ಪೆಪ್ಪರ್ ಪೌಡರ್ ಅಥವಾ ಕಾಳುಮೆಣಸಿನ ಪುಡಿಯಿಂದ ಏನು ಉಪಯೋಗ ಅಂತ ಯಾರಾದ್ರೂ ಕೇಳಿದ್ರೆ ನಿಮ್ಮ ಉತ್ತರ ಏನಾಗಿರುತ್ತೆ ಅಂತ ನಮಗೆ ಗೊತ್ತು. ಕಾಳುಮೆಣಸಿನ ಪುಡಿಯನ್ನು ಅಮ್ಮ ಚಾಟ್ ಮಸಾಲದ ರೀತಿ ಬಳಸಿದರೆ, ಅಕ್ಕ ಆತ್ಮರಕ್ಷಣೆಯ ತಂತ್ರವಾಗಿ ಪೆಪ್ಪರ್ ಸ್ಪ್ರೆ ಬಳಸುತ್ತಾಳೆ ಅಂತ ನೀವು ಹೇಳುತ್ತೀರಿ. ಅಮ್ಮ, ಅಕ್ಕನಿಗಷ್ಟೇ ಅಲ್ಲ, ಕಾಳುಮೆಣಸಿನ ಪುಡಿಯನ್ನು ಜಾದೂ ಪುಡಿಯಾಗಿಯೂ ಬಳಸಬಹುದು! ಹೇಗೆ ಗೊತ್ತಾ? ಅದಕ್ಕುತ್ತರ ಇಲ್ಲಿದೆ ಓದಿ…
ಬೇಕಾಗುವ ವಸ್ತು: ಬಿಳಿ ಬಣ್ಣದ ಪ್ಲಾಸ್ಟಿಕ್ ತಟ್ಟೆ, ನೀರು, ಕಾಳುಮೆಣಸಿನ ಪುಡಿ(ಪೆಪ್ಪರ್ ಪೌಡರ್), ಡಿಶ್ ಲಿಕ್ವಿಡ್ (ಪಾತ್ರೆ ತೊಳೆಯುವ ಲಿಕ್ವಿಡ್)
ಪ್ರದರ್ಶನ: ಜಾದೂಗಾರ ತನ್ನ ಎದುರಿನ ಪ್ಲಾಸ್ಟಿಕ್ ಪ್ಲೇಟ್‌ಗೆ ನೀರನ್ನು ಸುರಿಯುತ್ತಾನೆ. ನಂತರ ನಿಧಾನಕ್ಕೆ ಕಾಳುಮೆಣಸಿನ ಪುಡಿಯನ್ನು ನೀರಿನ ಮೇಲೆ ಸಿಂಪಡಿಸುತ್ತಾನೆ. ಪೆಪ್ಪರ್ ಪುಡಿ ನಿಧಾನಕ್ಕೆ ನೀರಿನ ಮೇಲ್ಭಾಗದಲ್ಲಿ ತೇಲಲು ಶುರು ಮಾಡುತ್ತದೆ. ನಂತರ ಆತ ಪ್ರೇಕ್ಷಕರಲ್ಲಿ ಒಬ್ಬನನ್ನು ಕರೆದು, ಕೈ ಬೆರಳನ್ನು ಪ್ಲೇಟ್‌ನ ಮಧ್ಯಭಾಗದಲ್ಲಿ ಇಡಲು ಹೇಳುತ್ತಾನೆ.
ಪ್ರೇಕ್ಷಕ ಕೈ ಬೆರಳನ್ನು ಇರಿಸಿದಾಗ ಯಾವ ಬದಲಾವಣೆಯೂ ಆಗುವುದಿಲ್ಲ. ಮುಂದೆ ಜಾದೂಗಾರ ಮಂತ್ರ ಜಪಿಸುತ್ತಾ ತನ್ನ ಕೈ ಬೆರಳನ್ನು ಪ್ಲೇಟ್‌ನ ಮಧ್ಯದಲ್ಲಿ ಅದ್ದುತ್ತಾನೆ. ಆಗ ಇದ್ದಕ್ಕಿದ್ದಂತೆ ಕಾಳುಮೆಣಸಿನ ಸಣ್ಣ ಸಣ್ಣ ಕಣಗಳು ತಟ್ಟೆಯ ಮಧ್ಯಭಾಗದಿಂದ ಸರಿದು, ಮೂಲೆಗುಂಪಾಗುತ್ತವೆ.
ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ನಿಮ್ಮ ಕೈ ಬೆರಳಿನಲ್ಲಿ. ಯಾಕೆಂದರೆ ಪ್ರದರ್ಶನಕ್ಕೂ ಮುನ್ನ ನೀವು ಬೆರಳಿನ ತುದಿಗೆ (ಟೂತ್ ಪಿಕ್ ಅಥವಾ ಇಯರ್ ಬಡ್ ಅನ್ನು ಕೂಡ ಬೆರಳಿನ ಬದಲು ಉಪಯೋಗಿಸಬಹುದು) ಡಿಶ್ ಲಿಕ್ವಿಡ್ ಅನ್ನು ಹಚ್ಚಿಕೊಂಡಿರಬೇಕು. ಆಗ ಬೆಂರಳು ಮುಟ್ಟಿದ ತಕ್ಷಣ ಪೆಪ್ಪರ್ ಪೌಡರ್ ಮಧ್ಯಭಾಗದಿಂದ ದೂರ ಸರಿಯುವವು. ಇದಕ್ಕೆ ಕಾರಣ ಮೇಲ್ಮೆ„ ಒತ್ತಡ(Surface tension).
* ವಿನ್ಸೆಂಟ್ ಲೋಬೋ