Advertisement

ಮೆಕ್ಕೆಜೋಳ ಕಣಜ ಖ್ಯಾತಿಗೆ ಬಂತು ಕುತ್ತು!

12:44 PM May 19, 2017 | |

ದಾವಣಗೆರೆ: ಕಳೆದ ಹಲವು ವರ್ಷದಿಂದ ನಿರಂತರವಾಗಿ ಕಾಡುತ್ತಿರುವ ಮಳೆಯ ಕೊರತೆ, ಬರದ ಪರಿಣಾಮ ಪ್ರಮುಖ ಬೆಳೆ ಮೆಕ್ಕೆಜೋಳದಲ್ಲಿ ಆಗುತ್ತಿರುವ ಊಹೆಗೂ ಮೀರಿದ ಅಪಾರ ಪ್ರಮಾಣದ ಹಾನಿಯಿಂದಾಗಿ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆ ಮೆಕ್ಕೆಜೋಳದ ಕಣಜದ… ಖ್ಯಾತಿ ನಿಧಾನವಾಗಿ ಕುಂದುತ್ತಿದೆ. 

Advertisement

ಒಟ್ಟಾರೆ 5,97,597 ಹೆಕ್ಟೇರ್‌ ಭೌಗೋಳಿಕ ವಿಸೀ¤ರ್ಣ ಹೊಂದಿರುವ ದಾವಣಗೆರೆ ಜಿಲ್ಲೆಯಲ್ಲಿ 4,26,658 ಹೆಕ್ಟೇರ್‌ ಸಾಗುವಳಿ ಪ್ರದೇಶ ಇದೆ. ಮುಂಗಾರು ಹಂಗಾಮಿನಲ್ಲಿ 3.40 ಲಕ್ಷ, ಹಿಂಗಾರು ಹಂಗಾಮಿನಲ್ಲಿ 27,100 ಹೆಕ್ಟೇರ್‌ ನಲ್ಲಿ ಕೃಷಿ ಚಟುವಟಿಕೆ ನಡೆಯುತ್ತದೆ. 72,235 ಹೆಕ್ಟೇರ್‌ ನೀರಾವರಿಯಲ್ಲಿ ಎರಡು ಭತ್ತದ ಬೆಳೆ ತೆಗೆಯಲಾಗುತ್ತದೆ.

ಜಿಲ್ಲೆಯಾದ್ಯಂತ ಶೇ. 75.67 ಸರಾಸರಿ ಪ್ರಮಾಣದಲ್ಲಿ 2,00,720 ಸಣ್ಣ ಮತ್ತು ಅತಿ ಸಣ್ಣ ರೈತರು, ಶೇ. 24.33 ರಷ್ಟು 64,510 ದೊಡ್ಡ ರೈತರು ಒಳಗೊಂಡಂತೆ ಈಗ 2,65,329 ರೈತರ ಬಹುತೇಕ ಪ್ರಮುಖ ಬೆಳೆ ಮೆಕ್ಕೆಜೋಳ. 1980-90ರ ದಶಕದಲ್ಲಿ ನೀರಾವರಿ ಪ್ರದೇಶದಲ್ಲಿ ಭತ್ತ ಮುಖ್ಯ ಬೆಳೆಯಾಗಿದ್ದರೆ, ಬಯಲು (ಬೆದ್ದಲು) ಭಾಗದಲ್ಲಿ ಊಟದ ಜೋಳ, ವಾಣಿಜ್ಯ ಬೆಳೆಯಾಗಿ ಹತ್ತಿಯನ್ನು ಪ್ರಮುಖವಾಗಿ ಬೆಳೆಯಲಾಗುತ್ತಿತ್ತು. 

