Advertisement

ಪತ್ರಿಕೆ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕು: ಪಿ.ಬಿ. ಹರೀಶ್‌ ರೈ

03:45 AM Jul 03, 2017 | |

ಕಾಸರಗೋಡು: ಹೊಸತನವನ್ನು ರೂಢಿಸಿಕೊಳ್ಳುತ್ತಾ ವಸ್ತುನಿಷ್ಠ ವರದಿಯನ್ನು ನೀಡುವ ಮೂಲಕ ಪತ್ರಿಕೆ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕು ಎಂದು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಪಿ.ಬಿ.ಹರೀಶ್‌ ರೈ ಅವರು ಹೇಳಿದರು.

Advertisement

ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಆಶ್ರಯದಲ್ಲಿ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ ಕನ್ನಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಪತ್ರಕರ್ತರು ಪತ್ರಿಕಾರಂಗಕ್ಕೆ ಶೋಭೆ ತರುವ ಜೊತೆಗೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು.ಗಡಿನಾಡಿನಲ್ಲಿ ಕನ್ನಡ ಉಳಿಸಿ ಬೆಳೆಸುವಲ್ಲಿ ಪತ್ರಿಕೆಗಳ ಜವಾಬ್ದಾರಿ ಮಹತ್ವದ್ದು. ಕನ್ನಡ ಪತ್ರಿಕೆಗಳ ಓದುವ ಹವ್ಯಾಸವನ್ನು ಬೆಳೆಸಬೇಕೆಂದು ಹೇಳಿದ ಅವರು ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ  ಹಿಂದಿನಿಂದಲೂ ಕನ್ನಡ ಪತ್ರಕರ್ತರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಈ ಪರಂಪರೆ ಇಂದೂ ಮುಂದುವರಿಯುತ್ತಿರುವುದು ಸಂತೋಷದ ವಿಚಾರ. ಪತ್ರಿಕಾ ರಂಗದಲ್ಲಿ ಸಾಧನೆ ಮಾಡಬೇಕಾದರೆ ಸಾಕಷ್ಟು ದುಡಿಯಬೇಕಾಗುತ್ತದೆ. ಇಂದು ಕ್ಷಣ ಮಾತ್ರದಲ್ಲಿ ಘಟನೆಗಳು ವಿಶ್ವಾದ್ಯಂತ ವ್ಯಾಪಿಸುತ್ತವೆೆ. ಈ ಕಾರಣದಿಂದ ಪತ್ರಕರ್ತರು ಹೊಸತನವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.

ಓದುಗರ ಸಂಖ್ಯೆ ಕಡಿಮೆಯಾಗಿಲ್ಲ  
ಕಾಸರಗೋಡಿನಲ್ಲಿ ಮಾರುಕಟ್ಟೆಯಲ್ಲಿ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಕಾರ್ಯ ಕ್ರಮವನ್ನು ಉದ್ಘಾಟಿಸಿದ ಕಾಸರಗೋಡು ಜಿಲ್ಲಾ ಪಂಚಾಯತ್‌ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್‌ ವರ್ಕಾಡಿ ಅವರು ಮಾತನಾಡಿ ಜಾಗತೀಕರಣದಿಂದ ಆಧುನಿಕ ವ್ಯವಸ್ಥೆಗಳು, ತಾಂತ್ರಿಕತೆಗಳು ಆವರಿಸಿದ್ದರೂ ಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗಿಲ್ಲ. ಇದನ್ನು ಉಳಿಸಿಕೊಳ್ಳಬೇಕಾದರೆ ಪತ್ರಿಕೆ ಹೊಸತನ್ನು ಅಳವಡಿಸಿಕೊಳ್ಳಬೇಕು ಎಂದರು. ಕೇರಳ ಸರಕಾರ ಮಲಯಾಳ ಕಡ್ಡಾಯ ಆದೇಶ ಹೊರಡಿಸಿದಾಗ ಜಿಲ್ಲಾ ಪಂಚಾಯತ್‌ ಈ ಆದೇಶದ ವಿರುದ್ಧ ಠರಾವು ಮಂಡಿಸಿ ಸರಕಾರಕ್ಕೆ ರವಾನಿಸಲಾಗಿತ್ತು. ಜಿಲ್ಲಾ ಪಂಚಾಯತ್‌ನಲ್ಲಿ ನಾನು ಕನ್ನಡದಲ್ಲೇ ಮಾತನಾಡುತ್ತಿದ್ದೇನೆ. ಭಾಷೆ ಕಲಿಯುವುದು ನಮ್ಮ ಜನ್ಮಸಿದ್ಧ ಹಕ್ಕು. ಭಾಷಾ ಅಲ್ಪಸಂಖ್ಯಾಕರಿಗೆ ಸಂವಿಧಾನಬದ್ಧ ಹಕ್ಕು ಕಲ್ಪಿಸಿದ್ದು, ಇದನ್ನು ಕಿತ್ತುಕೊಳ್ಳುವ ಪ್ರಯತ್ನ ಸಲ್ಲದು. ಇದರ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಹೋರಾಟ ನಡೆಯುತ್ತಿದ್ದು, ಹೋರಾಟಕ್ಕೆ ಪೂರಕವಾಗಿ ಕನ್ನಡ ಪತ್ರಿಕೆಗಳು ಸ್ಪಂದಿಸಬೇಕೆಂದರು. ಕೇರಳ ಸರಕಾರ ಮಲಯಾಳ ಭಾಷೆಯನ್ನು ಹೇರುವ ಮೂಲಕ ನಮ್ಮ ಮೇಲೆ ಸವಾರಿ ಮಾಡುತ್ತಿದೆ. ಹೀಗಿರುವಾಗ ಇಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಲು ಸಾಕಷ್ಟು ಪ್ರಯತ್ನಗಳಾಗಬೇಕೆಂದರು. ನಾವೆಲ್ಲ ಕನ್ನಡದಲ್ಲೇ ಜೀವಿಸೋಣ, ಬದುಕೋಣ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕೆ.ಭಾಸ್ಕರ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ, ಪ್ರಮಾಣ ಪತ್ರ ನೀಡಿ ಸಮ್ಮಾನಿಸಲಾಯಿತು. ಸಮ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು ಪತ್ರಿಕೆ ಮತ್ತು ರೇಡಿಯೋ ನೀಡುವ ವರದಿ ಮತ್ತು ಕಾರ್ಯಕ್ರಮಗಳನ್ನು ಮೀರಲು ದೃಶ್ಯ ಮಾಧ್ಯಮಗಳಿಗೆ ಈ ವರೆಗೂ ಸಾಧ್ಯವಾಗಿಲ್ಲ. ದೃಶ್ಯ ಮಾಧ್ಯಮದಲ್ಲಿ ಗುಣಮಟ್ಟದ ಕಾರ್ಯಕ್ರಮಗಳ ಲಭಿಸುವುದಿಲ್ಲ. ಕಾಸರಗೋಡಿನಲ್ಲಿ ಕನ್ನಡ ಪತ್ರಿಕೆಗಳ ಜವಾಬ್ದಾರಿ ಇತರೆಡೆಗಿಂತ ಅಧಿಕವಿದೆ. ಕಾಸರಗೋಡಿನಲ್ಲಿ ಕನ್ನಡಿಗರ ಮೇಲೆ ಸರಕಾರದ ದಬ್ಟಾಳಿಕೆ ನಡೆಯುತ್ತಿರುವಾಗ ಇದನ್ನು ಎದುರಿಸಲು ಪತ್ರಿಕೆಗಳೇ ಆಯುಧ ಎಂದು ಅವರು ಅಭಿಪ್ರಾಯಪಟ್ಟರು.

