Advertisement
ನವೆಂಬರ್ 8 ಜನರನ್ನು ಕನಸಿನಲ್ಲೂ ಬೆಚ್ಚಿಬೀಳಿಸುವ ದಿನ! “ಮಿತ್ರೋಂ…” ಅಂತ ಮಾತು ಶುರು ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಮಾತು ಕೇಳಿದವರಿಗೆ, ಕಷ್ಟಪಟ್ಟು ದುಡಿದ ಕಾಸು ಬರಿ ಕಾಗದವೇ ಆಗಿಹೋಯಿತೇ ಎಂದು ಕೋಟ್ಯಂತರ ಜನರಿಗೆ ಒಂದು ಕ್ಷಣಕ್ಕೆ ಅನಿಸಿದ್ದಿರಬಹುದು. ಆದರೆ ನಂತರ ನಡೆದ ಘಟನಾವಳಿಗಳು ಜನಸಾಮಾನ್ಯರನ್ನು ಅಯೋಮಯವಾಗಿಸಿ ಬಿಟ್ಟಿತು. ವಿಪಕ್ಷಗಳು ಜನಸಾಮಾನ್ಯರ ಸಂಕಷ್ಟ ನೋಡಿ ಮೊಸಳೆ ಕಣ್ಣೀರು ಸುರಿಸಿದರೆ, ಬ್ಯಾಂಕ್‌ಗಳು ನಾವು ಕಠಿಣ ಪರಿಶ್ರಮ ವಹಿಸಿ ಜನರಿಗೆ ಹೊಸ ನೋಟುಗಳನ್ನು ನೀಡುತ್ತಿದ್ದೇವೆ ಎಂದು ಸೋಗು ಹಾಕುತ್ತಾ ಕೋಟಿ ಕೋಟಿ ನೋಟುಗಳನ್ನು ಉಳ್ಳವರ ಖಜಾನೆಗೆ ಸಾಗಿಸಿದವು. ಇದೆಲ್ಲವನ್ನೂ ನಿರೀಕ್ಷಿಸಿಲ್ಲದ ಸರ್ಕಾರ ದಿನಕ್ಕೊಂದು ನಿಯಮ ಹೊಸೆಯುತ್ತ, ಆ ಮೂಲಕ ಜನರನ್ನು ಇನ್ನಷ್ಟು ಗೊಂದಲಕ್ಕೆ ತಳ್ಳಿತು. ಆದರೆ ಒಂದು ವರ್ಷದ ನಂತರ ನಿಂತು ಮೌಲ್ಯ ಕಳೆದುಕೊಂಡ ಹಳೆಯ ನೋಟುಗಳನ್ನೂ ಹಾಗೂ ಬ್ಯಾಂಕುಗಳಿಗೆ ಬಂದ ಹೊಸ ನೋಟುಗಳನ್ನು ಹಿಂದೆ ಮುಂದೆ ತಿರುಗಿಸಿ ನೋಡಿದಾಗ ನಮಗೆ ಏನಾಗುತ್ತಿದೆ ಎಂದು ಕಂಡುಕೊಳ್ಳುವುದು ಕಷ್ಟವೇ ಆದೀತು.
