Advertisement

ಪ್ರೇಮಕಥೆಗಳಿಗೆ ಕೊನೆಯುಂಟೇ: ಬೆಳ್ಳಿತೆರೆ ಇರೋ ತನಕ

09:15 AM Feb 09, 2018 | |

ಯಾವುದೇ ಟ್ರೆಂಡ್‌ನ‌ ಚಿತ್ರಗಳು ಒಂದಿಷ್ಟು ದಿನಗಳಾದ ಮೇಲೆ ಸಾಕು ಎನಿಸಬಹುದು. ಆದರೆ, ಪ್ರೇಮ ಕಥೆಗಳಿಗೆ ಮಾತ್ರ ಕೊನೆ ಎಂಬುದೇ ಇಲ್ಲ. ಎಲ್ಲಾ ದಶಕದಲ್ಲೂ, ಎಲ್ಲಾ ತಲೆಮಾರಿನ ಕಲಾವಿದರೂ ಲವ್‌ಸ್ಟೋರಿಗಳಿಗೆ ಜೀವ ತುಂಬಿದ್ದಾರೆ ಎನ್ನುವುದು ವಿಶೇಷ. ಹಾಗಾಗಿ ಪ್ರೇಮಕಥೆಗಳೆನ್ನುವುದು ಕನ್ನಡ ಚಿತ್ರರಂಗದ ಸಾರ್ವಕಾಲಿಕ ಟ್ರೆಂಡ್‌ ಎಂದರೆ ತಪ್ಪಿಲ್ಲ. ಪ್ರೇಮಕಥೆಗಳು ಯಾಕೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಿರ್ಮಾಣವಾಗುತ್ತವೆ ಮತ್ತು ಜನ ಯಾಕೆ ಪ್ರೇಮ ಕಥೆಗಳನ್ನು ಇಷ್ಟಪಡುತ್ತಾರೆ ಎಂಬ ಕುತೂಹಲ ಸಹಜ. ಇದು ಎಲ್ಲರ ಪರಿಸರದ ಕಥೆಯಾಗಿರುವುದು ಒಂದು ಮುಖ್ಯ ಕಾರಣ. ಇಲ್ಲಿ ಕಲ್ಪನೆಗಳಿರುವುದಿಲ್ಲ, ಹೆಚ್ಚು ಬಿಲ್ಡಪ್‌ಗ್ಳಿರುವುದಿಲ್ಲ ಅಥವಾ ಅತಿಶಯೋಕ್ತಿ ಎಂದೆನಿಸುವುದಿಲ್ಲ. ಪ್ರೇಮಕಥೆಗಳು ಯಾರ ಜೀವನದಲ್ಲಾದರೂ ನಡೆದಿರಬಹುದು ಅಥವಾ ಅಂತಹ ಕಥೆಗಳನ್ನು ನೋಡಿ, ಕೇಳಿರಬಹುದು. ಹಾಗಾಗಿ ಪ್ರೇಕ್ಷಕರಿಗೆ ಲವ್‌ಸ್ಟೋರಿಗಳು ಬೇಗ ಕನೆಕ್ಟ್ ಆಗುತ್ತವೆ. ಕ್ಲೆçಮ್ಯಾಕ್ಸ್‌ ಏನೇ ಇರಲಿ, ಇವೆಲ್ಲವೂ ಇರುವುದರಿಂದ, ಜನ ಸಹ ಅಷ್ಟೇ ಪ್ರೀತಿಯಿಂದ ನೋಡುತ್ತಾರೆ ಮತ್ತು ಅದೇ ಕಾರಣಕ್ಕೆ ಚಿತ್ರರಂಗದವರು ಸಹ ಮೇಲಿಂದ ಮೇಲೆ ಲವ್‌ಸ್ಟೋರಿಗಳಿಗೆ ಮೊರೆಹೋಗುತ್ತಲೇ ಇರುತ್ತಾರೆ. ಕವಿಯ ಮಾತೇ ಇಲ್ಲವೇ, “ಪ್ರೇಮಕಥೆಗಳಿಗೆ ಕೊನೆಯುಂಟೇ, ರಾಧಾ-ಮಾಧವರಿರೋ ತನಕ …’ ಎಂದು. ಅದಕ್ಕೆ ಸರಿಯಾಗಿ ಪ್ರೇಮಕಥೆಗಳಿಗೆ ಚಿತ್ರರಂಗದ ಮಟ್ಟಿಗೆ ಯಾವತ್ತೂ ಸಾವಿಲ್ಲ. ಈ ಬಾರಿಯ ಪ್ರೇಮಿಗಳ ದಿನಾಚರಣೆಯ ಅಂಗವಾಗಿ, ಕನ್ನಡ ಚಿತ್ರರಂಗ ಲವ್‌ ಟ್ರೆಂಡ್‌ ಕುರಿತು ಒಂದಿಷ್ಟು ನಿಮಗಾಗಿ …

