Advertisement

ರಾಜಕೀಯದ “ಅನುಭವ’ಕ್ಕೆ “ಮಂಟಪ’ವೇ ವೇದಿಕೆ!

05:57 PM Apr 15, 2021 | Team Udayavani |

ಬೀದರ: ಬಸವಕಲ್ಯಾಣ ಕ್ಷೇತ್ರದ ಉಪ ಕದನದಲ್ಲಿ ನೂತನ “ಅನುಭವ ಮಂಟಪ’ ಪ್ರಮುಖ ಚುನಾವಣಾ ಪ್ರಚಾರದ ಅಸ್ತ್ರವಾಗಿದೆ. ಉಪ ಸಮರವನ್ನು ಪ್ರತಿಷ್ಠೆಯಾಗಿ ಪಡೆದಿರುವ ರಾಜಕೀಯ ಪಕ್ಷಗಳು ತಮ್ಮ ಅವಧಿಯ ಸರ್ಕಾರವೇ ಮಹತ್ವದ ಯೋಜನೆ ಜಾರಿಗೆ ತಂದಿದೆ ಎಂದು ಮತದಾರರನ್ನು ಸೆಳೆಯುತ್ತಿವೆ. ಶಾಸಕ ದಿ| ಬಿ. ನಾರಾಯಣರಾವ್‌ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬಸವಕಲ್ಯಾಣ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ಮತ್ತು ಕಮಲ ಅರಳಿಸಲು ಬಿಜೆಪಿ ಮಧ್ಯ ಪ್ರಬಲ ಪೈಪೋಟಿ ನಡೆಯುತ್ತಿದೆ.

Advertisement

ಚುನಾವಣಾ ಪ್ರಚಾರದ ವಿಷಯಗಳಿಗೆ ಹುಡುಕಾಟ ನಡೆಸಿದ್ದ ಎರಡೂ ರಾಷ್ಟ್ರೀಯ ಪಕ್ಷಗಳು ಅನುಭವ ಮಂಟಪ ನಿರ್ಮಾಣವನ್ನು ಪ್ರಚಾರದ ವಿಷಯವನ್ನಾಗಿ ಮುಂದಿಟ್ಟುಕೊಂಡು ಮತ ಬೇಟೆ ನಡೆಸುತ್ತಿವೆ. ಬಸವಣ್ಣನ ಕಾರ್ಯಕ್ಷೇತ್ರ ಬಸವಕಲ್ಯಾಣದಲ್ಲಿ ಅನುಭವ ಮಂಟಪ ವಿಶ್ವದ ಪ್ರಥಮ ಸಂಸತ್‌ ಎಂದೇ ಪ್ರಖ್ಯಾತಿ ಪಡೆದಿದ್ದು, 500 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ನೂತನ ಮಂಟಪ ನಿರ್ಮಾಣಕ್ಕೆ ಇತ್ತಿಚೆಗೆ ಶಿಲಾನ್ಯಾಸ ನೆರವೇರಿದೆ. ಬೃಹತ್‌
ಯೋಜನೆಗೆ ಇನ್ನೂ ಚಾಲನೆ ಸಿಗಬೇಕಿದೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್‌ ಈ ಯೋಜನೆ ಹೆಸರಿನಲ್ಲಿ ಮತ ಕೇಳುತ್ತಿವೆ. ಈ ಕಾರ್ಯ ನಾವೇ ಮಾಡಿದ್ದಾಗಿ ರಾಜಕೀಯ ಪ್ರಚಾರಕ್ಕಿ ಇಳಿದಿವೆ. ಹೀಗಾಗಿ ಇಲ್ಲಿ ಅಭಿವೃದ್ಧಿ ವಿಷಯಗಳು ಗೌಣವಾಗಿವೆ.

