Advertisement

ಮಹಿಳೆಯರಿಗೆ ರಕ್ಷಣೆ ನೀಡುವುದೇ ಆಯೋಗದ ಮುಖ್ಯ ಉದ್ದೇಶ: ಪ್ರಮಿಳಾ ನಾಯ್ಡು

03:18 PM Sep 15, 2022 | Team Udayavani |

ಕಾರವಾರ: ಮಹಿಳೆ ವಿದ್ಯಾವಂತಳಾಗಿ, ಉದ್ಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲಳಾಗಿ ಸ್ವಾವಲಂಬಿಯಾಗಿ ಜೀವನ ನಡೆಸು ವಂತಾಗಬೇಕು. ಈ ನಿಟ್ಟಿನಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವುದೇ ಮಹಿಳಾ ಆಯೋಗದ ಮುಖ್ಯ ಉದ್ದೇಶವಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಹೇಳಿದರು.

Advertisement

ಕಾರವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯ ಎನ್.ಜಿ.ಓ, ಸಿ.ಡಿ.ಪಿ.ಓ ಇಲಾಖೆಯ ಕಚೇರಿಯಲ್ಲಿ ಸಭೆ, ಮಹಿಳಾ ಠಾಣೆ, ಒನ್ ಸ್ಟಾಫ್ ಸೆಂಟರ್, ಬಾಲಕಿಯರ, ಮಹಿಳೆಯರ ವಿದ್ಯಾರ್ಥಿನಿಲಯಗಳ ಭೇಟಿ ನೀಡಿದ್ದಾಗಿ ಹೇಳಿದರು.

ನಿನ್ನೆ ಕೈಗಾದಲ್ಲಿ ಮಹಿಳಾ ಕಾರ್ಮಿಕ ಸದಸ್ಯರು ಹಾಗೂ ಕಾರವಾರ ಕಾರಾಗೃಹದ ಮಹಿಳೆಯರ ಜೊತೆಗೆ ಸಂವಾದ ನಡೆಸಿದ್ದೇನೆ ಹಾಗೂ ಜಿಲ್ಲೆಯಲ್ಲಿ ಎರಡು ದಿನಗಳಿಂದ ಹಲವಾರು ಸ್ಥಳಗಳಿಗೆ ಭೇಟಿ ನೀಡಿ ಮಹಿಳೆಯರ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದೆ‌. ಮಹಿಳೆಯರ ರಕ್ಷಣೆಯ ಕುರಿತಾಗಿ ಪರಿಶೀಲನೆ ಮಾಡಲಾಗಿದೆ ಎಂದರು. ಜಿಲ್ಲೆಯಲ್ಲಿ ಮಹಿಳೆಯರ ರಕ್ಷಣೆಯ ವಿಚಾರದಲ್ಲಿ ಸಕಾರಾತ್ಮಕ ಅಂಶಗಳು ಕಂಡುಬಂದಿದ್ದು ಸಂತೋಷದ ವಿಚಾರವಾಗಿದೆ ಎಂದರು.

ರಾಜ್ಯದ 29 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 9 ಪ್ರಕರಣಗಳು ಕಂಡುಬಂದಿದ್ದು ಅವುಗಳ ಬಗ್ಗೆ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಲಾಗುತ್ತಿದೆ. ಹೆಣ್ಣು ಮಕ್ಕಳಿಗೂ ತಂದೆಯ ಆಸ್ತಿಯಲ್ಲಿ ಪಾಲಿದೆ ಎಂಬ ಹಕ್ಕಿನನ್ವಯ ಮಹಿಳೆಯರಿಗೆ ಕಾನೂನಾತ್ಮಕವಾಗಿ ಆಸ್ತಿಯಲ್ಲಿ ಪಾಲು ನೀಡಬೇಕು. ಯಾರೂ ಸಹ ದೌರ್ಜನ್ಯದ ಮೂಲಕ ಆ ಹಕ್ಕಿನ ದಮನ ಮಾಡುವಂತಿಲ್ಲ, ಮಾಡಿದ್ದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ, ಕಾನೂನಿನಿಂದ ದಂಡನೆಗೆ ಒಳಗಾಗಬೇಕಾಗುತ್ತದೆ. ಮಹಿಳೆಯರ ಸ್ವಾವಲಂಬಿ ಬದುಕು ನಿರ್ಮಾಣಕ್ಕಾಗಿ ಮತ್ತು ರಕ್ಷಣೆಗಾಗಿ ಸರಕಾರ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಪೋಕ್ಸೋ ಕಾಯ್ದೆಯನ್ನು ತಂದು ಬಾಲಕಿಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ಮಹಿಳೆಯರೂ ಸಹ ತಮ್ಮ ಮೇಲಿನ ದೌರ್ಜನ್ಯವನ್ನು ಸಹಿಸಿಕೊಂಡು ಕೂಡದೇ ತಮಗಾಗುವ ಸಮಸ್ಯೆಯ ಕುರಿತು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಬೇಕು. ದೂರಿನನ್ವಯ ಸೂಕ್ತ ರಕ್ಷಣೆ ಹಾಗೂ ತಪ್ಪಿತಸ್ಥರಿಗೆ ದಂಡನೆ ವಿಧಿಸಲಾಗುವುದು ಎಂದ ಅವರು ಯಾವುದೇ ಸಮಯದಲ್ಲೂ ತಮ್ಮ ದೂರವಾಣಿ ಸಂಖ್ಯೆ9741149589 ಗೆ ಸಂಪರ್ಕಿಸಿ ದೂರು ನೀಡಬಹುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಕಾ ಎಮ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಶ್ಯಾಮಲಾ ಸಿ.ಕೆ ಸೇರಿದಂತೆ ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next