Advertisement

ಇದುವರೆಗೂ ಕನ್ನಡದಲ್ಲೇ ಒಂದು ಸಾವಿರ ಪ್ರೇಮ ಚಿತ್ರಗಳು ಬಂದಿರಬಹುದು. ಬೇರೆ ಬೇರೆ ಜಾನರ್‌ನ ಚಿತ್ರಗಳಿಗಾದರೂ ಒಂದಿಷ್ಟು ಆಯಾಮಗಳು ಸಿಗಬಹುದು. ಆದರೆ, ಲವ್‌ಸ್ಟೋರಿ ಇರುವ ಚಿತ್ರಗಳಿಗೆ ಆಯಾಮಗಳೂ ಕಡಿಮೆ. ಏಕೆಂದರೆ, ಯಾವುದೇ ಪ್ರೇಮಕಥೆಯಾದರೂ ಪ್ರಮುಖವಾಗಿ ಇಲ್ಲಿರುವುದೇ ಎರಡೇ ಕ್ಲೆçಮ್ಯಾಕ್ಸ್‌. ಮೊದಲನೆಯದು ಸುಖಾಂತ್ಯ, ಎರಡನೆಯದು ದುಖಾಂತ್ಯ. ನೀವು ಇದುವರೆಗೂ ಬಂದ ಯಾವುದೇ ಪ್ರೇಮ ಚಿತ್ರಗಳನ್ನು ತೆಗೆದುಕೊಳ್ಳಿ. ಆ ಚಿತ್ರಕ್ಕೆ ಈ ಎರಡರಲ್ಲಿ ಒಂದು ಕ್ಲೆçಮ್ಯಾಕ್ಸ್‌ ಇರುತ್ತದೆ. ಸುಖಾಂತ್ಯ ಅಂತ ಬಂದರೆ, ನೆನಪಿಗೆ ಬರುವ ಮೊದಲ ಚಿತ್ರ “ನಾ ನಿನ್ನ ಮರೆಯಲಾರೆ’. ದುಖಾಂತ್ಯ ಅಂತ ಬಂದರೆ ನೆನಪಿಗೆ ಬರುವ ಮೊದಲ ಚಿತ್ರ ಡಾ. ವಿಷ್ಣುವರ್ಧನ್‌ ಅವರ “ನಾಗರಹಾವು’. ಹಾಗಾಗಿ ಪ್ರೇಮಕಥೆಗಳಿಗೆ ಸಾಧ್ಯತೆಗಳು ಬಹಳ ಕಡಿಮೆ. ಚಿತ್ರ ಹೇಗೆ ಶುರುವಾದರೂ, ಮಧ್ಯೆ ಏನೆಲ್ಲಾ ಘಟನೆಗಳಾದರೂ, ಕೊನೆಗೆ ಮುಗಿಯಬೇಕಾಗಿದ್ದು ಈ ಎರಡ‌ರಲ್ಲಿ ಒಂದು ವಿಧದಲ್ಲಿಯೇ.

