Advertisement
1,500 ಡೀಸೆಲ್ ಆಧಾರಿತ ಬಸ್‌ಗಳನ್ನು ಖರೀದಿಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ, ಇದಕ್ಕಿಂತ ಕಡಿಮೆ ವೆಚ್ಚದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸೇವೆ ಒದಗಿಸಲು ಕಂಪನಿಗಳು ಮುಂದೆ ಬಂದಿವೆ. ಈ ಹಿನ್ನೆಲೆಯಲ್ಲಿ 1,500ರ ಪೈಕಿ 12 ಮೀಟರ್ ಉದ್ದದ 500 ಹವಾನಿಯಂತ್ರಣ ರಹಿತ (ನಾನ್ ಎಸಿ) ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಪಡೆಯಲು ಉದ್ದೇಶಿಸಿದೆ. ಶೀಘ್ರದಲ್ಲೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಟೆಂಡರ್ ಕರೆಯಲಿದೆ.
Related Articles
Advertisement
70 ಬಸ್‌ಗಳ ಸಬ್ಸಿಡಿಗಾಗಿ ಕೇಂದ್ರಕ್ಕೆ ಪತ್ರ: 150 ಎಲೆಕ್ಟ್ರಿಕ್ ಬಸ್‌ಗಳ ಪೈಕಿ 40ಕ್ಕೆ ಕೇಂದ್ರ ಸರ್ಕಾರ ಈ ಹಿಂದೆಯೇ ಅನುಮತಿ ಕೊಟ್ಟಿದೆ. ಈಗ ಮತ್ತೆ 40 ಬಸ್‌ಗಳ ಖರೀದಿಗೆ ಸಬ್ಸಿಡಿ ನೀಡುವ ಭರವಸೆ ನೀಡಿದೆ. ಉಳಿದ 70 ಬಸ್‌ಗಳ ಖರೀದಿಗೂ ಅವಕಾಶ ನೀಡುವಂತೆ ಬಿಎಂಟಿಸಿಯು ಕೇಂದ್ರಕ್ಕೆ ಮನವಿ ಮಾಡಿದೆ.
ಎಲೆಕ್ಟ್ರಿಕ್ ಬಸ್ ಖರೀದಿಗೆ ಕೇಂದ್ರ ಸರ್ಕಾರ ಶೇ. 60ರಷ್ಟು ಸಬ್ಸಿಡಿ ನೀಡಲಿದ್ದು, ನೇರವಾಗಿ ಬಿಎಂಟಿಸಿಗೆ ಸಬ್ಸಿಡಿ ಹಣ ಕೊಡಲಾಗುತ್ತದೆ. ನಿಗಮವು ಟೆಂಡರ್ ಪಡೆದ ಕಂಪನಿಗೆ ಈ ಅನುದಾನವನ್ನು ವರ್ಗಾವಣೆ ಮಾಡಲಿದೆ. ಪ್ರಸ್ತುತ ಗೋಲ್ಡ್‌ಸ್ಟೋನ್ ಕಂಪನಿಯು ಮೊದಲೆರಡು ಹಂತಗಳಲ್ಲಿನ 80 ಬಸ್‌ಗಳನ್ನು ಪೂರೈಸಲು ಭರವಸೆ ನೀಡಿದೆ.
ಅತಿ ಕಡಿಮೆ ದರ!: ಹಲವು ರಾಜ್ಯಗಳು ಈಗ ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ರೂಪದಲ್ಲಿ ಪಡೆದು, ಸಾರಿಗೆ ಸೇವೆಗೆ ಮುಂದಾಗಿವೆ. ಕರ್ನಾಟಕದಲ್ಲಿ ಅತಿ ಕಡಿಮೆ ದರದಲ್ಲಿ ಬಸ್ ಒದಗಿಸಲು ಕಂಪನಿಗಳು ಮುಂದೆ ಬಂದಿವೆ. ಹೈದರಾಬಾದ್‌ನಲ್ಲಿ 12 ಮೀ. ಉದ್ದದ ಎಸಿಗೆ ಪ್ರತಿ ಕಿ.ಮೀ.ಗೆ 49.12 ರೂ.ಗಳಿಗೆ ಬಸ್ ಕಲ್ಪಿಸಲು ಕಂಪನಿಗಳು ಮುಂದೆ ಬಂದಿದ್ದರೆ,
ಮುಂಬೈನಲ್ಲಿ 9 ಮೀಟರ್ ಉದ್ದದ ಎಸಿ ಬಸ್‌ಗೆ 57.93 ರೂ. ಹಾಗೂ 9 ಮೀ. ಉದ್ದದ ನಾನ್ ಎಸಿಗೆ 51.75 ರೂ. ಬೇಡಿಕೆ ಇಟ್ಟಿವೆ. ಆಂಧ್ರಪ್ರದೇಶದಲ್ಲಿ 12 ಮೀ. ಉದ್ದದ ನಾನ್ ಎಸಿ ಬಸ್‌ಗೆ 48 ರೂ. ನಿಗದಿಪಡಿಸಲಾಗಿದೆ. ಆದರೆ, ಬೆಂಗಳೂರಿನಲ್ಲಿ ನಾನ್ ಎಸಿ 9 ಮೀ. ಉದ್ದದ ಬಸ್‌ಗೆ 24.03 ರೂ. ಹಾಗೂ 12 ಮೀ. ಉದ್ದದ ಎಸಿ ಬಸ್‌ಗೆ 37.45 ರೂ.ಗೆ ಸೇವೆ ಒದಗಿಸಲು ಕಂಪನಿಗಳು ನಿರ್ಧರಿಸಿವೆ.