ದಾವಣಗೆರೆಯಲ್ಲಿದ್ದ 9ಕ್ಕೂ ಹೆಚ್ಚು ಜವಳಿ ಮಿಲ್‌, ಜಿನ್ನಿಂಗ್‌ ಫ್ಯಾಕ್ಟರಿಗಳಿಗೆ ಪೂರೈಸುವಷ್ಟು ಹತ್ತಿಯನ್ನ ಸ್ಥಳೀಯ ರೈತರೇ ಬೆಳೆಯುತ್ತಿದ್ದರು. ಜವಳಿ ಮಿಲ್‌ ಜೊತೆಯಲ್ಲಿ ಜಿನ್ನಿಂಗ್‌ ಫ್ಯಾಕ್ಟರಿ ಮುಚ್ಚುತ್ತಿದ್ದಂತೆ ರೈತರು ಹತ್ತಿಯಿಂದ ಮೆಕ್ಕೆಜೋಳದತ್ತ ಮುಖ ಮಾಡಿದರು. ಮುಂಗಾರುನಲ್ಲಿ 3.40 ಲಕ್ಷ, ಹಿಂಗಾರು ಹಂಗಾಮಿನಲ್ಲಿ 27,100 ಹೆಕ್ಟೇರ್‌ ಪ್ರದೇಶದಲ್ಲಿ ಶೇ. 80ಕ್ಕೂ ಹೆಚ್ಚು ಭಾಗದಲ್ಲಿ ರೈತರು ಮೆಕ್ಕೆಜೋಳ ಬೆಳೆಯಲಾರಂಭಿಸಿದರು.

ಮಳೆಯೂ  ಚೆನ್ನಾಗಿ ಆಗುತ್ತಿದ್ದರಿಂದ ನಿರೀಕ್ಷೆಗೆ ಮೀರಿದಇಳುವರಿ ರೈತರಿಗೆ ದೊರೆಯಲಾರಂಭಿಸಿತು. ಹತ್ತಿಯ ನಾಡಾಗಿದ್ದ ಈ ಭಾಗ ಕೆಲ ವರ್ಷದಲ್ಲಿ ಮೆಕ್ಕೆಜೋಳ ಕಣಜ… ಎಂಬ ಅನ್ವರ್ಥ ಹೆಸರು ಪಡೆಯುವಂತಾಯಿತು. ವರ್ಷಕ್ಕೆ 10 ಲಕ್ಷ ಟನ್‌ ಮೆಕ್ಕೆಜೋಳ ಬೆಳೆದ ಕೀರ್ತಿಗೆ ಪಾತ್ರವಾಗಿತ್ತು. ಇತ್ತೀಚಿನ ವರ್ಷದಲ್ಲಿ ಮಳೆಯ ಕೊರತೆ ತೀವ್ರವಾಗಿ ಕಾಣಿಸಿಕೊಳ್ಳಲಾರಂಭಿಸಿದ ನಂತರ ಮೆಕ್ಕೆಜೋಳ ಬಿತ್ತನೆ ಪ್ರದೇಶದಲ್ಲೂ ಏರಿಳಿತ ಕಾಣಿಸಿಕೊಂಡಿತು.

Advertisement

2011ರಲ್ಲಿ ಮುಂಗಾರು ಹಂಗಾಮಿನಲ್ಲಿ 1.65 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳದ ಗುರಿ ಇತ್ತು. 2012 ರಲ್ಲಿ 1.68 ಲಕ್ಷ ಹೆಕ್ಟೇರ್‌ ಇತ್ತು. 2013 ರಲ್ಲಿ 1.60 ಲಕ್ಷ ಹೆಕ್ಟೇರ್‌ಗೆ ಇಳಿಯಿತು. ಮಳೆಯ ಕೊರತೆ ಹೆಚ್ಚಾಗುತ್ತಿರುವುದರ ಪರಿಣಾಮ 2014ರಿಂದ ಗುರಿಯ ಪ್ರಮಾಣ 1.58 ಲಕ್ಷ ಹೆಕ್ಟೇರ್‌ಗೆ ಇಳಿದಿದೆ.

5-6 ವರ್ಷದ ಅಂತರದಲ್ಲಿ ಬೆಳೆಯುವ ಪ್ರದೇಶ ಕಡಿಮೆ ಆಗುವ ಜೊತೆಗೆ ಆಗುತ್ತಿರುವ ಅಪಾರ ಪ್ರಮಾಣದ ಹಾನಿಯಿಂದಾಗಿ ಮೆಕ್ಕೆಜೋಳ ಕಣಜದ ಖ್ಯಾತಿ ನಿಧಾನವಾಗಿ ಕಾಣೆಯಾಗುತ್ತಿದೆ. ಮುಂಗಾರಿನ ಪ್ರಾರಂಭದಲ್ಲಿ ಉತ್ತಮ ಮಳೆಗೆ ಬಿತ್ತನೆ ಮಾಡಿದ್ದ ಮೆಕ್ಕೆಜೋಳಕ್ಕೆ ತೀರಾ ಅಗತ್ಯ ಸಂದರ್ಭದಲ್ಲಿ ಮಳೆ ಕೈ ಕೊಟ್ಟ ಪರಿಣಾಮ ಅನೇಕ ರೈತರು ಮೆಕ್ಕೆಜೋಳ ಹರಗಿ (ನಾಶಪಡಿಸಿ) ಬೇರೆ ಬೆಳೆದಿದ್ದು ಇದೆ. 

