Advertisement

ವರದಿ ಪಾಸಿಟಿವ್ ಬಂತು, ಇದನ್ನು ಕೇಳಿ ಆಘಾತಗೊಂಡು ವ್ಯಕ್ತಿ ಸಾವು ; ಆಮೇಲೆ ನೆಗೆಟಿವ್ ಬಂತು!

08:30 PM Jul 23, 2020 | Hari Prasad |

ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹೊತ್ತಲ್ಲೇ ಗುರುವಾರ ವಿಚಿತ್ರ ಘಟನೆಯೊಂದು ನಡೆದಿರುವುದು ಇದೀಗ ವರದಿಯಾಗಿದೆ.

Advertisement

ತನಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ ಎಂಬ ಸುದ್ದಿ ಕೇಳಿಯೇ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು‌, ನಂತರ ಮರಣೋತ್ತರವಾಗಿ ನಡೆಸಿದ ಆಂಟಿಜನ್ RAPID ಪರೀಕ್ಷೆಯಲ್ಲಿ ಆ ವ್ಯಕ್ತಿಗೆ ಕೋವಿಡ್ ನೆಗೆಟಿವ್ ಎಂದು ವರದಿ ಬಂದಿದೆ.

ಇಲ್ಲಿನ ಭವಾನಿ ನಗರದ ನಿವಾಸಿ, 55 ವರ್ಷದ ಆಟೋ ಚಾಲಕರೊಬ್ಬರು ಜು.8ರಂದು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಗುರುವಾರ ಬೆಳಿಗ್ಗೆ, ಅಂದರೆ 15 ದಿನಗಳ ನಂತರ ಆರೋಗ್ಯ ಇಲಾಖೆಯವರು ವ್ಯಕ್ತಿಗೆ ಕರೆ ಮಾಡಿ ನಿಮಗೆ ಪ್ರಯೋಗಾಲಯದ ವರದಿಯಲ್ಲಿ ಕೋವಿಡ್ 19 ಸೋಂಕು ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ ಮಾತ್ರವಲ್ಲದೇ ಎಲ್ಲಿಗೂ ಹೊರಹೋಗಬೇಡಿ ಮನೆಯಲ್ಲಿ ಇರಿ ಎಂದು ಹೇಳಿದ್ದಾರೆ.

ಇತ್ತ, ತನಗೆ ಪಾಸಿಟಿವ್ ಬಂದಿದೆ ಎಂದು ವಿಷಯ ತಿಳಿಯುತ್ತಲೇ ಗಾಬರಿಗೊಂಡ ಆ ವ್ಯಕ್ತಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ ಮತ್ತು ಒದ್ದಾಡುತ್ತಾ ಸ್ವಲ್ಪ ಹೊತ್ತಿನಲ್ಲೇ ಸಾವಿಗೀಡಾಗಿದ್ದಾರೆ. ಅಷ್ಟರಲ್ಲಿ ಕೋವಿಡ್ ಯೋಧರೂ ಸಹ ಈ ವ್ಯಕ್ತಿಯ ಮನೆಗೆ ತಲುಪಿದ್ದು, ಈ ಘಟನೆ ನೋಡಿ ಅವರೂ ಗಾಬರಿಗೊಂಡಿದ್ದಾರೆ.

ಇದನ್ನೂ ಓದಿ: ಜು.23: ರಾಜ್ಯದಲ್ಲಿ ನಿತ್ಯ ಪ್ರಕರಣಗಳ ಸಂಖ್ಯೆ 5 ಸಾವಿರಕ್ಕೇರಿಕೆ; 97 ಸಾವು, 2071 ಚೇತರಿಕೆ

Advertisement

ಮೃತ ದೇಹವನ್ನು ಜಿಮ್ಸ್ ಆಸ್ಪತ್ರೆಗೆ ಸಾಗಿಸಿದ ಬಳಿಕ ಅಲ್ಲಿ ಮತ್ತೊಮ್ಮೆ ಆಂಟಿಜನ್ RAPID ಪರೀಕ್ಷೆ ನಡೆಸಲಾಗಿದೆ. ‌ಆಗ ಕೋವಿಡ್ ನೆಗೆಟಿವ್ ವರದಿ ತೋರಿಸಿದೆ ಎಂದು ಕಲಬುರಗಿ ತಾಲೂಕ ವೈದ್ಯಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ ತಿಳಿಸಿದ್ದಾರೆ.

ಹಿನ್ನೆಲೆ ಏನು?: ಈ ಹಿಂದೆ ಮೃತ ವ್ಯಕ್ತಿಯ ಅಳಿಯನಿಗೆ ಕೋವಿಡ್ ಪಾಸಿಟಿವ್ ದೃಢವಾಗಿತ್ತು. ಹೀಗಾಗಿ ಇಡೀ ಕುಟುಂಬದದವರು ಜು.8ರಂದು ಗಂಟಲು ದ್ರವದ ಮಾದರಿ ನೀಡಿ ಸೋಂಕು ಪತ್ತೆ ಪರೀಕ್ಷೆಗೆ ಒಳಗಾಗಿದ್ದರು. ಆದರೆ, 15 ದಿನಗಳಾದರೂ ವರದಿ ಬಗ್ಗೆ ಯಾರೂ ಏನೂ ಹೇಳಿರಲಿಲ್ಲ.‌

ಇದೀಗ ತನಗೆ ಕೋವಿಡ್ ಸೋಂಕು ಇದೆ ಎಂದು ಕೇಳಿಯೇ ಆಘಾತಗೊಂಡು ಸಾವಿಗೀಡಾದ ವ್ಯಕ್ತಿಯ ಮರಣೋತ್ತರ ಸೋಂಕು ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದು ಅವರ ಕುಟುಂಬ ಸದಸ್ಯರನ್ನು ಆಘಾತಕ್ಕೀಡುಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next