ಸುಮ್ಮನೆ ಕನ್ನಡದಲ್ಲಿ ನೀವು ಮೆಲಕು ಹಾಕಿ. ಕನ್ನಡದಲ್ಲಿ ಪ್ರೇಮಕಥೆಗಳಿರುವ ಜನಪ್ರಿಯ ಚಿತ್ರಗಳೆಲ್ಲವನ್ನೂ ಒಮ್ಮೆ ಪಟ್ಟಿ ಮಾಡಿ. ಅದಕ್ಕೆಲ್ಲಾ ಇರುವುದು ಎರಡೇ ಕ್ಲೆçಮ್ಯಾಕ್ಸ್‌ಗಳು. “ನಾಗರಹಾವು’ ತೆಗೆದುಕೊಳ್ಳಿ, “ಪ್ರೇಮಲೋಕ’ ತೆಗೆದುಕೊಳ್ಳಿ’, “ನಾ ನಿನ್ನ ಮರೆಯಲಾರೆ’, “ಬಂಧನ’, “ಹೃದಯಗೀತೆ’, “ಪ್ರೇಮಲೋಕ’, “ಒಲವಿನ ಉಡುಗೊರೆ’, “ಪಂಚಮವೇದ’, “ಜನುಮದ ಜೋಡಿ’, “ರಥಸಪ್ತಮಿ’, “ಮುಂಗಾರು ಮಳೆ’ … 

ಹೀಗೆ ಯಾವುದೇ ಪ್ರೇಮ ಚಿತ್ರವನ್ನು ತೆಗೆದುಕೊಳ್ಳಿ. ಆ ಎಲ್ಲಾ ಚಿತ್ರಗಳ ಕೊನೆಯಲ್ಲಿ ಒಂದು ನಾಯಕ-ನಾಯಕಿ ಒಂದಾಗಿ ಹೊಸ ಜೀವನಕ್ಕೆ ನಾಂದಿ ಹಾಡುತ್ತಾರೆ ಅಥವಾ ಒಬ್ಬರನ್ನು ಕಳೆದುಕೊಂಡು ಭಗ್ನಪ್ರೇಮಿಯಾಗುತ್ತಾರೆ. ಇದು ಔಟ್‌ ಆ್ಯಂಡ್‌ ಔಟ್‌ ಇದು ಪ್ರೇಮಕಥೆಗಳ ಪ್ರಮುಖ ಲಕ್ಷಣ. ಒಂದು ಚಿತ್ರ ಪರಿಪೂರ್ಣವಾಗಿ ಪ್ರೇಮಮಯವಾಗಿರದೇ ಇದ್ದರೂ, ಪ್ರೇಮಕಥೆಯೊಂದನ್ನು ನೀವು ಯಾವುದೇ ಹಿನ್ನೆಲೆಯಲ್ಲಿಟ್ಟು ಬೇಕಾದರೂ ಚಿತ್ರ ಮಾಡಬಹುದು. ಪ್ರೀತಿಯನ್ನು ಫ್ಯಾಮಿಲಿ ಕಥೆಯಲ್ಲಿಡಬಹುದು. ಆ್ಯಕ್ಷನ್‌ ಚಿತ್ರದಲ್ಲಿಡಬಹುದು, ಕಾಮಿಡಿಯನ್ನಾಗಿ ಮಾಡಬಹುದು, ಹಾರರ್‌ ಆಗಿ ಪರಿವರ್ತಿಸಬಹುದು. ಹಾಗಾಗಿ ಪ್ರೀತಿ ಒಂಥರಾ ನೀರಿದ್ದಂತೆ, ಅದನ್ನು ಯಾವುದಕ್ಕೆ ಬೇಕಾದರೂ ಬೆರೆಸಬಹುದು. ಹಿನ್ನೆಲೆ ಯಾವುದೇ ಇರಲಿ, ಎಷ್ಟೇ ಗಹನವಾದ ವಿಚಾರವನ್ನು ಹೇಳುತ್ತಿರಲಿ, ಅಲ್ಲಿ ಒಂದು ಪ್ರೇಮಕಥೆಯನ್ನು ಸೆಟ್‌ ಮಾಡಿಬಿಡಬಹುದು. ಅಂಥದ್ದೊಂದು ಶಕ್ತಿ ಪ್ರೇಮಕಥೆಗಳಿಗಿದೆ. ಇಲ್ಲಿ ನಾಯಕ-ನಾಯಕಿ ಇಬ್ಬರೂ ಹರಿಹರೆಯದವರಾಗಬೇಕಿಲ್ಲ. ಯಾವುದೇ ಹಿನ್ನೆಲೆ ಬೇಕಾದರೂ ಇರಲಿ, ವೃತ್ತಿ, ವಯಸ್ಸು, ವ್ಯವಸ್ಥೆ ಇರಲಿ … ಅಲ್ಲೊಂದು ಪ್ರೇಮಕಥೆಯನ್ನು ಕೂರಿಸಬಹುದು. ಹಾಗಾಗಿ ಪ್ರೇಮಕಥೆಗಳಿಗೆ ಯಾವತ್ತೂ ಬೇಡಿಕೆ ಇದ್ದೇ ಇರುತ್ತದೆ. ಪ್ರೇಮಕಥೆಗಳಿಗೆ ಇರುವುದು ಎರಡೇ ಸಾಧ್ಯತೆ
ಯಾದರೂ, ಹಲವು ಆಯಾಮಗಳಿವೆ. ಆ ಆಯಾಮಗಳೇ, ಪ್ರೇಮ ಕಥೆಗಳನ್ನು ಜೀವಂತವಾಗಿಟ್ಟಿರುವುದು ಎಂದರೆ ತಪ್ಪಿಲ್ಲ. ಈ ಆಯಾಮಗಳೇ ಆಗಿಂದಾಗ್ಗೆ ಗಿರಕಿ ಹೊಡೆಯುತ್ತಲೇ ಇರುತ್ತವೆ. 

