Advertisement

ಸರ್ವಿಸ್‌ ರಸ್ತೆ ಇಲ್ಲದಿರುವುದು ಇಲ್ಲಿನ ಪ್ರಮುಖ ಸಮಸ್ಯೆ

08:47 PM Aug 29, 2021 | Team Udayavani |

ತಲಪಾಡಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ವೇಳೆ ಉದ್ಭವಿಸಿದ ಹಲವಾರು ಸಮಸ್ಯೆಗಳು ಹಾಗೇ ಇವೆ. ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಸುಸಜ್ಜಿತ ಬಸ್‌ ನಿಲ್ದಾಣ, ಟೋಲ್‌ಗೇಟ್‌ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಇಲ್ಲಿನ ಪ್ರಮುಖ ಬೇಡಿಕೆಗಳಾಗಿವೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರ ಗಮನ ಸೆಳೆಯಲು ಉದಯವಾಣಿ ಸುದಿನ “ಒಂದು ಊರು ಹಲವು ದೂರು’ ಅಭಿಯಾನದ ಮೂಲಕ ಪ್ರಯತ್ನಿಸಿದೆ.

Advertisement

ತಲಪಾಡಿ: ಕರ್ನಾಟಕ – ಕೇರಳ ಗಡಿ ಭಾಗ ವಾಗಿರುವ ತಲಪಾಡಿ ಗ್ರಾಮದಲ್ಲಿ ಕೃಷಿ ಮುಖ್ಯ ಕಸುಬು. ಮಂಗಳೂರು ನಗರದಿಂದ 18 ಕಿ.ಮೀ. ದೂರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ 66 ಇಲ್ಲಿನ ಮುಖ್ಯ ಸಂಪರ್ಕ ರಸ್ತೆ. ಕೇರಳದ ಮಂಜೇಶ್ವರ, ಬಂಟ್ವಾಳ ತಾಲೂಕಿನ ನರಿಂಗಾನ, ಉಳ್ಳಾಲ ತಾ| ಕಿನ್ಯಾ, ಸೋಮೇಶ್ವರ ಗ್ರಾಮಗಳ ಗಡಿಯನ್ನು ಹೊಂದಿರುವ ಇಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಬಳಿಕ ಹೊಸ ಸಮಸ್ಯೆಗಳು ಸೃಷ್ಟಿಯಾಗಿವೆ. ಮುಖ್ಯವಾಗಿ ಸರ್ವಿಸ್‌ ರಸ್ತೆ ನಿರ್ಮಿಸದಿರುವುದು ಸಂಚಾರ ಸಂಕಷ್ಟಕ್ಕೆ ಕಾರಣವಾಗಿದೆ.

ಸರಿಯಾದ ಸರ್ವಿಸ್‌ ರಸ್ತೆಗಳಿಲ್ಲದೆ ವಾಹನ ಚಾಲಕರು ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಬರುವಾಗ ಅಪಘಾತಗಳು ಸಂಭವಿಸುತ್ತಿದ್ದು, ಹೆದ್ದಾರಿ ಇಲಾಖೆ ಈವರೆಗೆ ಕ್ರಮಕೈಗೊಂಡಿಲ್ಲ. ರಾ.ಹೆದ್ದಾರಿ ನಿರ್ಮಾಣಕ್ಕೆ ಅತೀ ಹೆಚ್ಚು ಭೂಮಿ ಬಿಟ್ಟುಕೊಟ್ಟಿದ್ದು ತಲಪಾಡಿ ಗ್ರಾಮ. ಆದರೆ ಹೆದ್ದಾರಿ ಕಾಮಗಾರಿ ಆರಂಭವಾಗಿ ಟೋಲ್‌ ಫ್ಲಾಝಾ ನಿರ್ಮಾಣದ ಬಳಿಕ ಈ ಗ್ರಾಮದ ಜನರಿಗೆ ಸಮಸ್ಯೆ ಸಾಮಾನ್ಯ.

