ಸೇಡಂ: ಬಡ, ದೀನ ದಲಿತ ಜನರ ನೋವಿಗೆ ನೆರವಾಗಬೇಕೆಂಬ ಉದ್ದೇಶದಿಂದ ಕ್ಷೇತ್ರಕ್ಕೆ ಬಂದಿದ್ದು, ಗುಡಿಸಲೇ ಆಗಲಿ, ಅರಮನೆಯಾಗಲಿ ಪ್ರಾಮಾಣಿಕ ಸೇವೆ ಸಲ್ಲಿಸುವೆ ಎಂದು ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಹೇಳಿದರು.
ಪಟ್ಟಣದ ಹೋಳಿ ಮೈದಾನ ಬಡಾವಣೆಯಲ್ಲಿ ಮನೆ-ಮನೆಗೆ ಬಾಲರಾಜ ಎನ್ನುವ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸಂಬಂಧ ಶ್ರೀ ಶಿವಶಂಕರ ಮಠಕ್ಕೆ ಭೇಟಿ ನೀಡಿ, ಪೂಜ್ಯರ ಆಶೀರ್ವಾದ ಪಡೆದು ಅವರು ಮಾತನಾಡಿದರು.
ಜನರ ಸಮಸ್ಯೆ ಅರಿಯಲು ಕ್ಷೇತ್ರದ 133 ಗ್ರಾಮಗಳಲ್ಲಿ ಪಾದಯಾತ್ರೆ ಕೈಗೊಂಡಿರುವೆ. ಮೊದಲ ಹಂತವಾಗಿ ಪಟ್ಟಣದ 23 ವಾರ್ಡ್‌ಗಳಲ್ಲಿ ಈಗಾಗಲೇ ಪಾದಯಾತ್ರೆ ಕೈಗೊಂಡಿದ್ದೇನೆ. ಈ ಮೂಲಕ ಜನರಿಗಾಗಿರುವ ಅನ್ಯಾಯ, ಅಸೌಕರ್ಯ ಸರಿಪಡಿಸುವ ಕೆಲಸ ಮಾಡುವೆ. ಯುವ ಜನತೆಗೆ ಬಲ ತುಂಬುವೆ. ಜನರ ನೆರವಿಗೆ ಬರಬೇಕೆಂಬ ಮಹದಾಸೆಯಿಂದ ಸಂಚಾರ ಕೈಗೊಂಡಿದ್ದೇನೆ ಎಂದರು.
ನಂತರ ಹೋಳಿ ಮೈದಾನ ವಾರ್ಡ್ ನಲ್ಲಿ ನೂರಾರು ಯುವಕರೊಂದಿಗೆ ಪಾದಯಾತ್ರೆ ನಡೆಸಿದ ಅವರು, ಮನೆ-ಮನೆಗೂ ತೆರಳಿ ಜನರ ಸಮಸ್ಯೆ ಆಲಿಸಿದರು. ಪ್ರತಿ ಗ್ರಾಮದಲ್ಲಿ ಸ್ಯಾನಿಟೈಸೇಷನ್, ಉಚಿತ ಆಂಬ್ಯುಲೆನ್ಸ್ ಸೇವೆ, ಗಡಿಕೇಶ್ವಾರದಲ್ಲಿ ಶೆಡ್ ಗಳ ನಿರ್ಮಾಣದ ಭರವಸೆಯ ಕರಪತ್ರ ವಿತರಿಸಲಾಯಿತು. ಬಡಾವಣೆಯಲ್ಲಿ ಮಹಿಳೆಯರಿಗೆ ಸೂಕ್ತ ಶೌಚಾಲಯವಿಲ್ಲದಿರುವ ಬಗ್ಗೆ ನಿವಾಸಿಗಳು ಬಾಲರಾಜ ಗಮನಕ್ಕೆ ತಂದರು. ನಂತರ ಶ್ರೀ ಕೊತ್ತಲ ಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಅವರು, ಪೂಜ್ಯ ಸದಾಶಿವ ಸ್ವಾಮೀಜಿ ಆಶೀರ್ವಾದ ಪಡೆದರು.
ಜೆಡಿಎಸ್ ಕಾರ್ಯಾಧ್ಯಕ್ಷ ಶಿವರಾಮರೆಡ್ಡಿ, ಜೆಡಿಎಸ್ ಮಾಜಿ ತಾಲೂಕು ಅಧ್ಯಕ್ಷ ಜಗನ್ನಾಥರೆಡ್ಡಿ ಗೋಟೂರ, ಶಿವಪುತ್ರಪ್ಪ ಮೋಘಾ, ಶಾಂತವೀರಯ್ಯ ಸ್ವಾಮಿ, ಅಣವೀರಯ್ಯಸ್ವಾಮಿ, ರಮೇಶ ಸಾತನೂರ, ಬಬುಲು, ದಿನೇಶ ರಾಠೊಡ, ಪವನ ಕೇರಿ ಇತರರು ಇದ್ದರು.