Advertisement

ರೈತರ ಮುಖ ಬಾಡಿಸಿದ ಹೂವು!

04:13 PM Dec 07, 2019 | Suhan S |

ಗದಗ: ಜಿಲ್ಲೆಯಲ್ಲಿ ಬೆಳೆಯುವ ಹೂವಿಗೆ ರಾಜ್ಯ,ಹೊರ ರಾಜ್ಯದಲ್ಲಿ ಬಹು ಬೇಡಿಕೆಯಿದೆ. ಇಲ್ಲಿನ ವಿವಿಧ ತಳಿಯ ಪುಷ್ಪಗಳು ಮಾರುಕಟ್ಟೆಯಲ್ಲೇ ತನ್ನದೇ ಸ್ಥಾನ ಪಡೆದಿವೆ. ಆದರೆ ಈ ಬಾರಿ ವರುಣ ಆರ್ಭಟಕ್ಕೆ ಸಿಲುಕಿದ ಜಿಲ್ಲೆಯ ಪುಷ್ಪ ಕೃಷಿಕರು ಲಾಭಕ್ಕಿಂತ ನಷ್ಟ ಅನುಭವಿಸಿದ್ದೆ ಹೆಚ್ಚು.

Advertisement

ಗೋವಾ, ಮಹಾರಾಷ್ಟ್ರ, ತೆಲಂಗಾಣ, ಕೊಲ್ಲಾಪುರ ಅಲ್ಲದೇ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ನಗರಗಳಿಗೆ ಜಿಲ್ಲೆಯ ರೈತರು ಬೆಳೆದ ಹೂವು ಮಾರಾಟಕ್ಕೆ ಹೋಗುತ್ತದೆ. ಮಪುಷ್ಪೊದ್ಯಮದಲ್ಲಿ ವರ್ಷದಿಂದ ವರ್ಷಕ್ಕೆ ಗದಗ ಜಿಲ್ಲೆ ತನ್ನ ವ್ಯಾಪ್ತಿ ವಿಸ್ತರಿಸುತ್ತಾ ಸಾಗಿದೆ.

ಇಲ್ಲಿನ ಹೂವಿಗೆ ಹೆಚ್ಚು ಬೇಡಿಕೆ ಬಂದಿರುವುದೇ ಇದಕ್ಕೆ ಬಹುಮುಖ್ಯ ಕಾರಣ. ಜಿಲ್ಲೆಯಲ್ಲಿ 564 ಹೆಕ್ಟೇರ್‌ ಪ್ರದೇಶದಲ್ಲಿ ಪುಷ್ಪ ಕೃಷಿ ಕೈಗೊಳ್ಳಲಾಗಿದೆ. ಇದರಲ್ಲಿ ಗದಗ ತಾಲೂಕಿನಲ್ಲೇ 246 ಹೆಕ್ಟೇರ್‌ ಹೂವು ಬೆಳೆಯಲಾಗುತ್ತಿದೆ. ಪುಷ್ಪ ಕೃಷಿಯಿಂದಲೇ ಬದುಕು ಕಟ್ಟಿಕೊಳ್ಳುತ್ತಿರುವ ಜಿಲ್ಲೆಯ ಗದಗ, ಮುಂಡರಗಿ, ಶಿರಹಟ್ಟಿ ತಾಲೂಕಿನ ರೈತರಿಗೆ ಈ ಬಾರಿ ಹೂವಿನ ಬೆಲೆ ಇಳಿಕೆಯು ನಷ್ಟ ಅನುಭವಿಸುವಂತೆ ಮಾಡಿದೆ. ಈ ವರ್ಷ ಅತೀ ಹೆಚ್ಚು ಮಳೆ ಸುರಿದ ಪರಿಣಾಮ ಪುಷ್ಪ ಕೃಷಿ ಮೇಲೆ ಕರಾಳ ಛಾಯೆ ಬೀರುವಂತೆ ಮಾಡಿದೆ. ಇದು ರೈತರಿಗೆ ಮಾತ್ರವಲ್ಲದೇ ವ್ಯಾಪಾರಸ್ಥರು, ಮಾರಾಟಗಾರರ ಮೇಲೂ ಪರಿಣಾಮ ಬೀರಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಲೆ ಹೂವಿನ ದರ ಅರ್ಧಕ್ಕೆ ಅರ್ಧದಷ್ಟು ದರ ಕಡಿಮೆ ಆಗಿದೆ. ಕೆ.ಜಿಗೆ ನೂರು ರೂ.ಗೆ ಮಾರಾಟ ಆಗುತ್ತಿದ್ದ ಸೇವಂತಿ ದರ ಕೇವಲ 10ರಿಂದ 20 ರೂ.ಗೆ ಇಳಿದಿದೆ. ಒಂದು ಕಟ್ಟಿಗೆ 150ರ ದರದಲ್ಲಿ ಮಾರಾಟ ಆಗುತ್ತಿದ್ದಗುಲಾಬಿ ಹೂವು 8ರಿಂದ-100 ರೂ ಇದೆ. ಅದರಂತೆ ಮಲ್ಲಿಗೆ, ಅಬಾಲೆ, ಸುಗಂದಿ, ಚಂಡು, ದುಂಡು ಮಲ್ಲಿಗೆ ಹೂವಿನ ದರ ಪಾತಾಳಕ್ಕೆ ಕುಸಿದಿದೆ. ಜಿಲ್ಲೆಯಲ್ಲಿ ಲಕ್ಕುಂಡಿ, ಪಾಪನಾಶಿ, ಕದಾಂಪುರ, ಡಂಬಳ, ಸಂಬಾಪುರ, ಡೋಣಿ, ಹರ್ತಿ, ಮುಳಗುಂದ, ಶಿಂಗಟಾನಕೆರೆ, ನಾಗಾವಿ ಶಿರುಂದ ಸೇರಿ ವಿವಿಧ ಗ್ರಾಮಗಳಲ್ಲಿ ಬೆಳೆದ ಹೂವಿನ ಗಿಡಗಳು ಮಳೆಗೆ ಸಿಲುಕಿ ಬೆಳವಣಿಗೆ ಕುಂಠಿತಗೊಂಡಿದೆ.