ಇತ್ತೀಚಿನವರೆಗೆ ತಮ್ಮ ಗ್ರಾಮದೊಳಗೆ ಸಂಚರಿಸಲು ಟೋಲ್‌ ಕಟ್ಟುವ ಸ್ಥಿತಿ ಇಲ್ಲಿ ನಿರ್ಮಾಣವಾಗಿತ್ತು. ಆದರೆ ಸಾರ್ವಜನಿಕರ ಹೋರಾಟದ ಬಳಿಕ ಕೆಲವು ಕಾಲಕ್ಕೆ ಟೋಲ್‌ ವಿನಾಯಿತಿ ಸಿಕ್ಕಿದ್ದರೂ ಅದು ಶಾಶ್ವತವಾಗಿ ಇದೆ ಎನ್ನುವ ಭರವಸೆ ಇಲ್ಲಿನವರಿಗೆ ಇಲ್ಲ.

ಹೆದ್ದಾರಿ ಕಾಮಗಾರಿ ಸಂದರ್ಭ ಈ ಭಾಗದ ಸುಮಾರು 5ಕ್ಕೂ ಹೆಚ್ಚು ಬಸ್‌ ನಿಲ್ದಾಣಗಳನ್ನು ಕೆಡವಲಾಗಿತ್ತು. ಆದರೆ ಮೇಲಿನ ತಲಪಾಡಿಯಲ್ಲಿ ಹೊರತುಪಡಿಸಿದರೆ ಬೇರೆ ಎಲ್ಲಿಯೂ ಬಸ್‌ ನಿಲ್ದಾಣ ನಿರ್ಮಾಣವಾಗಿಲ್ಲ. ತಲಪಾಡಿ ಚೆಕ್‌ಪೋಸ್ಟ್‌ ಬಳಿ ಬಸ್‌ ನಿಲ್ದಾಣ ನಿರ್ಮಾಣ ಅತೀ ಅಗತ್ಯ.

Advertisement

ಬಯಲೇ ಶೌಚಾಲಯ  :

ತಲಪಾಡಿ ಟೋಲ್‌ಗೇಟ್‌ ಬಳಿ ನಿರ್ಮಿಸಲಾಗಿರುವ ಸಾರ್ವಜನಿಕ ಶೌಚಾಲಯವನ್ನು ಕರ್ನಾಟಕದಿಂದ ಕೇರಳಕ್ಕೆ ಸಂಚರಿಸುವ ಲಾರಿ ಚಾಲಕರು, ಸಾರ್ವಜನಿಕರು ಮಾತ್ರ ಬಳಸುತ್ತಿದ್ದು, ಇತ್ತ ಕೇರಳದಿಂದ ಬರುವವರಿಗೆ ತಲಪಾಡಿ ಬಸ್‌ ನಿಲ್ದಾಣದ ಬಳಿ ಶೌಚಾಲಯ ಇಲ್ಲದೆ ಚೆಕ್‌ಪೋಸ್ಟ್‌ ಬಳಿ ಒಂದೆರೆಡು ದಿನಗಳ ಕಾಲ ನಿಲ್ಲುವ ಲಾರಿಗಳ ಚಾಲಕರು ಬಯಲನ್ನೇ ಶೌಚಾಲಯವನ್ನಾಗಿಸಿದ್ದಾರೆ. ಅಲ್ಲದೆ ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ಸುರಿಯುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.

ಗ್ರಾಮದಲ್ಲಿ 6 ಕೊಳವೆ ಬಾವಿಗಳು, 8 ಬಾವಿಗಳಿದ್ದರೂ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಕೆ.ಸಿ. ರೋಡ್‌, ಟೋಲ್‌ಗೇಟ್‌ ಜನತಾ ಕಾಲನಿ, ಪಿಲಿಕೂರು ಪಂಜಾಳ, ದೇವಿಪುರ, ತಚ್ಛಾಣಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ದೇವಿಪುರ ಬಳಿ ಬಾವಿ ದುರಸ್ತಿಗೆ ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ನಡೆದಿಲ್ಲ.

ಇತರ ಸಮಸ್ಯೆ ಗಳೇನು? :

  • ಈ ಪ್ರದೇಶದಲ್ಲಿ ಹೆದ್ದಾರಿ ದಾಟಲು ಅಂಡರ್‌ಪಾಸ್‌ ಅಗತ್ಯವಿದೆ.
  • ಕಸ ವಿಲೇವಾರಿಗೆ ಜಾಗ ಗುರುತಿಸಿದ್ದರೂ ಸ್ಥಳೀಯರ ವಿರೋಧದಿಂದ ಸಮಸ್ಯೆ ಬಗೆಹರಿದಿಲ್ಲ.
  • ತಲಪಾಡಿ ಹೊಳೆ ಹೂಳೆತ್ತದೆ ಕೃಷಿ ಭೂಮಿಗೆ ಹಾನಿಯಾಗುತ್ತಿದೆ. ತಲಪಾಡಿ ರೆಂಜೆದಡಿ ಅಣೆಕಟ್ಟು ಬಳಿ ಮರಳು ತುಂಬಿ ಹೊಳೆ, ಕೃಷಿ ಭೂಮಿ ಸಮಾನಾಂತರವಾಗಿದ್ದು, ಕೃಷಿ ಭೂಮಿ ನಾಶವಾಗಿದೆ. ದೇವಿಪುರ ಬಳಿ ಇರುವ ಹಳೆ ಸೇತುವೆಯಲ್ಲಿ ಜನರು ಓಡಾಡುವುದರಿಂದ ಅದರ ನಿರ್ವಹಣೆ ಅಗತ್ಯವಿದೆ.
  • ದೇವಿನಗರದಿಂದ – ದೇವಿಪುರ ಹೊಸ ರಸ್ತೆ ಆದರೂ ಸರಿಯಾದ ಚರಂಡಿ ನಿರ್ಮಾಣವಾಗಿಲ್ಲ.
  • ತಲಪಾಡಿಯಿಂದ ತಲಪಾಡಿ ಬಾವ ಪ್ರದೇಶಕ್ಕೆ ಹೋಗುವ ರಸ್ತೆ ಅಭಿವೃದ್ಧಿಯಾಗಬೇಕಿದೆ. ತಲಪಾಡಿ ಬಾವದಲ್ಲಿರುವ ಮೈದಾನಕ್ಕೆ ಹೈಮಾಸ್ಟ್‌ ದೀಪ ಅಳವಡಿಸಬೇಕಿದೆ.
  • ತಲಪಾಡಿ-ದೇವಿಪುರಕ್ಕೆ ಸರಕಾರಿ, ಸಿಟಿ ಬಸ್‌ ವ್ಯವಸ್ಥೆ ಕಲ್ಪಿಸಬೇಕಿದೆ. ತಲಪಾಡಿಯಿಂದ ಮುಡಿಪು ಮಾರ್ಗವಾಗಿ ಮಂಗಳೂರಿನ ಸ್ಟೇಟ್‌ಬ್ಯಾಂಕ್‌ ಕಡೆಗೆ ಸರಕಾರಿ ಬಸ್‌ ಬೇಡಿಕೆ ಇಲ್ಲಿನವರದ್ದು.
  • ಇಲ್ಲಿಂದ ಕೇರಳಕ್ಕೆ ಅನೇಕ ಒಳರಸ್ತೆಗಳಿದ್ದು ಮರಳು ಅಕ್ರಮ ಸಾಗಾಟ ಸಹಿತ ಹಲವು ದಂಧೆಗಳಿಗೆ ರಹದಾರಿಯಾಗಿವೆ. ಅವುಗಳನ್ನು ತಡೆಯಲು ಸುಸಜ್ಜಿತ ಚೆಕ್‌ಪೋಸ್ಟ್‌ ಅಗತ್ಯವಿದೆ.

 

-ವಸಂತ ಎನ್‌. ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next