ಯಾವ್ಯಾವ ತರಹ ಲವ್‌ಸ್ಟೋರಿ ಇದೆ ಗೊತ್ತಾ?

Advertisement

ಹಠಮಾರಿ ಹೆಣ್ಣು ಪ್ರೇಮಕಥೆ
ಇಲ್ಲಿ ನಾಯಕಿ ಭಯಂಕರ ಹಠಮಾರಿ. ತನ್ನ ಸೌಂದರ್ಯ, ಶ್ರೀಮಂತಿಕೆಯ ದರ್ಪ ಇರುವ ಅವಳು ಎಲ್ಲರನ್ನೂ ಕೆಟ್ಟದಾಗಿ ನೋಡುತ್ತಿರುತ್ತಾಳೆ. ಅಂಥವಳನ್ನು ದಾರಿಗೆ ತರುವುದು ಕಿಲಾಡಿಯಾದ ನಾಯಕನ ಕೆಲಸ. ಅವಳಿಗೆ ಅಹಂಕಾರವನ್ನು ಇಳಿಸುವುದರ ಜೊತೆಗೆ ಅವಳಿಗೆ ಜೀವನ ದರ್ಶನ ಮಾಡಿಸುವುದು ಈ ತರಹದ ಕಥೆಗಳ ಲಕ್ಷಣವಾಗಿರುತ್ತದೆ. ಇದಕ್ಕೆ ದೊಡ್ಡ ಉದಾಹರಣೆ, ಡಾ ರಾಜಕುಮಾರ್‌ ಅಭಿನಯದ “ಸಂಪತ್ತಿಗೆ ಸವಾಲ್‌’. ಇದಲ್ಲದೆ “ಬಹದ್ದೂರ್‌ ಗಂಡು’, “ಜನನಾಯಕ’, “ನಂಜುಂಡಿ ಕಲ್ಯಾಣ’, “ಗಡಿಬಿಡಿ ಅಳಿಯ’ ಹೀಗೆ ಹಲವು ಚಿತ್ರಗಳನ್ನು ಉದಾಹರಿಸಬಹುದು.

