Advertisement

ವೈಯಕ್ತಿಕ ಉಳಿವಿಗಾಗಿ ಮಹಾಘಟಬಂಧನ್‌, ಜನರ ಉದ್ಧಾರಕ್ಕಲ್ಲ!

10:59 AM Aug 13, 2018 | Team Udayavani |

ಹೊಸದಿಲ್ಲಿ: “”ಮಹಾಘಟಬಂಧನ್‌ ಎಂದರೆ ವೈಯಕ್ತಿಕ ಉಳಿವಿಗಾಗಿ ಮಾಡಿರುವಂಥದ್ದು, ಸೈದ್ಧಾಂತಿಕವಾಗಲ್ಲ. ಮಹಾಘಟ ಬಂಧನ್‌ ವೈಯಕ್ತಿಕ ಮಹತ್ವಾಕಾಂಕ್ಷೆಗಾಗಿ ಮಾಡಿದ್ದೇ ಹೊರತು ಜನರ ಏಳ್ಗೆಗಾಗಿ ಅಲ್ಲ.

Advertisement

ಮಹಾಘಟಬಂಧನ್‌ ಸಂಪೂರ್ಣವಾಗಿ ಅಧಿಕಾರ ಕೇಂದ್ರಿತ ರಾಜಕಾರಣಕ್ಕೆ ಸಂಬಂಧಿಸಿದ್ದು, ಜನರ ತೀರ್ಪಲ್ಲ. ಮಹಾಘಟಬಂಧನ್‌ ವಂಶಪಾರಂಪರ್ಯಕ್ಕೆ ಸಂಬಂಧಿಸಿದ್ದು, ಜನರ ಅಭಿವೃದ್ಧಿಗೆ ಅಲ್ಲ. ಮಹಾಘಟಬಂಧನ್‌ ಸಿದ್ಧಾಂತಗಳ ಜತೆಗೂಡಿ ರಚನೆಯಾದ ಒಕ್ಕೂಟವಲ್ಲ, ಬದಲಾಗಿ ಅವಕಾಶಗಳ ಕಾಯುವಿಕೆಗಾಗಿ ಮಾಡಿಕೊಂಡದ್ದು…”

ಇದು ಪ್ರತಿಪಕ್ಷಗಳ “ಮಹಾಘಟಬಂಧನ್‌’ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ವ್ಯಾಖ್ಯಾನ. ಆಂಗ್ಲ ಸುದ್ದಿಸಂಸ್ಥೆ ಎಎನ್‌ಐಗೆ ಸಂದರ್ಶನ ನೀಡಿರುವ ಅವರು, 2019ರ ಲೋಕಸಭೆ ಚುನಾವಣೆಯೂ ಸೇರಿದಂತೆ ದೇಶದಲ್ಲಿ ಸದ್ಯ ಚರ್ಚೆಯಲ್ಲಿರುವ ನಾನಾ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. 

2019ರಲ್ಲಿ ಈ ಮಹಾಘಟಬಂಧನ್‌ನಿಂದ ಬಿಜೆಪಿಗೆ ಹಾನಿಯಾ ಗುವುದಿಲ್ಲ ಎಂದು ಹೇಳಿದ ಅವರು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚೇ ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ರಾಜ್ಯದಿಂದ ರಾಜ್ಯಕ್ಕೆ, ಚುನಾವಣೆಯಿಂದ ಚುನಾವಣೆ ಗಳಲ್ಲಿ ಬಿಜೆಪಿ ಗೆದ್ದು ಬರುತ್ತಲೇ ಇದೆ. ಇದಕ್ಕೆ ಜನ ಬಿಜೆಪಿ ಮೇಲಿ ಟ್ಟಿರುವ ವಿಶ್ವಾಸವೇ ಕಾರಣ. ಸದ್ಯ ವಿರೋಧ ಪಕ್ಷಗಳಲ್ಲಿರುವವರು ನಮ್ಮ ಸರಕಾರದ ಖ್ಯಾತಿಯಿಂದ ತತ್ತರಿಸಿದ್ದು, ಜಾತಿ, ಧರ್ಮ ಸಮುದಾಯಗಳನ್ನು ಮುಂದಿರಿಸಿಕೊಂಡು ಚುನಾವಣೆ ಎದುರಿಸಲು ಹೊರಟಿದ್ದಾರೆ ಎಂದು ಮೋದಿ ಹೇಳಿದ್ದಾರೆ. 

ಮಮತಾ ವಿರುದ್ಧ ಕಿಡಿ
ಎನ್‌ಆರ್‌ಸಿ ವಿಚಾರದಲ್ಲಿ ರಕ್ತಪಾತ, ಆಂತರಿಕ ಕಲಹಗಳಾಗು ತ್ತವೆ ಎಂದಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿರುವ ಅವರು, 2005ರಲ್ಲಿ ಅಕ್ರಮ ವಲಸಿ ಗರನ್ನು ಹೊರಗಟ್ಟಲು ಮಮತಾ ಅವರೇ ಆಗ್ರಹಿಸಿರಲಿಲ್ಲವೇ ಎಂದು ಪ್ರಶ್ನಿಸಿದರು. ನಾವು ಆಗಿನ ಮಮತಾ ಅಥವಾ ಈಗಿನ ಮಮತಾರಲ್ಲಿ ಯಾರನ್ನು ನಂಬಬೇಕು ಎಂದರು. ವ್ಯವಸ್ಥೆ ಯೊಂದರ ಮೇಲೆ ನಂಬಿಕೆ ಕಳೆದುಕೊಂಡಾಗ ಮಾತ್ರ ರಕ್ತಪಾತ ಮತ್ತು ಆಂತರಿಕ ಕಲಹದಂಥ ಮಾತುಗಳು ಬರುತ್ತವೆ ಎಂದರು. 