ಹಾನಿಗೊಳಗಾದ ಗಿಡಗಳಿಂದ ಉತ್ಕೃಷ್ಟ ಹೂವು ಸಿಗದೇ ರೈತರು ಕಂಗಲಾಗಿದ್ದಾರೆ. ಮಾಡಿದ ಖರ್ಚು ಬಾರದಷ್ಟು ನಷ್ಟ ಸಂಭವಿಸಿದೆ ಎಂಬುದು ಗದಗ ತಾಲೂಕಿನ ಪಾಪನಾಶಿ ಗ್ರಾಮದ ರೈತ ಮುತ್ತಪ್ಪ ದಡವಡ ಅಭಿಪ್ರಾಯ.

Advertisement

ಮಾರುಕಟ್ಟೆಗೆ ರೈತರು ತಂದ ಹೂವಿಗೆ ಹೆಚ್ಚು ದರ ಸಿಗುತ್ತಿಲ್ಲ. ಮಳೆಗೆ ಸಿಲುಕಿ ಹೂವು ಗುಣಮಟ್ಟ ಕಳೆದುಕೊಂಡಿದೆ. ಹೀಗಾಗಿ ಗ್ರಾಹಕರು ಹೂವುಖರೀದಿಸಲು ಹಿಂದೇಟು ಹಾಕುವಂತಾಗಿದೆ. ಮಾರಾಟಗಾರರು ಸಹ ಹೂವು ಖರೀದಿಗೆ ಮುಂದು ಬರುತ್ತಿಲ್ಲ. ಇದರಿಂದ ಹೂವು ವ್ಯಾಪಾರವನ್ನೇ ನಂಬಿದವರಿಗೆ ಹೊಡೆತ ಬಿದ್ದಿದೆ ಎಂದು ಹೂವು ವ್ಯಾಪಾರಿ ಮುತ್ತು ಚೋರಗಸ್ತಿ ತಿಳಿಸಿದರು.

ಹೂವು ಇಲ್ಲದೇ ಕೆಲವರು ದಿನಚರಿಯನ್ನೇ ಆರಂಭಿಸಲ್ಲ. ವ್ಯಾಪಾರ ಕಡಿಮೆ ಆಗಿದ್ದರೂ ಮಾರಾಟಗಾರರಿಗೆ ನಷ್ಟ ಸಂಭವಿಸಿಲ್ಲ. ಆದರೆ ಹೂವು ಬೆಳೆದ ರೈತರು ಈ ವರ್ಷ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದು ಹೂವು ಮಾರಾಟಗಾರರ ಅನಿಸಿಕೆ.

 

-ಪ್ರಹ್ಲಾದಗೌಡ ಗೊಲ್ಲಗೌಡ

Advertisement

Udayavani is now on Telegram. Click here to join our channel and stay updated with the latest news.

Next