ತ್ರಿಕೋನ ಪ್ರೇಮಕಥೆ
ಈ ತರಹದ ಚಿತ್ರಗಳಲ್ಲಿ ಮೂರು ಪ್ರಮುಖ ಪಾತ್ರಗಳಿರುತ್ತವೆ. ಒಬ್ಬ ಹುಡುಗ-ಇಬ್ಬರು ಹುಡುಗಿಯರು ಅಥವಾ ಇಬ್ಬರು ಹುಡುಗರು-ಒಬ್ಬ ಹುಡುಗಿ ಈ ತರಹದ ಚಿತ್ರಗಳ ಹೈಲೈಟ್‌. ಇಲ್ಲಿ ಒಬ್ಬರು ಇನ್ನೊಬ್ಬರನ್ನು ಪ್ರೀತಿಸಿದರೆ, ಮತ್ತೂಬ್ಬರು ಆ ಒಬ್ಬರನ್ನು ಪ್ರೀತಿಸುತ್ತಾರೆ. ಕೊನೆಗೆ ಒಬ್ಬರ ತ್ಯಾಗದಿಂದ, ಇನ್ನಿಬ್ಬರು ಚೆನ್ನಾಗಿರುತ್ತಾರೆ. ಈ ಸಾಲಿನ ಚಿತ್ರಗಳಲ್ಲಿ ಪ್ರಮುಖವಾಗಿ ಕಾಣುವುದು “ನಮ್ಮೂರ ಮಂದಾರ ಹೂವೆ’. ಈ ಸಾಲಿನಲ್ಲಿ ಹೆಸರಿಸಬಹುದಾದ ಇನ್ನೊಂದಿಷ್ಟು ಚಿತ್ರಗಳೆಂದರೆ, “ಅಮೆರಿಕಾ ಅಮೆರಿಕಾ’, “ಚಂದ್ರಮುಖೀ ಪ್ರಾಣಸಖೀ’, “ಬಂಧನ’, “ಎಕ್ಸ್‌”
ಕ್ಯೂಸ್‌ ಮೀ’, “ಹುಲಿಯ ಹಾಲಿನ ಮೇವು’, “ಅರಮನೆ’ ಹೀಗೆ ಹಲವು ಚಿತ್ರಗಳನ್ನು ಉದಾಹರಿಸಬಹುದು.

ಪುನರ್ಜನ್ಮದ ಪ್ರೇಮಕಥೆ
ಹುಡುಗ-ಹುಡುಗಿಯ ಪ್ರೀತಿ ಜನ್ಮಜನ್ಮಾಂತರದ್ದು ಎಂದು ಚಿತ್ರರಂಗಕ್ಕೆ ಮೊದಲು ತೋರಿಸಿಕೊಟ್ಟ ಚಿತ್ರವೆಂದರೆ, ಹಿಂದಿಯ “ಮಧುಮತಿ’. ಆ ನಂತರ ಎಲ್ಲಾ ಭಾಷೆಗಳಲ್ಲೂ ಜನ್ಮಜನ್ಮಾಂತರದ ಲವ್‌ಸ್ಟೋರಿಗಳು ಅದೆಷ್ಟು ಬಂದಿವೆಯೋ ಗೊತ್ತಿಲ್ಲ. ಕನ್ನಡದ ವಿಷಯದಲ್ಲಿ ಹೇಳುವುದಾದರೆ, “ಜನ್ಮಜನ್ಮದ ಅನುಬಂಧ’ ಈ ಸಾಲಿನಲ್ಲಿ ನೆನಪಾಗುವ ಮೊದಲ ಚಿತ್ರ. ಅದಾದ ಮೇಲೆ “ಬಂಗಾರದ ಜಿಂಕೆ’, “ಯುಗಪುರುಷ’, “ಅದೇ ರಾಗ ಅದೇ ಹಾಡು’, “ನನ್ನವನು’ ಮುಂತಾದ ಚಿತ್ರಗಳನ್ನು ಹೆಸರಿಸಬಹುದು. “ರಾಜ ನನ್ನ ರಾಜ’ ಪುನರ್ಜನ್ಮದ ಲವ್‌ಸ್ಟೋರಿ ಅಲ್ಲದಿದ್ದರೂ, ಆ ಎಳೆಯನ್ನು ಅದ್ಭುತವಾಗಿ ಬಳಸಿಕೊಂಡ ಒಂದು ಚಿತ್ರವಾಗಿತ್ತು.

