ಧಾರವಾಡ: ದಿನದಿಂದ ದಿನಕ್ಕೆ ಏರುಮುಖ ಮಾಡಿರುವ ಬೆಲೆ ಏರಿಕೆಯ ಬಿಸಿ ಮಧ್ಯೆಯೂ ನಗರದ ಮಾರುಕಟ್ಟೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯ ವ್ಯಾಪಾರ ಜೋರಾಗಿದೆ. ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತುಗಳು, ರಂಗೋಲಿ, ಹಣತೆ ಖರೀದಿ ಅಬ್ಬರದಿಂದ ಸಾಗಿದ್ದು
ಕಂಡುಬಂತು. ಶಹರ ಹಾಗೂ ಗ್ರಾಮೀಣ ಭಾಗದ ಮಾರುಕಟ್ಟೆಗೂ ಜೀವಕಳೆ ಬಂದಂತಾಗಿದೆ. ಆಕಾಶಬುಟ್ಟಿ, ಪಟಾಕಿ, ಸಿಹಿ ಖಾದ್ಯ, ಹಲವು ವಿಧದ ತಿಂಡಿಗಳ ತಯಾರಿ-ಖರೀದಿ ಜೋರಾಗಿದೆ.
ಕಿರಾಣಿ ಅಂಗಡಿ, ಗ್ಯಾರೇಜ್, ಬೇಕರಿ, ರಸಗೊಬ್ಬರ ಅಂಗಡಿ, ಬಟ್ಟೆ ವ್ಯಾಪಾರಿಗಳು, ಚಿನ್ನಾಭರಣ ಹಾಗೂ ವಾಹನ ಮಾರಾಟ ಮಳಿಗೆಗಳೂ ಸಹ ವಿಶೇಷ ಅಲಂಕಾರಗಳಿಂದ ಕಂಗೊಳಿಸುತ್ತಿವೆ. ನಗರದ ಜನತೆ ದೀಪಾವಳಿ ಹಬ್ಬದ ಖರೀದಿಗೆ ಕುಟುಂಬ ಸಮೇತರಾಗಿ ಮಾರುಕಟ್ಟೆಗೆ ಆಗಮಿಸಿ ಬಟ್ಟೆ, ಬಂಗಾರ ಹಾಗೂ ಹಬ್ಬದ ಆಚರಣೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದು, ಆಕಾಶ ಬುಟ್ಟಿ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡುವವರು ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಕಾರು ಹಾಗೂ ದ್ವಿಚಕ್ರ ವಾಹನ ಖರೀದಿಸುತ್ತಿದ್ದ ಗ್ರಾಹಕರಿಂದ ವಾಹನಗಳ ಶೋ ರೂಂಗಳಲ್ಲಿ ವ್ಯಾಪಾರ ವಹಿವಾಟು ರಂಗೇರಿದೆ. ಅದರಲ್ಲೂ ಮಕ್ಕಳಿಗಾಗಿ ವಿವಿಧ ಬಗೆಯ ಸೈಕಲ್‌ಗಳ ಖರೀದಿಯೂ ಜೋರಾಗಿದೆ.
ದೀಪಾವಳಿ ಹಬ್ಬಕ್ಕೆ ಲಕ್ಷ್ಮೀದೇವಿಗೆ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸುವ ಮಹಿಳೆಯರು ಪೂಜಾ ಸಮಾಗ್ರಿ ಹಾಗೂ ಅಲಂಕಾರಿಕ ವಸ್ತುಗಳನ್ನು ನಗರದ ಸುಭಾಸ ರಸ್ತೆ, ಸೂಪರ್ ಮಾರುಕಟ್ಟೆ ಸೇರಿದಂತೆ ನಗರದ ವಿವಿಧ ಮಾರುಕಟ್ಟೆಯಲ್ಲಿ ಖುಷಿ ಖುಷಿಯಾಗಿ ಕೊಂಡುಕೊಳ್ಳುವಲ್ಲಿ ತಲ್ಲೀನರಾಗಿದ್ದರು. ಪರಿಸರ ಸ್ನೇಹಿಯಾಗಿ ಹಬ್ಬಗಳನ್ನು ಆಚರಿಸುವ ಕುರಿತು ಜನತೆಯಲ್ಲಿ ಜಾಗೃತಿ ಮೂಡುತ್ತಿರುವುದರಿಂದ ಈ ಬಾರಿ ಮಣ್ಣಿನ ಹಣತೆಗೆ ಹೆಚ್ಚಿನ ಬೇಡಿಕೆ ಬರುತ್ತಿದೆ.