Related Articles
Advertisement
ಆದರೆ ಭವಿಷ್ಯದ ದೃಷ್ಟಿಯಿಂದ ನೋಡಿದರೆ ಋಣಾತ್ಮಕ ಅಂಶಗಳಿಗಿಂತ ಹೆಚ್ಚಾಗಿ ಧನಾತ್ಮಕ ಅಂಶಗಳೇ ಕಾಣಸಿಗುತ್ತವೆ. ನವೆಂಬರ್ ನಂತರ ನಡೆದ ಬೃಹತ್ ಹಣಕಾಸು ವಹಿವಾಟುಗಳನ್ನು ಆದಾಯ ತೆರಿಗೆ ಇಲಾಖೆ ಹಾಗೂ ಕಾರ್ಪೊರೇಟ್ ವಹಿವಾಟುಗಳ ಇಲಾಖೆ ಕೆದಕುತ್ತ ಹೋದರೆ ಅದನ್ನು ಸರಿಪಡಿಸಲು ವರ್ಷಗಳೇ ಬೇಕಾದೀತು. ಇದು ಕೆದಕಿದಷ್ಟೂ ಆಳವಾಗುತ್ತ ಹೋಗುವ ಹಣಕಾಸು ವಹಿವಾಟುಗಳ ಸಂಕೀರ್ಣತೆ. ಈಗಾಗಲೇ ಲಕ್ಷ ಲಕ್ಷ ಕಂಪನಿಗಳ ಅಕ್ರಮ ವಹಿವಾಟುಗಳನ್ನು ಪತ್ತೆ ಮಾಡಲಾಗಿದೆ. ಆದರೆ ಅದು ಸಮುದ್ರದಿಂದ ಒಂದು ಬಿಂದಿಗೆ ನೀರು ಎತ್ತಿದಂತೆ.
ಒಂದೇ ಉದ್ದೇಶವನ್ನಿಟ್ಟುಕೊಂಡು ನೋಟು ಅಮಾನ್ಯಗೊಳಿಸಿ ದ್ದರೆ ಸರ್ಕಾರ ಇಷ್ಟು ಹೊತ್ತಿಗೆ ಮುಖಭಂಗ ಎದುರಿಸಬೇಕಿತ್ತು. ಕಪ್ಪುಹಣ ನಿರ್ಮೂಲನೆಯೊಂದೇ ಉದ್ದೇಶವಾಗಿದ್ದರೆ ನೋಟು ಅಮಾನ್ಯ ನಿರ್ಧಾರ ವೈಫಲ್ಯವಾದೀತು. ಆರಂಭದಲ್ಲಿ ಇದು ಕಪ್ಪುಹಣ ನಿಯಂತ್ರಣಕ್ಕೆ ಮಾಡಿದ ಕ್ರಮ ಎಂದೇ ಸರ್ಕಾರವೂ ಬಿಂಬಿಸಿತು. ಆದರೆ ಒಮ್ಮೆ ಇದು ಜಾರಿಯಾದಂತೆಲ್ಲ, ಆಯಾ ಮ ಗಳು ಬದಲಾದವು. ತೆರಿಗೆ ತಪ್ಪಿಸಿ ನಡೆಸುತ್ತಿದ್ದ ವಹಿವಾಟುಗಳ ಪತ್ತೆ, ಖೋಟಾ ನೋಟುಗಳ ನಿರ್ಮೂಲನೆ, ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ಸೇರಿದಂತೆ ಹಲವು ಆಯಾಮಗಳಲ್ಲಿ ಇದನ್ನು ನೋಡಲಾಯಿತು. ಸರ್ಕಾರವೂ ಈ ಎಲ್ಲ ದೃಷ್ಟಿಕೋನಗಳನ್ನು ಮೊದಲೇ ನಿರ್ಧರಿಸಿಕೊಂಡಿತ್ತೇ ಎಂಬುದು ಇಂದಿಗೂ ಅನುಮಾನವೇ. ಯಾಕೆಂದರೆ, ಡಿಜಿಟಲ್ ವಹಿವಾಟು ಪ್ರೋತ್ಸಾಹವೂ ನೋಟು ಅಮಾನ್ಯದ ಹಿಂದಿನ ಕಾರಣವಾಗಿದ್ದಿದ್ದರೆ, ಯುಪಿಐ ವ್ಯವಸ್ಥೆಯನ್ನು ನೋಟು ಅಮಾನ್ಯ ನಿರ್ಧಾರಕ್ಕೂ ಸಾಕಷ್ಟು ಮೊದಲೇ ಜಾರಿಗೆ ತರಬೇಕಿತ್ತು. ತೆರಿಗೆ ತಪ್ಪಿಸಿ ನಡೆಸುವ ವಹಿವಾಟುಗಳನ್ನು ಪತ್ತೆ ಮಾಡಲು ನೋಟು ಅಮಾನ್ಯವೇ ಬೇಕಿಲ್ಲ. ವಹಿವಾಟಿಗೆ ಕಠಿಣ ಮಿತಿ ಹೇರಿದ್ದರೆ ಸಾಕಿತ್ತು. ಹಾಗೆಯೇ ಖೋಟಾನೋಟುಗಳ ಸಮಸ್ಯೆಗೂ ಡಿಜಿಟಲ್ ವಹಿವಾಟು ಕಡಿವಾಣ ಹಾಕಬಲ್ಲದು. ಆದರೆ ಇವೆಲ್ಲವನ್ನೂ ಒಂದೇ ಬಾರಿಗೆ ಮಾಡಲು ಹೊರಡುತ್ತಿರುವುದರಲ್ಲಿ ಅನುಕೂಲವೂ ಅನನುಕೂಲವೂ ಸಮಾನ ಪ್ರಮಾಣದಲ್ಲಿದೆ.
ಈವರೆಗೆ ನೋಟು ಅಮಾನ್ಯದಿಂದ ಉಂಟಾದ ವೈಫಲ್ಯಗಳಲ್ಲಿ ಶೇ. 99ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ವಾಪಸ್ ಬಂದಿದ್ದು ಅತ್ಯಂತ ಪ್ರಮುಖವಾದದ್ದು. ಯಾಕೆಂದರೆ ನೋಟು ಅಮಾನ್ಯದ ಮೂಲ ಉದ್ದೇಶವೇ ಅಲ್ಲಿ ನೀರಿನಲ್ಲಿ ಹೋಮ ಮಾಡಿದಂತಾಗಿತ್ತು. ಆದರೆ ಹಾಗೆ ಬರದಂತೆ ತಡೆಯುವುದಕ್ಕೆ ನಮ್ಮಲ್ಲಿ ಯಾವ ವ್ಯವಸ್ಥೆಯೂ ಇರಲಿಲ್ಲ. ದಿನಕ್ಕೆ ನಿಗದಿಗಿಂತ ಹೆಚ್ಚು ಮೊತ್ತದ ನೋಟುಗಳನ್ನು ಬ್ಯಾಂಕಿಗೆ ತಂದುಕೊಡುವ ವ್ಯಕ್ತಿಯನ್ನು ಗುರುತಿಸಲು ನಿಖರ ವ್ಯವಸ್ಥೆಯನ್ನು ನೋಟು ಅಮಾನ್ಯಕ್ಕೂ ಮೊದಲು ಜಾರಿಗೊಳಿಸಿರಲಿಲ್ಲ. ಹೀಗಾಗಿ ಅಷ್ಟೂ ಮೊತ್ತ ವಾಪಸಾ ಗಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಹಾಗೆ ಬಂದಿದ್ದರಿಂದ ಸರ್ಕಾರ ಹಾಗೂ ಅಕ್ರಮ ಹಣಕಾಸು ವಹಿವಾಟು ಪತ್ತೆ ಮಾಡುವ ಏಜೆನ್ಸಿಗಳ ಮೇಲೆ ಹೊರೆಬಿತ್ತು. ತನಿಖಾ ಏಜೆನ್ಸಿಗಳು ಕಣ್ಣಲ್ಲಿ ಎಣ್ಣೆಹಾಕಿಕೊಂಡು ಹುಡುಕಿದಷ್ಟೂ ಅಕ್ರಮ ವಹಿವಾಟುಗಳು ಸಿಗುತ್ತಲೇ ಹೋಗುತ್ತವೆ. ಈಗ ನೋಟು ಅಮಾನ್ಯದ ಒಟ್ಟು ಯಶಸ್ಸಿಗೆ ಅಂಕಿ ಅಂಶವನ್ನು ಕೊಡಬಹುದಾದವರೇ ಈ ತನಿಖಾ ಏಜೆನ್ಸಿಗಳು. ಸದ್ಯಕ್ಕೆ ಬಿಡುಗಡೆಯಾಗಿರುವ ದತ್ತಾಂಶಗಳ ಪ್ರಕಾರ 2.24 ಲಕ್ಷ ನಕಲಿ ಕಂಪನಿಗಳನ್ನು ಪತ್ತೆ ಮಾಡಲಾಗಿದೆ. ಈ ಕಂಪನಿಗಳು 17 ಸಾವಿರ ಕೋಟಿ ರೂ. ಹಳೆಯ ನೋಟುಗಳನ್ನು ಬ್ಯಾಂಕ್‌ಗಳಿಗೆ ಜಮೆ ಮಾಡಿ, ಹಿಂಪಡೆದಿವೆ. ಇನ್ನು 50 ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು 70 ಸಾವಿರ ಸಂಸ್ಥೆಗಳು ಜಮೆ ಮಾಡಿದ್ದು, ಇವುಗಳಿಗೆ ಸಂಬಂಧಿಸಿದಂತೆ ವಿವರಣೆ ಕೋರಿ ಐಟಿ ಇಲಾಖೆ ಕಳುಹಿಸಿದ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿಲ್ಲ. ಮೇಲ್ನೋಟಕ್ಕೆ ಇವು ಮೋಸದ ವಹಿವಾಟುಗಳು ಎಂದೇ ಕಾಣುತ್ತವೆ. ಸರಾಸರಿ ತಲಾ 50 ಲಕ್ಷ ರೂ. ಅನ್ನು 70 ಸಾವಿರ ಖಾತೆಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಅಂದಾಜಿಸಿದರೆ, ಈ ಮೊತ್ತ 35 ಸಾವಿರ ಕೋಟಿ ರೂ. ಆಗುತ್ತದೆ. ಇನ್ನೊಂದೆಡೆ 18 ಲಕ್ಷ ಪ್ರಕರಣಗಳನ್ನು ಅನುಮಾನಾಸ್ಪದ ಎಂದು ಕಂಡುಕೊಂಡಿದೆ. ಈ ಪೈಕಿ 12 ಲಕ್ಷ ಖಾತೆಗಳಿಂದ ಪ್ರತಿಕ್ರಿಯೆ ಬಂದಿವೆ. ಇನ್ನು 6 ಲಕ್ಷ ಖಾತೆಗಳ ಮೂಲವನ್ನು ಐಟಿ ಇಲಾಖೆ ಹುಡುಕಲು ಹೊರಟಿದೆ. ಇಷ್ಟೇ ಅಲ್ಲ, ನವೆಂಬರ್ 8ರ ನಂತರ ಯಾವ ಯಾವ ಮಾರ್ಗದಲ್ಲಿ ಹಳೆ ನೋಟುಗಳ ಬಣ್ಣ ಬದಲಾಗಿವೆ ಎಂದು ಹುಡುಕುವುದು ಈಗ ಸವಾಲಿನ ಕೆಲಸ. ಇದರಲ್ಲಿ ಶೇ.50ರಷ್ಟು ಮೂಲಗಳು ಸಿಕ್ಕರೂ ನೋಟು ಅಮಾನ್ಯಕ್ಕೆ ಯಶಸ್ಸು. ಆದರೆ ಅದು ಅಷ್ಟು ಸುಲಭವೂ ಅಲ್ಲ. ಸದ್ಯದಲ್ಲೇ ಮುಗಿಯುವಂಥದ್ದೂ ಅಲ್ಲ. ಕನಿಷ್ಠ ಐದು ವರ್ಷಗಳವರೆಗೆ ತನಿಖಾ ಏಜೆನ್ಸಿಗಳು ಈ ಬಗ್ಗೆ ತಿಣುಕಾಡಬೇಕಾದೀತು.
