Advertisement

ದೊಡ್ಡ ಮಟ್ಟದ ಯಶಸ್ಸಿಗೆ ಗುರಿ ಮುಖ್ಯ

01:12 PM Apr 17, 2017 | |

ದಾವಣಗೆರೆ: ಜೀವನದಲ್ಲಿ ದೊಡ್ಡಮಟ್ಟದ ಯಶಸ್ಸು ಸಾಧಿಸಲು ಗುರಿಯೊಂದೇ ಮುಖ್ಯವಾಗಿರುತ್ತದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಹೇಳಿದರು. ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ ವಾರ್ಷಿಕೋತ್ಸವ ಮಲ್ಲಿಕಾ-2017ರ ಸಮಾರೋಪದಲ್ಲಿ ಮಾತನಾಡಿದರು.

Advertisement

ದೊಡ್ಡ ಮನುಷ್ಯರು ಅವರು ಮಾಡಿದ ಕೆಲಸದಿಂದ ಮಾತ್ರ ದೊಡ್ಡವರಾಗಿದ್ದಾರೆಂಬುದು ಎಲ್ಲರಿಗೂ ಗೊತ್ತು. ದೊಡ್ಡಮಟ್ಟದ ಯಶಸ್ಸಿಗೆ ಕಾರಣ ಸ್ಪಷ್ಟ ಗುರಿಯಾಗಿದೆ ಎಂದರು. ಚಹಾ ಮಾರುತ್ತಿದ್ದ ಸಾಮಾನ್ಯ ಮನುಷ್ಯ ದೇಶದ ಪ್ರಧಾನ ಮಂತ್ರಿಯಾದವರು ನರೇಂದ್ರ ಮೋದಿ. ಅವರು ಅಷ್ಟು ಎತ್ತರಕ್ಕೆ ಹೋಗಲು ಕಾರಣ ಆಗಿದ್ದು, ಅವರಲ್ಲಿದ್ದ ಗುರಿ.

ಚಹಾ ಮಾಡೋದರಲ್ಲಿಯೇ ಜೀವನ ಕಟ್ಟಿಕೊಂಡು ಕನಸು ಕಾಣದೇ  ಇದ್ದಿದ್ದರೆ ಅವರು ಪ್ರಧಾನಿ ಆಗುವುದು ಸಾಧ್ಯ ಆಗುತ್ತಿರಲಿಲ್ಲ. ಹಾಗೆಯೇ ವಿದ್ಯಾರ್ಥಿಗಳು ಸಹ ದೊಡ್ಡ ಕನಸು ಕಾಣಿ. ಜೀವನದಲ್ಲಿ ಎತ್ತರಕ್ಕೆ ಬೆಳೆಯಬೇಕು ಎಂದು ತಿಳಿಸಿದರು. ನಮ್ಮ ಕಾಲೇಜಿನಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 10 ಗ್ರಾಂ ತೂಕದ ಚಿನ್ನದ ಪದಕ ನೀಡುತ್ತಿದ್ದೇವೆ.

ಈ ವರ್ಷ ಮೂರು ವಿದ್ಯಾರ್ಥಿಗಳು ಮಾತ್ರ ಶೇ.90ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. ನಮ್ಮ ಕಾಲೇಜಿನಲ್ಲಿ 4,500 ವಿದ್ಯಾರ್ಥಿಗಳು ಅಭ್ಯಾಸಮಾಡುತ್ತಿದ್ದಾರೆ. ಇದರಲ್ಲಿ ಕೇವಲ 3 ಜನ ಮಾತ್ರ ಚಿನ್ನದ ಪದಕಕ್ಕೆ ಅರ್ಹತೆ ಪಡೆದಿರುವುದು ಬೇಸರದ ಸಂಗತಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಶೇ.90ಕ್ಕೂ ಹೆಚ್ಚು ಅಂಕ ಪಡೆದು, ಚಿನ್ನದ ಪದಕ ಪಡೆಯುವಂತಾಗಬೇಕು. 

ಇದೊಂದು ಸ್ಪರ್ಧೆ ಆಗಲಿ. ನಾವು ಗಟ್ಟಿಯೋ, ನೀವು ಗಟ್ಟಿಯೋ ಎಂಬುದು ಸ್ಪರ್ಧೆಯ ಉದ್ದೇಶ ಆಗಿರಲಿ ಎಂದು ಹೇಳಿದರು. ಮಾಜಿ ಸಚಿವ ಮುರುಗೇಶ್‌ ನಿರಾಣಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕನಸುಗಳು ದೊಡ್ಡದಾಗಿರಲಿ. ಓದಿನ ಮೇಲೆ ಗಮನ ಇಟ್ಟುಕೊಂಡೇ ಮುಂದಿನ ಜೀವನ ಕಟ್ಟಿಕೊಳ್ಳುವ ಕನಸು ಕಾಣಿ. ತಕ್ಕ ತರಬೇತಿ ಪಡೆದುಕೊಳ್ಳಿ.

Advertisement

ಸಾಕಷ್ಟು ಅವಕಾಶಗಳು ನಿಮ್ಮ ಮುಂದಿವೆ. ಕೆಲಸದ ಬಗ್ಗೆ ಚಿಂತಿಸಬೇಡಿ ಎಂದರು. ನಾನು ಕೈಗಾರಿಕಾ ಸಚಿವನಾಗಿದ್ದಾಗ 10.8 ಲಕ್ಷ ಕೋಟಿ ರೂ.ನ ಬಂಡವಾಳ ಹೂಡಿಕೆಗೆ ವೇದಿಕೆಮಾಡಿಕೊಟ್ಟೆ. ಇದರಿಂದ 15 ಲಕ್ಷ ಜನರು ಉದ್ಯೋಗ ಪಡೆದುಕೊಳ್ಳುವಂತಾಯಿತು. ಈಗಲೂ ಅಂತಹ ಅವಕಾಶ ಇವೆ.

ನೀವು ತಕ್ಕ ತರಬೇತಿ ಪಡೆದುಕೊಂಡು ಸನ್ನದ್ಧರಾಗಿ. ಮುಧೋಳ ಭಾಗದಲ್ಲಿ ನಮ್ಮ ಅನೇಕ ಕೈಗಾರಿಕೆಗಳಿವೆ. ನೀವು ಅಲ್ಲಿಗೆ ಬಂದು ತಕ್ಕ ತರಬೇತಿ ಪಡೆದುಕೊಳ್ಳಬಹುದು. ಅದು ಆಗಲ್ಲ ಎನ್ನುವುದಾದರೆ ಇಲ್ಲಿಗೇ  ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ, ತರಬೇತಿ ನೀಡಲು ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.

ಕಾಲೇಜು ಪ್ರಾಂಶುಪಾಲ ಡಾ| ಪಿ. ಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಅಧ್ಯಕ್ಷ ಜಿ.ಎಂ. ಲಿಂಗರಾಜು, ಬೆಂಗಳೂರು ನ್ಯೂವೇವ್‌ ಸಿನಿ ನಿರ್ದೇಶಕ ಬಿ.ಎಂ. ಗಿರಿರಾಜ್‌, ಮಾಜಿ ಶಾಸಕ ಬಿ.ಪಿ. ಹರೀಶ್‌, ಕೊಂಡಜ್ಜಿ ಜಯಪ್ರಕಾಶ್‌ ಇತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next