ಕನ್ನಡ ಚಿತ್ರರಂಗಕ್ಕೆ ದಿನ ಕಳೆದಂತೆ ಹೊಸಬರ ಆಗಮನವಾಗುತ್ತಲೇ ಇದೆ. ಅದರಲ್ಲೂ ಗಾಂಧಿನಗರದಲ್ಲಿ ಇದೀಗ ಕರಾವಳಿ ಪ್ರತಿಭೆಗಳದ್ದೇ ಕಾರುಬಾರು. ಇತ್ತೀಚಿನ ದಿನಗಳಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ, ತುಳು ಚಿತ್ರರಂಗದಲ್ಲಿ ಜೋರು ಸದ್ದು ಮಾಡಿದವರೆಲ್ಲರೂ ಈಗ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಅದರಲ್ಲೂ ಮಂಗಳೂರು ಹೊಸ ಪ್ರತಿಭೆಗಳೇ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗುತ್ತಿರುವುದು ಹೊಸ ಬೆಳವಣಿಗೆಯಂತೂ ಹೌದು.
ಇಲ್ಲೀಗ ಹೇಳಹೊರಟಿರುವ ವಿಷಯ. “ಲುಂಗಿ’ ಚಿತ್ರದ್ದು. ಇದು ಬಹುತೇಕ ಮಂಗಳೂರು ಪ್ರತಿಭಾವಂತರೇ ಸೇರಿ ಮಾಡಿರುವ ಚಿತ್ರ. ನಿರ್ಮಾಪಕ, ನಿರ್ದೇಶಕ, ನಾಯಕ, ನಾಯಕಿ, ಸಂಗೀತ ನಿರ್ದೇಶಕ, ಛಾಯಾಗ್ರಾಹಕ ಅಷ್ಟೇ ಯಾಕೆ, “ಲುಂಗಿ’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಬಹುತೇಕರು ತುಳು ಚಿತ್ರರಂಗ, ರಂಗಭೂಮಿ ಪ್ರತಿಭೆಗಳು ಎಂಬುದು ವಿಶೇಷ. ಅವರೆಲ್ಲರಿಗೂ “ಲುಂಗಿ’ ಮೊದಲ ಅನುಭವ. ಈ ಚಿತ್ರಕ್ಕೆ ಮುಖೇಶ್ ಹೆಗ್ಡೆ ನಿರ್ಮಾಪಕರು, ಪ್ರಣವ್ ಹೆಗ್ಡೆ ನಾಯಕ.
ಅರ್ಜುನ್ ಲೂಯಿಸ್ ಮತ್ತು ಅಕ್ಷಿತ್ ಶೆಟ್ಟಿ ನಿರ್ದೇಶಕರು, ಪ್ರಸಾದ್ ಶೆಟ್ಟಿ ಸಂಗೀತ ನಿರ್ದೇಶಕರು, ರಿಜೋ ಪಿ.ಜಾನ್ ಛಾಯಾಗ್ರಾಹಕರು. ಉಳಿದಂತೆ ನಾಯಕಿ ರಾಧಿಕಾರಾವ್, ಪ್ರಕಾಶ್ ತುಮಿನಾಡು, ವಿಜೆ ವಿನೀತ್, ರೂಪ ವರ್ಕಾಡಿ, ದೀಪಕ್ ರೈ, ಕಾರ್ತಿಕ್ ವರದರಾಜು ಎಲ್ಲರೂ ಕುಡ್ಲದಿಂದ ಬಂದು ಕನ್ನಡದ “ಲುಂಗಿ’ ಸಿನಿಮಾ ಮಾಡಿದವರು. ಹೀರೋ ಪ್ರಣವ್ ಹೆಗ್ಡೆಗೆ ಮೊದಲ ಚಿತ್ರ. ನಾಯಕಿ ರಾಧಿಕಾ ರಾವ್ ಈ ಹಿಂದೆ ತುಳು ಸಿನಿಮಾ ಮಾಡಿದವರು.
ಕಿರುತೆರೆಯಲ್ಲೂ ಮಿಂಚಿದವರು. ಅವರಿಗೂ ಕನ್ನಡದ ಮೊದಲ ಚಿತ್ರವಿದು. ವಿಶೇಷವೆಂದರೆ, “ಲುಂಗಿ’ ಕನ್ನಡ ಚಿತ್ರವಾದರೂ, ಇಲ್ಲಿ ಮಂಗಳೂರು ಭಾಷೆ ಹೈಲೈಟ್. ಇಡೀ ಸಿನಿಮಾ ಅದೇ ಭಾಷೆಯಲ್ಲೇ ಮೂಡಿಬಂದಿದ್ದು, ಅಲ್ಲಿನ ಆಚಾರ, ವಿಚಾರ, ಸಂಸ್ಕೃತಿ ಎಲ್ಲವೂ ಇಲ್ಲಿ ಒಳಗೊಂಡಿದೆಯಂತೆ. ಎಲ್ಲಾ ಸರಿ “ಲುಂಗಿ’ ಅಂದರೇನು? “ಪ್ರೀತಿ, ಸಂಸ್ಕೃತಿ, ಸೌಂದರ್ಯ’ ಎಂಬುದು ಚಿತ್ರತಂಡದ ಮಾತು. ಸದ್ಯಕ್ಕೆ ಟ್ರೇಲರ್ ಹೊರಬಂದಿದೆ. ರಕ್ಷಿತ್‌ಶೆಟ್ಟಿ ಟ್ರೇಲರ್ ರಿಲೀಸ್ ಮಾಡಿ ಶುಭಹಾರೈಸಿದ್ದಾರೆ. ಅಕ್ಟೋಬರ್ 11 ರಂದು “ಲುಂಗಿ’ ದರ್ಶನವಾಗಲಿದೆ.