Advertisement

ಎತ್ತಿನ ಹೊಳೆ ಯೋಜನೆಯಿಂದ ನಷ್ಟವೇ ಹೆಚ್ಚು

01:05 AM Jun 05, 2019 | Lakshmi GovindaRaj |

ಬೆಂಗಳೂರು: ಎತ್ತಿನಹೊಳೆ ಯೋಜನೆ ಮುಂದುವರೆಸಿದರೆ ರಾಜ್ಯದ ಹಲವು ಜೀವನದಿಗಳು ನಾಶವಾಗಲಿದೆ ಎಂದು ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರ ಕೆ.ಎನ್‌.ಸೋಮಶೇಖರ್‌ ಆತಂಕ ವ್ಯಕ್ತಪಡಿಸಿದರು.

Advertisement

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಸೋಮವಾರ ಸುಧೀರ್‌ ಶೆಟ್ಟಿ ಅವರ “ನೇತ್ರಾವತಿ ನದಿಯನ್ನು ನುಂಗುತ್ತಿದೆಯೇ ಎತ್ತಿನಹೊಳೆ ಯೋಜನೆ ಕಾಮಗಾರಿ’ ಛಾಯಾಚಿತ್ರ ಪ್ರದರ್ಶನದಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವೆಂದು 2014ರಿಂದ ಪ್ರತಿಭಟನೆ ಮಾಡುತ್ತಿದ್ದೇವೆ.

ಆದರೆ, ಸರ್ಕಾರ ಇದನ್ನು ಲೆಕ್ಕಿಸದೆ ಕಾಮಾಗಾರಿ ಮುಂದುವರಿಸಿದೆ. ಕುಡಿಯುವ ನೀರಿನ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ. ಜೀವ ನದಿಗಳ ಕತ್ತು ಹಿಸುಕುವ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ. ಹೀಗಾಗಿ ನಾವು ಕಾನೂನಾತ್ಮಕವಾಗಿ ಹೋರಾಟ ಮುಂದುವರಿಸಿದ್ದೇವೆ. ಯೋಜನೆ ಸ್ಥಗಿತಗೊಳಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಮಾತನಾಡಿ, ಎತ್ತಿನಹೊಳೆ ಯೋಜನೆಯಿಂದ ಅರಣ್ಯ ನಾಶವಾಗುತ್ತಿದ್ದು, ನದಿಗಳು ಬತ್ತಿಹೋಗುತ್ತಿವೆ. ಸರ್ಕಾರ ಮಾತ್ರ ಈ ಯೋಜನೆಯನ್ನು ಮುಂದುವರಿಸುತ್ತಿದೆ. ಇದು ಕರ್ನಾಟಕದ ದೊಡ್ಡ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೂಮಿಯ ಮೇಲಿನ ವೈಪರೀತ್ಯ, ಹವಾಮಾನ, ಉಷ್ಣಾಂಶ ಮಿತಿಮೀರಿದೆ. ಆದರೂ ಈ ಯೋಜನೆಯನ್ನು ಕೈಬಿಡಲು ಸರ್ಕಾರ ಸಿದ್ಧವಿಲ್ಲ. ಈ ಯೋಜನೆಯು ಪಶ್ಚಿಮ ಘಟ್ಟಗಳ ಮಾತ್ರವಲ್ಲದೆ, ಇಡೀ ಕರ್ನಾಟಕದ ಜೀವ ಜಲವನ್ನು ನಾಶಪಡಿಸುತ್ತದೆ.

Advertisement

ಎತ್ತಿನಹೊಳೆ ಯೋಜನೆಗೆ ಸಾವಿರಾರು ಮರಗಳನ್ನು ಕಡಿದು ಅರಣ್ಯ ನಾಶಮಾಡಿದ್ದಾರೆ.ಇದನ್ನು ಅರಿಯದ ಜನರಿಗೆ ನೇತ್ರಾವತಿ ನೀರು ಎಂಬ ಹಸಿಸುಳ್ಳನ್ನು ಹೇಳಿ ನಂಬಿಸಿಲಾಗಿದೆ. ಜನರಿಗೆ ಇದೆಲ್ಲದರ ಕುರಿತು ಜಾಗೃತಿ ಮೂಡಿಸಿ ಅವರನ್ನೂ ಒಳಗೊಂಡು ಹೋರಾಟ ರೂಪಿಸುವ ಅಗತ್ಯವಿದೆ ಎಂದರು.

ಹೋರಾಟಗಾರ ಎಸ್‌.ಆರ್‌.ಹಿರೇಮಠ ಅವರು ಮಾತನಾಡಿ, ಎತ್ತಿನಹೊಳೆ ಯೋಜನೆಯಿಂದ ರಾಜ್ಯದ ನೀರಿನ ದಾಹ ಹೆಚ್ಚಾಗಲಿದೆ. ಅದನ್ನು ಬಿಟ್ಟರೆ ಈ ಯೋಜನೆಯಿಂದ ಯಾವುದೇ ಪ್ರಯೋಜನವಿಲ್ಲ. ಇದನ್ನು ರಾಜಕೀಯ ವಿಚಾರವಾಗಿ ಮುನ್ನೆಲೆಗೆ ತಂದಿರುವುದರಿಂದ ಹೋರಾಟ ನಡೆಸುವ ತುರ್ತು ಎದುರಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ವಾತಂತ್ರ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಶಾಸಕ ಹರೀಶ್‌ ಪೂಂಜಾ, ಬಯಲುಸೀಮೆ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next