ಬೆಂಗಳೂರು: ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜನ ಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹಾದ್ದೂರು ಶಾಸಿŒ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಜೆಪಿಯ ಈಗಿನ ಆಡಳಿತದಿಂದ ದೇಶದ ಆರ್ಥಿಕತೆ ಮುಳುಗುತ್ತಿದೆ, ಹಾಗಾಗಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈ ದೇಶದ ಜನಸಾಮಾನ್ಯರ ಬದುಕು ಕಷ್ಟದಿಂದ ಕೂಡಿದೆ, ಆದರೆ, ಇದು ಬಿಜೆಪಿಗೆ ಅರ್ಥವಾಗುತ್ತಿಲ್ಲ ಎಂದರು. “ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಏನು ಕೊಟ್ಟಿದೆ ಎಂದು ಬಿಜೆಪಿಯವರು ಕೇಳುತ್ತಾರೆ. ಆದರೆ, ಕಾಂಗ್ರೆಸ್ ಅಧಿಕಾರದಲ್ಲಿದ್ದು, ಡಾ. ಮನಮೋಹನ್‌ಸಿಂಗ್ ಪ್ರಧಾನಿ ಆಗಿದ್ದಾಗ ದೇಶದ ಆರ್ಥಿಕ ಸ್ಥಿತಿ ಸದೃಢವಾಗಿತ್ತು.
ಕೇವಲ 18 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರೀಯವರು ಹಸಿರು ಕ್ರಾಂತಿ, ಕ್ಷೀರ ಕ್ರಾಂತಿಗೆ ಅಡಿಪಾಯ ಹಾಕಿದರು. ಆದರೆ, ಪ್ರಧಾನಿ ಮೋದಿಯವರು ಇಂದು ದೇಶದ ಆರ್ಥಿಕತೆಯನ್ನು ಹಾಳು ಮಾಡಿದ್ದಾರೆ. ಗಾಂಧಿ, ಶಾಸಿ, ನೆಹರೂ, ಅಂಬೇಡ್ಕರ್, ಇಂದಿರಾಗಾಂಧಿ ಅವರಂತಹ ನಾಯಕರನ್ನು ಈ ದೇಶಕ್ಕೆ ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ ಅನ್ನುವುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು,’ ಎಂದು ಪರಮೇಶ್ವರ್ ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್, ಉಪಾಧ್ಯಕ್ಷ ಬಿ.ಎಲ್. ಶಂಕರ್, ಸಚಿವೆ ಉಮಾಶ್ರೀ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್, ಮೇಯರ್ ಸಂಪತ್‌ರಾಜ್ ಮತ್ತಿತರರು ಇದ್ದರು.
ಪ್ರಧಾನಿ ಒಡೆದಾಳುವ ನೀತಿ: “ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಟ್ಟಾಗಿ ಇರಬೇಕು ಎಂಬುದು ಗಾಂಧೀಜಿ ಆಶಯವಾಗಿತ್ತು. ಆದರೆ, ಇಂದು ಬಿಜೆಪಿ ಜನರನ್ನು ವಿಭಜಿಸುವ ಮೂಲಕ ಗಾಂಧೀಜಿಯವರ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಎಲ್ಲರೂ ಒಟ್ಟಾಗಿ ಇರಬೇಕು ಎಂದು ಗಾಂಧೀಜಿ ಹೇಳಿದ್ದರೆ, ಬಿಜೆಪಿಯವರು ನಾವೇ ಬೇರೆ, ನೀವೇ ಬೇರೆ ಎಂದು ಹೇಳಿ ಜನರನ್ನು ಇಬ್ಭಾಗ ಮಾಡುತ್ತಿದ್ದಾರೆ.
ಕಾಂಗ್ರೆಸ್ ಎಲ್ಲರನ್ನೊಳಗೊಂಡು ದೇಶವನ್ನು ಮುನ್ನಡೆಸಿಕೊಂಡು ಹೋಗಿದೆ. ಆದರೆ, ಬಿಜೆಪಿ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಪ್ರಧಾನಿ ಮೋದಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ,’ ಎಂದು ಪರಮೇಶ್ವರ್ ಆರೋಪಿಸಿದರು.