Advertisement

ಮರದ ಮೇಲಿನ ಮನುಷ್ಯ ದೆವ್ವ

11:50 AM Aug 02, 2018 | |

ಒಂದಾನೊಂದು ಕಾಲದಲ್ಲಿ ಉತ್ತನಹಳ್ಳಿ ಎಂಬ ಊರಿನಲ್ಲಿ ರಾಮಕ್ಕ ಮತ್ತು ಭೀಮಕ್ಕ ಎಂಬ ಅತ್ತೆ- ಸೊಸೆಯರಿದ್ದರು. ಅತ್ತೆ ಭೀಮಕ್ಕ ಬಹಳ ಕೆಟ್ಟವಳು. ಪ್ರತಿದಿನ ಏನಾದರೂ ಕಾರಣಕ್ಕೆ ಜಗಳ ತೆಗೆದು ಸೊಸೆ ರಾಮಕ್ಕನನ್ನು ಗೋಳು ಹುಯ್ದುಕೊಳ್ಳುತ್ತಿದ್ದಳು. ರಾಮಕ್ಕನ ಗೋಳನ್ನು ಆಲಿಸಲು ಅಲ್ಲಿ ಯಾರೂ ಇರಲಿಲ್ಲ. ಅವಳ ಬಳಿ ಒಂದು ಸುಂದರವಾದ ಮಣ್ಣಿನ ಗೊಂಬೆಯೊಂದು ಇತ್ತು.

Advertisement

ಇವಳಿಗೆ ದುಃಖವಾದಾಗಲೆಲ್ಲಾ ಆ ಗೊಂಬೆಯ ಮುಂದೆ ತನ್ನ ಕಷ್ಟವನ್ನು ಹೇಳಿಕೊಂಡು ತನಗೆ ತಾನೇ ಸಮಾಧಾನ ಪಟ್ಟುಕೊಳ್ಳುತ್ತಿದ್ದಳು. ಆ ಮಣ್ಣಿನಗೊಂಬೆಯೇ ಅವಳಿಗೆ ಆಪ್ತ ಗೆಳತಿಯಾಗಿತ್ತು. ಅದನ್ನೂ ಸಹಿಸದ ಭೀಮಕ್ಕ ಒಂದು ದಿನ “ಈ ಗೊಂಬೆ ಇದ್ದರೆ ತಾನೆ ಅದರೊಡನೆ ನೀನು ಮಾತನಾಡುವುದು.

ನನ್ನ ಮೇಲೆ ಚಾಡಿ ಹೇಳಿಕೊಂಡು ಗೊಳ್ಳೋ ಅಂತ ಅಳುವುದು’ ಎಂದು ರಾಮಕ್ಕನ ಕೈನಲ್ಲಿದ್ದ ಮಣ್ಣಿನ ಗೊಂಬೆಯನ್ನು ಕಿತ್ತುಕೊಂಡು ಒಡೆದು ಚೂರು ಚೂರು ಮಾಡಿಬಿಟ್ಟಳು. ಆ ಚೂರುಗಳನ್ನು ತನ್ನ ಸೀರೆಯ ಸೆರಗಿನಲ್ಲಿ ತುಂಬಿ ಗಂಟು ಕಟ್ಟಿಕೊಂಡು ರಾಮಕ್ಕ ಮನೆ ಬಿಟ್ಟಳು. ಕಾಡಿನ ದಾರಿ ತಲುಪುವಷ್ಟರಲ್ಲಿ ಕತ್ತಲಾಗಿಬಿಟ್ಟಿತು.

ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಅಲ್ಲೇ ಇದ್ದ ಒಂದು ದೊಡ್ಡ ಮರವನ್ನೇರಿ ಕುಳಿತಳು. ತೂಕಡಿಸುತ್ತಾ ತೂಕಡಿಸುತ್ತಾ ನಿದ್ರೆಗೆ ಜಾರಿದಳು. ಮಧ್ಯರಾತ್ರಿಯಾಯಿತು. ಕಳ್ಳರ ಗುಂಪೊಂದು ರಾಮಕ್ಕ ಮಲಗಿದ್ದ ಮರದ ಬಳಿಗೆ ಬಂದಿತು. ತಾವು ಕದ್ದು ತಂದಿದ್ದ ಚಿನ್ನಾಭರಣ ಹಾಗೂ ಹಣವನ್ನು ಸಮನಾಗಿ ಹಂಚಿಕೊಳ್ಳಲು ಮುಂದಾದರು.

ಅಷ್ಟರಲ್ಲಿ ಮರದ ಮೇಲೆ ನಿದ್ರೆ ಮಾಡುತ್ತಾ ಕುಳಿತಿದ್ದ ರಾಮಕ್ಕನ ಸೀರೆಯ ಸೆರಗಿನ ಗಂಟು ಸಡಿಲಗೊಂಡು ಬಿಚ್ಚಿಕೊಂಡಿತು. ಅದರೊಳಗಿದ್ದ ಮಣ್ಣಿನ ಗೊಂಬೆಯ ಚೂರುಗಳೆಲ್ಲ ಕಳ್ಳರ ಮೇಲೆ ದಬದಬನೆ ಬಿದ್ದವು. ಕತ್ತಲಲ್ಲಿದ್ದ ಕಳ್ಳರು ಇದು ದೆವ್ವದ ಕೆಲಸವೆಂದು ಹೆದರಿ ತಾವು ಹಂಚಿಕೊಳ್ಳುತ್ತಿದ್ದ ಚಿನ್ನಾಭರಣ, ಹಣವನ್ನೆಲ್ಲಾ ಅಲ್ಲಿಯೇ ಬಿಟ್ಟು ಓಡಿ ಹೋದರು. 

