Advertisement

ಗಮನ ಸೆಳೆದ ಮಾವು ಪ್ರದರ್ಶನ-ಮಾರಾಟ ಮೇಳ

12:10 PM May 27, 2022 | Team Udayavani |

ಬೆಳಗಾವಿ: ವೈಜ್ಞಾನಿಕ ರೀತಿಯಲ್ಲಿ ಕಾಯಿಗಳನ್ನು ಕಟಾವು ಮಾಡಿ ನೈಸರ್ಗಿಕವಾಗಿ ಮಾಗಿಸಿದ ಹಾಗೂ ಕ್ಯಾಲ್ಸಿಯಂ, ಕಾರ್ಬೈಡ್‌ ಮುಕ್ತ ಹಣ್ಣುಗಳನ್ನು ಯೋಗ್ಯ ದರದಲ್ಲಿ ನೆರವಾಗಿ ರೈತರಿಂದಲೇ ಗ್ರಾಹಕರಿಗೆ ದೊರಕಿಸಲು ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಹೇಳಿದರು.

Advertisement

ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದ ಕ್ಲಬ್‌ ರಸ್ತೆಯಲ್ಲಿರುವ ಹ್ಯೂಮ್‌ ಪಾರ್ಕ್‌ನಲ್ಲಿ ಗುರುವಾರದಿಂದ ಮೇ 29ರವರೆಗೆ ನಡೆಯುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಮೇಳದಲ್ಲಿ ಹಲವು ಬಗೆಯ ಮಾವಿನ ಹಣ್ಣುಗಳು ಮಾರಾಟಕ್ಕಿವೆ. ಜಿಲ್ಲೆಯ ಎಲ್ಲ ಗ್ರಾಹಕರು ಯೋಗ್ಯ ದರದಲ್ಲಿ ಮಾವು ಖರೀದಿಸಿ ರುಚಿಕರ ಮಾವು ಸವಿಯಬಹುದು ಎಂದರು.

ಮಾವು ಪ್ರದರ್ಶನ ಕೋಣೆ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್‌ ಎಚ್‌.ವಿ., ಇಂತಹ ಮೇಳಗಳು ರೈತರಲ್ಲಿ ಆತ್ಮ ವಿಶ್ವಾಸ ತುಂಬುತ್ತವೆ. ಬರೀ ಮಾವು ಪ್ರದರ್ಶನ ಅಷ್ಟೇ ಅಲ್ಲದೇ ಪ್ರತಿ ಎರಡು ತಿಂಗಳಿಗೊಮ್ಮೆ ರೈತರು ಬೆಳೆದ ವಿವಿಧ ತೋಟಗಾರಿಕಾ ಬೆಳೆಗಳ ಮೇಳವನ್ನೂ ಆಯೋಜಿಸಿ ರೈತರನ್ನು ಪ್ರೋತ್ಸಾಹಿಸಲಾಗುತ್ತದೆ. ಬೆಳಗಾವಿ, ಖಾನಾಪುರ, ಧಾರವಾಡ, ಕಿತ್ತೂರ ಸೇರಿದಂತೆ ವಿವಿಧ ತಾಲೂಕುಗಳಿಂದ ಮಾವು ಮಾರಾಟಕ್ಕೆ ಬಂದಿದ್ದ ರೈತರು ತಾವು ಬೆಳೆದ ಮಾವಿನ ಬಗ್ಗೆ ವಿವರಿಸಿದರು.

ತೋತಾಪುರಿ, ಕೇಸರ, ಮಲಗೋವಾ, ದೂಧಪೇಡಾ, ಕೊಂಕಣ ರುಚಿ, ಆಪೂಸ್‌, ರಸಪೂರಿ, ದಸೇರಿ, ಬೆನೆಶಾನ, ಸಿಂಧುರಿ, ಮಲ್ಲಿಕಾ, ಕೊಬ್ರಿಕಾಯಿ, ಕರಿ ಇಶಾಡಿ, ಯಾಕೃತಿ ಸೇರಿದಂತೆ ನೂರಕ್ಕೂ ಹೆಚ್ಚು ವಿವಿಧ ತಳಿಯ ರುಚಿಕರ ಮಾವಿನ ಹಣ್ಣುಗಳು ಮತ್ತು ಹಲವು ಬಗೆಯ ಉಪ್ಪಿನಕಾಯಿ ಮಾವಿನಕಾಯಿಗಳೂ ಪ್ರದರ್ಶನದಲ್ಲಿ ಗ್ರಾಹಕರ ಗಮನ ಸೆಳೆದವು.

Advertisement

ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆ ಉಪನಿರ್ದೇಶಕರಾದ ಮಹಾಂತೇಶ ಮುರಗೋಡ, ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರಾದ ಸೋಮಶೇಖರ ಹುಳ್ಳೊಳ್ಳಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next