ಮೇಲು-ಕೀಳಿನ ಪ್ರೇಮಕಥೆ
ಇಲ್ಲಿ ನಾಯಕ ಅಥವಾ ನಾಯಕಿ ಇಬ್ಬರಲ್ಲೊಬ್ಬರು ಮೇಲ್ಜಾತಿಯ ಅಥವಾ ದೊಡ್ಡ ಅಂತಸ್ತಿನವರಾಗಿದ್ದು, ಕೆಳ ಅಂತಸ್ತಿನವರನ್ನು ಪ್ರೀತಿಸುವುದು ಈ ತರಹದ ಚಿತ್ರಗಳ ಕಥೆ. ಈ ಸಾಲಿನಲ್ಲಿ ಉದಾಹರಿಸಬಹುದಾದ ಪ್ರಮುಖ ಚಿತ್ರವೆಂದರೆ, ಅದು “ರಾಮಾಚಾರಿ’. ಇಲ್ಲಿ ನಾಯಕಿ ಶ್ರೀಮಂತ ಕುಟುಂಬವೊಂದಕ್ಕೆ ಸೇರಿದವಳು. ಅವಳಿಗೆ ಕ್ರಮೇಣ ತನ್ನ ಮನೆಯ ಕೆಲಸದವನ ಜೊತೆಗೇ ಪ್ರೀತಿ ಅಂಕುರಿಸುತ್ತದೆ. ಶಿವರಾಜಕುಮಾರ್‌ ಅಭಿನಯದ “ಜನುಮದ ಜೋಡಿ, “ಚೆಲುವಿನ ಚಿತ್ತಾರ’ ಇದೇ ಮಾದರಿಯದ್ದು. ಇತ್ತೀಚಿನ ಚಿತ್ರ ಎಂದರೆ “ಮನಸು ಮಲ್ಲಿಗೆ’.

ಫ್ಯಾಮಿಲಿ ಪ್ರೇಮಕಥೆ
ಇಲ್ಲಿ ಎರಡು ಕುಟುಂಬಗಳ ನಡುವೆ ಬದ್ಧ ದ್ವೇಷವಿದ್ದು ಅಥವಾ ಒಂದೇ ಕುಟುಂಬದ ಸಹೋದರ-ಸಹೋದರಿಯರಲ್ಲಿ ಬಿರುಕು ಬಿಟ್ಟಿದ್ದು, ಆ ಕುಟುಂಬ ದವರ ಹೊಸ ತಲೆಮಾರಿನವರು ಪ್ರೀತಿಸಿ ಮದುವೆಯಾಗುವ ಮೂಲಕ ಎರಡೂ ಕುಟುಂಬಗಳನ್ನು ಒಂದು ಮಾಡುವುದು ಈ ತರಹದ ಚಿತ್ರಗಳ ಸಾರಾಂಶ. ನೆನಪಿಗೆ ಬರುವ ಮೊದಲ ಚಿತ್ರ ರವಿಚಂದ್ರನ್‌ ಅಭಿನಯದ “ಪ್ರೀತ್ಸೋದ್‌ ತಪ್ಪಾ’. ಇನ್ನು “ಮಾಣಿಕ್ಯ’, “ರನ್ನ’, “ರಾಮ್‌’, “ಬೃಂದಾವನ’… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದಕ್ಕೆ ಹೊಸ ಉದಾಹರಣೆ ಎಂದರೆ ಧ್ರುವ ಸರ್ಜಾ ಅಭಿನಯದ “ಭರ್ಜರಿ’. ಇಲ್ಲೂ ನಾಯಕ ಪ್ರೀತಿಯನ್ನು ಮುಂದಿಟ್ಟುಕೊಂಡು ಎರಡು ಕುಟುಂಬಗಳನ್ನು ಒಂದು ಮಾಡುತ್ತಾನೆ.