Advertisement

ಜಿಎಸ್‌ಟಿ ವಿಚಾರದಲ್ಲಿ ಯೂಟರ್ನ್ ಇಲ್ಲ
ಗುಜರಾತ್‌ ಸಿಎಂ ಆಗಿದ್ದಾಗ ಜಿಎಸ್‌ಟಿ ವಿರೋಧಿಸಲು ಯುಪಿಎ ಸರಕಾರದ ನಡವಳಿಕೆಗಳೇ ಕಾರಣವಾಗಿದ್ದವು. “ಆಗಿನ ಎಲ್ಲವನ್ನೂ ತಿಳಿದುಕೊಂಡಿದ್ದ ಅರ್ಥ ಸಚಿವರು’ ಜಿಎಸ್‌ಟಿ ಕುರಿತ ರಾಜ್ಯಗಳ ಸಂದೇಹ ನಿವಾರಣೆ ಮಾಡಲಿಲ್ಲ. ಆದರೆ ಎನ್‌ಡಿಎ ಸರಕಾರ ಬಂದ ಮೇಲೆ ಪ್ರತಿಯೊಂದು ರಾಜ್ಯದ ಸಮಸ್ಯೆ ಆಲಿಸಿ ಅವುಗಳಿಗೆ ಪರಿಹಾರೋಪಾಯ ನೀಡಲಾಯಿತು ಎಂದು ಹೇಳಿದ್ದಾರೆ. 

ಮೀಸಲಾತಿ ತೆಗೆಯಲ್ಲ
ಡಾ.ಅಂಬೇಡ್ಕರ್‌ ರೂಪಿಸಿರುವ ಮೀಸಲಾತಿ ವ್ಯವಸ್ಥೆ ತೆಗೆಯುವ ಮಾತೇ ಇಲ್ಲ. ಮೀಸಲಾತಿಯ ಆಶಯಗಳು ಇನ್ನೂ ಈಡೇರಿಲ್ಲ. ಹಾಗೆಯೇ ಬಿಜೆಪಿಯೂ ಮೀಸಲಾತಿ ವಿರೋಧಿಯಲ್ಲ. ಉಳಿದ ಪಕ್ಷಗಳಿಗಿಂತ ನಮ್ಮ ಪಕ್ಷದಲ್ಲೇ ಹೆಚ್ಚು ಎಸ್ಸಿ-ಎಸ್ಟಿ, ಒಬಿಸಿ ಸಂಸದರಿದ್ದಾರೆ. ಇದಷ್ಟೇ ಅಲ್ಲ, ಮಂಡಲ್‌ ಕಮಿಷನ್‌ಗೆ ರಾಜೀವ್‌ ಗಾಂಧಿಯವರು ವಿರೋಧಿಸಿದ್ದು ನೆನಪಿಲ್ಲವೇ? ಅವರ ಅಂದಿನ ವರ್ತನೆ ಇಂದೂ ಮುಂದುವರಿದಿದೆ ಎಂದು ತಿರುಗೇಟು ನೀಡಿದರು. 

ಥಳಿಸಿ ಕೊಲ್ಲುವ ಪರಿಪಾಠ ಸರಿಯಲ್ಲ
ಪ್ರಧಾನಿಯಾಗಿ ಅಧಿಕಾರಕ್ಕೇರಿದಾಗಲೇ ದೇಶದಲ್ಲಿ ಯಾರ ಮೇಲಿನ ಹಲ್ಲೆ ಅಥವಾ ಹಿಂಸಾಚಾರಕ್ಕೂ ಆಸ್ಪದ ನೀಡಲ್ಲ ಎಂದು ಹೇಳಿದ್ದೇನೆ. ಈಗ ಥಳಿಸಿ ಹಲ್ಲೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳುವುದು ತಪ್ಪು. ಇಂಥ ಘಟನೆಗಳನ್ನು ರಾಜಕೀಯಗೊಳಿಸುವುದೇ ತಪ್ಪು. ಈ ವಿಚಾರದಲ್ಲಿ ಆಡಳಿತ, ಪ್ರತಿಪಕ್ಷಗಳೆನ್ನದೇ ಒಗ್ಗಟ್ಟಾಗಿ ಹೋರಾಟ ನಡೆಸಬೇಕು. ಹಾಗೆಯೇ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ನಮ್ಮ ಸರಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದೂ ಹೇಳಿದರು. 

ರಾಹುಲ್‌ ಅಪ್ಪುಗೆ ಬಗ್ಗೆ ಏನೂ ಹೇಳಲ್ಲ
ಅವಿಶ್ವಾಸ ನಿರ್ಣಯದ ವೇಳೆ ರಾಹುಲ್‌ ಗಾಂಧಿ ಅವರ ವರ್ತನೆ ಬಗ್ಗೆ ನಾನೇನೂ ಹೇಳಲ್ಲ. ಬದಲಾಗಿ ಈ ಬಗ್ಗೆ ಜನರೇ ಇದೊಂದು ಪ್ರೌಢ ವರ್ತನೆಯೋ ಅಥವಾ ಬಾಲಿಶ ವರ್ತನೆಯೋ ಎಂಬ ಬಗ್ಗೆ ನಿರ್ಧರಿಸುತ್ತಾರೆ. ಅವರು ಸದನದಲ್ಲೇ ಕಣ್ಣು ಹೊಡೆದದ್ದನ್ನು ನೋಡಿದರೆ ನಿಮಗೆ ಅರ್ಥವಾಗಬೇಕಲ್ಲವೇ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next