Advertisement

ಮಹಾರಾಜ ಆಗೋದು ಐಶ್ವರ್ಯದಿಂದಲ್ಲ, ಒಳ್ಳೆ ಮನಸ್ಸಿನಿಂದ!

06:00 AM Sep 06, 2018 | Team Udayavani |

     ಮೈಕೇಲ್‌ ಮಧುಸೂದನ ದತ್ತ ಅವರು ಇಡೀ ದೇಶದಲ್ಲಿ ಮಹಾದಾನಿಗಳು ಎಂದು ಪ್ರಸಿದ್ಧರಾಗಿದ್ದರು. ಬಂಗಾಳದಲ್ಲಂತೂ ಅವರು ಮನೆಮಾತು. ಬ್ರಾಹ್ಮಣನೊಬ್ಬ ಅವರ ಬಳಿಗೆ ಸಹಾಯ ಬಯಸಿ ಬಂದ. ಆದರೆ ದತ್ತ ಅವರ ಹರಕಲು ಅಂಗಿ, ಮಾಸಿದ ಮುಖ ನೋಡಿ ಅವರೆ ದತ್ತ ಎಂದು ಅನುಮಾನ ಬಂತು. ಅವನ ಸಂಶಯವನ್ನು ಗ್ರಹಿಸಿದ ದತ್ತ ಅವರು “ನಾನೇ ಮೈಕೇಲ್‌ ಮದುಸೂದನ ದತ್ತ. ನೀವು ನೋಡಿದ ಭಾವಚಿತ್ರ ಅದು ಗತಕಾಲದ್ದು. ಈಗ ನೋಡುತ್ತಿರುವುದು ಇಂದಿನ ದತ್ತ. ಹೇಳಿ, ನನ್ನಿಂದ ಏನಾಗಬೇಕಿತ್ತು?’ ಎಂದು ಕೇಳಿದರು. ಬ್ರಾಹ್ಮಣ ಸಂಕೋಚಪಡುತ್ತ ಹೇಳಿದ “ನಿಮ್ಮ ಹತ್ತಿರ ಬಂದವರಾರೂ ಬರಿಗೈಯಿಂದ ಮರಳಿದ್ದು ಇಲ್ಲ ಎಂದು ಕೇಳಿದ್ದೇನೆ. ಆದರೆ ನೀವೇ ಕಷ್ಟದಲ್ಲಿದ್ದೀರಿ. ನಿಮ್ಮ ಸಹಾಯ ಕೋರುವುದು ಸರಿಯಲ್ಲ. ನಾನು ಹೊರಡುತ್ತೇನೆ’ ಎಂದು ಹೊರಡಲು ಅನುವಾದ.

Advertisement

ಮಧುಸೂದನದತ್ತ ನಗುತ್ತ ತಮ್ಮ ಸಹಜವಾದ ತಿಳಿ ಹಾಸ್ಯದೊಂದಿಗೆ ಹೇಳಿದರು “ಪೂಜ್ಯರೆ, ಮೈಕೇಲ್‌ ದತ್ತ ಹಣ ಸಂಪತ್ತಿನ ದೃಷ್ಟಿಯಿಂದ ಬಡವನಾಗಿದ್ದರೂ ಮನಸ್ಸಿನಿಂದ ಮಹಾರಾಜರನ್ನೂ ಮೀರಿಸಿದವನಾಗಿದ್ದಾನೆ!’. ಅದು ಅವರ ಅಹಂಕಾರದ ಮಾತಾಗಿರಲಿಲ್ಲ. ಉದಾರ ಮನೋಭಾವದ ದ್ಯೋತಕವಾಗಿತ್ತು.

ಬ್ರಾಹ್ಮಣ ಸಂಕೋಚದಿಂದಲೇ ಹೇಳಿದ: “ನಾನೊಬ್ಬ ಬಡ ಪುರೋಹಿತ. ಮಗಳ ಮದುವೆಗೆ ದುಡ್ಡು ಹೊಂದಿಸಲಾಗುತ್ತಿಲ್ಲ’. ಇಷ್ಟು ಕೇಳುತ್ತಲೇ ಬ್ರಾಹ್ಮಣನಿಗೆ ದುಃಖ ತಡೆಯಲಾಗದೇ ಕಣ್ಣೀರು ಉಕ್ಕಿ ಬಂತು. ಪಂಚೆಯ ಸೆರಗಿನಿಂದ ಕಣ್ಣೀರು ಒರೆಸಿಕೊಂಡ. ದತ್ತ ಅವರು ಕೂಡಲೇ ತಮ್ಮ ಹರಕು ಅಂಗಿಯ ಜೇಬಿನಿಂದ ಇದ್ದ ಒಂದೇ ಒಂದು ಐವತ್ತು ರೂಪಾಯಿ ನೋಟು ತೆಗೆದು ಬ್ರಾಹ್ಮಣನ ಕೈಗಿತ್ತರು.  ಆಗಿನ ಕಾಲದಲ್ಲಿ ಐವತ್ತು ಎಂದರೆ ಸಾವಿರಕ್ಕೂ ಹೆಚ್ಚಿನ ಬೆಲೆ ಇತ್ತು. ಅವನಿಗೆ ತಾನು ಈ ಮನುಷ್ಯನನ್ನು ಸಂದೇಹ ಪಟ್ಟಿದ್ದಕ್ಕೆ ನಾಚಿಕೆಯಾಯಿತು. “ಇಂದು ನನಗೆ ನಿಮ್ಮ ಮಹಾನ್‌ ವ್ಯಕ್ತಿತ್ವದ ಪರಿಚಯವಾಯಿತು. ದಾನಶೂರ ಕರ್ಣ, ಮಹಾದಾನಿ ಶಿಬಿ ಚಕ್ರವರ್ತಿ, ಸತ್ಯ ಹರಿಶ್ಚಂದ್ರ ಮುಂತಾದ ಮಹನೀಯರನ್ನು ನಿಮ್ಮಲ್ಲಿ ಕಂಡೆ’ ಎಂದು ಆತ ನಮಸ್ಕರಿಸಿದ.

 ವನರಾಗ ಶರ್ಮ

Advertisement

Udayavani is now on Telegram. Click here to join our channel and stay updated with the latest news.

Next