ನೋಟು ಅಮಾನ್ಯದಿಂದ ಸಣ್ಣ ಹಾಗೂ ಮಧ್ಯಮ ಗಾತ್ರ ಉದ್ಯಮಗಳಿಗೆ ಭಾರಿ ಹೊಡೆತ ಉಂಟಾಗಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಇದು ವಾಸ್ತವವೂ ಹೌದು. ಯಾಕೆಂದರೆ ಯಾವುದೇ ಸಾಮಾಜಿಕ ಅಥವಾ ಆರ್ಥಿಕ ಬದಲಾವಣೆಗೆ ಮೊದಲು ತುತ್ತಾಗುವವರೇ ಮಧ್ಯಮ ವರ್ಗ ಮತ್ತು ಸಣ್ಣ ಹಾಗೂ ಮಧ್ಯಮ ಗಾತ್ರ ಉದ್ಯಮಗಳು. ಇವುಗಳ ವಹಿವಾಟು ಹಾಗೂ ಲಾಭದ ಪ್ರಮಾಣ ಕಡಿಮೆ ಇರುವುದರಿಂದ ಒಂದು ತಿಂಗಳಲ್ಲಿ ಜಮೆ ಮತ್ತು ಬಟವಾಡೆಯಲ್ಲಿ ವ್ಯತ್ಯಾಸವಾದರೂ ಅದು ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ನೋಟು ಅಮಾನ್ಯದಿಂದ ಮೊದಲು ಸಮಸ್ಯೆ ಅನುಭವಿಸಿದ್ದು ಈ ವರ್ಗ. ಆದರೆ ಇದೇ ಮಧ್ಯಮ ಹಾಗೂ ಸಣ್ಣ ಗಾತ್ರದ ಉದ್ದಿಮೆಗಳು ಬದಲಾವಣೆಗೆ ಬೇಗ ಒಗ್ಗಿಕೊಳ್ಳುವುದೂ ಅಷ್ಟೇ
ಸತ್ಯ. ಯಾಕೆಂದರೆ ಇವುಗಳಿಗೆ ಅಳಿವು-ಉಳಿವಿನ ಪ್ರಶ್ನೆ ಇದಾಗಿ ರುತ್ತದೆ. ಆದರೆ ಒಂದು ವರ್ಷದ ನಂತರ ಈಗ ನಿಂತು ನೋಡಿದರೆ ಬಹುತೇಕ ತಳಮಟ್ಟದ ಸಮಸ್ಯೆಗಳು ನಿವಾರಣೆಯಾಗಿವೆ ಎಂದೇ ಹೇಳಬಹುದು. ಆದರೆ ಜನರ ಮನಸಿನಲ್ಲಿ ನೋಟು ಅಮಾನ್ಯದ ಕೆಲವು ತಿಂಗಳುಗಳಲ್ಲಿ ಉಂಟಾದ ಸಮಸ್ಯೆಗಳು ಮಾತ್ರ ಭೂತ ನೃತ್ಯದಂತೆ ಇಂದಿಗೂ ಮನಸಿನಲ್ಲಿ ಕಾಡುತ್ತಿವೆ. ನೋಟು ಅಮಾನ್ಯದ ನಂತರ ವಶೀಲಿ ಬಾಜಿ ನಡೆಸಿ ನೋಟು ಬದಲಿಸಿಕೊಂಡು ಬೀಗಿದ್ದ ದೊಡ್ಡ ಕಂಪನಿಗಳು, ಭ್ರಷ್ಟ ಕುಳಗಳಿಗೆ ವಿವಿಧ ಇಲಾಖೆಗಳ ಕಣ್ಣುಗಳು ಕನಸಿನಲ್ಲಿ ಬರುತ್ತಿವೆ. ಕೃಷ್ಣ ಭಟ್