Advertisement

ಹಿರಿಯ ಸಾಹಿತಿ ವೈ.ಸತ್ಯನಾರಾಯಣ ಮಾಸ್ತರ್‌ ಅವರು ಶುಭಹಾರೈಸಿ ಮಾಧ್ಯಮ ಇಂದು ದಾರಿ ತಪ್ಪುತ್ತಿದೆ. ಅನ್ಯಾಯವನ್ನು ಖಂಡಿಸುವ ಧೈರ್ಯವನ್ನು ಮಾಧ್ಯಮಗಳು ತೋರಬೇಕು. ಪತ್ರಿಕಾ ಧರ್ಮವನ್ನು ಉಳಿಸಿ ಪತ್ರಿಕೆ ಜನಪರವಾಗಿರಬೇಕೆಂದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸುಬ್ಬಣ್ಣ  ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದರು.  ನಿರಂತರವಾಗಿ ಕಾಸರಗೋಡಿನಲ್ಲಿ ಸರಕಾರ ದಬ್ಟಾಳಿಕೆ ನಡೆಸುತ್ತಿರುವಂತೆ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ನಡೆಸುತ್ತಿರುವ ಕಾರ್ಯಗಳು ಸ್ತುತ್ಯರ್ಹವಾದುದು. ಕನ್ನಡ ಭಾಷೆ, ಸಂಸ್ಕೃತಿಯ ಮೇಲೆ ದಿನಾ ಆಘಾತ, ಆತಂಕಗಳು ಎದುರಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಪತ್ರಿಕೆಗಳು ತಮ್ಮ ಜವಾಬ್ದಾರಿಯನ್ನು ಚಾಚು ತಪ್ಪದೆ ಪಾಲಿಸಬೇಕು. ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಕೆಲಸ ಪತ್ರಿಕೆಗಳಿಂದಾ ಗಬೇಕು ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಪತ್ರಿಕೆಯನ್ನು ಹಣ ತೆತ್ತುಕೊಂಡು ಓದುವ ಪ್ರತಿಜ್ಞೆಗೈಯಲಾಯಿತು.

ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್‌ ಕೋಟೆಕಣಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಜಗದೀಶ್‌ ಕೂಡ್ಲು ಅವರು ಕಾರ್ಯಕ್ರಮ ನಿರೂಪಿಸಿದರು. ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಕೆ.ಭಾಸ್ಕರ ಅವರ ಸಾಧನೆಯ ಬಗ್ಗೆ ವಿವರಿಸಿದರು. ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಅಮೈ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next