ರಿವೆಂಜ್‌ ಪ್ರೇಮಕಥೆ
ಇಲ್ಲಿ ಪ್ರೇಮಿಗಳಲ್ಲಿ, ಒಬ್ಬರು ಕಾರಣಾಂತರಗಳಿಂದ ಸಾಯುತ್ತಾರೆ. ಆ ಸಾವಿನ ಸೇಡನ್ನು ತೀರಿಸಿಕೊಳ್ಳುವುದಕ್ಕೆ ಇನ್ನೊಬ್ಬರು ಮುಂದಾಗುತ್ತಾರೆ. ಉದಾಹರಣೆಗೆ ಶಂಕರ್‌ನಾಗ್‌ ಅವರ “ಸೀತಾ-ರಾಮು’ ಚಿತ್ರ ನೆನಪಿರಬಹುದು. ಇಲ್ಲಿ ನಾಯಕ ಕಾರಣಾಂತರಗಳಿಂದ ಕೊಲೆಯಾಗುತ್ತಾನೆ. ಅವನ ಮೆದುಳನ್ನು, ನಾಯಕಿಗೆ ಅಳವಡಿಸಲಾಗುತ್ತದೆ. ನಾಯಕಿಯೇ ನಾಯಕನಾಗಿ ಸೇಡು ತೀರಿಸಿಕೊಳ್ಳುತ್ತಾಳೆ. ಈ ತರಹದ ಚಿತ್ರಗಳು ಅದೆಷ್ಟು ಬಂದಿವೆಯೋ ಗೊತ್ತಿಲ್ಲ. ಪ್ರಮುಖವಾಗಿ ವಿಷ್ಣುವರ್ಧನ್‌, ಅಂಬರೀಶ್‌, ಶಂಕರ್‌ನಾಗ್‌ ಸೇರಿದಂತೆ ಎಲ್ಲಾ ನಾಯಕರು ಈ ತರಹದ ಸೇಡಿನ ಕಥೆಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಯಾಣದಲ್ಲಿ ಪ್ರೇಮಕಥೆ
ಇಲ್ಲಿ ನಾಯಕ ಯಾರೋ, ನಾಯಕಿ ಇನ್ನಾéರೋ? ಗುರುತು ಪರಿಚಯವಿಲ್ಲದ ಇಬ್ಬರು ಅಚಾನಕ್‌ ಆಗಿ ಅದೊಂದು ದಿನ ಯಾವುದೋ ಪ್ರಯಾಣದಲ್ಲಿ ಭೇಟಿಯಾಗುತ್ತಾರೆ. ಪ್ರಯಾಣ ಮುಗಿಯುವಷ್ಟರಲ್ಲಿ ಅವರಿಬ್ಬರಿಗೆ ಗೊತ್ತಿಲ್ಲದಂತೆ ಲವ್‌ ಆಗಿರುತ್ತದೆ. “ಮುಂಗಾರು ಮಳೆ – 2′ ಚಿತ್ರದ್ದು ಇದೇ ತರಹದ ಕಥೆ. ಅದಕ್ಕೂ ಮುನ್ನ “ಹುಡುಗಾಟ’ವನ್ನು ನೆನಪಿಸಿಕೊಳ್ಳಬಹುದು. ಚಿರಂಜೀವಿ ಸರ್ಜಾ ಅಭಿನಯದ “ಅಜಿತ್‌’, “ಸಿಂಪಲ್ಲಾಗ್‌ ಇನ್ನೊಂದ್‌ ಲವ್‌ ಸ್ಟೋರಿ’, “ಕೋಟಿಗೊಂದ್‌ ಲವ್‌ಸ್ಟೋರಿ’, ಸದ್ಯ ಬಿಡುಗಡೆಯಾಗಲಿರುವ ಶರಣ್‌ ಅಭಿನಯದ “ರ್‍ಯಾಂಬೋ-2′ ಮುಂತಾದ ಚಿತ್ರಗಳನ್ನು ಈ ಸಾಲಿಗೆ ಸೇರಿಸಬಹುದು.