ಕಡಿಮೆ ದರಕ್ಕೆ ಕಾರಣ: ನಿತ್ಯ ತಲಾ ಬಸ್‌ಗೆ ಕನಿಷ್ಠ 200 ಕಿ.ಮೀ.ವರೆಗಿನ ಮೊತ್ತ ಖಾತ್ರಿ ಇರುತ್ತದೆ (ಮುಂಬೈನಲ್ಲಿ 150 ಕಿ.ಮೀ.ಗೆ ಸೀಮಿತ). ಅಂದರೆ ಇದಕ್ಕಿಂತ ಕಡಿಮೆ ಓಡಿದರೂ 200 ಕಿ.ಮೀ. ಲೆಕ್ಕಹಾಕಿ ಹಣ ಪಾವತಿ ಮಾಡಲಾಗುವುದು. ಪ್ರತಿ ವರ್ಷ ಕಿ.ಮೀ.ಗೆ ಶೇ. 2ರಷ್ಟು ನಿಗದಿಪಡಿಸಿದ ಹಣ ಹೆಚ್ಚಳ ಮಾಡಲಾಗುವುದು. ಎಲೆಕ್ಟ್ರಿಕ್ ಬಸ್‌ಗಳಿಂದ ಬರುವ ಆದಾಯ ಪ್ರತ್ಯೇಕವಾಗಿ ಇರಲಿದ್ದು, ಈ ಮೂಲಕ ಹಣ ಸಕಾಲದಲ್ಲಿ ಪಾವತಿ ಭರವಸೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಾಭ ಏನು?: ನೇರವಾಗಿ 12 ರೂ. ಉಳಿತಾಯ ಮಾತ್ರವಲ್ಲ; ಬಸ್ ನಿರ್ವಹಣೆ, ಖರೀದಿಗೆ ಕೋಟ್ಯಂತರ ಹೂಡಿಕೆ ಸಮಸ್ಯೆ ಇರುವುದಿಲ್ಲ. 500 ಬಸ್‌ಗಳ ಖರೀದಿಗೆ ಕೋಟ್ಯಂತರ ರೂ. ಬೇಕಾಗುತ್ತದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ನಿಗಮವು ಸಾಲದ ರೂಪದಲ್ಲಿ ನೂರಾರು ಕೋಟಿ ಹಣ ತಂದು ಹೂಡಿಕೆ ಮಾಡಬೇಕಾಗುತ್ತದೆ. ಅದಕ್ಕೆ ಪ್ರತಿಯಾಗಿ ನಿಯಮಿತವಾಗಿ ಬಡ್ಡಿ ಪಾವತಿಸಬೇಕು. ಬಸ್‌ಗಳ ಪ್ರತಿ ತಿಂಗಳ ನಿರ್ವಹಣೆ ಬೇರೆ ಇರುತ್ತದೆ. ಆದರೆ, ಗುತ್ತಿಗೆ ರೂಪದಲ್ಲಿ ಬಸ್‌ಗಳನ್ನು ರಸ್ತೆಗಿಳಿಸುವುದರಿಂದ ಇದಾವುದರ ಆತಂಕ ಇರುವುದಿಲ್ಲ.
ಅಂಕಿ ಅಂಶ-500 ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗೆ?
-24.03 ರೂ.ಗಳಲ್ಲಿ ಕಿ.ಮೀಗೆ ಬಸ್ ಓಡಿಸಲು ಗೋಲ್ಡ್‌ಸ್ಟೋನ್ ಕಂಪನಿ ಭರವಸೆ
-12 ರೂ. ಪ್ರತಿ ಕಿ.ಮೀ ನಿಗಮಕ್ಕೆ ಉಳಿತಾಯ
-200 ಕಿ.ಮೀ ದಿನಕ್ಕೆ ಪ್ರತಿ ಬಸ್ ಸಂಚಾರ ನಿರೀಕ್ಷೆ
-ಶೇ.60 ಎಲೆಕ್ಟ್ರಿಕ್ ಬಸ್‌ಗಳಿಗೆ ಕೇಂದ್ರದ ಸಬ್ಸಿಡಿ * ವಿಜಯಕುಮಾರ್ ಚಂದರಗಿ