Advertisement
ಕಾಪು ಕ್ಷೇತ್ರದ ಮಾಜಿ ಶಾಸಕ, ಕರ್ನಾಟಕ ಸರಕಾರದ ಮುಖ್ಯ ಸಚೇತಕರಾಗಿದ್ದ ದಿ| ಭಾಸ್ಕರ ಶೆಟ್ಟಿ ಅವರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಮಲ್ಲಾರು ಕೋಟೆ ರೋಡ್‌ನ ಸೇತುವೆಯು ನಿರ್ಮಾಣಗೊಂಡು 50 ವರ್ಷಗಳು ಕಳೆದರೂ ಆ ಬಳಿಕ ಒಮ್ಮೆಯೂ ಸೇತುವೆಗೆ ಟಚ್ ಆಪ್ ನೀಡುವ ಕೆಲಸ ಕೂಡಾ ಇದುವರೆಗೆ ನಡೆಯದೇ ಇರುವುದು ವಿಪರ್ಯಾಸವಾಗಿದೆ.
ಸೇತುವೆಯ ಮೇಲಿನಿಂದ ನಿರಂತರ ವಾಗಿ ವಾಹನಗಳು ಓಡಾಡುತ್ತಿರುತ್ತವೆ. ಗ್ರಾಮೀಣ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಖಾಸಗಿ ಸರ್ವೀಸ್ ಬಸ್ಸುಗಳು ಈ ಸೇತುವೆ ಮೂಲಕವಾಗಿ ಅರ್ಧ ಗಂಟೆಗೊಮ್ಮೆ ಸಂಚರಿಸುತ್ತಿರುತ್ತವೆ. ಸರಕು ವಾಹನಗಳ ಓಡಾಟದೊಂದಿಗೆ, ಪ್ರತೀ ನಿತ್ಯ ಹತ್ತಾರು ಶಾಲಾ ವಾಹನಗಳು ಮಕ್ಕಳನ್ನು ಹೊತ್ತುಕೊಂಡು ತಿರುಗಾಡುತ್ತಿರುತ್ತವೆ. ಸಂಪರ್ಕ ಸೇತುವೆ
ಮುಂದೆ ಸಾಗುವಾಗ ಸಿಗುವ ಮಲ್ಲಾರು ಕೋಟೆ ರೋಡ್‌ನ ಸೇತುವೆಯು ಹತ್ತಾರು ಊರುಗಳಿಗೆ ತೆರಳುವ ಜನರ ಪಾಲಿನ ಮುಖ್ಯ ಸಂಪರ್ಕ ಸೇತುವಾಗಿದೆ. ಮಲ್ಲಾರು ಗ್ರಾಮದ ಮಲ್ಲಾರು ರಾಣ್ಯಕೇರಿ, ಗರಡಿ, ಕುಪ್ಪೆಟ್ಟು, ಪಕೀರಣಕಟ್ಟೆ, ಗುರ್ಮೆ ಮಾತ್ರವಲ್ಲದೇ ಬೆಳಪು, ಕುತ್ಯಾರು, ಪಣಿಯೂರು, ಎಲ್ಲೂರು, ಮುದರಂಗಡಿ ಗ್ರಾಮಗಳೊಳಗೆ ಸಂಚರಿಸುವ ಜನರಿಗೆ ಹತ್ತಿರದ ಸಂಪರ್ಕಕ್ಕೆ ಈ ರಸ್ತೆ ಬಳಕೆಯಲ್ಲಿದೆ. ಈ ರಸ್ತೆಯು ಸಾವಿರಾರು ಮನೆಗಳಿಗೆ ಸಂಪರ್ಕ ಕಲ್ಪಿಸುತ್ತದೆ.
Related Articles
ಮಲ್ಲಾರು ಕೋಟೆ ರೋಡ್‌ನ ಈ ಸೇತುವೆಯು ಈಗ ತುಂಬಾ ಕ್ಷೀಣ ಸ್ಥಿತಿಯಲ್ಲಿದೆ. ಸೇತುವೆಯ ತಡೆಗೋಡೆಗಳು ಮುರಿದು ಹೋಗಿದ್ದು, ವಾಹನಗಳು ಓಡಾಡುವಾಗ ತಡೆಗೋಡೆಗಳು ಪಟಪಟನೆ ಅಲ್ಲಾಡುತ್ತವೆ. ಸೇತುವೆಯ ಅಡಿ ಭಾಗ ಸಹ ಸೊರಕಲಾಗಿದೆ. ಅಲ್ಲಲ್ಲಿ ಸೇತುವೆಯ ರಾಡ್‌ಗಳು ಎದ್ದು ಕಾಣುತ್ತಿದ್ದು, ಕೆಲವೆಡೆ ರಾಡ್‌ಗಳು ತುಕ್ಕು ಹಿಡಿದು ಹೋಗಿವೆ. ಯಾವಾಗ ಏನು ಬೇಕಾದರೂ ಆಗಬಹುದು ಎನ್ನುವ ಸ್ಥಿತಿ ಸೇತುವೆಯನ್ನು ಕಂಡಾಗ ಗಮನಕ್ಕೆ ಬರುತ್ತದೆ.
