ಗುರುಮಠಕಲ್: ಸಾರ್ವಜನಿಕರಿಗೆ ಗೊತ್ತಿರದ ಅನೇಕ ಸಂಗತಿಗಳು ಇಲ್ಲಿವೆ. ಪ್ರತಿ ನಗರ ಹಸಿರಾಗಿರಬೇಕು. ಆದರೆ ಸಾರ್ವಜನಿಕರ ಉದ್ಯಾನದಲ್ಲಿ ನೀರಿಲ್ಲದೇ ಒಣಗಿದಂತೆ ಕಾಣುತ್ತದೆ. ಪಟ್ಟಣದ 23ನೇ ವಾರ್ಡ್ ಲಕ್ಷ್ಮೀ ನಗರದ ಬಡಾವಣೆ ಉದ್ಯಾನದಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಸಮರ್ಪಕ ನಿರ್ವಹಣೆ ಇಲ್ಲ, ಹಸಿರು ಹುಲ್ಲಿನ ಹಾಸಿಗೆಯಂತೂ ಇಲ್ಲವೇ ಇಲ್ಲ. ಒಂದು ಸಮಯದಲ್ಲಿ ಆಕರ್ಷಣೀಯವಾಗಿದ್ದ ಉದ್ಯಾನ ಇದೀಗ ಅಂದಕಳೆದುಕೊಂಡು ಕಾಲಗರ್ಭಕ್ಕೆ ಸೇರುವ ಹಂತ ತಲುಪಿದೆ. ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಯೋಚಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಉದ್ಯಾನ ನಿರ್ವಹಣೆಗಾಗಿ ಪುರಸಭೆ ಸಾವಿರಾರು ರೂ. ಖರ್ಚು ಮಾಡುತ್ತಿದೆ. ಆದಾಗ್ಯೂ ಸ್ವಚ್ಛತೆ ಮರೀಚಿಕೆಯಾಗಿದೆ.
ಸ್ವಚ್ಛತೆಗಿಲ್ಲ ಆದ್ಯತೆ: ಮಕ್ಕಳ ಉದ್ಯಾನ ಅನೈರ್ಮಲ್ಯದ ತಾಣವಾಗಿದೆ. ಉದ್ಯಾನದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ತ್ಯಾಜ್ಯ, ಗಿಡಗಳು ಅಡ್ಡಾ ದಿಡ್ಡಿ ಬೆಳೆದು ನಿಂತ ಪರಿಣಾಮ ಫುಟಾತ್ ಪಕ್ಕದಲ್ಲಿ ಸಂಚರಿಸುವ ಸಾರ್ವಜನಿಕರ ಮುಖಕ್ಕೆ ಬಡಿಯುವಂತಾಗಿದೆ. ಉದ್ಯಾನದಲ್ಲಿ ವಿದ್ಯುತ್ ಸಂಪರ್ಕ ಇಲ್ಲ. ಜನರು ಇಲ್ಲಿ ತಿಪ್ಪೆ ಹಾಕಿದ್ದಾರೆ. ನೀರು ಸಂಗ್ರಹಾಗಾರ ಇದ್ದರೂ ನಿರುಪಯುಕ್ತವಾಗಿದೆ. ಇಲ್ಲಿ ಮನೆ ಕಟ್ಟಲು ಉಪಯೋಗಿಸುವ ಸೆಂಟ್ರಿಂಗ್ ವಸ್ತುಗಳು ಇಟ್ಟಿದಾರೆ.
ಇನ್ನೊಂದೆಡೆ ಹಸಿರು ಹುಲ್ಲಿನ ಹಾಸಿಗೆಯಾಗುವ ಬದಲು ಸಂಪೂರ್ಣ ಒಣಗಿದ ಭೂಮಿಯಾಗಿದೆ. ಮಕ್ಕಳ ಆಟೋಟಕ್ಕೆ ಇರುವ ಉಪಕರಣಗಳನ್ನು ಪುರುಷರು, ಮಹಿಳೆಯರು ಉಪಯೋಗಿಸುತ್ತಿರುವುದು ಉದ್ಯಾನನಿರ್ವಹಣೆ ಲೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆವರಣಗೋಡೆ ಅಥವಾ ಸೂಕ್ತ ತಂತಿ ಬೇಲಿ ನಿರ್ಮಿಸಬೇಕು. ಉದ್ಯಾನದಲ್ಲಿ ನೀರಿನ ತೊಟ್ಟಿ, ಮೋಟಾರ್ ಪಂಪ್ ಅಳವಡಿಕೆ, ಹಣ್ಣು, ಹೂವು, ಆಯುರ್ವೇದ ಗಿಡಗಳನ್ನು ನೆಡಬೇಕು. ನಾಮಫಲಕ ಹಾಕಿ ಉದ್ಯಾನದ ಬಗ್ಗೆ ಸಮಗ್ರ ಮಾಹಿತಿ ಪ್ರಕಟಿಸಬೇಕು. ನಡೆದಾಡಲು ಸೂಕ್ತ ದಾರಿ, ಕುಳಿತುಕೊಳ್ಳಲು ಕಾಂಕ್ರಿಟ್ ಆಸನ, ವಿದ್ಯುತ್ ದೀಪಗಳ ಅಳವಡಿಸಬೇಕು. ಅಲ್ಲಲ್ಲಿ ಮಕ್ಕಳಿಗಾಗಿ ಉದ್ಯಾನವನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಬೇಕು. ಉದ್ಯಾನದಲ್ಲಿ ಸಮಯಕ್ಕೆ ಸರಿಯಾಗಿ ನೀರು ಹಾಕಿ ಬೆಳೆಸದ ಹಿನ್ನೆಲೆಯಲ್ಲಿ ಸಸ್ಯಗಳು ಒಣಗಿವೆ. ಹೀಗಾಗಿ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಉದ್ಯಾನದ ಪುನಶ್ಚೇತನಕ್ಕೆ ಕಾಳಜಿ ವಹಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ವಿಶ್ರಾಂತಿಗಾಗಿ ಉದ್ಯಾನ ಅಗತ್ಯವಿದೆ. ಮಕ್ಕಳ ಆಟಕ್ಕಾಗಿ ಮೈದಾನ ಇದ್ದರೆ ಬಡಾವಣೆಯಲ್ಲಿರುವ ಜನರಿಗೆ ಅನುಕೂಲವಾಗುತ್ತದೆ. ಉದ್ಯಾನದಲ್ಲಿ ತಿಪ್ಪೆ ಹಾಕಿದ್ದರಿಂದ ಗಬ್ಬು ವಾಸನೆ ಬರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯಿದೆ
. – ಅಸಮ್ಮೊದ್ದೀನ್, ಸ್ಥಳೀಯರು
-ಚೆನ್ನಕೇಶವುಲು ಗೌಡ