ಕನಸು ಯಾರದ್ದು?: ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ದಿ| ನಾರಾಯಣರಾವ್‌ ಅವರ ಕನಸಾಗಿತ್ತು. ಇದಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದರು. ಅವರ ಆಶಯದಂತೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹತ್ವದ ಕಾರ್ಯಕ್ಕೆ ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ತಜ್ಞರ ಸಮಿತಿ  ಯನ್ನು ರಚಿಸಿದ್ದಲ್ಲದೇ ಅಗತ್ಯ ಅನುದಾನವನ್ನೂ ಮೀಸಲಿಡಲಾಗಿತ್ತು. ಆದರೆ, ಚುನಾವಣೆ ಪೂರ್ವದಲ್ಲಿ ಸುಮ್ಮನಿದ್ದ ಬಿಜೆಪಿ ಸರ್ಕಾರ ಉಪ ಕದನ ಸಮೀಪಿಸುತ್ತಿದ್ದಂತೆ ಅಡಿಗಲ್ಲು ಹಾಕಿದೆ ಎಂದು ಕಾಂಗ್ರೆಸ್‌ ಹೇಳಿಕೊಳ್ಳುತ್ತಿದೆ.

ಇನ್ನೊಂದೆಡೆ ಆಡಳಿತಾರೂಢ ಬಿಜೆಪಿ, ಬಸವಣ್ಣನ ನೆಲದಲ್ಲಿ ಅನುಭವ ಮಂಟಪ ಪುನರ್‌ ನಿರ್ಮಾಣಕ್ಕೆ ಹಣ ಕೊಟ್ಟು ಕೆಲಸ ಆರಂಭಿಸಲು ನಾವೇ ಬರಬೇಕಾಯಿತು. 500 ಕೋಟಿ ರೂ. ವೆಚ್ಚದ ಮಹತ್ವಕಾಂಕ್ಷಿ ಯೋಜನೆಗೆ 200 ಕೋಟಿ ರೂ. ಬಿಡುಗಡೆ ಮಾಡಿದ್ದು, ವಿಶ್ವವೇ ಬೆರಗುಗೊಳಿಸುವಂತೆ ಕಟ್ಟಡ ನಿರ್ಮಾಣ ಮಾಡಿ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುತ್ತೇವೆ ಎಂದು ವಿಶ್ವಾಸದ ಮಾತುಗಳನ್ನಾಡುತ್ತಿದೆ. ಇದರೊಟ್ಟಿಗೆ ಬಸವಾದಿ ಶರಣರ ಸ್ಮಾರಕ, ಗವಿಗಳ ಅಭಿವೃದ್ಧಿಯೂ ಪ್ರಚಾರದ ವಿಷಯವಾಗಿದೆ.

ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ (ಬಿಕೆಡಿಬಿ) ಸ್ಥಾಪಿಸಿ ಕೊಡುಗೆ ನೀಡಿದೆ ಎಂದು ಕಾಂಗ್ರೆಸ್‌ ಪ್ರಚಾರ ನಡೆಸಿದರೆ, ಬಿಕೆಡಿಬಿಗೆ ಅನುದಾನ ಕಲ್ಪಿಸಿ ನನೆಗುದಿಗೆ ಬಿದ್ದಿದ್ದ ಗವಿಗಳ ಅಭಿವೃದ್ಧಿಗೆ ಶ್ರಮಿಸಿರುವುದು ಬಿಜೆಪಿ ಸರ್ಕಾರ ಎಂದು ಕಮಲ ಪಾಳಯ ಜನರನ್ನು ಸೆಳೆಯುತ್ತಿದೆ. ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇ ವೆಂದು ಕಾಂಗ್ರೆಸ್‌, ಮರಾಠಾ ಮತ್ತು ಲಿಂಗಾಯತ ನಿಗಮ ಸ್ಥಾಪಿಸಿ ಬಹು ದಿನಗಳ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ ಎಂದು ಬಿಜೆಪಿ ಮತಯಾಚಿಸುತ್ತಿದೆ.

Advertisement

*ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next