Advertisement
ಕೇಂದ್ರ ಸರಕಾರದ ಅನುದಾನವನ್ನು ಬಳಸಿಕೊಂಡು ಸೇತುವೆಯನ್ನು ನಿರ್ಮಿಸಲಾಗಿತ್ತು. ಅಂದು ಇದಕ್ಕೆ 80 ಸಾವಿರ ರೂ. ನಿಂದ 1 ಲಕ್ಷ ರೂ. ವರೆಗೆ ಖರ್ಚಾಗಿರಬಹುದು ಎಂಬ ಮಾಹಿತಿ ಸ್ಥಳೀಯರಿಂದ ದೊರಕಿದೆ.ಪುರಸಭೆಯಾಗಿ ಮೇಲ್ದರ್ಜೆ ಗೇರಿದರೂ ಸೇತುವೆಗೆ ಸಿಕ್ಕಿಲ್ಲ ಕಾಯಕಲ್ಪಹಿಂದೆ ಮಲ್ಲಾರು ಗ್ರಾಮ ಪಂಚಾಯತ್ ಅಧೀನದಲ್ಲಿದ್ದು ಜಿಲ್ಲಾ ಪಂಚಾಯತ್ ಅಧೀನ ರಸ್ತೆಯಾಗಿ ಗುರುತಿಸಲ್ಪಟ್ಟಿದ್ದ ಮಲ್ಲಾರು ಕೋಟೆ ರಸ್ತೆ ಸೇತುವೆಯು, ಪ್ರಸ್ತುತ ಕಾಪು ಪುರಸಭೆಯ ಅಧೀನದಲ್ಲಿದೆ. ಮಲ್ಲಾರು ಗ್ರಾಮವು ಕಾಪು ಪುರಸಭೆಯ ಭಾಗವಾಗಿ ಪಂಚಾಯತ್ ಮಟ್ಟದಿಂದ ಪೌರಾಡಳಿತ ಪ್ರದೇಶವಾಗಿ ಮೇಲ್ದರ್ಜೆಗೇರಿದರೂ ಮಲ್ಲಾರು ಗ್ರಾಮಕ್ಕೆ ಸಂಪರ್ಕ ಸಾಧಿಸುವ ಈ ಸೇತುವೆಗೆ ಮಾತ್ರಾ ಇನ್ನೂ ಕೂಡಾ ಕಾಯಕಲ್ಪದ ಭಾಗ್ಯವೇ ಸಿಕ್ಕಿಲ್ಲ ಎನ್ನುವುದು ಗ್ರಾಮಸ್ಥರ ಅಳಲಾಗಿದೆ. ಅಪಾಯ ಆಹ್ವಾನ
ರಾ. ಹೆ. 66ರ ಕೊಪ್ಪಲಂಗಡಿ ಮಲ್ಲಾರು ಕೋಟೆ ಪಕೀರ್ಣಕಟ್ಟೆಗೆ ಹೋಗುವ ರಸ್ತೆಯಿದೆ. ಇದನ್ನು ಭಾಸ್ಕರ ಶೆಟ್ಟಿ ಅವರು ಶಾಸಕರಾಗಿದ್ದಾಗ ಕೇಂದ್ರ ಸರಕಾರದ ಅನುದಾನದಲ್ಲಿ ನಿರ್ಮಿಸಲಾಗಿದೆ. ಈ ರಸ್ತೆಗೆ ಅಡ್ಡವಾಗಿರುವ ಚಿಕ್ಕ ನದಿಗೆ ಒಂದು ಕಿರು ಸೇತುವೆಯನ್ನು ಆಗಲೇ ನಿರ್ಮಿಸಲಾಗಿದೆ. ಸೇತುವೆಯು ಅತ್ಯಂತ ಕಿರಿದಾಗಿದ್ದು, ವರ್ಷದಿಂದ ವರ್ಷಕ್ಕೆ ಶಿಥಿಲಗೊಳ್ಳುತ್ತಿದೆ. ಸೇತುವೆಯ ಪುನರುಜ್ಜೀವನಕ್ಕೆ ಪುರಸಭೆ, ಶಾಸಕರು ಮತ್ತು ಸಂಸದರು ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.
-ಅಕºರ್ ಅಲಿ ಮಲ್ಲಾರು, ಸ್ಥಳೀಯ ನಿವಾಸಿ ಪುನರ್ ನಿರ್ಮಾಣಕ್ಕೆ ಯೋಜನೆ
ಮಲ್ಲಾರು ಕೋಟೆ ರೋಡ್ ರಸ್ತೆಯಲ್ಲಿನ ಪುರಾತನ ಸೇತುವೆ ಪುನರ್ ನಿರ್ಮಾಣದ ಬಗ್ಗೆ ಸ್ಥಳೀಯರಿಂದ ಮತ್ತು ಪುರಸಭೆಯಿಂದ ಮನವಿ ಬಂದಿದೆ. ರಾಜ್ಯದಲ್ಲಿ ಪ್ರವಾಹ ಉಂಟಾಗಿ ನೆರೆ ಪರಿಹಾರ ಕಾರ್ಯಾಚರಣೆಗೆ ಹೆಚ್ಚಿನ ಅನುದಾನ ಬಳಕೆಯಾಗಿರುವುದರಿಂದ ಕಾಮಗಾರಿಗೆ ಚಾಲನೆ ನೀಡಲು ಸಾಧ್ಯವಾಗಿಲ್ಲ. ಬಜೆಟ್‌ನಲ್ಲಿ ಶಾಸಕರ ನಿಧಿಯ ಅನುದಾನವನ್ನು ಬಳಸಿಕೊಂಡು, ಅಗತ್ಯ ಬಿದ್ದರೆ ಸರಕಾರದ ಮುಂದೆ ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ ಸೇತುವೆ ಪುನರ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುವುದು.
-ಲಾಲಾಜಿ ಆರ್. ಮೆಂಡನ್, ಶಾಸಕರು, ಕಾಪು