ಅತಿ ಪ್ರಮುಖ ಬೆಳೆಯಾಗಿರುವ ಮೆಕ್ಕೆಜೋಳ ಕೈಕೊಡುತ್ತಿರುವುದು ರೈತರ ಚಿಂತೆಗೆ ಕಾರಣವಾಗಿದೆ. ಮೆಕ್ಕೆಜೋಳಕ್ಕೆ ಭಾರೀ ಮಳೆ ಏನೂ ಬೇಕಾಗಿಲ್ಲ. ಆದರೆ, ಆ ಮಳೆಯೇ ಆಗದೇ ಇರುವುದು ರೈತರಲ್ಲಿಆತಂಕಕ್ಕೆ ಕಾರಣವಾಗುತ್ತಿದೆ. 

ಪ್ರಮಾಣದ ಹಾನಿ ಅಗಾಧ… ಕಳೆದ 2015 ಮತ್ತು 2016ನೇ ಸಾಲಿನಲ್ಲಿ ಮಳೆಯ ಕೊರತೆ ರೈತರನ್ನು ಇನ್ನಿಲದಂತೆ ಕಾಡಿದೆ. 2015ನೇ ಸಾಲಿನಲ್ಲಿ 1.58 ಲಕ್ಷ ಹೆಕ್ಟೇರ್‌ ಪ್ರದೇಶದ ಗುರಿಗೆ 1,70,891 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದ ಮೆಕ್ಕೆಜೋಳ ಅಗತ್ಯ ಸಂದರ್ಭದಲ್ಲಿ ಮಳೆ ಕೊರತೆಯಿಂದ 1,11,023 ಹೆಕ್ಟೇರ್‌ನಲ್ಲಿ ಸಂಪೂರ್ಣ ಹಾನಿಗೊಳಗಾಗಿತ್ತು. 

ಇದರಿಂದಾಗಿ ಮೆಕ್ಕೆಜೋಳ ಕಣಜದ ರೈತರು ಅಕ್ಷರಶಃ ತತ್ತರಿಸಿ ಹೋಗಿದ್ದರು. 2016ನೇ ಸಾಲಿನಲ್ಲೂ ಅದೇ ಕಥೆ ಪುನರಾವರ್ತನೆಯಾಗಿದೆ. 1.58 ಲಕ್ಷ ಹೆಕ್ಟೇರ್‌ ಗುರಿಯಲ್ಲಿ ಬಿತ್ತನೆಯಾಗಿದ್ದ 1,95,245 ಹೆಕ್ಟೇರ್‌ನಲ್ಲಿ ಬರೋಬರಿ 1,83,853 ಹೆಕ್ಟೇರ್‌ನಲ್ಲಿ ಶೇ. 33 ರಷ್ಟು ಪ್ರಮಾಣಕ್ಕಿಂತಲೂ ಬೆಳೆ ಹಾನಿಯಾಗಿದೆ. 

ಎರಡು ವರ್ಷದಲ್ಲೇ 2,94,876 ಹೆಕ್ಟೇರ್‌ ಪ್ರದೇಶದ ಮೆಕ್ಕೆಜೋಳ ಹಾನಿಗೊಳಗಾಗಿರುವುದು ರೈತಾಪಿ ವರ್ಗದ ಚಿಂತೆಗೆ ಕಾರಣವಾಗಿದೆ.ಪ್ರಮುಖ ಬೆಳೆಯೇ ಕೈ ಕೊಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಮೆಕ್ಕೆಜೋಳವನ್ನೇ ನೆಚ್ಚಿಕೊಂಡಿರುವ ರೈತರು ಮತ್ತೆ ಬೇರೆ ಬೆಳೆಯತ್ತ ಮುಖ ಮಾಡುವ ವಾತಾವರಣ ಕ್ರಮೇಣ ನಿರ್ಮಾಣವಾಗುತ್ತಿದೆ. 

* ರಾ.ರವಿಬಾಬು  

Advertisement

Udayavani is now on Telegram. Click here to join our channel and stay updated with the latest news.

Next