Advertisement

ಸಂಚಾರಕ್ಕೆ ಅಯೋಗ್ಯವಾದ ಕಾಪು ಪೇಟೆಯ ಮುಖ್ಯ ರಸ್ತೆ

10:07 AM Nov 01, 2019 | sudhir |

ಕಾಪು: ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಮಳೆ ನೀರು ರಸ್ತೆಯಲ್ಲೇ ಹರಿದು ಕಾಪು ಪೇಟೆಯ ಮುಖ್ಯ ರಸ್ತೆಯ ತುಂಬೆಲ್ಲ ಹೊಂಡ – ಗುಂಡಿಗಳು ಬಿದ್ದಿವೆ. ಇದರಿಂದಾಗಿ ತಾಲೂಕು ಕೇಂದ್ರ, ಪುರಸಭೆಗೆ ಬರುವವರ ಸಂಚಾರಕ್ಕೆ ಸಂಚಕಾರ ಎದುರಾಗಿದೆ.

Advertisement

ಪಿಡಬ್ಲ್ಯುಡಿ ವ್ಯಾಪ್ತಿಗೆ ಬರುವ ಕಾಪು ಹಳೇ ಎಂಬಿಸಿ ರಸ್ತೆಯ ಮಧ್ಯದಲ್ಲಿ ಸಿಗುವ ಕಾಪು ಹೊಸ ಮಾರಿಗುಡಿ ರಸ್ತೆಯಿಂದ ಪೊಲೀಸ್‌ ವೃತ್ತ ನಿರೀಕ್ಷಕರ
ಕಚೇರಿ ಬಳಿಯ ಸಿಂಡಿಕೇಟ್‌ ಬ್ಯಾಂಕ್‌ ಮುಂಭಾಗದ ವರೆಗಿನ ಸುಮಾರು 300 ಮೀ. ರಸ್ತೆಯ ಉದ್ದಕ್ಕೂ ಹೊಂಡ, ಗುಂಡಿಗಳು ಬಿದ್ದಿದ್ದು ಜಲ್ಲಿಗಳು ಕಿತ್ತು ಹೋಗಿವೆ.

ಸಮರ್ಪಕ ಚರಂಡಿಯ ಕೊರತೆಯೊಂದಿಗೆ, ಎರಡು ವರ್ಷಗಳ ಹಿಂದೆ ಒಳಚರಂಡಿ ಯೋಜನೆಗಾಗಿ ಅಗೆದ ರಸ್ತೆಯನ್ನು ಕೂಡ ಸಮರ್ಪಕವಾಗಿ ಪುನರ್‌ ನಿರ್ಮಿಸದೇ ಇರುವ ಪರಿಣಾಮ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಪೇಟೆಯಲ್ಲಿ ಕಟ್ಟಡ ನಿರ್ಮಾಣದ ಸಂದರ್ಭ ಕಟ್ಟಡಗಳ ಮಾಲಕರು ಸೆಟ್‌ಬ್ಯಾಕ್‌ ನಿಯಮಗಳನ್ನು ಪಾಲಿಸದೇ ಇರುವುದರಿಂದ ಮಳೆ ನೀರು ರಸ್ತೆಯಲ್ಲಿಯೇ ಹರಿದು ಹೋಗುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.

ಮಳೆ ನೀರು ನಿಂತು ರಸ್ತೆಯೇ ಕಾಣದೇ ಹಲವು ಅಪಘಾತಗಳು ನಡೆದಿರುವ ಉದಾಹರಣೆಗಳೂ ಇವೆ. ಮಳೆ ಬಂದಾಗ ಪಾದಚಾರಿಗಳು ಮತ್ತು ಅಂಗಡಿಗಳ ಮಂದಿಗೆ ನಿತ್ಯ ಕೆಸರಿನ ಸಿಂಚನವಾದರೆ, ಬಿಸಿಲಿರುವಾಗ ರಸ್ತೆಯ ಸುತ್ತಲೂ ಧೂಳು ಆವರಿಸಿ ತೊಂದರೆಯಾಗುತ್ತಿದೆ. ಕಾಪು ತಾಲೂಕಿನ ಹೃದಯ ಭಾಗದ ರಸ್ತೆಯೇ ಹೀಗಾದ್ರೆ ಉಳಿದ ರಸ್ತೆಗಳ ಪಾಡೇನು ಎಂಬ ಪ್ರಶ್ನೆಯೂ ಸಾರ್ವಜನಿಕರಿಂದ ಕೇಳಿಬರುತ್ತಿದ್ದು, ಜನಪ್ರತಿನಿಧಿಗಳಾಗಲೀ ಅಥವಾ ಅಧಿಕಾರಿಗಳಾಗಲೀ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ದೂರುತ್ತಿದ್ದಾರೆ.

