ ಕಾಲಿಡುವ ಸ್ಥಿತಿ ಇರುವುದಿಲ್ಲ. ಕಸದ ಜತೆ ಮಳೆ ನೀರು, ಕೆಸರು ತುಂಬಿ, ಸಹಿಸಲಾಗದಂತಹ ವಾಸನೆ ಮೂಗಿಗಡರುತ್ತದೆ. ಹೀಗಾಗಿಯೇ ಮಳೆಯ ದಿನಗಳಲ್ಲಿ ಬೆಲೆ ಹೆಚ್ಚಿದ್ದರೂ ಅನಿವಾರ್ಯವಾಗಿ ಮಾಲ್‌ಗ‌ಳಿಗೆ ಹೋಗುತ್ತೇವೆ.
-ಸುನಂದಾ, ಚಾಮರಾಜಪೇಟೆ ನಿವಾಸಿ

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next