ನಾ ಬರೆಯೋದನ್ನು ಶುರು ಮಾಡಿದ್ದೇ ನಿನಗಾಗಿ, ಇನ್ನೂ ಏನೆಂದು ಗೀಚಲಿ ಎಲ್ಲಾ ಕೊನೆಯಾದ ಮೇಲೆ? ಪ್ರೀತಿ ಖುಷಿಯಿಂದ ಬರೆದ ಪುಟವೇ ಹರಿದು ಹೋಗಿದೆ. ಖಾಲಿ ಹಾಳೆಗಳೆಲ್ಲಾ ನನ್ನ ಕಿಚಾಯಿಸ್ತಾ ಇದೆ; ಇನ್ನೂ ನಿನ್ನಲ್ಲಿ ಬರೆಯುವ ಹಂಬಲ ಇದ್ಯಾ? ಎಂದು…
ನಿನ್ನ ಬಣ್ಣ ಬಣ್ಣದ ಮಾತುಗಳನ್ನು ಎಷ್ಟೆಂದು ನಂಬಲಿ? ನಂಬಿಕೆ ಎಂಬ ದೇವರೇ ಪ್ರೇತವಾಗಿ ಬೆಂಬಿಡದೇ ಕಾಡುತ್ತಿರುವಾಗ ಮನಸೇ ಒಡೆದೋಗಿದೆ. ಬದುಕಲಿ ಹೊಸತನ ಹಂಬಲಿಸಿದ್ದೇ ನಿನಗಾಗಿ. ನಾ ಕಟ್ಟಿದ್ದ ಕನಸಿನ ಕಳಸವೇ ಕುಸಿದು ಬಿದ್ದಿದೆ…
ನಿನ್ನ ಸಹವಾಸದಿಂದ ಭಾವನೆಗಳಿಗಷ್ಟೇ ಅಲ್ಲ, ಬದುಕಿಗೇ ದೊಡ್ಡ ಪೆಟ್ಟುಬಿದ್ದಿದೆ. ಮುಗ್ಧ ಮನಸು ನಿನ್ನ ನೆನದಾಗಲೆಲ್ಲಾ ಬೆಚ್ಚಿ ಬೇಳುವಂತಾಗಿದೆ. ಆದರೆ ನಿನಗೆ ಏನೆಂದರೆ ಏನೂ ಚಿಂತೆಯಿಲ್ಲ. ನನ್ನ ಕನಸಿಗೆ ಕೊಳ್ಳಿಯಿಟ್ಟು ನೀನು ಹಾಯಾಗಿದ್ದೀಯಾ?
ಒಮ್ಮೆ ನಿನಗೆ ನೀನೇ ಪ್ರಶ್ನಿಸಿಕೋ, ನಿಜವಾಗಿಯೂ ಪ್ರೀತಿಯ ಅರ್ಥ ಗೊತ್ತಿದ್ದರೆ ಈ ಪುಟ್ಟ ಹೃದಯಕ್ಕೆ ಇಷ್ಟು ದೊಡ್ಡಪೆಟ್ಟು ಕೊಡ್ತಿದ್ಯಾ? ನನ್ನ ಪ್ರೀತಿ ಎಂದಿಗೂ ಸುಳ್ಳಲ್ಲ, ನಕಲಿಯಲ್ಲ ಅನ್ನೋದು ನಿನಗೂ ಚೆನ್ನಾಗಿ ಗೊತ್ತಿದೆ. ಅಷ್ಟೇ ಯಾಕೆ? ನಿನ್ನ ಬಿಟ್ಟು ಅರೆ ಕ್ಷಣವೂ ಇದ್ದವಳಲ್ಲ ನಾನು. ಈ ಮನುಷ್ಯ ಮೊಬೈಲ…, ಡೇಟಾ ಇಲ್ದೇ ಹೇಗೆ ಇರಲ್ವೋ ಹಾಗೇ ನಾನು ನಿನ್ನ ಬಿಟ್ಟು ಇರುತ್ತಿರಲಿಲ್ಲ.
ಪ್ರೀತಿ ಅಂದ್ರೆ ಸಾಕು: ಅಯ್ಯೋ, ಅದು ನನಗಿಷ್ಟ ಇಲ್ಲ ಅನ್ನುತ್ತಾ ಮಾರುದ್ದ ಓಡ್ತಾ ಇದ್ದೆ ನಾನೂ. ಯಾರಾದ್ರೂ ಪ್ರಪೋಸ್ ಮಾಡಿದಾಗ ಮೂಗು ಮುರಿದು ಹಿಂತಿರುಗದೇ ಹೋಗ್ತಾ ಇದ್ದೆ .. ಅಂಥೋಳ ಬಾಳಲ್ಲಿ ಪ್ರೀತಿ ಅನ್ನೋ ಬೀಜ ಬಿತ್ತಿದೀಯಾ! ಈಗ ಅದು ಹೆಮ್ಮರವಾಗಿ ನಿಂತಿರುವಾಗ ಬಿಟ್ಟು ಹೋಗು ಅನ್ನೋಕೆ ಮನಸು ಹೇಗಾಯ್ತು..
ಮುಖವಾಡದ ಬದುಕನ್ನ ಪರಿಚಯಿಸಿದ್ದಕ್ಕೆ ಥ್ಯಾಂಕ್ಯೂ….
ಇಂತಿ ನೀನೇ ಕರೆದಂತೆ
ಜಾನು…
ಸುನೀತಾ ರಾಥೋಡ್