ಜಲ್ಲಿ ಕಲ್ಲುಗಳ ರಾಶಿ
ಕಾಪು ಪೇಟೆಯ ಮುಖ್ಯ ರಸ್ತೆಯಲ್ಲಿ ಹೊಂಡಗಳು ಬಿದ್ದಿವೆ. ಇವುಗಳನ್ನು ತಪ್ಪಿಸಲು ಹೋಗಿ ಬೈಕ್‌ ಸವಾರರು ಬಿದ್ದು ಗಾಯಗೊಂಡ ಘಟನೆಗಳು ಕಣ್ಣಮುಂದೆಯೇ ನಡೆದಿವೆ. ಕೆಲವು ಕಡೆಗಳಲ್ಲಿ ಜಲ್ಲಿ ಕಲ್ಲುಗಳು ರಾಶಿ ಬಿದ್ದಿದ್ದು, ವಾಹನಗಳ ಚಕ್ರಗಳಿಗೆ ಸಿಲುಕಿ ಅಂಗಡಿಗಳ ಗಾಜುಗಳು ಕೂಡ ಪುಡಿಯಾಗಿವೆ. ಪುರಸಭೆ ಇಲ್ಲಿನ ಸಮಸ್ಯೆಗಳಿಂದ ಜನರಿಗೆ ಮುಕ್ತಿ ದೊರಕಿಸಿಕೊಡಬೇಕಿದೆ.
-ಸುಬ್ರಹ್ಮಣ್ಯ ಐತಾಳ್‌, ಉದ್ಯಮಿ

Advertisement

75 ಲಕ್ಷ ರೂ. ಅನುದಾನ ಬಿಡುಗಡೆ
ಕಾಪು ಪೇಟೆಯ ಮುಖ್ಯ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ವಿವಿಧ ಸಮಸ್ಯೆಗಳು ಎದುರಾಗಿವೆ. ಈ ಬಗ್ಗೆ ಪುರಸಭೆಗೆ ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಇಲ್ಲಿನ ಹೊಂಡ ಮುಚ್ಚಲು ಪುರಸಭೆ ಕಾರ್ಯೋನ್ಮುಖವಾಗಿದ್ದು, ಮಳೆ ನಿಂತ ಕೂಡಲೇ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸುವ ಭರವಸೆ ದೊರಕಿದೆ. ಈ ರಸ್ತೆಯು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರು ಮುತುವರ್ಜಿ ವಹಿಸಿ 75 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಮಳೆಯ ಕಾರಣ ಕಾಮಗಾರಿ ವಿಳಂಬವಾಗಿದ್ದು, ಶೀಘ್ರ ನಡೆಯಬಹುದೆಂಬ ನಿರೀಕ್ಷೆ ಇದೆ.
– ಅನಿಲ್‌ ಕುಮಾರ್‌, ವಾರ್ಡ್‌ ಸದಸ್ಯರು, ಕಾಪು ಪುರಸಭೆ

ಸ್ಪಂದಿಸುವ ಭರವಸೆ
ಕಾಪು ಪೇಟೆಯ ಮುಖ್ಯ ರಸ್ತೆಯು ಲೋಕೋಪಯೋಗಿ ಇಲಾಖೆಯ ಅಧೀನಕ್ಕೆ ಬರುತ್ತದೆ. ಅದರೊಂದಿಗೆ ಇಲ್ಲಿ ಒಳಚರಂಡಿ ಯೋಜನೆಯ ಕಾಮಗಾರಿಯೂ ನಡೆದಿರುವುದರಿಂದ ಕೆಲವೊಂದು ಸಮಸ್ಯೆಗಳು ಎದುರಾಗಿವೆ. ರಸ್ತೆ ಅವ್ಯವಸ್ಥೆ ಬಗ್ಗೆ ಎರಡೂ ಇಲಾಖೆಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಎರಡೂ ಇಲಾಖೆಗಳೂ ಈ ಬಗ್ಗೆ ಸ್ಪಂದಿಸುವ ಭರವಸೆ ನೀಡಿವೆ. ರಸ್ತೆ ಬದಿಯ ಚರಂಡಿಗಳು ಹೂಳು ತುಂಬಿ ಮುಚ್ಚಲ್ಪಟ್ಟಿರುವುದರಿಂದ ಹೀಗಾಗಿದೆ. ಮಳೆ ಮುಗಿದ ಅನಂತರ ತೇಪೆ ಕಾರ್ಯ ನಡೆಸಲಾಗುವುದು. ಮುಂದಿನ ಮಳೆಗಾಲದ ಮೊದಲು ಚರಂಡಿಯನ್ನು ತೆರೆದು ಕೊಟ್ಟು ಪೂರ್ಣ ಕಾಮಗಾರಿ ನಡೆಸಲಾಗುವುದು.
– ವೆಂಕಟೇಶ್‌ ನಾವಡ, ಮುಖ್ಯಾಧಿಕಾರಿ, ಕಾಪು ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next