Advertisement

ಮಹರ್ಷಿ ವಾಲ್ಮೀಕಿ ಭವನ ಕಾಮಗಾರಿ ನನೆಗುದಿಗೆ

02:30 PM Apr 04, 2022 | Team Udayavani |

ಬೀದರ: ಜಿಲ್ಲಾ ಕೇಂದ್ರ ಬೀದರನಲ್ಲಿ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ನಾಲ್ಕು ವರ್ಷ ಕಳೆದರೂ ಈವರೆಗೆ ಒಂದು ಕಲ್ಲು ಸಹ ಹಾಕಿಲ್ಲ. ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ-ಅಧಿಕಾರಿಗಳ ನಿರ್ಲಕ್ಷ್ಯದಿಂದ ಭವನ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಇದರಿಂದ ಟೋಕರಿ ಕೋಲಿ ಸಮಾಜದ ಬಹುದಿನಗಳ ಕನಸು ನನಸಾಗದೇ ಉಳಿದಿದೆ.

Advertisement

ಕೋಲಿ ಸಮಾಜದ ಆರಾಧ್ಯ ಗುರು ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಮುದಾಯ ಭವನ ನಿರ್ಮಿಸಬೇಕೆಂಬುದು ಸಮಾಜದ ಬೇಡಿಕೆಯಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಹಿಂದಿನ ಯಡಿಯೂರಪ್ಪ ನೇತೃತ್ವದ ಸರ್ಕಾರ 2010-11ನೇ ಸಾಲಿನಲ್ಲಿ ಪ್ರತಿ ಜಿಲ್ಲೆಗೊಂದು ವಾಲ್ಮೀಕಿ ಭವನ ನಿರ್ಮಿಸಲು ತಲಾ 1 ಕೋಟಿ ರೂ. ಮಂಜೂರು ಮಾಡಿತ್ತಲ್ಲದೇ ಮೊದಲ ಕಂತಿನ ರೂಪದಲ್ಲಿ 25 ಲಕ್ಷ ರೂ. ಬಿಡುಗಡೆ ಮಾಡಿತ್ತು. ಬಹುತೇಕ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಭವನಗಳು ತಲೆ ಎತ್ತಿವೆ. ಆದರೆ ಧರಿನಾಡು ಬೀದರನಲ್ಲಿ ಮಾತ್ರ ನನೆಗುದಿಗೆ ಬಿದ್ದಿದೆ.

ಸರ್ಕಾರ ಅನುದಾನ ಬಿಡುಗಡೆ ಮಾಡಿ ದಶಕ ಕಳೆದಿದೆ. ಬೀದರನಲ್ಲಿ ಭವನಕ್ಕೆ ಸೂಕ್ತ ನಿವೇಶನಕ್ಕೆ ಆರಂಭದಲ್ಲಿ ವಿಳಂಬವಾಗಿದ್ದರೂ 2018ರಲ್ಲಿ ಗುರುದ್ವಾರ ಪರಿಸರದಲ್ಲಿ (ಬಂಜಾರಾ ಭವನ ಹಿಂದುಗಡೆ) ವಾಲ್ಮೀಕಿ ಸಮುದಾಯ ಭವನಕ್ಕಾಗಿ ಜಿಲ್ಲಾಡಳಿತ 20 ಗುಂಟೆ ಭೂಮಿ ಮಂಜೂರು ಮಾಡಲಾಗಿದೆ. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಂಡೆಪ್ಪ ಕಾಶೆಂಪುರ್‌ ಅವರು ಕಾಮಗಾರಿಗೆ ಶಂಕುಸ್ಥಾಪನೆ ಸಹ ನೆರವೇರಿಸಿದ್ದರು. ಇದಾಗಿ ಈಗ ನಾಲ್ಕು ವರ್ಷ ಕಳೆದರೂ ಕಟ್ಟಡವಲ್ಲ ಒಂದು ಕಲ್ಲು ಸಹ ಹಾಕಿಲ್ಲ. ಸಮಾಜದವರು ನಿಗದಿತ ಜಾಗದಲ್ಲಿ ವಾಲ್ಮೀಕಿ ಭಾವಚಿತ್ರವಿರುವ ಬೋರ್ಡ್‌ ಹಾಕಿದ್ದಾರೆ.

ಕಾಮಗಾರಿ ಆರಂಭಕ್ಕೆ ಗಡುವು

ಭವನಕ್ಕಾಗಿ ಅನುದಾನ ಮತ್ತು ಜಾಗಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದ ಟೋಕರಿ ಕೋಳಿ ಸಮಾಜದ ಈಗ ನನೆಗುದಿಗೆ ಬಿದ್ದಿರುವ ಕೆಲಸ ಆರಂಭವಿಸುವಂತೆ ಹೋರಾಟ ಮಾಡುವ ಸ್ಥಿತಿ ಬಂದಿದೆ. ಬೀದರಗೆ ಇತ್ತೀಚೆಗೆ ಆಗಮಿಸಿದ್ದ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರಿಗೆ ಸಮಾಜದ ಮುಖಂಡರು ಮನವಿ ಸಲ್ಲಿಸಿ ಒತ್ತಡ ಹಾಕಿದ್ದರು. ಆದರೂ ಪ್ರಯೋಜನವಾಗಿಲ್ಲ. ಕಳೆದೊಂದು ದಶಕದಿಂದ ಜನಪ್ರತಿನಿಧಿಗಳ ಭರವಸೆಗಳಿಂದ ಬೇಸತ್ತಿರುವ ಸಮಾಜದವರು ತಿಂಗಳೊಳಗೆ ಕಾಮಗಾರಿ ಆರಂಭಿಸದಿದ್ದರೆ ಅನಿರ್ದಿಷ್ಟಾವಧಿ ಹೋರಾಟ ರೂಪಿಸಲು ನಿರ್ಣಯಿಸಿದ್ದಾರೆ.

Advertisement

ದಶಕದ ಹೋರಾಟ ಫಲವಾಗಿ ಬೀದರನಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಸೂಕ್ತ ಅನುದಾನವೂ ಲಭ್ಯವಿದೆ. ಆದರೆ ಇದಾಗಿ ನಾಲ್ಕು ವರ್ಷ ಕಳೆದರೂ ಕಾಮಗಾರಿ ಆರಂಭವಿಸಿಲ್ಲ. ಈಗ ಜಾಗ ವಿವಾದದಲ್ಲಿದೆ ಎಂದು ಜಿಲ್ಲಾಡಳಿತ ಹಾರಿಕೆ ಉತ್ತರ ನೀಡುತ್ತಿದೆ. ಆ ಮೂಲಕ ಹಿಂದುಳಿದ ಸಮಾಜದವರನ್ನು ಕಡೆಗಣಿಸಲಾಗುತ್ತಿದೆ. ತಿಂಗಳೊಳಗೆ ಕೆಲಸ ಆರಂಭಿಸದಿದ್ದರೆ ಅನಿರ್ದಿಷ್ಟಾವಧಿ ಹೋರಾಟ ಅನಿವಾರ್ಯ ಆಗಲಿದೆ. –ಸುನೀಲ ಭಾವಿಕಟ್ಟಿ, ಯುವ ಮುಖಂಡ, ಟೋಕಲಿ ಕೋಲಿ ಸಮಾಜ, ಬೀದರ

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next