ದಾವಣಗೆರೆ: ಸಾಲ ವಾಪಾಸ್ ಕೊಡುವಂತೆ ಒತ್ತಾಯಿಸುತ್ತಿದ್ದ ಮಹಿಳೆಯನ್ನ ಕೊಲೆ ಮಾಡಿದ್ದಲ್ಲದೆ ಚಿನ್ನಾಭರಣ ದರೋಡೆ ಮಾಡಿದ್ದವನಿಗೆ ದಾವಣಗೆರೆಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಜೊತೆಗೆ 35 ಸಾವಿರ ರೂಪಾಯಿ ದಂಡ ವಿಧಿಸಿದೆ.
ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಬಿ.ಜಿ. ರೇವಣಸಿದ್ದಪ್ಪ(48) ಶಿಕ್ಷೆಗೆ ಒಳಗಾದವ. ಅದೇ ಗ್ರಾಮದ ಗೌರಮ್ಮ ಕೊಲೆಯಾದವರು.
ಆರೋಪಿ ರೇವಣಸಿದ್ದಪ್ಪ ಗೌರಮ್ಮನ ಬಳಿ 11,800 ರೂಪಾಯಿ ಸಾಲ ಮಾಡಿದ್ದನು. ಆಗಾಗ ಗೌರಮ್ಮ ಸಾಲದ ಹಣ ವಾಪಾಸ್ ನೀಡುವಂತೆ ಒತ್ತಾಯಿಸುತ್ತಿದ್ದರು. 2021 ಜುಲೈ 18ರಂದು ರಾತ್ರಿ ರೇವಣಸಿದ್ದಪ್ಪನು ಗೌರಮ್ಮನನ್ನು ಹತ್ಯೆ ಮಾಡಿ, ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿಕೊಂಡಿದ್ದ ದಾವಣಗೆರೆ ಗ್ರಾಮಾಂತರ ಪೊಲೀಸರು ಆರೋಪಿಯನ್ನ ಬಂಧಿಸಿದ್ದರು. ಅಂದಿನ ವೃತ್ತ ನಿರೀಕ್ಷಕ ಲಿಂಗನಗೌಡ ನೇಗಳೂರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧಿಶರಾದ ಪ್ರವೀಣ ಕುಮಾರ್ ಆರೋಪ ಸಾಬೀತಾಗಿದ್ದರಿಂದ ಆರೋಪಿತನಿಗೆ ಜೀವಾವಧಿ ಶಿಕ್ಷೆ ಹಾಗೂ 35 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ವಕೀಲ ಜಯ್ಯಪ್ಪ ವಾದ ಮಂಡಿಸಿದ್ದರು.
ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದ ತನಿಖಾಧಿಕಾರಿ ಲಿಂಗನಗೌಡ ನೆಗಳೂರು, ಸರಕಾರದ ಪರ ವಾದ ಮಂಡಿಸಿದ್ದ ಜಯ್ಯಪ್ಪ ಅವರಿಗೆ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ವಿಜಯಕುಮಾರ ಎಂ. ಸಂತೋಷ್, ಜಿ. ಮಂಜುನಾಥ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.