Advertisement

ಕಳ್ಳರೆಲ್ಲರೂ ಓಡಿಹೋದ ಮೇಲೆ ರಾಮಕ್ಕ ಮರದಿಂದ ಕೆಳಗಿಳಿದಳು. ಕಳ್ಳರು ಹೆದರಿ ಬಿಟ್ಟು ಹೋಗಿದ್ದ ಚಿನ್ನಾಭರಣ, ಹಣವನ್ನೆಲ್ಲಾ ನೋಡಿ ಖುಷಿಗೊಂಡಳು. ಇದನ್ನೆಲ್ಲಾ ತಗೆದುಕೊಂಡು ಹೋಗಿ ತನ್ನ ಅತ್ತೆ ಭೀಮಕ್ಕನಿಗೆ ಕೊಟ್ಟರೆ ಅವಳು ಸಂತೋಷಗೊಂಡು ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆಂದುಕೊಂಡಳು.

ಬೆಳಗಾಗುತ್ತಲೇ ತನ್ನ ಅತ್ತೆಯ ಮನೆಗೆ ಬಂದಳು. ಎಲ್ಲವನ್ನೂ ಅತ್ತೆ ಭೀಮಕ್ಕನ ಕೈಗೆ ಕೊಟ್ಟು ರಾತ್ರಿ ನಡೆದ ಕಥೆಯನ್ನೆಲ್ಲಾ ಹೇಳಿದಳು. ಅದನ್ನು ಕೇಳಿ ಭೀಮಕ್ಕನ ಮನಸ್ಸಿನಲ್ಲಿ ದುರಾಸೆ ಮೂಡಿತು. ಒಂದಷ್ಟು ಮಣ್ಣಿನ ಚೂರುಗಳನ್ನು ಸೆರಗಿನಲ್ಲಿ ತುಂಬಿಕೊಂಡು ಕಾಡಿನತ್ತ ಹೊರಟೇ ಬಿಟ್ಟಳು. 

ಸೊಸೆ ರಾಮಕ್ಕ ಹೇಳಿದ್ದ ಮರವನ್ನೇರಿ ಕಳ್ಳರ ಬರುವಿಕೆಗಾಗಿ ಕಾಡಿನಲ್ಲಿ ಕಾದು ಕುಳಿತಳು. ಮಧ್ಯರಾತ್ರಿಯಾಯಿತು, ಎಂದಿನಂತೆ ಕಳ್ಳರ ಗುಂಪು ಅಲ್ಲಿಗೆ ಬಂತು. ನಿನ್ನೆ ತಾವು ಹೆದರಿ ಬಿಟ್ಟು ಹೋಗಿದ್ದ ಚಿನ್ನಾಭರಣ ಹಾಗೂ ಹಣಕ್ಕಾಗಿ ಹುಡುಕಾಟ ನಡೆಸಿದರು.

ದೆವ್ವವೇ ತೆಗೆದುಕೊಂಡು ಹೋಗಿರಬಹುದೆಂದು ಸುಮ್ಮನಾದ ಅವರು ಅಂದು ತಾವು ಕದ್ದು ತಂದಿರುವುದನ್ನು ಹಂಚಿಕೊಳ್ಳಲು ಶುರುಮಾಡಿದರು. ಈ ಕ್ಷಣವನ್ನೇ ಕಾಯುತ್ತಿದ್ದವಳಂತೆ ಮರದ ಮೇಲೆ  ಕುಳಿತಿದ್ದ ಭೀಮಕ್ಕ ತನ್ನ ಸೀರೆ ಸೆರಗಿನ ಗಂಟನ್ನು ಬಿಚ್ಚಿ ಅಲ್ಲಿದ್ದ ಮಣ್ಣಿನ ಚೂರುಗಳನ್ನು ಕಳ್ಳರ ಮೇಲೆ ಬೀಳಿಸಿದಳು. ಈ ಬಾರಿ ಕಳ್ಳರು ಮೋಸ ಹೋಗಲಿಲ್ಲ.

ಇದು ದೆವ್ವದ ಕಾಟವಲ್ಲ, ಮನುಷ್ಯ ದೆವ್ವದ ಕಿತಾಪತಿ ಎಂದು ಅವರಿಗೆ ತಿಳಿದುಹೋಯಿತು. ಮರವನ್ನು ಜೋರಾಗಿ ಅಲುಗಾಡಿಸತೊಡಗಿದರು. ಮರದ ತುದಿಯಲ್ಲಿ ಕೂತಿದ್ದ ಭೀಮಕ್ಕ ಬೊಬ್ಬೆ ಹಾಕತೊಡಗಿದಳು. ಸ್ವಲ್ಪ ಹೊತ್ತಿನಲ್ಲೇ ದೊಪ್ಪನೆ ಕೆಳಕ್ಕೆ ಬಿದ್ದಳು. ಕಳ್ಳರು ಅವಳಿಗೆ ತಕ್ಕ ಶಾಸ್ತಿ ಮಾಡಿ ಅಲ್ಲಿಂದ ಕಾಲ್ಕಿತ್ತರು. ಇನ್ಯಾವತ್ತೂ ಇಂಥ ಕೆಲಸ ಮಾಡುವುದಿಲ್ಲ ಎಂದುಕೊಳ್ಳುತ್ತಾ ಭೀಮಕ್ಕ ಕಾಲೆಳೆದುಕೊಂಡು ಊರು ಸೇರಿದಳು.

* ರಾಜು

Advertisement

Udayavani is now on Telegram. Click here to join our channel and stay updated with the latest news.

Next