ನೋಡದೇ  ಪ್ರೇಮಕಥೆ
ನಾಯಕ ಮತ್ತು ನಾಯಕಿ ಒಬ್ಬರನ್ನೊಬ್ಬರು ನೋಡದೆ ಪ್ರೀತಿ ಮಾಡುವುದು ಚಿತ್ರರಂಗದ ಜನಪ್ರಿಯ ಟ್ರೆಂಡು. ಈ ಟ್ರೆಂಡ್‌ ತಮಿಳಿನ “ಕಾದಲ್‌ ಕೋಟೈ’ನಿಂದ ಶುರುವಾಯಿತು ಎಂದು ಹೇಳಲಾಗುತ್ತದಾದರೂ, ಅದಕ್ಕೂ ಮುನ್ನವೇ ಕನ್ನಡದಲ್ಲಿ ಎರಡು ಚಿತ್ರಗಳು ಬಂದಿದ್ದವು. “ಬೆಳದಿಂಗಳ ಬಾಲೆ’ದಲ್ಲಿ ನಾಯಕ, ನಾಯಕಿಯನ್ನು ನೋಡದೆ ಪ್ರೀತಿಸುವ ಕಥೆ ಬರುವುದಕ್ಕಿಂತ ಮುಂಚೆಯೇ, “ಗಣೇಶನ ಮದುವೆ’ ಚಿತ್ರದಲ್ಲೂ ಇಂಥದ್ದೇ ಪ್ಲಾಟ್‌ ಇತ್ತು. “ಯಾರೇ ನೀನು ಚೆಲುವೆ’ ಚಿತ್ರದ ನಂತರ ಈ ತರಹ ಹಲವು ಚಿತ್ರಗಳು ಬಂದವು. ಇಲ್ಲಿ ಪತ್ರ, ಫೋನ್‌ನಿಂದ ಪ್ರಾರಂಭವಾದ ನೋಡದೇ ಆಗುವ ಪ್ರೇಮಕಥೆಗಳು ಈಗ ಇಂಟರ್‌ನೆಟ್‌ ಪ್ರೀತಿವರೆಗೂ ಬಂದು ನಿಂತಿದೆ.

ಬದಲಾಯಿಸೋ ಪ್ರೇಮಕಥೆ
ಇಲ್ಲಿ ನಾಯಕ ಅನಾಥ, ರೌಡಿ ಅಥವಾ ಅಂಡರ್‌ವರ್ಲ್ಡ್ಗೆ ಸೇರಿದವನು. ಮೇಲ್ನೋಟಕ್ಕೆ ಒರಟಾಗಿ ಕಂಡರೂ, ಒಳಗೆಲ್ಲೋ ಒಂದಿಷ್ಟು ಒಳ್ಳೆಯ ಗುಣಗಳಿರುವವನು. ಅವನ ಒಳ್ಳೆಯ ಗುಣಗಳನ್ನು ಇಷ್ಟಪಡುವ ನಾಯಕಿ ಅವನನ್ನು ಪ್ರೀತಿಸುತ್ತಾಳೆ. ಇನ್ನೂ ಕೆಲವು ಚಿತ್ರಗಳಲ್ಲಿ ನಾಯಕನನ್ನು ಇಷ್ಟಪಡುವುದರ ಜೊತೆಗೆ, ಬದಲಾಯಿಸುವುದಕ್ಕೆ ಪ್ರಯತ್ನಿಸುತ್ತಾಳೆ. ಅವಳ ಪ್ರೇಮದಲ್ಲಿ ಸಿಕ್ಕ ನಾಯಕ ಕ್ರಮೇಣ ಬದಲಾಗುತ್ತಾನೆ. ಉದಹಾರಣೆಗೆ ಶಂಕರ್‌ ನಾಗ್‌ ಅಭಿನಯದ “ಹೊಸ ಜೀವನ’. ಇದಲ್ಲದೆ “ಡೆಡ್ಲಿ ಸೋಮ’, “ಅಂಬಾರಿ’, “ಓ ನನ್ನ ನಲ್ಲೆ’ ಹೀಗೆ ಪಟ್ಟಿ ಮುಂದುವರೆಯುತ್ತದೆ.

ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next