ಸೇಬು ಮತ್ತು ಮೂಸಂಬಿ ಕೆಜಿಗೆ 150ರಿಂದ 200, ಸೀತಾಫಲ 120ರಿಂದ 150, ಬಾಳೆಹಣ್ಣು ಡಜನ್‌ಗೆ 40ರಿಂದ 60, ದಾಳಿಂಬೆ 140ಕ್ಕೆ ದೊರೆಯುತ್ತಿದ್ದಂತೆ ಐದು ಕಬ್ಬಿಗೆ 100ರಿಂದ 150, ಒಂದು ಕುಂಬಳ ಕಾಯಿಗೆ 20ರಿಂದ 50, ಬಾಳೆ ಎಲೆ ಜೋಡಿಗೆ 50, ಹಿಂಡಕಾಯಿ ಒಂದು ಕಟ್ಟಿಗೆ 50 ಮತ್ತು ಮಾವಿನ ತಳಿರು ಜೋಡಿಗೆ 10, ಮಣ್ಣಿನ ಚಿಕ್ಕ ಹಣತೆಗಳು ಡಜನ್‌ಗೆ 50, ದೊಡ್ಡ ಹಣತೆ ಜೋಡಿಗೆ 40ರಂತೆ ಮಾರಾಟ ಮಾಡಲಾಗುತ್ತಿತ್ತು.
ದೀಪಾವಳಿ ಹಬ್ಬಕ್ಕೆ ಚಿನ್ನದ ಆಭರಣಗಳನ್ನು ಕೊಂಡುಕೊಳ್ಳವವವರಿಗೆ ಚಿನ್ನದ ಬೆಲೆ ಏರಿಕೆ ಕೊಂಚ ಬಿಸಿ ತಟ್ಟಿದ್ದು, ಕಳೆದ ವರ್ಷಕ್ಕಿಂತ ಈ ಸಲ 1ರಿಂದ 2 ಸಾವಿರ ಏರಿಕೆಯ ಪರಿಣಾಮ ಚಿನ್ನಾಭರಣ ವ್ಯಾಪಾರ ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 49 ಸಾವಿರಕ್ಕೆ ಬಂದಿರುವ ಚಿನ್ನ, 50 ಸಾವಿರ ಗಡಿಯ ಸನ್ನಿಹಿತಕ್ಕೆ ಬಂದಿದೆ. ಬೆಲೆ ಏರಿಕೆಯ ಜತೆಗೆ ಕೋವಿಡ್‌ನಿಂದ ಆರ್ಥಿಕ ಸಂಕಷ್ಟದ ಪರಿಣಾಮವೂ ವ್ಯಾಪಾರ ಕುಸಿತಕ್ಕೆ ಕಾರಣವಾಗಿದೆ.
ಮೋಹನ ಅರ್ಕಸಾಲಿ, ಚಿನ್ನದ ವ್ಯಾಪಾರಿ
ಬೆಲೆ ಏರಿಕೆಯಾಗಿದೆ ಎಂದು ಹಬ್ಬ ಆಚರಿಸದೇ ಇರಲು ಸಾಧ್ಯವಿಲ್ಲ. ಈಗಾಗಲೇ ಬಟ್ಟೆ ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸಿದ್ದೇವೆ. ಹೂವು-ಹಣ್ಣು ಖರೀದಿಸುತ್ತೇವೆ. ಪಟಾಕಿ ಕೇಳುವ ಮಕ್ಕಳಿಗೆ ಒಂದು ಜತೆ ಬಟ್ಟೆ ಕಡಿಮೆ ಕೊಡಿಸುವುದಾಗಿ ಹೇಳಿ ಈ ಬಾರಿ ಪಟಾಕಿ ಖರೀದಿಸುತ್ತಿಲ್ಲ. ಮಕ್ಕಳ ಜತೆಗೆ ಪರಿಸರವನ್ನು ಕಾಪಾಡಿಕೊಳ್ಳಲು ಈ ಉಪಾಯ ಮಾಡಿದ್ದೇವೆ.
ಪ್ರಕಾಶ ಜಿ.ಎನ್., ಗ್ರಾಹಕ